Showing posts with label ಮಹಿಳಾ ಜಾಗೃತಿ ಗೀತೆ. Show all posts
Showing posts with label ಮಹಿಳಾ ಜಾಗೃತಿ ಗೀತೆ. Show all posts

Wednesday, 13 September 2017

ಮಹಿಳಾ ಜಾಗೃತಿ ಗೀತೆ - 3

ಹೆಣ್ಣನು ಹಡದಿ ಎನ್ನುತ ಬೇಸರ
ಮಾಡುವಿರೇಕೆ ನೀವೆಲ್ಲಾ?
ಹೆಣ್ಣಿಂದ ತಾನೇ ಜಗವಿಂದು ಬೆಳೆವುದು
ಎಂಬುದು ತಿಳಿಯಬೇಕು ನಾವೆಲ್ಲಾ(2)


ಗಂಡಿನ ಹುಟ್ಟು ಹೆಣ್ಣಿನ ಹತ್ಯೆ
ಮಾಡುವಿರೇಕೆ ನೀವೆಲ್ಲಾ? 
ಹೆಣ್ಣಿಲ್ಲದ ಈ ಜೀವನ ಹೇಗೆ
ಎಂಬುದು ತಿಳಿಯಬೇಕು ನಾವೆಲ್ಲಾ (2)


ಗಂಡಿಗೆ ತುಪ್ಪ ಹೆಣ್ಣಿಗೆ ಏಕೆ?
ಕೇಳುವಿರೇಕೆ ನೀವೆಲ್ಲಾ
ಹೆಣ್ಣಿನ ಬಲದಲಿ ಜಗದ ಗೆಲುವಿದೆ
ಎಂಬುದು ತಿಳಿಯಬೇಕು ನಾವೆಲ್ಲಾ (2)


ಗಂಡಿಗೆ ಶಾಲೆ  ಹೆಣ್ಣಗೆ ಮದುವೆ 

ಎನ್ನುವಿರೇಕೆ ನೀವೆಲ್ಲಾ
ಹೆಣ್ಣೊಂದು ಕಲಿತರೆ ಶಾಲೆಯ ತೆರೆದಂತೆ
ಎಂಬುದು ತಿಳಿಯಬೇಕು ನಾವೆಲ್ಲಾ (2)


ಗಂಡು ಮೇಲು ಹೆಣ್ಣು ಕೀಳೆಂದು
ತಿಳಿಯುವಿರೇಕೆ ನೀವೆಲ್ಲಾ
ಹೆಣ್ಣು -ಗಂಡು  ಸಮಾನರಿಬ್ಬರು
ಎಂಬುದು ತಿಳಿಯಬೇಕು ನಾವೆಲ್ಲಾ(2)

ತಿಳಿದು ನಡೆಯಬೇಕು ನಾವೆಲ್ಲಾ(2)

- ವಿಜಯಲಕ್ಷ್ಮಿ ಎಂ ಎಸ್     

Saturday, 19 August 2017

ಮಹಿಳಾ ಜಾಗೃತಿ ಗೀತೆ - ತೂರಬೇಡಿ ಗಾಳಿಗೆ


ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ 
ಜೀವ ಕೊಡುವ ಜೀವವಿದು ಕಡಿಮೆ ಯಾರಿಗೆ ? 
ಕಡಿಮೆ ಯಾರಿಗೆ ?      ।।ತೂರಬೇಡಿ ಗಾಳಿಗೆ।।

ನಾಚಬೇಡಿ ಹೆಣ್ತನಕೆ ತಲೆ ಎತ್ತಿ ನಿಲ್ಲಿರಿ 
ನಾಚಬೇಕು ತುಳಿದವರು ಮನುಜಾತಿಗೆ ಸೇರಿದವರು  ।।ತೂರಬೇಡಿ ಗಾಳಿಗೆ।।

ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು 
ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವ 
ಬೆಳಕಿಗೊಮ್ಮೆ ಈಚೆ ಬಾ ಕಂಡೀತು ಜೀವನ 
 ಕಂಡೀತು ಜೀವನ    ।।ತೂರಬೇಡಿ ಗಾಳಿಗೆ।।

ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು 
ಕೈಗೆ ಕೈ ಜೋಡಿಸೋಣ
 ಹೊಸ ಜಗತ್ತು ನಮ್ಮದು  (೩)  ।।ತೂರಬೇಡಿ ಗಾಳಿಗೆ।।

  - ವಿಜಯ ದಬ್ಬೆ 

Tuesday, 4 April 2017

ಮಹಿಳಾ ಜಾಗೃತಿ ಗೀತೆ - ಹೆಣ್ಣು ಮಗಳಮ್ಮ ನಾನು ಹೆಣ್ಣು ಮಗಳೇನೆ


[ಈ ಹಾಡು ತೆಲುಗಿನಿಂದ ಕನ್ನಡಕ್ಕೆ ಅನುವಾದ ಹಾಡು. ಮಧುಪ್ರಿಯ ಎಂಬ 13 ವರ್ಷದ ಹೆಣ್ಣುಮಗಳು ತಾನೇ ಬರೆದು, ಹಾಡಿದ್ದಾಳೆ. ಇದನ್ನು ಉಷಾಗಂಗೆ ಅನುವಾದ ಮಾಡಿದ್ದಾರೆ]



ಹೆಣ್ಣು ಮಗಳಮ್ಮ ನಾನು ಹೆಣ್ಣು ಮಗಳೇನೆ
ನೋವ್ಯಾಕಮ್ಮ ನಿನಗೆ ಭಯವೇಕಮ್ಮ||

ಅಷ್ಟಮಿಯ ದಿನದಂದು ಅಮ್ಮ ಹುಟ್ಟಿದ ಕಾರಣಕೆ
ಈ ಹಾಳು ಲೋಕದಲಿ ಅಮ್ಮ ಕೀಳಾಗಿ ಕಾಣುವರಾ
ಹೆಣ್ಣೆಂದು ಕೇಳುವರಾ, ಛೀ ಎಂದು ದೂಡುವರಾ
ಅಷ್ಟಮಿಯ ದಿನದಿ ಹುಟ್ಟಿದ ಕೃಷ್ಣಂಗೆ ಪೂಜೆಯ ಮಾಡುವರಾ
ನನ್ನನ್ನು ಕಸದಂತೆ ನೋಡುವರಾ||

ಪಾಟಿ ಬಳಪ ಹಿಡಿದು ಅಮ್ಮ ಶಾಲೆಗೆ ನಾ ಹೋದರೆ
ಹೆಣ್ಣಾಗಿ ಹುಟ್ಟಿದ್ದಕ್ಕೆ ಅಮ್ಮ ಓದ್ಯಾಕೆ ಎನ್ನುವರಾ
ಓದ್ಯಾಕೆ ಎನ್ನುವರಾ ಅಮ್ಮ ಖರ್ಚೆಂದು ಹೇಳುವರಾ
ಓದಿನ ತಾಯಿ ಸರಸ್ವತಿಯು ಹೆಣ್ಣಲ್ಲವೇನಮ್ಮ
ನಂಗೇನೋ ಓದ್ಯಾಕೆ ಎನ್ನುವರಾ||

ಬೆಳೆದಿರುವ ನನ್ನ ನೋಡಿ ಅಮ್ಮ ನೀನ್ಯಾಕೆ ಅಳುತೀಯೆ
ಲಕ್ಷ ವರದಕ್ಷಿಣೆಯ ಅಮ್ಮ ಎಲ್ಲಿಂದ ಕೊಡಲೆಂದು
ಹೆಣ್ಣೆಂದು ತಿಳಿದಾ ಕ್ಷಣವೇ ಭ್ರೂಣ ತೆಗೆಸುವರೇಕಮ್ಮ
ಹೆಣ್ಣು ಮಕ್ಕಳೇ ಬೇಡೆಂದುಕೊಂಡರೆ ಸೃಷ್ಟಿಗೆ ಮೂಲವೆಲ್ಲಿ
ನಾಳೆಯ ಜಗಕೆ ದಾರಿಯೆಲ್ಲಿ||

Tuesday, 7 March 2017

ಮಹಿಳಾ ಜಾಗೃತಿ ಗೀತೆ -1 - ಮೆರವಣಿಗೆ ಹೊರಡುತ್ತಾರೆ



[ಈ ಅಂಕಣದಲ್ಲಿ ನಾವು ಮಹಿಳಾ ಜಾಗೃತಿ ಗೀತೆಗಳನ್ನು ಹಾಕುತ್ತಿದ್ದೇವೆ.]


ಒಂದಲ್ಲಾ ಒಂದುದಿನ ಈ ನೆಲದ ಹೆಣ್ಣುಗಳು
ಮೆರವಣಿಗೆ ಹೊರಡುತ್ತಾರೇ  ||2||
ಮಳೆ ಹಾಡಹಾಡುತ್ತಾ
ಸಾಲು ಗಿಡಗಳ ನೆಡುತ್ತಾ
ಮೆರವಣಿಗೆ ಹೊರಡುತ್ತಾರೇ ||2||

ದೇಹದ ಗುಂಟ ಹರಿದ ನೆತ್ತರ
ಚರಿತೆ ತೊಳೆಯುತ್ತಾರೆ
ಹೆಣ್ಣುಗಳು ಚರಿತೆ ತೊಳೆಯುತ್ತಾರೆ
ಹೊಸ ನದಿಯಾ ಹುಡುಕುತ್ತಾ
ಹುಡುಕುತ್ತ ಸಾಗುತ್ತಾರೆ ||2||  || ಮೆರವಣಿಗೆ ||

ದೇಹವ ಮುಚ್ಚಿದ ಎಲ್ಲವ ಕಳಚಿ
ಬಿಡಿಸಿಕೊಳ್ಳುತ್ತಾರೆ
ಬಂಧನ ಬಿಡಿಸಿಕೊಳ್ಳುತ್ತಾರೆ
ಈ ನೆಲದಾ ಹಾದಿಬೀದಿಗಳ
ತುಂಬ ಸೇರುತ್ತಾರೆ ||2||  || ಮೆರವಣಿಗೆ ||
   -   ವಿನಯ ಒಕ್ಕುಂದ