Sunday 9 April 2017

ಅನುವಾದಿತ ಕಥೆ - ಬಾಯ್ಮುಚ್ಚು

['ನೊರ್ಮುಯ್' ಅಂದರೆ ಬಾಯ್ಮುಚ್ಚು ಎಂದರ್ಥ. 
ಈ ಕಥೆಯನ್ನು ತೆಲುಗಿನ ಪ್ರಖ್ಯಾತ ಲೇಖಕಿಯವರಾದ ಓಲ್ಗಾರವರು ಬರೆದಿದ್ದಾರೆ. ಅವರ "ರಾಜಕೀಯ ಕಥಲು" ಕಥಾಸಂಕಲನದಿಂದ ಈ ಕಥೆಯನ್ನು ಆರಿಸಲಾಗಿದೆ]

ಈ ಮಾತು ಪದೇ ಪದೇ ಕಿವಿಯಲ್ಲಿ ಬೀಳುತ್ತಿದ್ದರೆ ಅದನ್ನು ತಡೆಯಲಾಗದೆ ಜಾನಕಿ ಕಿವಿಗಳನ್ನು ಕೂಡ ಮುಚ್ಚಿಕೊಂಡಳು. ಈ ಮಾತಿನ ಪರಿಚಯ ಅವಳಿಗೆ ಒಂದು ದಿನದ್ದಲ್ಲ, ಒಂದು ವರ್ಷದ್ದೂ ಅಲ್ಲ. ಜಾನಕಿಗೆ ಬುದ್ಧಿ ಬಂದಾಗಿನಿಂದ ಯಾರೋ ಒಬ್ಬರು ಈ ಮಾತನ್ನು ಯಾವಾಗಲೂ ಹೇಳುತ್ತಲೇ ಇದ್ದರು. 
ಚಿಕ್ಕವಳಿದ್ದಾಗ ಅವಳು ಏನು ನೋಡಿದರೂ, ಏನು ನಡೆದರೂ ತಡೆಯಲಾಗದಷ್ಟು ಖುಷಿಯಾಗುತ್ತಿತ್ತು. ಅವನ್ನೆಲ್ಲ ತಾಯಿಗೊ ತಂದೆಗೊ ಹೇಳಬೇಕೆಂದು ಓಡಿ ಬರುತ್ತಿದ್ದಳು. ಅವಳು ತನ್ನೆಲ್ಲಾ ಆವೇಶವನ್ನು ಪ್ರದರ್ಶಿಸುತ್ತಾ ಹೇಳಲು ಶುರು ಮಾಡಿದರೆ ಅವರು ತಕ್ಷಣವೇ “ಬಾಯ್ಮುಚ್ಚಿಕೊಂಡು ಹೊರಗಡೆ ಹೋಗು, ಎಲ್ಲಾ ವಿಷಯಗಳು ನಿನಗೇ ಬೇಕಾ?" ಎಂದು ಗದರಿಕೊಳ್ಳುತ್ತಿದ್ದರು. 
ಅಪ್ಪ, ಅಮ್ಮ ಮಾತ್ರವಲ್ಲ, ಅಜ್ಜಿಯಂದಿರು, ತಾತಂದಿರು, ಅತ್ತೆ, ಚಿಕ್ಕಮ್ಮ, ಮಾವ, ಚಿಕ್ಕಪ್ಪ ಎಲ್ಲರೂ ಅಷ್ಟೇ. “ಯಾಕಷ್ಟು ಮಾತನಾಡುತ್ತೀಯ?” ಎನ್ನುತ್ತಿದ್ದರು.
'ಹೆಣ್ಣುಮಕ್ಕಳಿಗೆ ಇಷ್ಟೊಂದು ದೊಡ್ಡ ಬಾಯಿ ಇರಬಾರದು' ಎನ್ನುತ್ತಿದ್ದರು ಅತ್ತೆ. ಎಷ್ಟು ದೊಡ್ಡ ಬಾಯಿ ತನ್ನದು. ಕನ್ನಡಿಯಲ್ಲಿ ನೋಡಿಕೊಂಡರೆ ಕೆಂಪು ತುಟಿಗಳಿರುವ ಚಿಕ್ಕ ಬಾಯಿ ಕಾಣಿಸಿತು. ಇಷ್ಟು ಚಿಕ್ಕ ಬಾಯನ್ನು ಅತ್ತೆ ಏಕೆ ದೊಡ್ಡದು ಎನ್ನುತ್ತಾಳೆ? ಇಷ್ಟು ಚೆನ್ನಾಗಿರುವ ಬಾಯಿ ಮೇಲೆ ಬರೆ ಹಾಕುತ್ತೇನೆ ಎಂದು ಅಮ್ಮ ಅನ್ನುತ್ತಾಳೆ. ಹೆಣ್ಣು ಮಕ್ಕಳಿಗೆ ಬಾಯಿ ಏಕಿರಬಾರದು?
ಅಣ್ಣಂದಿರು, ತಮ್ಮಂದಿರು ಊರೆಲ್ಲಾ ಸುತ್ತಿಬರುತ್ತಾರೆ. ಊಟದ ಸಮಯಕ್ಕೆ ಬಂದು ಊಟ ಮಾಡಿ ನಿದ್ರೆ ಮಾಡುತ್ತಾರೆ. ಅವರು ಹೊರಗಡೆ ತಿರುಗುತ್ತಾ ಆಟವಾಡುವ ಸಮಯದಲ್ಲಿ ಹಾಯಾಗಿ ಕಿರುಚುತ್ತಾರೆ, ಮಾತನಾಡಿಕೊಳ್ಳುತ್ತಾರೆ. ಅಣ್ಣಂದಿರು ಕಾಲುವೆಯಲ್ಲಿ ಈಜಾಡುವಾಗ ಹೇಗೆ ಅರಚುತ್ತಾರೆ?
ಜಾನಕಿ ಒಂದು ದಿನ ತೊಟ್ಟಿ ತುಂಬ ನೀರಿದ್ದಾಗ ಕಟ್ಟೆಯ ಮೇಲೆ ನಿಂತು ಜೋರಾಗಿ ಅರಚುತ್ತಾ ತೊಟ್ಟಿಯಲ್ಲಿ ಬಿದ್ದಳು. ತೊಟ್ಟಿಯಲ್ಲಿದ್ದ ನೀರೆಲ್ಲಾ ಎಗರುವುದನ್ನು ನೋಡಿ ಜಾನಕಿ ಖುಷಿಯನ್ನು ತಡೆದುಕೊಳ್ಳಲಾಗದೆ ಜೋರಾಗಿ ಅರಚಿದಳು. ಗಂಟಲಿನ ನರಗಳು ಕಿತ್ತುಹೋಗುವ ಹಾಗೆ ಅರಚಿದಳು. 
ಅಜ್ಜಿ ಮತ್ತು ಅಪ್ಪ ಪ್ರತ್ಯಕ್ಷವಾದರು. ಅಪ್ಪ ಮುಖವನ್ನು ಕೆಟ್ಟದಾಗಿ ಮಾಡಿಕೊಂಡು ಅವಳನ್ನು ತೊಟ್ಟಿಯಿಂದ ಎತ್ತಿ ಹೊರಹಾಕಿದರು. ಬರಿಮೈಲಿದ್ದ ಜಾನಕಿಯನ್ನು ನೋಡಿ “ನಾಚಿಕೆ ಇಲ್ಲವಾ?” ಎಂದು ಬೈಯುತ್ತಾ ಹೊರಟುಹೋದ. ಅಣ್ಣನನ್ನು ತಮ್ಮಂದಿರನ್ನು ಕಾಲುವೆಗೆ ಸ್ನಾನಕ್ಕೆ ಕರೆದೊಯ್ದು, ಅವರು ಬಟ್ಟೆ ಬಿಚ್ಚಿ ಈಜು ಹೊಡೆಯುತ್ತಿದ್ದರೆ ನಕ್ಕುನಕ್ಕು ಸುಸ್ತಾಗುತ್ತಿದ್ದರು ತಂದೆ. 
ತನ್ನನ್ನು ಹೇಗಿದ್ದರೂ ಕಾಲುವೆಗೆ ಕರೆದುಕೊಂಡು ಹೋಗುವುದಿಲ್ಲ ಮನೆಯಲ್ಲಿದ್ದ ತೊಟ್ಟಿಯೊಳಗೂ ಇಳಿಯಬಾರದ? ಆಗ ಬಟ್ಟೆ ಏತಕ್ಕೆ? ಈ ಮಾತನ್ನೆ ಅಜ್ಜಿಯನ್ನು ಕೇಳಿದರೆ ಅವಳು ಬೆನ್ನ ಮೇಲೆರಡು ಏಟು ಕೊಟ್ಟು "ಬಾಯಿಮುಚ್ಚಿಕೊಳ್ಳೆ ನಾಚಿಕೆಯಿಲ್ಲದವಳೆ" ಎಂದಳು. 
ಮಾತುಗಳು ಬಾಯಿನಿಂದ ಹೊರಬರುತ್ತವೆಯೆ ಹೊರತು ನಿಜವಾಗಲು ಅವು ಹುಟ್ಟುವುದು ತಲೆಯಲ್ಲಿ ಎಂದು ಬೆಳೆದ ಮೇಲೆ ಜಾನಕಿ ಗ್ರಹಿಸಿದಳು. ಅದಕ್ಕೆ "ನಿನ್ನ ಬಾಯಿಯನ್ನು ಹೊಲಿಯಬೇಕು" ಎಂದು ಅತ್ತೆ ಹೇಳಿದರೆ ಜಾನಕಿ ಕಿಲಕಿಲ ನಕ್ಕಳು, "ನಿನಗೆ ಗೊತ್ತಿಲ್ಲವಾ ಮಾತುಗಳು ಹುಟ್ಟುವುದು ಇಲ್ಲಿ, ಬಾಯಿಯಿಂದ ಹೊರ ಬರುತ್ತದೆ ಅಷ್ಟೇ "ಎಂದು ಹೇಳಿ ತನ್ನ ತಲೆಯನ್ನು ತೋರಿಸಿದಳು. "ನಿನ್ನ ಬುದ್ದಿ ಜಾಸ್ತಿಯಾಯಿತು" ಎಂದು ಅತ್ತೆ ಬೆನ್ನಿನ ಮೇಲೆ ದಬದಬ ಎಂದು ಬಾರಿಸಿದಳು. 
ತಲೆಯಲ್ಲಿ ಮಾತುಗಳು ಹುಟ್ಟಿದಾಗ ಅವುಗಳನ್ನು ತಕ್ಷಣವೇ ಹೊರಗೆ ಬರಲು ಅವಕಾಶ ಮಾಡಿಕೊಡಬಾರದೆಂದು, ಕೆಲವನ್ನಂತೂ ಹೊರಗಡೆ ಹೇಳಲೂ ಬಾರದೆಂದು ಜಾನಕಿಗೆ ನಿಧಾನವಾಗಿಯಾದರೂ ಅರ್ಥವಾಯಿತು,
ಮಾತುಗಳ ಸಂಗತಿ ಹೋಗಲಿ - ನನ್ನ ಮಾತುಗಳು ದೊಡ್ಡವರಿಗೆ ಅರ್ಥವಾಗುವುದಿಲ್ಲ, ಕೋಪ ಬರುತ್ತದೆ ಅವರ ಮಾತುಗಳಿಂದ ತನಗೆ ಆಳುಬರುವಂತೆಯೇ, ಹಾಗೆಯೇ ನನ್ನ ಮಾತುಗಳಿಂದ ಅವರಿಗೆ ಕೋಪಬರುತ್ತದೆಯೇನೋ ಅಂದುಕೊಂಡಳು. 
ಆದರೆ ನಗು ಏನು ಮಾಡಿದೆ?
ನಕ್ಕರೆ ಯಾರಿಗದರೂ ನೋವು ಏತಕ್ಕೆ? ಕೋಪ ಏಕೆ? ಅದರಲ್ಲೂ ಜಾನಕಿಗೆ ನಗು ತುಟಿಗಳ ಮೇಲಿದೆಯೇನೋ ಅನ್ನುವಷ್ಟು ಬೇಗ ಬಂದುಬಿಡುತ್ತದೆ. ಮನೆಯೊಳಗೆ ಹೊರಗೆ ಎಷ್ಟು ವಿಚಿತ್ರಗಳು, ಎಷ್ಟು ತಮಾಷೆಗಳು ಎಲ್ಲಕ್ಕು ನಗು ಬರುತ್ತದೆ. ಹೇಗೆ ತಡೆಯಬೇಕು? ನಗು ಬರುವಂತಹುದು ಎದುರುಗಡೆ ನಡೆದರೂ ನಗಬಾರದು.  ನಕ್ಕರೆ ಹೊಡೆಯುತ್ತಾರಲ್ಲ, ಹೊಡೆದರೆ ನೋವಾಗುತ್ತದಲ್ಲ, ನೋವಿಗೆ ಅಳು ಬರುತ್ತದಲ್ಲ. ಅಳಬಾರದು, ನೋವು ಬರುವಷ್ಟು ಹೊಡೆದರೂ ಅಳಬಾರದೆಂದರೆ  ಆಶ್ಚರ್ಯವಾಗುತ್ತಿತ್ತು ಜಾನಕಿಗೆ. 
"ಹೊಡೆಯದಿದ್ದರೆ ಅವನು ಅಳುವುದಿಲ್ಲವಲ್ಲ" ಎಂದು ಜಾನಕಿ ತಂದೆ, ತಮ್ಮನಿಗೆ ಹೊಡೆಯುತ್ತಿದ್ದಾಗ ಹೇಳಿದಳು. 
"ನೀನು ಬಾಯ್ಮುಚ್ಚದಿದ್ದರೆ ನಿನಗೂ ಬೀಳುತ್ತದೆ, ಉಪಯೋಗಕ್ಕೆ ಬಾರದ ಪ್ರಶ್ನೆಗಳು, ಏನೂ ಇಲ್ಲದಿದ್ದರೂ ದೇವರು ಬಾಯೊಂದನ್ನು ಕೊಟ್ಟು ಬಿಟ್ಟಿದ್ದಾನೆ" ತಂದೆಯ ಕೋಪ ಇವಳೆಡೆಗೆ ತಿರುಗಿತು.
ದೇವರು ಬಾಯಿ ಕೊಟ್ಟಿದ್ದಾನೆ. ಬಾಯಿಯಿಂದ ಮಾತನಾಡುತ್ತಾರೆ,  ನಗುತ್ತಾರೆ, ಅಳುತ್ತಾರೆ. ಮತ್ತೆ ಇದೆಲ್ಲವನ್ನು ಮಾಡಬಾರದೆಂದೇಕೆ ಹೇಳುತ್ತಾರೆ? ಇವೆಲ್ಲಾ ಮಾಡಬಾರದಾದರೆ ದೇವರು ಬಾಯಿ ಕೊಟ್ಟಿದ್ದೇಕೆ? ಜಾನಕಿಯ ಚಿಕ್ಕ ತಲೆಗೆ ಇದಕ್ಕೂ ಹೆಚ್ಚಿನ ಆಲೋಚನೆ ಬರುತ್ತಿರಲಿಲ್ಲ. ಸ್ವಲ್ಪ ಹೊತ್ತಾದ ಮೇಲೆ ಆ ಆಲೋಚನೆಯನ್ನು ಅಲ್ಲಿಗೆ ಬಿಟ್ಟುಬಿಡುತ್ತಿದ್ದಳು.
ಜಾನಕಿಗೆ ನಿಧಾನವಾಗಿ ಎಷ್ಟೋ  ವಿಚಿತ್ರ ವಿಷಯಗಳು ತಿಳಿದವು.
ಮೊದಲಿಗೆ, ಚಿಕ್ಕ ಮಕ್ಕಳನ್ನು ದೊಡ್ಡವರು ಬಾಯಿ ಮುಚ್ಚಲು ಹೇಳುತ್ತಾರೆ ಎಂದು ಅರ್ಥವಾಯಿತು.
ನಂತರ ಚಿಕ್ಕಮಕ್ಕಳಲ್ಲೂ ಹೆಣ್ಣುಮಕ್ಕಳು ಹೆಚ್ಚು ಸಾರಿ ಬಾಯಿ ಮುಚ್ಚಿಕೊಳ್ಳಬೇಕೆಂದು ಅರ್ಥವಾಯಿತು. ಬುದ್ಧಿ ಬಂದಾಗ, ಹೆಂಗಸರನ್ನು ಕೂಡ ಗಂಡಸರು ಬಾಯಿ ಮುಚ್ಚಲು ಹೇಳುತ್ತಾರೆಂದು ಅರ್ಥವಾಯಿತು. ಅಪ್ಪ ಅಮ್ಮ ಒಬ್ಬರೇನೂ, ಮನೆಯಲ್ಲಿರುವ ಎಲ್ಲಾ ಹೆಂಗಸರು, ಗಂಡಸರು, ಮಕ್ಕಳು ಸಹ ಎಲ್ಲರಿಗಿಂತ. ದೊಡ್ಡವನಾದ ವೆಂಕಟಿಯನ್ನು ಬಾಯಿ ಮುಚ್ಚಿಕೊಳ್ಳಲು ಎನ್ನುತ್ತಾರೆ. 
ಜಾನಕಿಗೆ ಸಹ ವೆಂಕಟಿಗೆ ಬಾಯಿ ಮುಚ್ಚಿಕೊಂಡು ಎಂದು ಹೇಳಬೇಕೆಂದು ಎಷ್ಟೋ ಸಾರಿ ಅನಿಸಿದೆ.
ಆದರೆ ವೆಂಕಟಿ ಜಾನಕಿಗೆ ತುಂಬಾ ಒಳ್ಳೆಯ ವಿಷಯಗಳನ್ನು ಹೇಳುತ್ತಿದ್ದ.  ಹಸುಗಳು ಕಿರುಚಿದರೆ ಅವು ತಮ್ಮ ಭಾಷೆಯಲ್ಲಿ ಏನನ್ನುತ್ತಿವೆ ಎಂಬುದನ್ನು  ಹೇಳುತ್ತಿದ್ದ. ಪಕ್ಷಿಗಳು ಸೀಬೆಮರದ ಮೇಲೆ ಕುಳಿತು ಮೀಟಿಂಗ್ ಮಾಡುತ್ತ ಏನನ್ನು ಮಾತನಾಡಿಕೊಳ್ಳುತ್ತಿದ್ದವೋ, ಅದನ್ನು ಹೇಳುತ್ತಿದ್ದ. ಮೋಡಗಳು ಬೇಗ ಬೇಗ ಮನೆಯತ್ತ ಏಕೆ ಓಡುತ್ತಿವೆ ಎಂಬುದನ್ನು ಹೇಳುತ್ತಿದ್ದ. ಸಂಜೆಯಾದ ಮೇಲೆ ಬಿಂದಿಗೆಯಲ್ಲಿ ನೀರನ್ನು ಹೊತ್ತು ಮನೆಯ ತೊಟ್ಟಿಗೆ ತುಂಬುವುದು, ಮನೆ ಸೇರಲಾಗದಿದ್ದರೆ ಆ ನೀರನ್ನೆಲ್ಲಾ ಮಳೆಯಂತೆ ಚೆಲ್ಲುತ್ತಿದ್ದೆ ಎಂಬುದನ್ನು ಹೇಳುತ್ತಿದ್ದರೆ ಬಾಯಿ ತೆರೆದುಕೊಂಡು ಕೇಳಿಸಿಕೊಳ್ಳುತ್ತಿದ್ದಳು ಜಾನಕಿ. "ಬಾಯ್ಮುಚ್ಚು, ಏನಾ ಮಾತು, ಏನಾ ಹರಟೆ"  ಎಂದು ಹೇಳುತ್ತಿದ್ದದನ್ನು ಮರೆತು ನೋಡುತ್ತಿದ್ದಳು.
ವೆಂಕಟಿ ಹೇಳುತ್ತಿದ್ದ ಮಾತುಗಳನ್ನೇ, ಅಮ್ಮನಿಗೆ, ಅಪ್ಪನಿಗೆ ಹೇಳುತ್ತಿದ್ದರೆ ಬಾಯಿಮುಚ್ಚಿಕೊ ಎನ್ನುತ್ತಿದ್ದರು. ಭಿಕಾರಿಗಳನ್ನು, ಕೆಳಜಾತಿಯವರನ್ನು ಹೆಣ್ಣು ಮಕ್ಕಳನ್ನು ಬಾಯಿ ಮುಚ್ಚಿಕೊ ಎನ್ನುತ್ತಾರೆ ಎಂಬುದನ್ನು ಜಾನಕಿ ಗ್ರಹಿಸಿದಳು.
ಆಗಲಿಂದ ಜಾನಕಿ ಅತಿ ಕಡಿಮೆ ಮಾತನಾಡುವುದನ್ನು ಪ್ರಯತ್ನ ಪೂರ್ವಕವಾಗಿ ಅಳವಡಿಸಿಕೊಂಡಳು. ಶಾಲೆಯಲ್ಲಿ, ಮನೆಯಲ್ಲಿ ಮಾತನಾಡದೆ ಕೆಲಸಗಳನ್ನು ಮಾಡುವುದನ್ನು ಕಲಿತುಕೊಂಡಳು.
ಜಾನಕಿಯನ್ನು ಎಲ್ಲರೂ ಮೆಚ್ಚಿಕೊಂಡರು. 
ತಲೆಯಿಂದ ಹುಟ್ಟುವ ಮಾತನ್ನು ನಿಲ್ಲಿಸಲು ಪ್ರಯತ್ನಿಸಿದ ಜಾನಕಿಗೆ ತಲೆಯಲ್ಲಿಯೇ ಮಾತುಗಳು ಹುಟ್ಟುವುದು ನಿಂತುಹೋಗುತ್ತದೆ ಎಂದು ಗ್ರಹಿಸಲಾಗಲಿಲ್ಲ. ಮಾತಾಡದಿದ್ದರೆ ತನ್ನಲ್ಲಿ ಉಂಟಾಗುವ ಅಶಾಂತಿ ನಿಧಾನವಾಗಿ ಕಡಿಮೆಯಾಗುತ್ತದೆ ಎಂದು ಸಂತೋಷಿಸಿದಳೇ ಹೊರತು ತನಗಿರುವ ಊಹಾಶಕ್ತಿಯು ಸಹ ಹೋಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳದಾದಳು.
ಚಿಕ್ಕವಳಾಗಿದ್ದಾಗ ಬಾಡಿಹೋದ ಕೊಂಬೆಗಳನ್ನೂ, ಉದುರಿಬಿದ್ದ ಹೂಗಳನ್ನು ನೋಡಿ ಅವುಗಳಿಗಾಗಿ ನೋವು ಪಟ್ಟುಕೊಂಡು ಅವುಗಳ ದುಸ್ಥಿತಿಯ ಬಗ್ಗೆ ನಾಲ್ಕು ಜನರಿಗೆ ಹೇಳಬೇಕು ಎಂದುಕೊಳ್ಳುತ್ತಿದ್ದ ಜಾನಕಿ, ಇಂದು ತನ್ನ ಎದುರಿನಲ್ಲಿ ಮನುಷ್ಯರು ನೋವನ್ನನುಭವಿಸುತ್ತಿದ್ದರೂ ಏನೂ ಮಾತನಾಡದೆ ಇರುವಂತಹ ದುಸ್ಥಿತಿಗೆ ತಲುಪಿದ್ದಳು. ನಿಶ್ಯಬ್ದವಾಗಿ ಅಳುವುದನ್ನು ಬಿಟ್ಟರೆ ಇನ್ನೇನೂ ಮಾಡಲಾರದಾದಳು. 
ಪಕ್ಷಿಗಳ ಕಲರವ, ಕರುಗಳ ಅಂಬಾ ಎನ್ನುವ ಕೂಗಿಗೆ ಜೋರಾಗಿ ನಗುತ್ತಿದ್ದ ಜಾನಕಿ ಈಗ ತನ್ನ ಮುಂದೆ ಎಷ್ಟೇ ಸಂತೋಷದ ವಿಷಯ ನಡೆದರು ಮುಗುಳ್ನಕ್ಕು ನಿಶ್ಯಬ್ದವಾಗಿ ನಗುವುದನ್ನು ಅಭ್ಯಾಸ ಮಾಡಿಕೊಂಡಳು. 
ಜಾನಕಿಗೆ ಮದುವೆಯಾಯಿತು. ಮದುಮಗ ಸುಂದರಾಂಗ. ಒಳ್ಳೆಯ ಉದ್ಯೋಗ. ಜಾನಕಿ ತನ್ನಲ್ಲೇ ತಾನು ಖುಷಿಪಟ್ಟುಕೊಂಡಳು.
ಆದರೆ ಆ ಖುಷಿ ಹೋಗಿ, ಅದರ ಸ್ಥಾನದಲ್ಲಿ ಭಯ ಆವರಿಸಲು ಹೆಚ್ಚೇನೂ ಕಾಲವಾಗಲಿಲ್ಲ. 
“ಏನು ಆ ನೋಟ, ಮುಂಗುಸಿಯಂತೆ, ಯಾಕೆ ಮಾತಾಡುತ್ತಿಲ್ಲ?” ಜಾನಕಿ ಗಂಡನಿಗೆ ಅವಳ ಮೌನದಿಂದ ಬೇಸರ ಹುಟ್ಟಿತು. ಏನು ಹೇಳಿದರೂ ಕೇಳಿ ಸುಮ್ಮನಿರುವ ಜಾನಕಿ, ಮರುಮಾತನಾಡದೆ ಹೇಳಿದ ಕೆಲಸವನ್ನೆಲ್ಲ ಮಾಡುವ ಜಾನಕಿಯನ್ನು ಕಂಡು ಅವನಲ್ಲಿ ತುಂಬ ಅಸಹನೆ ತುಂಬಿತು.
ತನ್ನ ಗಂಡನಿಗೆ ಮಾತುಗಳು ಬೇಕೆಂದು ಅರ್ಥವಾಗುವಷ್ಟರಲ್ಲಿ ಜಾನಕಿಯ ಕೆನ್ನೆಗಳು ಬಾಸುಂಡೆ ಬಂದವು. ಜಾನಕಿ ಮತ್ತೆ ಮಾತುಗಳನ್ನು ಕಲಿಯಲಾರಂಭಿಸಿದಳು. ಬಾಯಿ ತೆರೆಯುವುದನ್ನು ಆರಂಭಿಸಿದಳು. ತನಗಾದ ಅನುಭವವನ್ನು ಮಾತುಗಳಲ್ಲಿ ಹೇಳುವುದು ಹಿಂದೆ ಬಹಳ ಸುಲಭವಾಗಿತ್ತು.
ಈಗ ಆ ರೀತಿ ಇರಲಿಲ್ಲ.
ಈಗ ಮಾತುಗಳಿಗೆ ಯುದ್ಧ ಮಾಡಬೇಕಾಗಿ ಬರುತ್ತಿತ್ತು.
ತಲೆ, ಗಂಟಲು, ನಾಲಿಗೆ, ತುಟಿಯ ಮೇಲೆ ಯುದ್ಧ ಮಾಡಬೇಕಾಗಿ ಬರುತ್ತಿತ್ತು. ಈ ಯುದ್ಧದ್ದಲ್ಲಿ ಅಪಜಯ ಬಂದರೂ, ಸುಸ್ತಾದರೂ ಜಾನಕಿ ತನ್ನ ಪ್ರಯತ್ನವನ್ನು ಬಿಡಲಿಲ್ಲ.
ನಿಧಾನವಾಗಿ ನಡೆಯಲು ಬಾರದ ಕಂದ ಎದ್ದು ಬಿದ್ದು ನಡೆಯುವುದನ್ನು ಕಲಿತಂತೆ ಜಾನಕಿ ಮಾತನಾಡುವುದನ್ನು ಕಲಿತಳು. ಜಾನಕಿಯಲ್ಲಿನ ಬದಲಾವಣೆಗೆ ಅವಳ ಗಂಡ ಕೂಡ ಸಂತೋಷಿಸಿದ.
ಜಾನಕಿ ಅವನಿಗೇನು ಬೇಕೊ, ಅವನ ಇಷ್ಟಗಳೇನೆಂದು ಕೇಳಿ ಕಂಡುಕೊಳ್ಳುತ್ತಿರುವಾಗ, ಅವನ ಇಷ್ಟಗಳನ್ನು ಪೂರೈಸುವೆ ಎಂದು ಹೇಳುವಾಗ ಅವನು ತುಂಬಾ ಖುಷಿಪಟ್ಟ.
ಅವನ ಕೆಲಸಗಳನ್ನು, ವರ್ತನೆಯನ್ನು ಸೌಂದರ್ಯವನ್ನು ಜಾನಕಿ ಮುದ್ದಾದ ಮಾತುಗಳಲ್ಲಿ ಮೆಚ್ಚಿಕೊಳ್ಳುತ್ತಿದ್ದರೆ ಅವನು ನಿಜವಾಗಿಯೂ ಆನಂದಪಟ್ಟ. ಆದರೆ ಜಾನಕಿ ಮಾತುಗಳು ಅಲ್ಲಿಗೆ ನಿಲ್ಲಲಿಲ್ಲ. ಜಾನಕಿ ಗಿಣಿಯಲ್ಲ. ವ್ಯಕ್ತಿ. ಜಾನಕಿ ಮತ್ತೆ ಕೆಲವು ವಿಷಯಗಳನ್ನು ಕೇಳುವುದು, ಮಾತನಾಡುವುದು ಶುರು ಮಾಡಿದ ಮೇಲೆ ಗಂಡನಿಗೆ ಮತ್ತೆ ಅವಳ ಮೇಲೆ ಕೋಪ ಬರಲಾರಂಭಿಸಿತು. 
ಸಣ್ಣದಾಗಿ ಆರಂಭವಾದ ಈ ಕೋಪ ಜಾನಕಿಯ ಮಾತುಗಳಿಂದ ದೊಡ್ಡದಾಗುತ್ತಾ ಹೋಯಿತು. ಒಂದಿನ ಅದು ಹೊರಬಂತು.
“ಬಾಯ್ಮುಚ್ಚು, ಹೆಂಗಸಿಗೆ ಅಷ್ಟು ಬಾಯಿ ಒಳ್ಳೆಯದಲ್ಲ.”
“ಹೆಂಗಸು ನೀನು, ಬಾಯಿ ಮುಚ್ಚಿಕೊಂಡು ಬಿದ್ದಿರು.”
ಗಂಡ ಈ ಮಾತನಾಡಿದ ದಿನ ಜಾನಕಿ ಹುಚ್ಚುಚ್ಚಾಗಿ ನಕ್ಕಳು. ಕಣ್ಣಿನಿಂದ ನೀರು ಸುರಿಯುವಷ್ಟು ನಕ್ಕಳು. ನಕ್ಕು ನಕ್ಕು ಸುಸ್ತಾಗಿ ಮಂಚದ ಮೇಲೆ ಒರಗಿದಳು.
“ಏನಾ ವಿಪರೀತ ನಗು? ಹೆಂಗಸೇನಾ?”
ಜಾನಕಿಯ ನಗು ನಿಲ್ಲಲ್ಲಿಲ್ಲ.
ಆ ನಗು ಅಳುವಾಗಿ ಬದಲಾಗುವವರೆಗೆ ನಿಲ್ಲುವುದಿಲ್ಲ ಕೂಡ!
“ಬಾಯ್ಮುಚ್ಚು, ಬಾಯ್ಮುಚ್ಚು.”
ಜಾನಕಿ ಕಿವಿಗಳಲ್ಲಿ ಈ ಮಾತು ಪ್ರತಿಧ್ವನಿಸತೊಡಗಿತು. ಕಿವಿಗಳನ್ನು ಮುಚ್ಚಿದರೂ ಸಹ!
ಆ ಮಾತು ಕಿವಿಗಳ ಮೂಲಕ ಕೇಳಿಸಿದರೂ ಹುಟ್ಟಿದ್ದು ತಲೆಯಲ್ಲಿಯೇ. ರಕ್ತದೊಳಗಿಳಿಯಿತು!!
   - ಸುಧಾ ಜಿ      

No comments:

Post a Comment