Sunday 9 April 2017

ಮಹಿಳಾ ಚಳವಳಿಯ ಇತಿಹಾಸ - ಮಹಿಳಾ ಪ್ರತಿರೋಧದ ಹೊಸ ಸಾಧ್ಯತೆಗಳು



ವಸಾಹತುಶಾಹಿ ಆಳ್ವಿಕೆಯ ಕಾಲದಲ್ಲಿ ವಿದೇಶೀ ಶೋಷಣೆ ಹಾಗೂ ಊಳಿಗಮಾನ್ಯ ಪ್ರಭುಗಳ ದಮನದ ವಿರುದ್ಧ ನಡೆದ ರೈತಾಪಿ ವರ್ಗದ ಹೋರಾಟಗಳು, ಆದಿವಾಸಿ ಮತ್ತಿತರ ಸಮುದಾಯಗಳ ಹೋರಾಟಗಳು ಸಾಮೂಹಿಕ ಆಂದೋಲನಗಳಾಗಿದ್ದವು. ಇಂತಹ ಹೋರಾಟಗಳು ಭಾರತದ ಜನತೆಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಜಾಗೃತಗೊಳಿಸಿದಂತೆಯೇ ಮಹಿಳೆಯರ ಆಲೋಚನೆಯನ್ನೂ ಪ್ರಭಾವಿಸಿದವು. ಜೊತೆಗೆ, ಮಹಿಳೆಯರ ಮೇಲಿನ ಹಿಂಸೆ, ಸಾಮಾಜಿಕ ತಾರತಮ್ಯಗಳ ಬಗ್ಗೆಯೂ ಅರಿವು ಮೂಡಿಸಿದವು. ಮಹಿಳೆಯರ ಅಧೀನ ಸ್ಥಿತಿ ಎಂಬುದು ಚರ್ಚಾಸ್ಪದವಾದ ವಿಚಾರವಾಯಿತು.
ಭಾರತದಲ್ಲಿ ಆಧುನಿಕ ಯುಗದಾರಂಭ ಎಂದು ನಾವು ಗುರುತಿಸುವ 18ನೇ ಶತಮಾನದ ಪುನರುಜ್ಜೀವನ ಯುಗದಲ್ಲಿ, ಪಾಶ್ಚಿಮಾತ್ಯ ಶಿಕ್ಷಣ, ಚಿಂತನೆ, ಚಳವಳಿಗಳ ಪ್ರಭಾವದಲ್ಲಿ ರೂಪುಗೊಂಡ ಸುಧಾರಣಾ ಚಳುವಳಿಗಳು ಮಹಿಳಾ ಪ್ರಶ್ನೆಯನ್ನು ಮುನ್ನೆಲೆಗೆ ತಂದುವು. ಹೆಚ್ಚಿನ ಸಮಾಜ ಸುಧಾರಕರ ಒತ್ತು ಇದ್ದದ್ದು ಮೇಲ್ವರ್ಗದ ಮಹಿಳೆಯರ ಸಮಸ್ಯೆಗಳಾದ ವಿಧವೆಯರ ಕೇಶಮುಂಡನ, ಸತಿ ಪದ್ಧತಿ, ವಿಧವಾ ವಿವಾಹಕ್ಕೆ ಅವಕಾಶವಿಲ್ಲದಿದ್ದದ್ದು ಇತ್ಯಾದಿ. ಆದರೆ ಫುಲೆ ದಂಪತಿಗಳು ದಲಿತರು, ಮಹಿಳೆಯರು ಮತ್ತು ಇನ್ನಿತರ ಶೋಷಿತ ಸಮುದಾಯಗಳ ವಾಸ್ತವಿಕ ಸಮಸ್ಯೆಗಳಾದ ಶಿಕ್ಷಣ ಆರೋಗ್ಯ, ಅಸ್ಪೃಶ್ಯತೆ, ರೈತರ ಸಮಸ್ಯೆಗಳು, ಬಾಲ್ಯವಿವಾಹ, ಬ್ರಾಹ್ಮಣ ಬಾಲವಿಧವೆಯರ ಸಮಸ್ಯೆಗಳು ಮುಂತಾದವನ್ನು ಕೇಂದ್ರೀಕರಿಸಿ ತಮ್ಮದೇ ಸುಧಾರಣಾ ಮಾರ್ಗವನ್ನು ರೂಪಿಸಿದರು. ಇದರಿಂದ ಮಹಿಳಾ ವಿಷಯಗಳ ಬಗ್ಗೆ ಬೇರೆ ರೀತಿ ಆಲೋಚಿಸುವ ಯುವಕರ ವರ್ಗವೊಂದು ತಯಾರಾಯಿತು.
ರಾಷ್ಟ್ರೀಯ ಆಂದೋಲನದಲ್ಲೂ ಮಹಿಳೆಯರು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡರು. ಇದರಲ್ಲಿ ಎಲ್ಲಾ ವರ್ಗ, ಹಿನ್ನೆಲೆಗಳ ಮಹಿಳೆಯರೂ ಇರುತ್ತಿದ್ದರು. ಆದರೆ, ಇದನ್ನು ಸಾಧ್ಯವಾಗಿಸಲು ಗಾಂಧೀಜಿಯವರು ಬಳಸಿದ್ದು, ಮಹಿಳೆಯರ ಸಾಂಪ್ರದಾಯಿಕ ಪಾತ್ರದ ವಿಸ್ತರಣೆಯಾಗಿ ಈ ಸಾರ್ವಜನಿಕ ಬದುಕೂ ಇರುತ್ತದೆ ಎಂಬ ನಂಬಿಕೆಯನ್ನು! ಇದನ್ನೂ ಪ್ರಶ್ನಿಸುತ್ತಾ ಹಲವು ಸಂಸ್ಥೆಗಳ ದನಿಯೆದ್ದಿತು.

 ‘ಆಲ್ ಇಂಡಿಯಾ ವಿಮೆನ್ಸ್ ಕಾನ್ಫರೆನ್ಸ್' (AIWC), ‘ವಿಮೆನ್ಸ್ ಇಂಡಿಯನ್ ಡೆಮಾಕ್ರಟಿಕ್ ಫೆಡರೇಷನ್(WIDF)’ ತರಹದ ಉದಾರವಾದಿ ನೆಲೆಯ ಮಹಿಳಾ ಸಂಘಟನೆಗಳು ಆರಂಭವಾದವು. ಡಾ. ಬಿ.ಆರ್. ಅಂಬೇಡ್ಕರ್‍ರವರ ನೇತೃತ್ವದಲ್ಲಿ ಶೋಷಿತ ದಲಿತ ಸಮುದಾಯದ ಚಳವಳಿ ಬಲಗೊಂಡಂತೆ ಅದರಲ್ಲೂ ಭಾರೀ ದೊಡ್ಡ ಸಂಖ್ಯೆಯ ಶೋಷಿತ ಮಹಿಳೆಯರು ಪಾಲ್ಗೊಳ್ಳಲಾರಂಭಿಸಿದರು. ಅಂಬೇಡ್ಕರ್‍ರವರು ದಲಿತ ಮಹಿಳೆಯರ ಫೆಡರೇಷನ್ ಅನ್ನು ಸ್ಥಾಪಿಸಿದರು. ಅದು ಸಮಾಜ ಪರಿವರ್ತನೆಯ ಆಂದೋಲನೆದಲ್ಲಿ ಸಕ್ರಿಯವಾಗಿತ್ತು.


ಸ್ವಾತಂತ್ರ್ಯ ಹೋರಾಟದ ಕೊನೆಯ ಘಟ್ಟದಲ್ಲಿ ಎಡಪಂಥೀಯ ವಿಚಾರಗಳನ್ನುಳ್ಳ ಪ್ರಜಾತಾಂತ್ರಿಕ ಚಳವಳಿಗಳು ಬಿರುಸು ಪಡೆದುಕೊಂಡವು. ಅದರ ಅಂಗವಾಗಿ ‘ನ್ಯಾಷನಲ್ ಫೆಡರೇಷನ್ ಆಫ್ ಇಂಡಿಯನ್ ವಿಮೆನ್’ (NFIW) ತರಹದ ಸಂಘಟನೆಗಳಿಗೆ ವಿಶಾಲವಾದ ಸಮೂಹ ನೆಲೆ ಒದಗಿತು. 

ಈ ಸಂಘಟನೆಗಳು ಮುಖ್ಯವಾಗಿ ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸಮಾನ ಹಕ್ಕುಗಳು, ಕಾರ್ಮಿಕ ಮಹಿಳೆಯರಿಗೆ ಹೆರಿಗೆ ಭತ್ಯೆ, ಸಮಾನ ವೇತನ ಮೊದಲಾದ ಹಕ್ಕೊತ್ತಾಯಗಳನ್ನಿಟ್ಟುಕೊಂಡಿದ್ದವು. ಜೊತೆಗೆ, ಮಹಿಳೆಯರ ಉನ್ನತಿ, ರೈತಾಪಿ ಮತ್ತು ಕಾರ್ಮಿಕ ಮಹಿಳೆಯರು ಮತ್ತು ಮಕ್ಕಳಿಗೆ ಸುಭದ್ರತೆ, ಸಾಮಾಜಿಕ ನ್ಯಾಯ, ಒಟ್ಟಿನಲ್ಲಿ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ವಿಮೋಚನೆಯ ವಿಷಯವನ್ನು ಕೇಂದ್ರೀಕರಿಸಿದ್ದವು.
ಇವೆಲ್ಲದರಾಚೆಗೂ, ಸ್ವಾತಂತ್ರ್ಯಾನಂತರ ಸುದೀರ್ಘ ಕಾಲ ಭಾರತದ ಮಹಿಳಾ ದನಿ ಮರೆಯಾದದ್ದು ಒಂದು ರೀತಿಯ ಒಂದು ರೀತಿಯಲ್ಲಿ ವಿಪರ್ಯಾಸವೇ ಸರಿ. ಈ ನಿರ್ಲಿಪ್ತ ಅವಧಿಯನ್ನು ದಾಟಿ ಮತ್ತೆ ಮಹಿಳಾಪರ ಸಂಗತಿಗಳು ಮುನ್ನೆಲೆಗೆ ಬಂದದ್ದು 70ರ ದಶಕದಲ್ಲೇ! 1971ರಲ್ಲಿ ವಿಶ್ವಸಂಸ್ಥೆಯ ಸೂಚನೆಯ ಮೇರೆಗೆ ಮಹಿಳೆಯರ ಸ್ಥಿತಿಗತಿಯನ್ನು ಪರಿಶೀಲಿಸಲು ‘ಕಮಿಟಿ ಆನ್ ದಿ ಸ್ಟೇಟಸ್ ಆಫ್ ವಿಮೆನ್ ಇನ್ ಇಂಡಿಯಾ’ ಎಂಬ ಸಮಿತಿಯೊಂದನ್ನು ರಚಿಸಲಾಯಿತು. ಹಿರಿಯ ಮಹಿಳಾ ಹೋರಾಟಗಾರರಿದ್ದಂತಹ ಈ ಸಮಿತಿ ಭಾರತದಾದ್ಯಂತ ತಿರುಗಾಡಿ ಎಲ್ಲಾ ಸ್ತರಗಳ ಮಹಿಳೆಯರ ಬದುಕಿನ ಸ್ಥಿತಿಯನ್ನು ಖುದ್ದಾಗಿ ಅವಲೋಕಿಸಿದಾಗ ಕಂಡದ್ದು ಆಘಾತಕರ ವಾಸ್ತವಗಳು. ಇದನ್ನು ಆಧರಿಸಿ ಆ ಸಮಿತಿಯು ‘ಸಮಾನತೆಯೆಡೆಗೆ’ ಎಂಬ ವರದಿಯನ್ನು ಬಿಡುಗಡೆ ಮಾಡಿತು. ಈ ವರದಿ ಭಾರತದ ಮಹಿಳಾಪರ ಮತ್ತು ಪ್ರಜಾತಾಂತ್ರಿಕ ವಲಯಗಳಲ್ಲಿ ಅಲ್ಲೋಲಕಲ್ಲೋಲವನ್ನೆಬ್ಬಿಸಿತು! ಜೊತೆಗೆ ವಿಶ್ವಸಂಸ್ಥೆ 1975ರ ವರ್ಷವನ್ನು ಮಹಿಳಾ ವರ್ಷ ಎಂದೂ ಹಾಗೂ 18ರವರೆಗಿನ ದಶಕವನ್ನು ಮಹಿಳಾ ದಶಕ ಎಂದೂ ಘೋಷಿಸಿತು. ಇವೆಲ್ಲವುಗಳಿಂದಾಗಿ, ಮತ್ತೆ ಮಹಿಳೆಯರ ಪರವಾದ ಪ್ರಯತ್ನಗಳಿಗೆ ದೊಡ್ಡ ಮಟ್ಟದಲ್ಲಿ ಚಾಲನೆ ದೊರಕಿತು.



ಅನೇಕ ಸ್ವಾಯತ್ತ ಮಹಿಳಾ ಸಂಘಟನೆಗಳು ಆರಂಭವಾದವು. ವರದಕ್ಷಿಣೆ ಕೊಲೆ, ಅತ್ಯಾಚಾರಗಳು ಮೊದಲಾದವುಗಳ ವಿರುದ್ಧ ಯಾವುದೇ ಸಂಘಟನೆಯಲ್ಲಿರಲಿ ಅಥವಾ ಇಲ್ಲದಿರಲಿ ಮಹಿಳೆಯರು ಬೀದಿಗಿಳಿದರು. 

ಜೊತೆಗೆ, ಒಳ್ಳೆಯ ಶಿಕ್ಷಣ, ಉದ್ಯೋಗಾವಕಾಶಗಳು, ಲೈಂಗಿಕ ಕಿರುಕುಳದಿಂದ ಮುಕ್ತ ಕೆಲಸದ ವಾತಾರವಣ ಮೊದಲಾದ ಅನೇಕ ಬೇಡಿಕೆಗಳೂ ಸೇರಿಕೊಂಡಿದ್ದವು. ಆರ್ಥಿಕ ಸ್ವಾತಂತ್ರ್ಯ ಮಹಿಳೆಯರಿಗೆ ಸಮಾನತೆ ಒದಗಿಸುತ್ತದೆಂಬ ಭಾವ ಬಲವಾಗಿತ್ತು. ಒಟ್ಟಿನಲ್ಲಿ ಮಹಿಳೆಯರ ಕುರಿತ ಸಾಮಾಜಿಕ ಸಂವೇದನೆ ಹೆಚ್ಚಿದ ಪರಿಣಾಮ ಸರ್ಕಾರ ‘ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ’, ಹಲವು ಮಹಿಳಾಪರ ಕಾಯ್ದೆಗಳು, ಮಹಿಳಾ ಅಧ್ಯಯನ ಕೇಂದ್ರಗಳು, ಮಹಿಳಾ ಪರ ಯೋಜನೆಗಳನ್ನು ಜಾರಿಗೊಳಿಸಲೇಬೇಕಾಯಿತು.

ಇಂದಿನ ಸನ್ನಿವೇಶ ಮತ್ತು ಸಾಧ್ಯತೆಗಳು:
ಇವೆಲ್ಲ ಸುದೀರ್ಘ ಪ್ರಯತ್ನಗಳ ಫಲವಾಗಿ ಇಂದಿನ ಸನ್ನಿವೇಶದಲ್ಲಿ ಒಂದಷ್ಟು ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಇಂದು, ಮಹಿಳೆಯರಿಗೆ ಸಮಾನತೆ ಸಿಕ್ಕಿದೆ ಎಂದಾಗಲೀ, ಅವರ ಮೇಲಿನ ಹಿಂಸೆ, ತಾರತಮ್ಯ ನಿಂತಿದೆ ಎಂದಾಗಲಿ ಪ್ರತಿಪಾದಿಸಲು ಸಾಧ್ಯವಿಲ್ಲ. ಆದರೆ ಖಂಡಿತವಾಗಿ ಹೇಳಬಹುದಾದ ಸಂಗತಿಯೆಂದರೆ, ಈ ಹಿಂದಿನ ಎಲ್ಲಾ ಪ್ರಯತ್ನಗಳ ಫಲವಾಗಿ ಮಹಿಳೆಯರು ಮತ್ತು ಮಹಿಳಾಪರರ ಮುಂದೆ ಅತ್ಯಂತ ಹೊಸ ಮಾದರಿಯ ಪ್ರತಿರೋಧದ ಸಾಧ್ಯತೆಗಳು ತೆರೆದುಕೊಂಡಿವೆ!
ಅನೇಕ ಬರಹಗಾರರು ಮತ್ತು ಅಧ್ಯಯನಕಾರರು ಮಹಿಳೆಯರ ಸಾಹಿತ್ಯ, ಕಲಾಭಿವ್ಯಕ್ತಿ, ಚಳವಳಿ ಮತ್ತು ವೈಯಕ್ತಿಕ ಬದುಕಿನ ನೆಲೆಯಲ್ಲಿಯೂ ಹೊಸ ಎಚ್ಚರವನ್ನು ಗುರುತಿಸಿದ್ದಾರೆ.
ಇಂದಿನ ತಲೆಮಾರಿನ ಮಹಿಳೆಯರು ಸಾಂಪ್ರದಾಯಿಕವಾದ ಮಹಿಳೆ ಕೀಳೆಂಬ ಆಲೋಚನೆಯಿಂದ ಬಿಡಿಸಿಕೊಂಡು ವಾಸ್ತವಿಕ ನೆಲೆಯಿಂದ ಚಿಂತಿಸುವುದನ್ನು ಕಾಣುತ್ತೇವೆ. ಈ ವಾಸ್ತವ ಪ್ರಜ್ಞೆಯನ್ನು ಅಡಗಿಸಲು, ಅನೇಕ ಮಹಿಳಾ ವಿರೋಧಿ ಧಾರಾವಾಹಿಗಳು, ಜ್ಯೋತಿಷ್ಯ, ಹೊಸ ದೇವರುಗಳು ಮುಂತಾದವನ್ನು ದಾರಿಗಡ್ಡವಾಗಿ ತಂದು ರಾಶಿ ಸುರಿದರೂ, ನೈಸರ್ಗಿಕವಾಗಿ ತಾವು ಸಮಾನರು ಮತ್ತು ಸಾಧನೆಗಳನ್ನು ಮಾಡುವ ಸಾಮರ್ಥ್ಯ ಉಳ್ಳವರು ಎಂಬುದನ್ನಂತೂ ಅಳಿಸಲು ಸಾಧ್ಯವಾಗಿಲ್ಲ.
ಶಿಕ್ಷಣ ಪಡೆಯುತ್ತಿರುವ ಹೆಣ್ಣಮಕ್ಕಳಂತೂ ಹೊಸ ಹೊಸ ಸವಾಲುಗಳನ್ನು ದಿಟ್ಟತನದಿಂದ ಮುಖಾಮುಖಿಯಾಗುತ್ತಿರುವುದನ್ನು ನೋಡುತ್ತಿದ್ದೇವೆ. ಅಷ್ಟೇ ಅಲ್ಲದೆ, ಔಪಚಾರಿಕ ಶಿಕ್ಷಣ ಇಲ್ಲದಿದ್ದರೂ, ಅನೇಕ ಬಗೆಯ ಮಹಿಳಾ ಕಾರ್ಮಿಕರು, ಗ್ರಾಮೀಣ ಮಹಿಳೆಯರೂ ಕೂಡಾ ತಮ್ಮ ಕನಿಷ್ಠ ಹಕ್ಕುಗಳನ್ನು ಗಟ್ಟಿದನಿಯಿಂದ ಕೇಳಬಲ್ಲವರಾಗಿದ್ದಾರೆ. ಕಳೆದ ಶತಮಾನದಲ್ಲಿ ನಡೆದ ಸಮಾಜವಾದಿ, ಎಡಪಂಥೀಯ ಚಳವಳಿಗಳು ಹಾಗೂ ವಿವಿಧ ಐಡೆಂಟಿಟಿಗಳನ್ನು ಆಧರಿಸಿರುವ, ರೈತ, ದಲಿತ, ಮಹಿಳಾ ಚಳವಳಿ ಮೊದಲಾದವೂ ಸಹಾ ಹೊಸ ಪ್ರಜ್ಞೆಯ ಅನಾವರಣಕ್ಕೆ ಪೂರಕವಾದ ವಾತಾವರಣ ನಿರ್ಮಿಸಿವೆ. ಹೊಸ ತಲೆಮಾರಿನ ಕವಯತ್ರಿಯರು, ಕಥೆಗಾರ್ತಿಯರು ಮತ್ತು ಮಹಿಳೆಯರ ಬಗ್ಗೆ ಬರೆಯುವ ಪುರುಷ ಬರಹಗಾರರ ಬರಹಗಳಲ್ಲಿ ಇಂತಹ ಬೌದ್ಧಿಕ ಎಚ್ಚರದ ಸ್ಪಷ್ಟ ಕುರುಹುಗಳು ಕಾಣುತ್ತವೆ. ಅದೇ ರೀತಿ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಗಾರ್ಮೆಂಟ್ಸ್ ಮಹಿಳಾ ಕಾರ್ಮಿಕರು, ಸ್ತ್ರೀಶಕ್ತಿ ಸಂಘಗಳ ಮೂಲಕ ಹೊರಬಂದು ಅನೇಕ ಚಟವಟಿಕೆಗಳಲ್ಲಿ ತೊಡಗುತ್ತಿರುವ ಗ್ರಾಮೀಣ ಮಹಿಳೆಯರು, ಮದ್ಯಪಾನದ ವಿರುದ್ಧ ಮಹಿಳೆಯರ ಹೋರಾಟ ಮೊದಲಾದವನ್ನು ಇಲ್ಲಿ ಉಲ್ಲೇಖಿಸಬಹುದು.

ಆದರೆ, ಇದೇ ಸಮಯದಲ್ಲಿ ‘ಮಹಿಳೆ’ ಎಂಬ ಒಂದೇ ನೆಲೆಗಟ್ಟಿನ ಮೇಲೆ ರೂಪುಗೊಳ್ಳಬಹುದಾಗಿದ್ದ ಇಂತಹ ಸಂಘಟಿತ ಶಕ್ತಿಗೆ ಎದುರಾಗಿ, ಮತೀಯವಾದಿ ಸಾಂಸ್ಕೃತಿಕ ರಾಜಕಾರಣವೂ ತನ್ನ ಪ್ರಭಾವವಲಯವನ್ನು ವಿಸ್ತರಿಸುತ್ತಿರುವುದನ್ನು ಕಾಣುತ್ತೇವೆ. ಇತ್ತೀಚಿನ ಕೆಲವು ಕಾಲೇಜು ಮತ್ತು ವಿಶ್ವವಿದ್ಯಾಲಯಗಳಲ್ಲಿ ಮುಸ್ಲಿಂ ಹೆಣ್ಣುಮಕ್ಕಳು ಬುರ್ಖಾ ಧರಿಸಿ ತರಗತಿಗೆ ಬರುವುದನ್ನು ವಿರೋಧಿಸಿ ಕೇಸರಿ ಅಂಗವಸ್ತ್ರ ಧರಿಸಿ ದಾಂಧಲೆಯೆಬ್ಬಿಸಿದ ಪುಂಡ ಹುಡುಗರ ಗುಂಪುಗಳಲ್ಲಿ ಸಾಕಷ್ಟು ವಿದ್ಯಾರ್ಥಿನಿಯರೂ ಇದ್ದದ್ದು ಎದ್ದು ಕಾಣುತ್ತಿತ್ತು. ಇಂತಹವು ಮುಂದುವರೆಯುತ್ತಾ, ಹೆಣ್ಣುಮಕ್ಕಳ ಬದುಕು ಮತ್ತು ಉಡುಪಿನ ಆಯ್ಕೆ, ಜೀವನಶೈಲಿಯನ್ನು ನಿಯಂತ್ರಿಸುವುದು, ಸಾಂಪ್ರದಾಯಿಕ ಅಚ್ಚಿಗೆ ಆಧುನಿಕ ಮಹಿಳೆಯನ್ನು ಮತ್ತೆ ನೂಕುವ ಹುನ್ನಾರ ವಿಸ್ತರಿಸುತ್ತಿದೆ.
ಇಂತಹ ‘ಅನೈತಿಕ ಗೂಂಡಾಗಿರಿ’ಯನ್ನೂ ಪ್ರತಿರೋಧಿಸುವ ಹೊಸದಾರಿಗಳನ್ನು ಮಹಿಳಾಪರ ಶಕ್ತಿಗಳು ಹುಡುಕಿಕೊಳ್ಳುತ್ತಿರುವುದು ಸಹ ತೆರೆದುಕೊಂಡಿರುವ ಹೊಸ ಸಾಧ್ಯತೆಗಳ ಭಾಗವೇ ಆಗಿದೆ. ಮಂಗಳೂರಿನಲ್ಲಿ ಸಾಲಾಗಿ ನಡೆದ ಇಂತಹ ಗೂಂಡಾಗಿರಿಯ ಘಟನೆಗಳನ್ನು ವಿರೋಧಿಸುತ್ತಾ ‘ಜಾಗತಿಕ ಸಹೋದರಿತ್ವ’ದ ಪರಿಕಲ್ಪನೆಯನ್ನು ಬಲಗೊಳಿಸಲು ಆರಂಭವಾದ ‘ಕರ್ನಾಟಕ ಮಹಿಳಾ ದೌರ್ಜನ್ಯ ವಿರೋಧಿ ಒಕ್ಕೂಟ’ವು ಆ ನಂತರದಲ್ಲೂ ಕ್ರಿಯಾಶೀಲವಾಗಿದೆ.


ಅದೇ ರೀತಿ, ಇಂದು ಆಧುನಿಕ ಆರ್ಥಿಕತೆಯ ಚೌಕಟ್ಟಿಗೆ ಹೊಸದಾಗಿ ಒಳಪಡುತ್ತಾ ಅದರ ಬಿಕ್ಕಟ್ಟು ಮತ್ತು ತಲ್ಲಣಗಳನ್ನು ಅನುಭವಿಸುತ್ತಿರುವ ಓಬಿಸಿ ವರ್ಗಗಳು, ಇಂತಹ ಬಿಕ್ಕಟ್ಟಿಗೆ ಪರಿಹಾರವೆಂಬಂತೆ ಬಿಂಬಿಸಲಾಗುತ್ತಿರುವ ಮತೀಯ ರಾಜಕಾರಣದ ಕಾಲಾಳು ವರ್ಗವಾಗುತ್ತಿರುವ ಆಘಾತಕರ ಬೆಳವಣಿಗೆಯನ್ನು ನೋಡುತ್ತಿದ್ದೇವೆ. ಇದಕ್ಕೆ ಪ್ರತಿಯಾಗಿ, ವ್ಯಾಪಕವಾದ ಪ್ರಜಾಸತ್ತಾತ್ಮಕ ಸಹಮತವನ್ನು ರೂಪಿಸಬೇಕಾದದ್ದು ಇಂದಿನ ಅಗತ್ಯವಾಗಿದ್ದು, ಈ ದಿಕ್ಕಿನಲ್ಲಿ ಮಹಿಳೆಯರ ಪಾತ್ರವನ್ನು ಗುರುತಿಸುವಂತಹ ಪ್ರಯತ್ನಗಳೂ ಆಗುತ್ತಿವೆ.
80ರ ದಶಕದ ಮಹಿಳಾಪರ ಹೋರಾಟಗಳಿಂದ ದೊರೆತ ಕಾನೂನುಗಳು ಮಹಿಳೆಯರಿಗೆ ಒಂದು ಹಂತದಲ್ಲಿ ಬಿಡುಗಡೆಯ ಅಸ್ತ್ರಗಳಾಗಿ ಕಂಡದ್ದು ಸತ್ಯ. ಆದರೆ, ಇಂದು ಆ ಕಾನೂನುಗಳ ಸುತ್ತಲೇ ಸುತ್ತುವ ಮಹಿಳೆಯರು ವ್ಯಕ್ತಿಗತ ನೆಲೆಯಲ್ಲಿ ಹಲವು ಸಂಕೀರ್ಣ ಸಮಸ್ಯೆಗಳನ್ನು ಎದುರಿಸುವ ಸಂದರ್ಭಗಳು ಉಂಟಾಗುತ್ತಿವೆ. ಆದ್ದರಿಂದಲೇ, ವ್ಯ್ಕತಿಗತ ಸಮಸ್ಯೆಗಳು ಸಾಮೂಹಿಕ ನೆಲೆಯ ಆಂದೋಲನಗಳೂ ಸಹಾ ಆಗಿ ಪರಿವರ್ತಿತವಾಗುವ ಅಗತ್ಯವಿದೆ. ಹಾಗೆಯೇ ಸ್ವಸಹಾಯ ಸಂಘಗಳಿಂದ ದೊರೆತಿರುವ, ನಾಲ್ಕು ಗೋಡೆಯಾಚೆಗೆ ಇಣಿಕುವ ಮತ್ತು ‘ಹೊಸಿಲು ದಾಟುವ’ ಅವಕಾಶಗಳನ್ನೂ ಸಹ, ವಿಶಾಲ ನೆಲೆಯ ಆಂದೋಲನಗಳ ಜೊತೆ ಬೆಸೆಯುವ ಪ್ರಯತ್ನಗಳ ತುರ್ತು ಅಗತ್ಯಿವೆ. ಇಂತಹ ಎಚ್ಚರದೊಂದಿಗೆ ಹೊಸ ಬಗೆಯ ಮಹಿಳಾ ಸಂಘಟನೆಗಳ ಪ್ರಯತ್ನಗಳು (ಲೈಂಗಿಕ ಹಿಂಸೆಯ ವಿರುದ್ಧ, ಮದ್ಯಪಾನದ ವಿರುದ್ಧ ಇತ್ಯಾದಿ) ಅಲ್ಲಲ್ಲಿ ನಡೆಯುತ್ತಿರುವುದು ಗುರುತಿಸಬೇಕಾದಂತಹವು.
ಈಗಷ್ಟೇ ಹೊರಜಗತ್ತಿಗೆ ಕಾಲಿಡುತ್ತಿರುವ ವಿದ್ಯಾರ್ಥಿ ಸಮುದಾಯವನ್ನು ಮಹಿಳಾ ವಿಚಾರಗಳಲ್ಲಿ ಸಂವೇದನಾಶೀಲರನ್ನಾಗಿಸುವಲ್ಲಿ ಅಧ್ಯಾಪಕರು, ಶಿಕ್ಷಕರು ಮತ್ತಿತರ ವೃತ್ತಿಪರರ ಪಾತ್ರ ಹಿರಿದು. ಅದಕ್ಕಾಗಿ ಇಂತಹ ಸೂಕ್ಷ್ಮತೆಯನ್ನು ವೃತ್ತಿಪರರಲ್ಲಿ ರೂಢಿಸಲು ಹೊಸ ಬಗೆಯ ಕಾರ್ಯತಂತ್ರವನ್ನೇ ಹೆಣೆಯಬೇಕಾದ ಸಂದರ್ಭವಿದು. ಅದೇ ರೀತಿ, ಹೊಸ ಮಾಧ್ಯಮಗಳನ್ನೂ ಈ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿ ಬಳಕೆ ಮಾಡುವ ಮಾರ್ಗೋಪಾಯಗಳನ್ನು ನಾವು ಶೋಧಿಸಬೇಕಿದೆ. ಅಂತಹ ಹೊಸ ಮಾರ್ಗಗಳು ಖಂಡಿತ ಯಶಸ್ಸನ್ನು ಕಾಣುತ್ತವೆ ಎಂಬುದಕ್ಕೆ, ಶಬರಿಮಲೈ ವಿವಾದದ ಸಂದರ್ಭದಲ್ಲಿ ಕೇರಳದಲ್ಲಿ ನಡೆದ ಒಂದು ಬಿಡಿ ಘಟನೆ ಸಾಕ್ಷಿ. ಶಬರಿಮಲೈಗೆ 10ರಿಂದ 50 ವರ್ಷದೊಳಗಿನ ಮಹಿಳೆಯರು ಹೋದರೆ, ಅವರು ಮುಟ್ಟಾಗುವ ಕಾರಣದಿಂದ ದೇವಾಲಯ ಅಪವಿತ್ರವಾಗುತ್ತದೆಂದು ದೇವಾಲಯದ ದೇವಸ್ವ ಮಂಡಳಿ ಕೋರ್ಟಿಗೆ ಅಫಿಡವಿಟ್ ಸಲ್ಲಿಸಿದ ಸಂದರ್ಭದಲ್ಲಿ, ಕೇರಳದ ನಾಲ್ವರು ಯುವ ವಕೀಲೆಯರು ‘ಹ್ಯಾಪಿ ಟು ಬ್ಲೀಡ್’ (ಋತುಸ್ರಾವದ ಬಗ್ಗೆ ಸಂತಸವಿದೆ) ಎಂಬ ಆಂದೋಲನವನ್ನು ಸಾಮಾಜಿಕ ಜಾಲತಾಣಗಳಲ್ಲಿ ಆರಂಭಿಸಿದರು. ತಮ್ಮ ನೈಸರ್ಗಿಕ ವಿಶಿಷ್ಟತೆಯನ್ನು ಅವಮಾನಿಸುವ ಸಾಂಪ್ರದಾಯಿಕತೆಯನ್ನು ಹೀಗೆ ಪ್ರತಿರೋಧಿಸಿದ ಆ ಯುವತಿಯರಿಗೆ ಕೆಲವೇ ದಿನಗಳಲ್ಲಿ ಬಹುದೊಡ್ಡ ಬೆಂಬಲ ವ್ಯಕ್ತವಾದದ್ದು ಮತ್ತು ನಂತರದಲ್ಲಿ ಕೋರ್ಟಿನಲ್ಲೂ ಅದು ಮಾರ್ದನಿಸಿದ್ದು ತಿಳಿದಿರುವ ಸಂಗತಿಯೇ. ಜೊತೆಗೆ, ಈ ಆಂದೋಲನ ಆರಂಭಿಸಿದ ಯುವತಿಯರಿಗೆ ಸಂಪ್ರದಾಯವಾದಿಗಳಿಂದ ಬೆದರಿಕೆ ಬಂದಾಗ, ಯುವಕರೆಲ್ಲಾ ಸೇರಿ ‘ಪಿತೃಪ್ರಧಾನತೆಯನ್ನು ವಿರೋಧಿಸಿ’ ಎಂಬ ಮತ್ತೊಂದು ಅಭಿಯಾನವನ್ನು ಜಾಲತಾಣಗಳಲ್ಲಿ ವ್ಯಾಪಕವಾಗಿ ನಡೆಸಿ ಬೆಂಬಲ ವ್ಯಕ್ತಪಡಿಸಿದರು. ಇದು ನಮ್ಮ ದೇಶದ ಗಡಿ ದಾಟಿ ಹೊರದೇಶಗಳಲ್ಲೂ ಸದ್ದು ಮಾಡಿತು.

ಅದೇ ರೀತಿ, ಒಂದೇ ಶತೃವಿನ ವಿರುದ್ಧದ ಹೊಡೆದಾಟಕ್ಕೆ, ಪ್ರತ್ಯೇಕವಾಗಿಯೇ ಕೆಲಸಮಾಡುವ ವಿಭಿನ್ನ ವಿಚಾರಧಾರೆಗಳೆಲ್ಲವೂ ಒಂದೇ ಸೂರಿನಡಿ ಬರುವುದು ಸಾಧ್ಯ ಎಂಬ ಸಂಗತಿಯೂ ನಮಗೆ ಕಾಣುತ್ತಿದೆ. ಇತ್ತೀಚೆಗೆ ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡಿದ ಆಂದೋಲನಗಳಲ್ಲಿ ಒಂದಾದ ‘ಚಲೋ ಉಡುಪಿ’ಯ ಯಶಸ್ಸು ಅಂತಹ ಸಾಧ್ಯತೆಯು ವಾಸ್ತವಿಕ ತಳಹದಿಯ ಮೇಲೆ ನಿಂತಿದೆ ಎಂಬುದನ್ನು ತೋರಿಸಿದೆ. ಅದೇ ರೀತಿ, ಮಹಿಳಾ ವಿಮೋಚನೆ ಪುರುಷರ ಮತ್ತು ಇಡೀ ಸಮಾಜದ ಬಿಡುಗಡೆಯ ಹಾದಿಯೂ ಹೌದು ಎಂಬ ತಿಳುವಳಿಕೆಯನ್ನೂ ಮೂಡಿಸುವ ಅಗತ್ಯವಿದೆ.
ಈ ರೀತಿಯ ಅನೇಕ ಸಾಧ್ಯತೆಗಳನ್ನು ತಳದಿಂದ ಶೋಧಿಸುವ, ಅಂತಹ ಸಾಧ್ಯತೆಗಳೆಡೆಗೆ ಸಾಗುವ ಸೃಜನಶೀಲವಾದ ಮಾರ್ಗಗಳನ್ನು ರೂಪಿಸುವ ನಿಟ್ಟಿನಲ್ಲಿ ಮಹಿಳಾ ಸಂಘಟನೆಗಳು, ಚಿಂತಕರು ಮತ್ತು ಎಲ್ಲಾ ಮಹಿಳಾಪರರು ಇನ್ನಷ್ಟು ವೇಗವಾಗಿ ಚಲಿಸಬೇಕಾಗಿರುವುದು ಇಂದಿನ ತುರ್ತು!
- ಪ್ರೊ. ಮಾಧವಿ, ಸಹಾಯಕ ಪ್ರಾಧ್ಯಾಪಕರು, 
ಮಹಿಳಾ ಸರ್ಕಾರಿ ಕಾಲೇಜು, ಮಂಡ್ಯ.


No comments:

Post a Comment