Tuesday 4 April 2017

ಮಹಿಳಾ ಜಾಗೃತಿ ಗೀತೆ - ಹೆಣ್ಣು ಮಗಳಮ್ಮ ನಾನು ಹೆಣ್ಣು ಮಗಳೇನೆ


[ಈ ಹಾಡು ತೆಲುಗಿನಿಂದ ಕನ್ನಡಕ್ಕೆ ಅನುವಾದ ಹಾಡು. ಮಧುಪ್ರಿಯ ಎಂಬ 13 ವರ್ಷದ ಹೆಣ್ಣುಮಗಳು ತಾನೇ ಬರೆದು, ಹಾಡಿದ್ದಾಳೆ. ಇದನ್ನು ಉಷಾಗಂಗೆ ಅನುವಾದ ಮಾಡಿದ್ದಾರೆ]



ಹೆಣ್ಣು ಮಗಳಮ್ಮ ನಾನು ಹೆಣ್ಣು ಮಗಳೇನೆ
ನೋವ್ಯಾಕಮ್ಮ ನಿನಗೆ ಭಯವೇಕಮ್ಮ||

ಅಷ್ಟಮಿಯ ದಿನದಂದು ಅಮ್ಮ ಹುಟ್ಟಿದ ಕಾರಣಕೆ
ಈ ಹಾಳು ಲೋಕದಲಿ ಅಮ್ಮ ಕೀಳಾಗಿ ಕಾಣುವರಾ
ಹೆಣ್ಣೆಂದು ಕೇಳುವರಾ, ಛೀ ಎಂದು ದೂಡುವರಾ
ಅಷ್ಟಮಿಯ ದಿನದಿ ಹುಟ್ಟಿದ ಕೃಷ್ಣಂಗೆ ಪೂಜೆಯ ಮಾಡುವರಾ
ನನ್ನನ್ನು ಕಸದಂತೆ ನೋಡುವರಾ||

ಪಾಟಿ ಬಳಪ ಹಿಡಿದು ಅಮ್ಮ ಶಾಲೆಗೆ ನಾ ಹೋದರೆ
ಹೆಣ್ಣಾಗಿ ಹುಟ್ಟಿದ್ದಕ್ಕೆ ಅಮ್ಮ ಓದ್ಯಾಕೆ ಎನ್ನುವರಾ
ಓದ್ಯಾಕೆ ಎನ್ನುವರಾ ಅಮ್ಮ ಖರ್ಚೆಂದು ಹೇಳುವರಾ
ಓದಿನ ತಾಯಿ ಸರಸ್ವತಿಯು ಹೆಣ್ಣಲ್ಲವೇನಮ್ಮ
ನಂಗೇನೋ ಓದ್ಯಾಕೆ ಎನ್ನುವರಾ||

ಬೆಳೆದಿರುವ ನನ್ನ ನೋಡಿ ಅಮ್ಮ ನೀನ್ಯಾಕೆ ಅಳುತೀಯೆ
ಲಕ್ಷ ವರದಕ್ಷಿಣೆಯ ಅಮ್ಮ ಎಲ್ಲಿಂದ ಕೊಡಲೆಂದು
ಹೆಣ್ಣೆಂದು ತಿಳಿದಾ ಕ್ಷಣವೇ ಭ್ರೂಣ ತೆಗೆಸುವರೇಕಮ್ಮ
ಹೆಣ್ಣು ಮಕ್ಕಳೇ ಬೇಡೆಂದುಕೊಂಡರೆ ಸೃಷ್ಟಿಗೆ ಮೂಲವೆಲ್ಲಿ
ನಾಳೆಯ ಜಗಕೆ ದಾರಿಯೆಲ್ಲಿ||

No comments:

Post a Comment