Tuesday 9 May 2017

ಲೇಖನ - ಮಹಿಳಾ ಅಧ್ಯಯನದ ನೆಲೆಗಳು



ಮಹಿಳಾ ಅಧ್ಯಯನದ ನೆಲೆಗಳನ್ನು ಕುರಿತ ಚರ್ಚೆಯಲ್ಲಿ ಮೂಲಭೂತವಾಗಿ ಈ ಅಧ್ಯಯನ ಶಿಸ್ತಿನ ಉಗಮ ‘ಹೇಗಾಯಿತು ಮತ್ತು ಏಕಾಯಿತು’ ಎಂಬ ಎರಡು ಪ್ರಶ್ನೆಗಳಿಗೆ ಉತ್ತರವನ್ನು ಹುಡುಕಬೇಕಾಗುತ್ತದೆ. ನನ್ನ ದೃಷ್ಟಿಯಲ್ಲಿ ಮಹಿಳಾ ಅಧ್ಯಯನ ಉದ್ಭವಿಸಿದ್ದು ಪ್ರಶ್ನೆಗಳಲ್ಲಿ ಮತ್ತು ಚಳವಳಿಗಳಲ್ಲಿ. ನಾವಿಂದು ಇಡೀ ಜ್ಞಾನ ವ್ಯವಸ್ಥೆಯನ್ನು ವಿಶ್ಲೇಷಿಸಿದಾಗ ಅದರಲ್ಲಿ ಬಹುತೇಕ ಎದ್ದು ಕಾಣುವುದು ಪುರುಷ ಭಾಷೆ, ಪುರುಷ ದೃಷ್ಟಿಕೋನ ಮತ್ತು ಪುರುಷ ಪಕ್ಷಪಾತ. 
ನೀವು ಯಾವುದೇ ಅಧ್ಯಯನ ಶಿಸ್ತನ್ನು ತೆಗೆದುಕೊಳ್ಳಿ, ಇಡೀ ಜಗತ್ತಿನ ಜನಸಂಖ್ಯೆಯಲ್ಲಿ ಅರ್ಧಭಾಗದಷ್ಟಿರುವ ಮಹಿಳೆಯರ ದೃಷ್ಟಿಕೋನದಿಂದ ಪ್ರಪಂಚವನ್ನು ನೋಡುವ, ಅರ್ಥೈಸುವ ಪ್ರವೃತ್ತಿ ಕಾಣುತ್ತಿಲ್ಲ. ಬಹು ಶತಮಾನಗಳ ಕಾಲ ಈ ಪ್ರವೃತ್ತಿ ಇರಲೇ ಇಲ್ಲವೆಂದು ಹೇಳಿದರೆ ಪ್ರಾಯಶಃ ಅದು ಉತ್ಪ್ರೇಕ್ಷೆ ಎನಿಸುವುದಿಲ್ಲವೇನೋ. ಕಳೆದ ಮೂರು ನಾಲ್ಕು ದಶಕಗಳಿಂದ ಕೆಲವು ಜ್ಞಾನ ಶಾಖೆಗಳಲ್ಲಾದರೂ ಲಿಂಗ ವ್ಯವಸ್ಥೆಯ ದೃಷ್ಟಿಕೋನದಿಂದ ವಿಷಯಗಳನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಗಳು ಆರಂಭವಾಗಿವೆ. ಸಾಮಾಜಿಕ ಘಟನಾವಳಿಗಳನ್ನು ಲಿಂಗಸೂಕ್ಷ್ಮ ಸಂವೇದನಾಶೀಲತೆಯಿಂದ ವಿಶ್ಲೇಷಿಸದಿದ್ದರೆ, ಪ್ರಶ್ನೆಗಳನ್ನು ಕೇಳದಿದ್ದರೆ, ಖಾಲಿ ಜಾಗಗಳನ್ನು ತುಂಬದಿದ್ದರೆ, ಚರ್ಚೆಗೆ ಒಳಪಟ್ಟ ವಿಷಯ ಅಪೂರ್ಣವೆನಿಸುತ್ತದೆ, ಅರ್ಥವನ್ನು ಕಳೆದುಕೊಳ್ಳುತ್ತದೆ. ಇಂತಹ ಆಲೋಚನೆಗಳೇ ಮಹಿಳಾ ಅಧ್ಯಯನಕ್ಕೆ ಮೂಲ ನೆಲೆಯನ್ನು ಒದಗಿಸುವುದು.
ಮಹಿಳಾ ಅಧ್ಯಯನವನ್ನು ಅರ್ಥಪೂರ್ಣವಾಗಿಸಲು ಪ್ರಮುಖವಾಗಿ ಮೂರು ಮಾರ್ಗಗಳನ್ನು ಅನುಸರಿಸಬೇಕು. ಅವುಗಳೆಂದರೆ ಬೋಧನೆ, ಸಂಶೋಧನೆ ಮತ್ತು ಸಮಾಜಮುಖಿ ಕಾರ್ಯಚಟುವಟಿಕೆಗಳು. ಈ ಮೂರು ಮಾರ್ಗಗಳು ಸಮ್ಮಿಳಿತವಾದಾಗ ಮಾತ್ರ ಮಹಿಳಾ ಅಧ್ಯಯನಕ್ಕೆ ಒಂದು ನೆಲೆ ದೊರೆಯುವುದು. 
ಮಹಿಳಾ ಅಧ್ಯಯನದ ಆರಂಭಕಾಲದಲ್ಲಿ ಡಿಪ್ಲೊಮಾ ಅಥವಾ ಪದವಿ ಮಟ್ಟದ ಶಿಕ್ಷಣ ಕೆಲವೇ ಸಂಸ್ಥೆಗಳಲ್ಲಿ ಲಭ್ಯವಾಗಿತ್ತು. ಆಗಿನ ಕಾಲಘಟ್ಟದಲ್ಲಿ ಮಹಿಳಾ ವಿಚಾರಗಳಲ್ಲಿ ಆಸಕ್ತರಾಗಿದ್ದ, ಕಾರ್ಯಪ್ರವೃತ್ತರಾಗಿದ್ದ ಅಧ್ಯಾಪಕರು ಕಾಲೇಜುಗಳಲ್ಲಿ ಅಥವಾ ವಿಶ್ವವಿದ್ಯಾಲಯಗಳಲ್ಲಿ ಮಹಿಳಾ ಅಧ್ಯಯನದ ಬೋಧನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆಗ ಶಿಸ್ತಿನ ಗೋಡೆಗಳು ಇರಲಿಲ್ಲ. ಈ ಹಿನ್ನೆಲೆಯಿಂದ ಬಂದ ಮಹಿಳಾ ಅಧ್ಯಯನಕ್ಕೆ ಬಹುಶಿಸ್ತೀಯ ಅಥವಾ ಅಂತರಶಿಸ್ತೀಯ ದೃಷ್ಟಿಕೋನದ ಅಗತ್ಯವಿದೆ ಎಂಬ ನಂಬಿಕೆ ಬೆಳೆಯಿತು. ಹಾಗೆಯೇ ಅದರ ಬೋಧನೆ ಕೂಡ ಆ ಚೌಕಟ್ಟಿನಲ್ಲಿಯೇ ನಡೆಯುತ್ತಿತ್ತು. 
ಆಗ ಮುಖ್ಯವಾಗಿದ್ದೆಂದರೆ, ನಾವು ಯಾವ ವಿಷಯದಲ್ಲಿ ಎಂಎ ಅಥವಾ ಪಿಎಚ್‍ಡಿ ಮಾಡಿದ್ದೇವೆ ಎನ್ನುವುದಕ್ಕಿಂತ ನಮಗೆಷ್ಟು ವಿಷಯ ಸಂಬಂಧಿ ಕಾಳಜಿಗಳಿವೆ; ನಾವೆಷ್ಟು ಅಧ್ಯಯನಗಳನ್ನು ಕೈಗೊಂಡಿದ್ದೇವೆ; ಎಷ್ಟು ಸಭೆಗಳಲ್ಲಿ, ಸಂವಾದಗಳಲ್ಲಿ ಸಾರ್ವಜನಿಕ ವಲಯದ ಚಟುವಟಿಕೆಗಳಲ್ಲಿ ಭಾಗವಹಿಸಿದ್ದೇವೆ, ನಾವೆಷ್ಟು ಬರೆದಿದ್ದೇವೆ, ಎಷ್ಟರಮಟ್ಟಿಗೆ ನಮ್ಮ ಅನುಭವ, ಆಸಕ್ತಿಗಳನ್ನು ಮುಂದಿನ ತಲೆಮಾರಿಗೆ ವರ್ಗಾಯಿಸಲು ಶ್ರಮಿಸುತ್ತಿದ್ದೇವೆ ಎನ್ನುವಂತಹ ಅಂಶಗಳು. ಎಲ್ಲಕ್ಕಿಂತ ಮಿಗಿಲಾಗಿ ಮಹಿಳಾ ಚಳವಳಿಗೂ ಅಧ್ಯಯನಕ್ಕೂ ಒಂದು ಅವಿನಾವಭಾವ ಸಂಬಂಧವಿತ್ತು. 
ಆದರೆ ಕಾಲಕ್ರಮೇಣ ಕೇಂದ್ರಗಳು ಕೋರ್ಸ್‍ಗಳು ಪದವೀಧರರು ಮಹಾಪ್ರಬಂಧಗಳು ಪುಸ್ತಕಗಳ ಸಂಖ್ಯೆ ಬೆಳೆಯುತ್ತಾ ಹೋಯಿತು. ಆದರೆ ನೇರವಾಗಿ ಹೇಳಬೇಕೆಂದರೆ ಮಹಿಳಾ ಪರ ಕಾಳಜಿಗಳು ಹಾಗೂ ಕಾರ್ಯೋನ್ಮುಖತೆ ಕಡಿಮೆಯಾಗುತ್ತಾ ಹೋಯಿತು. 
ಇಂದು ದೇಶದಲ್ಲಿ 155ಕ್ಕೂ ಹೆಚ್ಚು ಕೇಂದ್ರಗಳು ಬಂದಿವೆ. ಅನೇಕ ಹುದ್ದೆಗಳು ಸೃಷ್ಟಿಯಾಗಿವೆ. ಸಾವಿರಾರು ಪದವೀಧರರು ಹೊರಬಂದಿದ್ದಾರೆ. ಕರ್ನಾಟಕ ರಾಜ್ಯದಲ್ಲಿಯೇ 1500 ಮೀರಿದ ಮಹಿಳಾ ಅಧ್ಯಯನ ಪದವೀಧರರಿದ್ದಾರೆ. ಅವರಲ್ಲಿ ಅನೇಕರಿಗೆ ತಮ್ಮ ಶೈಕ್ಷಣಿಕ ಅರ್ಹತೆಗೆ ತಕ್ಕ ಉದ್ಯೋಗ ದೊರೆತಿಲ್ಲ. ಒಂದು ಬಗೆಯ ಅತಂತ್ರ ಪರಿಸ್ಥಿತಿ ಅವರನ್ನು ಕಾಡುತ್ತಿದೆ ಎಂಬುವುದು ನಮ್ಮ ಮುಂದಿರುವ ಸತ್ಯ. 
ಈ ಪರಿಸ್ಥಿತಿಯಲ್ಲಿ ಎದ್ದಿರುವ ಒಂದು ಪ್ರಮುಖ ಪ್ರಶ್ನೆಯೆಂದರೆ ಮಹಿಳಾ ಅಧ್ಯಯನವನ್ನು ಯಾರು ಬೋಧನೆ ಮಾಡಬೇಕು” ಎನ್ನುವುದು. ಇಲ್ಲಿ ಡಿಗ್ರಿ ಮುಖ್ಯವೋ, ವಿಷಯಕ್ಕೆ ದಿಶೆಯನ್ನು ನೀಡುವಂತಹ ಸಾಮರ್ಥ್ಯ ಮುಖ್ಯವೋ ಅಥವಾ ಹುದ್ದೆ ಮುಖ್ಯವೊ ಎಂಬ ಪ್ರಶ್ನೆಗಳನ್ನು ಎತ್ತಿ ಸಂಸ್ಥೆಗಳನ್ನು, ಮಹಿಳಾ ಅಧ್ಯಯನ ಶಿಸ್ತನ್ನು ಸರಿಯಾದ ಮಾರ್ಗದಲ್ಲಿ ಮುನ್ನಡೆಸುವ ವ್ಯಕ್ತಿಗಳಿಗೆ ಈ ಜವಾಬ್ದಾರಿಯನ್ನು ನೀಡಬೇಕು ಎನ್ನುವುದು ನನ್ನ ನಿಶ್ಚಿತ ಅಭಿಪ್ರಾಯ. 
ತಮ್ಮ ಮಹಿಳಾ ಪರ ಕಾಳಜಿಗಳನ್ನು ತೋರಿಕೆಗಾಗಿ ಪ್ರದರ್ಶಿಸಲು ಮಹಿಳಾ ಅಧ್ಯಯನ ಸ್ನಾತಕೋತ್ತರ ಕೋರ್ಸ್ ಗಳನ್ನು ಅನೇಕ ವಿವಿಗಳಲ್ಲಿ ತೆಗೆದು ಈ ಹೊತ್ತು ಆ ವಿದ್ಯಾರ್ಥಿಗಳ ಬಗ್ಗೆ ಆಗಲಿ ಹೊರಬಂದಿರುವ ಪದವೀಧರರ ಬಗ್ಗೆಯಾಗಲಿ ಕನಿಷ್ಟ ಕಾಳಜಿಯನ್ನು ವ್ಯಕ್ತಪಡಿಸದೆ ಅವರನ್ನು ನಡುದಾರಿಯಲ್ಲಿ ಬಿಟ್ಟಿರುವ ಶೈಕ್ಷಣಿಕ – ಆಡಳಿತಾತ್ಮಕ ವ್ಯವಸ್ಥೆ ಇನ್ನಾದರೂ ಎಚ್ಚರಗೊಳ್ಳದಿದ್ದರೆ ಮತ್ತಷ್ಟು ಅನಾಹುತಗಳಿಗೆ ಕಾರಣವಾಗುತ್ತದೆ.
ಮಹಿಳಾ ಅಧ್ಯಯನದ ಎರಡನೆಯ ನೆಲೆಯಿರುವುದು ಸಂಶೋಧನಾ ಅಧ್ಯಯನಗಳಲ್ಲಿ. 3-4 ದಶಕಗಳ ಹಿಂದೆಯೇ ಮಹಿಳೆಯರನ್ನು ಕುರಿತ ವಿವರಣಾತ್ಮಕ ಸಂಶೋಧನೆಗಳು ಬಹುಸಂಖ್ಯೆಯಲ್ಲಿ ಹೊರಬರಲಾರಂಭಿಸಿದವು. ಆಗಿನ ಕಾಲಘಟ್ಟದಲ್ಲಿ ಅವು ವಿಶಿಷ್ಟವೆನಿಸಿದ್ದರೂ ಕಾಲ ಕಳೆಯುತ್ತಾ ಹೋದ ಹಾಗೆಲ್ಲ ಖಚಿತ ಪ್ರಶ್ನೆಗಳನ್ನೆತ್ತಿ ನಿಶ್ಚಿತ ಉತ್ತರಗಳನ್ನು ನೀಡುವಂತಹ ಸಂಶೋಧನೆಗಳ ಅಭಾವ ಕಂಡುಬರತೊಡಗಿತು. ಮಹಿಳೆಯರು ಸಮರೂಪವಾದ ಒಂದು ವರ್ಗವಾಗಿಲ್ಲವಾದ್ದರಿಂದ ಅವರವರ ಬದುಕಿನ ವಾಸ್ತವಗಳ ಚೌಕಟ್ಟಿನಲ್ಲಿ ಸಂಶೋಧನಾ ಅಧ್ಯಯನಗಳನ್ನು ಕೈಗೊಳ್ಳಬೇಕೆ ಹೊರತು ತೀರಾ ಸಾಮಾನ್ಯೀಕೃತ ತೀರ್ಮಾನಗಳನ್ನು ಹೊರತಂದು ಹೊಸದೇನನ್ನು ಹೇಳದ ಸಂಶೋಧನೆಗಳ ಪ್ರಸ್ತುತತೆ, ಅವಶ್ಯಕತೆ ಮತ್ತು ಪ್ರಯೋಜನಗಳ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತುವ ಸಮಯ ಈಗ ಬಂದಿದೆ. 
ಇನ್ನು ಮೂರನೆಯ ಹಾಗೂ ನನ್ನ ದೃಷ್ಟಿಯಲ್ಲಿ ಅತಿ ಮುಖ್ಯವಾದ ಮಹಿಳಾ ಅಧ್ಯಯನದ ಆಯಾಮವೆಂದರೆ ಸಮಾಜಮುಖಿ ಕಾರ್ಯೋನ್ಮುಖತೆ ಅಥವಾ ಆಂಗ್ಲಭಾಷೆಯಲ್ಲಿ "Activism" ಎಂದು ಗುರುತಿಸಿರುವ ಚಟವಟಿಕೆ. ಮಹಿಳಾ ಅಧ್ಯಯನದ ಆರಂಭವಾದದ್ದೇ ಮಹಿಳಾ ಚಳವಳಿ ನೀಡಿದ ಸ್ಪೂರ್ತಿಯಿಂದ, ಅದು ತೋರಿದ ಆಸಕ್ತಿಯಿಂದ ಹಾಗೂ ಚಳವಳಿಯಲ್ಲಿ ತೊಡಗಿಸಿಕೊಂಡಿದ್ದವರ ಭಾಗವಹಿಸುವಿಕೆಯಿಂದ. 
ಆದರೆ ಇಂದು ಚಳವಳಿ ಮತ್ತು ಅಧ್ಯಯನಗಳ ನಡುವೆ ಒಂದು ದೂರವೇರ್ಪಟ್ಟಿದೆ, ಈ ದೂರ ದಿನೇದಿನೇ ಹೆಚ್ಚಾಗುತ್ತಿದೆ. ಇದು ಖಂಡಿತಾ ಮಹಿಳಾ ಅಧ್ಯಯನಕ್ಕೆ ಒಳಿತನ್ನು ತರುವ ಬೆಳವಣಿಗೆಯಲ್ಲ. ಈ ಹೊತ್ತು ಅಧಿಕಾರದಲ್ಲಿರುವ ಅನೇಕರಿಗೆ activists ಎಂದರೆ ಒಂದು ರೀತಿಯ ಭಯ ಬಂದಿದೆ. ಇದಕ್ಕೆ ಕಾರಣವೆಂದರೆ ಇವರು ಕೇಳುವ ಅನೇಕ ನೇರ ಪ್ರಶ್ನೆಗೆ  ಅವರ ಬಳಿ ಉತ್ತರಗಳಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಹೊಂದಾಣಿಕೆಯ ಸಂಸ್ಕೃತಿ  ತಾಂಡವವಾಡುತ್ತಿರುವ ಈಗಿನ ಶೈಕ್ಷಣಿಕ ರಾಜಕಾರಣದಲ್ಲಿ, ಹೋರಾಟಗಳಿಗೆಲ್ಲಿದೆ ಸ್ಥಾನ? ಆದರೆ ಅಧ್ಯಯನವಾಗಲಿ, ಚಳವಳಿಯಾಗಲಿ ಇಂಥಾ ನಕಾರಾತ್ಮಕ ಧೋರಣೆಗಳಿಂದ ಹಿಮ್ಮೆಟ್ಟಬೇಕಿಲ್ಲ. ಚಳವಳಿ ಪ್ರಶ್ನೆಗಳನ್ನು ಎತ್ತಿದ್ದರಿಂದಲೇ, ಹೋರಾಟಗಳನ್ನು ನಡೆಸಿದ್ದರಿಂದಲೇ ಮಹಿಳಾ ವಿಚಾರಗಳು ಸಾರ್ವಜನಿಕ ವಲಯಗಳಿಗೆ ಬಂದದ್ದು, ಹೊಸ ಕಾನೂನುಗಳ ರಚನೆಯಾಗಿದ್ದು,ಇಡೀ ಸಾಮಾಜಿಕ-ಆರ್ಥಿಕ-ರಾಜಕೀಯ-ಆಡಳಿತ ವ್ಯವಸ್ಥೆ  ಲಿಂಗ ವ್ಯವಸ್ಥೆ ದೃಷ್ಟಿ ಕೋನದಿಂದ ವಿಮರ್ಶೆಗೆ ಒಳಪಟ್ಟಿದ್ದು ಹಾಗೂ ಮಹಿಳಾ ಜಗತ್ತಿನ ವೈವಿಧ್ಯತೆ ಅನಾವರಣಗೊಂಡಿದ್ದು.
ಮಹಿಳಾ ಅಧ್ಯಯನ ಒಂದು ಅರ್ಥಪೂರ್ಣ ಶಿಸ್ತಾಗಿ ಉಳಿಯಬೇಕಾದರೆ, ಬೆಳೆಯಬೇಕಾದರೆ ಅದರಲ್ಲಿ ತೊಡಗಿರುವವರಿಗೆ ಮಾನವೀಯ ಗುಣವಿರಬೇಕು, ಮಹಿಳೆಯರ ಬದುಕಿನ ವಾಸ್ತವಗಳನ್ನು ಅರ್ಥ ಮಾಡಿಕೊಂಡು ಅದರ ಹಿನ್ನೆಲೆಯಲ್ಲಿ ಪ್ರಶ್ನೆಗಳನ್ನು ಎತ್ತುವ, ಉತ್ತರಗಳನ್ನು ಹುಡುಕುವ ಮನಸ್ಸಿರಬೇಕು ಹಾಗೂ ಪುರುಷರನ್ನು ಒಳಗೊಂಡಂತೆ ಲಿಂಗಸಮಾನತೆಯನ್ನು ಸಾಧಿಸುವ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವ ವಿಶಾಲ ಹೃದಯವಿರಬೇಕು. ಸ್ತ್ರೀವಾದಿ ಮಾನವತಾವಾದಿಯಾದಾಗಲೇ ಸ್ತ್ರೀ - ಪುರುಷ ಸಮಾನತೆಯ ಕನಸು ಸಾಕಾರವಾಗುವುದು.  ಇದು ನಿಜವಾದ ಅರ್ಥದಲ್ಲಿ ಮಹಿಳಾ ಅಧ್ಯಯನದ ಗುರಿಯಾಗಬೇಕು. 
- ಪ್ರೊ।। ಆರ್. ಇಂದಿರಾ 


ಅನುವಾದಿತ ಕಥೆ - ಧಿಕ್ಕಾರ - ಪ್ರೇಮ್‍ಚಂದ್


                                            
ಪ್ರೇಮ್ ಚಂದ್ 
                                        
(1)
     ಅನಾಥೆ ಹಾಗೂ ವಿಧವೆ ಮಾನಿಗೆ ಜೀವನದಲ್ಲಿ ಈಗ ಅಳುವುದರ ವಿನಃ ಬೇರೇನೂ ದಾರಿಯಿರಲಿಲ್ಲ.  ಆವಳಿಗೆ ಐದು ವರ್ಷವಿದ್ದಾಗ ತಂದೆಯ ದೇಹಾಂತ್ಯವಾಯಿತು.  ತಾಯಿ ಹೇಗೋ ಮಾಡಿ ಆಕೆಯನ್ನು ಬೆಳೆಸಿದರು.  16ನೇ ವರ್ಷದಲ್ಲಿ ನೆರೆಹೊರೆಯವರ ನೆರವಿನಿಂದ ಆಕೆಯ ವಿವಾಹವೂ ನಡೆಯಿತು. ಆದರೆ ವರ್ಷದೊಳಗೆ ತಾಯಿ ಮತ್ತು ಪತಿ ಇಬ್ಬರೂ ತೀರಿಕೊಂಡರು. ಇಂತಹ ವಿಪತ್ತಿನ ಸಮಯದಲ್ಲಿ ಅವಳಿಗೆ ಆಶ್ರಯ ಪಡೆಯಲು ತನ್ನ ಚಿಕ್ಕಪ್ಪ ವಂಶಿಧರರ ಹೊರತಾಗಿ ಬೇರಿನ್ಯಾರೂ ಕಂಡು ಬರಲಿಲ್ಲ.  
ವಂಶೀಧರರ ಇಲ್ಲಿಯವರೆಗಿನ ವ್ಯವಹಾರದಿಂದ ಅಲ್ಲಿ ಶಾಂತಿಯಿಂದ ಇರುವ ಆಶೆಯಂತೂ ಇರಲಿಲ್ಲ.  ಆದರೆ ಅವಳು ಎಲ್ಲವನ್ನೂ ಸಹಿಸಲು, ಏನು ಬೇಕಾದರೂ ಮಾಡಲು ಸಿದ್ಧಳಿದ್ದಳು. ಅವಳು ಬೈಗಳು, ನಿಂದೆ, ಹೊಡೆತ ಎಲ್ಲವನ್ನೂ ಸಹಿಸಬಲ್ಲಳು. ಆದರೆ ಅಲ್ಲಿದ್ದರೆ ಯಾರೂ ಅವಳನ್ನು ಸಂದೇಹದ ದೃಷ್ಟ್ಠಿಯಿಂದ ನೋಡಲಾರರು, ಅವಳ ಮೇಲೆ ಸುಳ್ಳು ಆರೋಪ ಹೊರಿಸಲಾರರು, ಕಾಮುಕರಿಂದ, ನೀಚರಿಂದ ಅವಳ ರಕ್ಷಣೆ ಆಗುವುದು. ವಂಶೀಧರರು ಕುಲಮರ್ಯಾದೆ ರಕ್ಷಿಸುವ ಕಾರಣದಿಂದ ಮಾನಿಯ ಯಾಚನೆಯನ್ನು ನಿರಾಕರಿಸಲಾರದೆ ಹೋದರು.
ಆದರೆ ಈ ಮನೆಯಲ್ಲಿ ಬಹಳ ದಿನ ನಿಭಾಯಿಸಲಾಗದೆಂದು ಮಾನಿಗೆ ನಾಲ್ಕಾರು ತಿಂಗಳುಗಳಲ್ಲೇ ತಿಳಿದುಹೋಯಿತು. ಅವಳು ಮನೆಯ ಎಲ್ಲಾ ಕೆಲಸ ಮಾಡುತ್ತಿದ್ದಳು, ಎಲ್ಲರೂ ಕುಣಿಸಿದ ಹಾಗೆ ಕುಣಿಯುತ್ತಿದ್ದಳು. ಎಲ್ಲರನ್ನೂ ಸಂತೋಷವಾಗಿರಿಸಲು ಪ್ರಯತ್ನಿಸುತ್ತಿದ್ದಳು. ಆದರೆ ಏಕೋ ಚಿಕ್ಕಮ್ಮ, ಚಿಕ್ಕಪ್ಪ, ಇಬ್ಬರಿಗೂ ಅವಳನ್ನು ಕಂಡರೆ ಹೊಟ್ಟೆಉರಿ. 
ಅವಳು ಬಂದೊಡನೆ ಅಡುಗೆಯವಳನ್ನು ಬಿಡಿಸಿದ್ದಾಯ್ತು. ಹೊರಗೆಲಸಕ್ಕೆ ಒಬ್ಬ ಆಳಿದ್ದ. ಅವನನ್ನೂ ಮನೆಗೆ ಕಳುಹಿಸಿದ್ದಾಯ್ತು. ಮಾನಿಯ ಮೇಲೆ ಇಷ್ಟು ಹೊರೆ ಹೊರಿಸಿದರೂ ಯಾಕೋ ಅವಳ ಚಿಕ್ಕಮ್ಮ, ಚಿಕ್ಕಪ್ಪ ಅವಳ ಮೇಲೆ ಮುನಿಸಿಕೊಂಡೇ ಇರುತ್ತಿದ್ದರು. ಚಿಕ್ಕಪ್ಪನ ಮಗಳು ಲಲಿತಾ ಸಹ ಮಾತುಮಾತಿಗೆ ನಿಂದಿಸುತ್ತಿದ್ದಳು.
ಇಡೀ ಮನೆಯಲ್ಲಿ ಅವಳ ಚಿಕ್ಕಪ್ಪನ ಮಗ ಗೋಕುಲನಿಗೆ ಮಾತ್ರ ಅವಳ ಬಗ್ಗೆ ಸಹಾನುಭೂತಿ ಇತ್ತು. ಅವನ ಮಾತಿನಲ್ಲಿ ಮಾತ್ರ ಸ್ವಲ್ಪ ಸ್ನೇಹ, ಸ್ವಲ್ಪ ಆತ್ಮೀಯತೆ ದೊರಕುತ್ತಿದ್ದವು. ಅವನಿಗೆ ತನ್ನ ತಾಯಿಯ ಸ್ವಭಾವ ಗೊತ್ತಿತ್ತು.  ಅವನೇನಾದರೂ ತಾಯಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನಮಾಡಿದ್ದಲ್ಲಿ, ಅಥವಾ ಬಹಿರಂಗವಾಗಿ ಮಾನಿಯ ಪಕ್ಷ ವಹಿಸಿದ್ದಲ್ಲಿ ಮಾನಿಗೆ ಆ ಮನೆಯಲ್ಲಿ ಒಂದು ಘಳಿಗೆ ಸಹ ಇರುವುದು ಕಠಿಣವಾಗಿ ಬಿಡುವುದು. ಹಾಗಾಗಿ ಅವನ ಸಹಾನುಭೂತಿ ಮಾನಿಗೆ ಸಾಂತ್ವನ ನೀಡುವುದಕ್ಕಷ್ಟೇ ಸೀಮಿತವಾಗಿತ್ತು. 
ಅವನು ಹೇಳುತ್ತಿದ್ದ – ‘ತಂಗಿ, ನನಗೆಲ್ಲಾದರೂ ನೌಕರಿ ಸಿಗಲಿ, ನಂತರ ನಿನ್ನ ಕಷ್ಟಗಳು ಕೊನೆಗೊಳ್ಳುವುವು.  ಆಗ ನಿನ್ನನ್ನು ತಿರಸ್ಕಾರದಿಂದ ಕಾಣುವವರಾರೆಂದು ನಾನೂ ನೋಡಿಯೇ ಬಿಡುತ್ತೇನೆ.  ನನ್ನ ಶಿಕ್ಷಣ ಮುಗಿಯುವ ತನಕ ಮಾತ್ರ ನಿನಗೆ ಕೆಟ್ಟದಿನಗಳು’. ಮಾನಿ ಈ ಸ್ನೇಹ ತುಂಬಿದ ಮಾತುಗಳಿಂದ ಪುಲಕಿತಳಾಗುತ್ತಿದ್ದಳು.  ಹಾಗೂ ಅವಳ ಶರೀರದ ಕಣಕಣ ಗೋಕಲನಿಗೆ ಆಶೀರ್ವಾದ ನೀಡುತ್ತಿದ್ದವು.
ಇಂದು ಲಲಿತಾಳ ವಿವಾಹ. ಬೆಳಗ್ಗಿನಿಂದಲೇ ಅತಿಥಿಗಳು ಬರಲಾರಂಭಿಸಿದ್ದಾರೆ. ಆಭರಣಗಳ ನಾದ ಮನೆಯಲ್ಲಿ ಕೇಳಿಸುತ್ತಿದೆ. ಮಾನಿಗೂ ಅತಿಥಿಗಳನ್ನು ಕಂಡು ಸಂತೋಷವಾಗುತ್ತಿದೆ.  ಅವಳ ಮೇಲೆ ಯಾವ ಆಭರಣವೂ ಇಲ್ಲ, ಅವಳಿಗೆ ಒಳ್ಳೆಯ ಬಟ್ಟೆಗಳನ್ನು ಕೊಟ್ಟಿಲ್ಲ, ಆದರೂ ಅವಳ ಮುಖ ಪ್ರಸನ್ನವಾಗಿದೆ.
ಅರ್ಧರಾತ್ರಿ ಕಳೆದಿತ್ತು.  ವಿವಾಹದ ಮುಹೂರ್ತ ಸಮೀಪಿಸಿತ್ತು.  ವರನ ಕಡೆಯಿಂದ ವಧುವಿಗಾಗಿ ಆಭೂಷಣಗಳು ಬಂದವು.  ಎಲ್ಲಾ ಸ್ತ್ರೀಯರು ಉತ್ಸಕುತೆಯಿಂದ ಎಲ್ಲ ವಸ್ತುಗಳನ್ನು ನೋಡಲಾರಂಭಿಸಿದರು. ಲಲಿತಾಳಿಗೆ ವಸ್ತ್ರಾಭರಣಗಳನ್ನು ತೊಡಿಸಲಾರಂಭಿಸಿದರು. ಮಾನಿಗೂ ವಧುವನ್ನು ನೋಡುವ ಉತ್ಕಟ ಇಚ್ಛೆ ಆಯಿತು. ನಿನ್ನೆಯವರೆಗೆ ಬಾಲಿಕೆಯಾಗಿದ್ದವಳನ್ನು ವಧುವಾಗಿ ನೋಡುವ ಹಂಬಲವನ್ನು ತಡೆದುಕೊಳ್ಳಲಾರದೆ ಹೋದಳು. ನಗುತ್ತಾ ಅವಳು ಕೋಣೆ ಪ್ರವೇಶಿಸಿದಳು.  ಕೂಡಲೇ ಚಿಕ್ಕಮ್ಮ ಗದರಿದಳು – ‘ನಿನ್ನನ್ಯಾರು ಇಲ್ಲಿ ಕರೆದವರು? ಹೋಗಾಚೆ!’
ಮಾನಿ ಬಹಳ ಯಾತನೆಗಳನ್ನು ಸಹಿಸಿದ್ದಳು; ಆದರೆ ಇಂದಿನ ನಿಂದೆ ಅವಳ ಎದೆಯಲ್ಲಿ ಬಾಣದಂತೆ ಚುಚ್ಚಿಕೊಂಡಿತು.  ಅವಳ ಮನಸ್ಸು ಅವಳನ್ನು ನಿಂದಿಸಿತು – ‘ನಿನ್ನ ತಲೆಹರಟೆಗೆ ಇದೇ ಪುರಸ್ಕಾರ. ಇಲ್ಲಿ ಮುತ್ತೈದೆಯರ ಮಧ್ಯೆ ನೀನು ಹೋಗುವ ಅವಶ್ಯಕತೆ ಏನಿತ್ತು?’. ಅವಳು ಮೈ ಮುದುಡಿಕೊಂಡು ಕೋಣೆಯಾಚೆ ಬಂದಳು ಹಾಗೂ ಏಕಾಂತದಲ್ಲಿ ಕುಳಿತು ಅಳಲು ಮಹಡಿ ಹತ್ತಲಾರಂಭಿಸಿದಳು.  
ಮೆಟ್ಟಿಲ ಮೇಲೆ ಅವಳಿಗೆ ಇಂದ್ರನಾಥನ ಭೇಟಿ ಆಯಿತು.  ಇಂದ್ರನಾಥ ಗೋಕುಲನ ಸಹಪಾಠಿ ಹಾಗೂ ಪರಮಮಿತ್ರ.  ಅವನೂ ಆಹ್ವಾನದ ಮೇರೆಗೆ ಅಲ್ಲಿ ಬಂದಿದ್ದ. ಗೋಕುಲನನ್ನು ಹುಡುಕುತ್ತಾ ಮೇಲೆ ಬಂದಿದ್ದ.  ಅವನು ಮಾನಿಯನ್ನು ಒಂದೆರಡು ಬಾರಿ ನೋಡಿದ್ದ.  ಅವಳಿಗೆ ಅಲ್ಲಿ ಆಗುತ್ತಿರುವ ಅನ್ಯಾಯದ ಬಗ್ಗೆ ಅವನಿಗೆ ಅರಿವಿತ್ತು. ಚಿಕ್ಕಮ್ಮನಾಡಿದ ಮಾತು ಅವನ ಕಿವಿಗೂ ಬಿದ್ದಿತು. ಮಾನಿ ಮೇಲೆ ಹೋಗುತ್ತಿರುವುದನ್ನು ನೋಡಿದ ಅವನಿಗೆ ಮನದಾಳದ ನೋವು ಅರ್ಥವಾಯಿತು. ಅವಳಿಗೆ ಸಾಂತ್ವನ ನೀಡುವ ಸಲುವಾಗಿ ಅವನೂ ಮೇಲೆ ಬಂದ.  ಆದರೆ ಕೋಣೆಯ ಬಾಗಿಲು ಒಳಗಿನಿಂದ ಮುಚ್ಚಿತ್ತು.  ಅವನು ಕಿಟಕಿಯಿಂದ ಒಳಗೆ ಬಗ್ಗಿ ನೋಡಿದ. ಮಾನಿ ಮೇಜಿನ ಹತ್ತಿರ ನಿಂತಿದ್ದಳು.
ಅವನು ಮೆಲ್ಲಗೆ ಹೇಳಿದ –‘ಮಾನಿ, ಬಾಗಿಲು ತೆರೆ’.  
ಮಾನಿ ಅವನ ಧ್ವನಿ ಕೇಳಿ ಕೋಣೆಯಲ್ಲಿ ಅಡಗಿಕೊಂಡಳು, ಮತ್ತೆ ಗಂಭೀರ ಸ್ವರದಿಂದ ಕೇಳಿದಳು – “ಏನದು?”
ಇಂದ್ರನಾಥ ಗದ್ಗದಿತನಾಗಿ ಹೇಳಿದ – ‘ನಿನ್ನ ಕಾಲಿಗೆ ಬೀಳುತ್ತೇನೆ ಮಾನಿ, ಬಾಗಿಲು ತೆರೆ”.  
 ಈ ಸ್ನೇಹಭರಿತ ವಿನಯ ಮಾನಿಯ ಪಾಲಿಗೆ ಅಭೂತಪೂರ್ವ. ಈ ನಿರ್ದಯ ಪ್ರಪಂಚದಲ್ಲಿ ಯಾರಾದರೂ ಇಂಥ ವಿನಂತಿ ಮಾಡಲು ಸಾಧ್ಯ ಎಂದವಳು ಕನಸಿನಲ್ಲೂ ಕಲ್ಪನೆ ಮಾಡಿರಲಿಲ್ಲ.  ಮಾನಿ ನಡುಗುತ್ತಿರುವ ಕೈಗಳಿಂದ ಬಾಗಿಲು ತೆರೆದಳು.  ಇಂದ್ರನಾಥ ತಕ್ಷಣ ಒಳಗೆ ನುಗ್ಗಿದ. ನೋಡುತ್ತಾನೆ, ಮೇಲೆ ಫ್ಯಾನಿನ ಗೂಟದಿಂದ ಒಂದು ಹಗ್ಗ ಜೋತುಬಿದ್ದಿದೆ.  ಅವನು ಕೂಡಲೇ ಜೇಬಿನಿಂದ ಚಾಕು ತೆಗೆದು ಹಗ್ಗ ಕತ್ತರಿಸಿದ, ಬಳಿಕ ಕೇಳಿದ – “ಮಾನಿ ಏನು ಮಾಡಲು ಹೊರಟಿದ್ದೆ?.  ಈ ಅಪರಾಧಕ್ಕೆ ಶಿಕ್ಷೆ ಏನೆಂದು ಗೊತ್ತೇ ನಿನಗೆ?”
ಮಾನಿ ತಲೆ ತಗ್ಗಿಸಿ ನುಡಿದಳು – “ಈ ಶಿಕ್ಷೆಗಿಂತ ಕಠೋರವಾದ ಇನ್ನೊಂದು ಶಿಕ್ಷೆಯೂ ಇದೆಯೇನು? ಯಾರ ಮುಖ ನೋಡಿದರೆ ತಿರಸ್ಕಾರ ವ್ಯಕ್ತಪಡಿಸುತ್ತಾರೋ ಅವಳಿಗೆ ಸತ್ತರೂ ಕಠೋರ ಶಿಕ್ಷೆ ನೀಡುವುದಾದರೆ ನಾನು ಹೇಳುವುದಿಷ್ಟೇ –“ದೇವರೆ ನಿನ್ನ ಆಸ್ಥಾನದಲ್ಲೂ ನ್ಯಾಯದ ಹೆಸರಿಲ್ಲವಲ್ಲ. ನಿಮಗೆ ನನ್ನ ಪರಿಸ್ಥಿತಿಯ ಅನುಭವ ಸಾಧ್ಯವಿಲ್ಲ”.
ಇಂದ್ರನಾಥನ ಕಣ್ತುಂಬಿ ಬಂದವು.  ಮಾನಿಯ ಮಾತುಗಳಲ್ಲಿ ಎಂಥ ಕಠೋರ ಸತ್ಯ ತುಂಬಿತ್ತು. ಹೇಳಿದ – “ಮಾನಿ ಯಾವಾಗಲೂ ಇಂತಹ ದಿನಗಳೇ ಇರುವುದಿಲ್ಲ. ಆದರೆ ಈ ಜಗತ್ತಿನಲ್ಲಿ ನಿನ್ನವರಾರೂ ಇಲ್ಲ ಎಂದು ನೀನು ತಿಳಿದಿದ್ದರೆ, ಅದು ನಿನ್ನ ಭ್ರಮೆ. ಈ ಜಗತ್ತಿನಲ್ಲಿ ನಿನ್ನ ಪ್ರಾಣ ತನ್ನ ಪ್ರಾಣಕ್ಕಿಂತ ಪ್ರಿಯನಾಗಿರುವ ಒಬ್ಬ ವ್ಯಕ್ತಿಯಂತೂ ಇದ್ದಾನೆ.”
ಅಷ್ಟರಲ್ಲಿ ಗೋಕುಲ ಬರುತ್ತಿರುವುದು ಕಾಣಿಸಿತು.  ಮಾನಿ ಕೋಣೆಯಿಂದಾಚೆ ಹೋದಳು. ಇಂದ್ರನಾಥನ ಮಾತುಗಳಿಂದ ಅವಳ ಮನಸ್ಸಿನಲ್ಲಿ ಕೋಲಾಹಲವೆದ್ದಿತು. ಅವನ ಆಶಯವೇನೆಂಬುದು ಅವಳಿಗೆ ಅರ್ಥವಾಗಲಿಲ್ಲ. ಆದರೂ ಇಂದು ಅವಳಿಗೆ ತನ್ನ ಜೀವನ ಸಾರ್ಥಕವೆನಿಸಿತು.  ಅವಳ ಅಂಧಕಾರಮಯ ಜೀವನದಲ್ಲಿ ಒಂದು ಪ್ರಕಾಶದ ಉದಯವಾಯಿತು.

(2)
ಇಂದ್ರನಾಥ ಕೋಣೆಯಲ್ಲಿ ಇರುವುದು ಮತ್ತು ಮಾನಿ ಅಲ್ಲಿಂದ ತೆರಳುವುದನ್ನು ನೋಡಿದ್ದು ಗೋಕುಲನಿಗೆ ಚುಚ್ಚಿತು.  ಅವನ ಮುಖ ಬಣ್ಣ ಬದಲಾಯಿಸಿತು.  ಕಠಿಣ ಸ್ವರದಲ್ಲಿ ಕೇಳಿದ – “ನೀನ್ಯಾವಾಗ ಇಲ್ಲಿಗೆ ಬಂದೆ?”  
ಇಂದ್ರನಾಥ ಅವಿಚಲಿತನಾಗಿ ಉತ್ತರಿಸಿದ – “ನಿನ್ನನ್ನು ಹುಡುಕುತ್ತಲೇ ಇಲ್ಲಿಗೆ ಬಂದಿದ್ದೆ.  ನೀನಿಲ್ಲದ್ದು ನೋಡಿ ಕೆಳಗೆ ಹಿಂದಿರುಗುತ್ತಿದ್ದೆ.  ನಾನೇನಾದರೂ ಹಾಗೆ ಹೋಗಿಬಿಟ್ಟಿದ್ದರೆ ನಿನಗೆ ಈ ಮುಚ್ಚಿದ ಬಾಗಿಲು ಕಾಣ ಸಿಗುತ್ತಿತ್ತು ಮತ್ತು ಫ್ಯಾನಿನ ಗೂಟದಿಂದ ತೂಗಾಡುತ್ತಿರುವ ಒಂದು ಶವ ಕಾಣಬರುತ್ತಿತ್ತು.” 
ತನ್ನ ಅಪರಾಧವನ್ನು ಮರೆಮಾಚಲು ಇವನು ಏನೊಂದು ನೆವ ತೆಗೆಯುತ್ತಿದ್ದಾನೆಂದು ಗೋಕುಲ ತಿಳಿದ.  ಗಟ್ಟಿದನಿಯಲ್ಲಿ ನುಡಿದ – “ನೀನಿಂಥ ವಿಶ್ವಾಸಘಾತುಕನೆಂದು ನಾನು ಎಣಿಸಿರಲಿಲ್ಲ”. 
ಇಂದ್ರನಾಥನ ಮುಖ ಕೆಂಪಡರಿತು.  ಅವನು ಅವೇಶದಿಂದ ಎದ್ದು ನಿಂತು ಹೇಳಿದ - ನಾನೂ ಸಹ ನೀನು ನನ್ನ ಮೇಲೆ ಇಂತಹ ದೊಡ್ಡ ಕಳಂಕ ಹೊರೆಸುವೆಯೆಂದು ಎಣಿಸಿರಲಿಲ್ಲ. ನೀನು ನನ್ನನ್ನು ಇಷ್ಟೊಂದು ನೀಚ ಮತ್ತು ಕುಟಿಲ ಎಂದು ತಿಳಿದಿರುವೆಯೆಂದು ನನಗೆ ಗೊತ್ತಿರಲಿಲ್ಲ.  ಮಾನಿ ನಿನಗೆ ತಿರಸ್ಕಾರದ ವಸ್ತು. ನನಗವಳು ಶ್ರದ್ಧೆಯ ವಸ್ತು, ಹಾಗೆಯೇ ಇರುತ್ತಾಳೆ. ನಿನಗೆ ವಿವರಿಸುವ ಅವಶ್ಯಕತೆ ನನಗಿಲ್ಲ.  ಆದರೆ ನನ್ನ ಪಾಲಿಗೆ ಮಾನಿ ನೀನಂದುಕೊಂಡದ್ದಕ್ಕಿಂತ ಎಷ್ಟೋ ಹೆಚ್ಚು ಪವಿತ್ರಳು.  ಈ ಹೊತ್ತಿನಲ್ಲಿ ನಿನ್ನ ಬಳಿ ಈ ವಿಷಯ ಹೇಳಲು ನಾನು ಬಯಸಿರಲಿಲ್ಲ.  ಇನ್ನೂ ಒಳ್ಳೆಯ ಅನುಕೂಲಕರ ಪರಿಸ್ಥಿತಿಗಾಗಿ ಕಾದಿದ್ದೆ.  ಆದರೀಗ ನಾನು ಹೇಳಲೇ ಬೇಕಾದ ಸಂದರ್ಭ ಬಂದಿದೆ.  ಮಾನಿಗೆ ನಿಮ್ಮ ಮನೆಯಲ್ಲಿ ಯಾವುದೇ ಆದರವಿಲ್ಲ ಎಂಬುದಂತೂ ನನಗೆ ಗೊತ್ತಿತ್ತು.  ಆದರೆ ನೀವು ಅವಳನ್ನು ಇಷ್ಟೊಂದು ನೀಚ ಮತ್ತು ತ್ಯಾಜ್ಯಳಂತೆ ಪರಿಗಣಿಸುತ್ತೀರೆಂಬುದು ಇಂದು ನಿಮ್ಮ ತಾಯಿ ಮಾತು ಕೇಳಿ ಅರ್ಥವಾಯಿತು.  ಅವಳು ವಧುವಿನ ಆಭೂಷಣ ನೋಡಲು ಬಂದಿದ್ದಾಳೆಂಬ ಕ್ಷುಲ್ಲಕ ವಿಷಯಕ್ಕೇ ನಿಮ್ಮ ತಾಯಿ ಅವಳನ್ನು ಎಷ್ಟು ಕೆಟ್ಟದಾಗಿ ನಿಂದಿಸಿದರೆಂದರೆ ಯಾರೂ ನಾಯಿಯನ್ನು ಸಹ ಹೀಗೆ ನಿಂದಿಸುವುದಿಲ್ಲ. ನಾನೇನು ಮಾಡಲಿ, ನಾನೇನು ಮಾಡಬಲ್ಲೆ ಎಂದು ನೀನು ಹೇಳಬಹುದು.  ಆದರೆ ಯಾವ ಮನೆಯಲ್ಲಿ ಒಬ್ಬ ಅನಾಥ ಸ್ತ್ರೀಯ ಮೇಲೆ ಇಷ್ಟು ಅತ್ಯಾಚಾರವಾಗುವುದೋ ಅಲ್ಲಿ ನೀರು ಕುಡಿಯುವುದೂ ಪಾಪ.  ನೀನು ಮೊದಲಿನಿಂದಲೇ ನಿಮ್ಮ ತಾಯಿಗೆ ತಿಳುವಳಿಕೆ ಕೊಟ್ಟಿದ್ದರೆ ಇವತ್ತು ಈ ಸಂದರ್ಭ ಬರುತ್ತಿರಲಿಲ್ಲ.  ನೀನು ಈ ಆರೋಪದಿಂದ ತಪ್ಪಿಸಿಕೊಳ್ಳಲಾರೆ. ಇಂದು ನಿಮ್ಮ ಮನೆಯಲ್ಲಿ ವಿವಾಹದ ಉತ್ಸವ.  ಹಾಗಾಗಿ ನಿನ್ನ ತಾಯ್ತಂದೆಯರೊಂದಿಗೆ ನಾನು ವಿಷಯ ಪ್ರಸ್ತಾಪಿಸಲಾರೆ. ಆದರೆ ನಿನ್ನೊಡನೆ ಹೇಳಲು ನನಗೇನೂ ಸಂಕೋಚವಿಲ್ಲ. ನಾನು ಮಾನಿಯನ್ನು ನನ್ನ ಜೀವನಸಂಗಾತಿಯನ್ನಾಗಿ ಮಾಡಿಕೊಂಡು ನನ್ನನ್ನೇ ಧನ್ಯ ಎಂದು ತಿಳಿದುಕೊಳ್ಳುತ್ತೇನೆ.  ನಾನು ನನ್ನದೇ ಆದ ಸ್ಥಾನ ಭದ್ರ ಮಾಡಿಕೊಂಡು ಈ ಪ್ರಸ್ತಾಪ ಮಾಡುವವನಿದ್ದೆ. ಆದರೆ ಇನ್ನೂ ತಡಮಾಡುವುದರಿಂದ ಮಾನಿ ಕೈತಪ್ಪಿ ಹೋಗಿಯಾಳು ಎಂದು ಭಯವಾಗುತ್ತಿದೆ. ಹಾಗಾಗಿ ನಿನ್ನನ್ನು ಮತ್ತು ನಿನ್ನ ಮನೆಯವರನ್ನು ಚಿಂತೆಯಿಂದ ಮುಕ್ತರನ್ನಾಗಿಸಲು ನಾನು ಇಂದೇ ಈ ವಿಷಯ ಪ್ರಸ್ತಾಪಿಸುತ್ತೇನೆ”.
ಗೋಕುಲನ ಹೃದಯದಲ್ಲಿ ಇಂದ್ರನಾಥನ ಮೇಲೆ ಹಿಂದೆಂದೂ ಇಂತಹ ಶ್ರದ್ಧೆ ಹುಟ್ಟಿರಲಿಲ್ಲ. ಅವನ ಮೇಲೆ ಇಂತಹ ಸಂದೇಹ ಪಟ್ಟಿದ್ದಕ್ಕೆ ಅವನಿಗೆ ನಾಚಿಕೆಯಾಯಿತು. ಅಮ್ಮನ ಭಯದಿಂದ ಮಾನಿಯ ವಿಷಯದಲ್ಲಿ ತಾನು ತಟಸ್ಥನಾಗಿ ಇದ್ದು ಹೇಡಿಯಾದೆ ಎಂದವನಿಗೆ ಅನಿಸಿತು. ಅದು ಬರಿಯ ಹೇಡಿತನವಷ್ಟೇ, ಇನ್ನೇನೂ ಅಲ್ಲ. ಅವನು ಹೇಳಿದ – “ಅಮ್ಮ ಮಾನಿಯನ್ನು ಈ ವಿಷಯಕ್ಕಾಗಿ ನಿಂದಿಸಿದ್ದರೆ ಅದವರ ಮೂರ್ಖತೆ. ಸಮಯ ಸಿಕ್ಕೊಡನೆ ನಾನವರನ್ನು ಕೇಳುತ್ತೇನೆ”.
ಇಂದ್ರನಾಥ – “ಈಗ ಹೇಳುವ ಕೇಳುವ ಕಾಲ ಮುಗಿದು ಹೋಗಿದೆ.  ನೀನು ಮಾನಿಯನ್ನು ಈ ವಿಷಯದ ಕುರಿತು ಕೇಳಿ ನನಗೆ ಹೇಳಬೇಕೆಂಬುದೇ ನನ್ನ ಇಚ್ಚೆ. ಅವಳು ಇಲ್ಲಿ ಒಂದು ಕ್ಷಣವೂ ಇರುವುದು ನನಗಿಷ್ಟವಿಲ್ಲ. ಅವಳು ಆತ್ಮಾಭಿಮಾನ ಉಳ್ಳ ಹೆಣ್ಣೆಂದು ಇವತ್ತು ನನಗೆ ಅರಿವಾಯಿತು. ನಿಜವಾಗಿ ಹೇಳಬೇಕೆಂದರೆ ನಾನವಳ ಸ್ವಭಾವದಿಂದ ಮುಗ್ಧನಾಗಿದ್ದೇನೆ.  ಇಂತಹ ಮಹಿಳೆ ಅತ್ಯಾಚಾರವನ್ನು ಸಹಿಸಲಾರಳು”.
ಗೋಕುಲ ಅಳುಕಿನಿಂದಲೇ ಕೇಳಿದ – “ಆದರೆ ನಿನಗೆ ತಿಳಿದಿದೆಯೇ, ಅವಳು ವಿಧವೆ”.  
ಯಾರಾದರೂ ನಮಗೆ ಅಸಾಧಾರಣ ಹಿತ ಬಯಸಿದರೆ ನಾವವರ ಮುಂದೆ ನಮ್ಮ ಕೆಡುಕನ್ನೆಲ್ಲಾ ಬಿಚ್ಚಿಡಬಯಸುತ್ತೇವೆ.  ನಾವು ನಿಮ್ಮ ಕೃಪೆಗೆ ಪಾತ್ರರಲ್ಲ ಎಂದವರಿಗೆ ನಾವು ತೋರಬಯಸುತ್ತೇವೆ. 
ಇಂದ್ರನಾಥ ನಕ್ಕು ಹೇಳಿದ – “ಗೊತ್ತಿದೆ, ಕೇಳಿದ್ದೇನೆ. ಅದಕ್ಕಾಗಿ ನಿಮ್ಮ ತಂದೆಯವರೊಂದಿಗೆ ಮಾತನಾಡಲು ಇಲ್ಲಿಯವರೆಗೆ ನನಗೆ ಧೈರ್ಯವಾಗಿರಲಿಲ್ಲ. ಆದರೆ ತಿಳಿದಿರದಿದ್ದರೂ ಇದರಿಂದ ನನ್ನ ನಿರ್ಧಾರದ ಮೇಲೆ ಯಾವ ಪ್ರಭಾವವೂ ಆಗುತ್ತಿರಲಿಲ್ಲ. ಮಾನಿ ವಿಧವೆ ಮಾತ್ರವಲ್ಲ, ಅಸ್ಪೃಶ್ಯಳು ಅಥವಾ ಅದಕ್ಕಿಂತ ಕನಿಷ್ಠವಾಗಿದ್ದರೂ ನನ್ನ ಪಾಲಿಗೆ ಅವಳೊಂದು ಸ್ತ್ರೀರತ್ನ. ನಾವು ಸಣ್ಣಪುಟ್ಟ ಕೆಲಸಕ್ಕಾಗಿ ಅನುಭವ ಇರುವುದು ಒಳ್ಳೆಯದು ಎಂದುಕೊಳ್ಳುತ್ತೇವೆ. ಆದರೆ ಯಾರೊಂದಿಗೆ ಜೀವನಯಾತ್ರೆ ಮಾಡಬೇಕೋ ಅವರಲ್ಲಿ ಅನುಭವ ಇದ್ದರೆ ಅದನ್ನೊಂದು ಕುಂದು ಎಂದು ಭಾವಿಸುತ್ತೇವೆ. ನಾನು ನ್ಯಾಯದ ಕತ್ತು ಹಿಸುಕುವವರಲ್ಲಿ ಒಬ್ಬನಲ್ಲ. ಸಂಕಷ್ಟ ಕೊಡುವ ಅನುಭವಕ್ಕಿಂತ ಹೆಚ್ಚಿನದನ್ನು ನೀಡುವ ವಿದ್ಯಾಲಯ ಇದುವರೆಗೂ ತೆರೆದಿಲ್ಲ.  ಯಾರು ಈ ವಿದ್ಯಾಲಯದಲ್ಲಿ ಪದವಿ ಪಡೆದಿದ್ದಾರೋ ಅವರ ಕೈಗೆ ನಾವು ನಿಶ್ಚಿಂತರಾಗಿ ಜೀವನದ ಸೂತ್ರ ಕೊಡಬಹುದು. ಯಾವುದಾದರೂ ಸ್ತ್ರೀ ವಿಧವೆಯಾಗಿರುವುದು ನನ್ನ ಪ್ರಕಾರ ಗುಣವೇ ಹೊರತು ದೋಷವಲ್ಲ”.
ಗೋಕುಲ ಪ್ರಸನ್ನನಾಗಿ ನುಡಿದ – “ಆದರೆ ನಿಮ್ಮ ಮನೆಯವರು?”  
ಇಂದ್ರನಾಥ ದೃಢತೆಯಿಂದ ನುಡಿದ – “ಈ ವಿಷಯದಲ್ಲಿ ತೊಂದರೆ ಕೊಡುವಷ್ಟು ಮೂರ್ಖರು ನನ್ನ ಮನೆಯವರು ಎಂದು ನನಗೆ ಅನಿಸುವುದಿಲ್ಲ.  ಒಂದೊಮ್ಮೆ ಅವರು ಒಪ್ಪಿಗೆ ಕೊಡದಿದ್ದರೂ ನನ್ನ ಭವಿಷ್ಯವನ್ನು ನಾನೇ ರೂಪಿಸುವುದನ್ನು ನಾನು ಬಯಸುತ್ತೇನೆ.  ನನ್ನ ಹಿರಿಯರಿಗೆ ನನ್ನ ಮೇಲೆ ಅನೇಕ ಹಕ್ಕುಗಳಿವೆ.  ಅನೇಕ ವಿಷಯಗಳಲ್ಲಿ ನಾನವರ ಇಚ್ಛೆ ಏನಿದೆ ಎಂದು ಅರ್ಥ ಮಾಡಿಕೊಳ್ಳಬಲ್ಲೆ.  ಆದರೆ ಯಾವ ವಿಷಯ ನನ್ನ ಆತ್ಮವಿಕಾಸಕ್ಕೆ ಯೋಗ್ಯ ಎಂದು ನಾನು ತಿಳಿಯುತ್ತೇನೋ ಇದರಲ್ಲಿ ನಾನು ಯಾರ ಬಲವಂತವನ್ನೂ ಸಹಿಸುವುದಿಲ್ಲ.  ನಾನು ಸ್ವಯಂ ನನ್ನ ಜೀವನದ ನಿರ್ಮಾತ ಎಂಬ ಅಭಿಮಾನ ನನಗಿದೆ”.   
ಗೋಕುಲ ಸಂದೇಹದಿಂದ ಕೇಳಿದ – “ಒಂದೊಮ್ಮೆ ಮಾನಿಯೇ ಇದಕ್ಕೆ ಒಪ್ಪದಿದ್ದರೆ?” 
ಇಂದ್ರನಾಥನಿಗೆ ಈ ಸಂದೇಹ ಆಧಾರರಹಿತ ಅನಿಸಿತು. ಹೇಳಿದ – “ನೀನೀಗ ಮಕ್ಕಳಂತೆ ಮಾತನಾಡುತ್ತಿರುವೆ ಗೋಕುಲ. ಮಾನಿ ಸುಲಭವಾಗಿ ಒಪ್ಪುವುದಿಲ್ಲ ಎಂಬುದು ಗೊತ್ತಿರುವ ವಿಷಯವೇ. ಅವಳು ಈ ಮನೆಯಲ್ಲಿ ಏಟು ತಿನ್ನುತ್ತಾಳೆ, ನಿಂದೆ ಸಹಿಸಿಕೊಳ್ಳುತ್ತಾಳೆ, ಬೈಗಳು ತಿನ್ನುತ್ತಾಳೆ, ಆದರೆ ಈ ಮನೆಯಲ್ಲೇ ಇರುತ್ತಾಳೆ. ಯುಗಗಳ ಸಂಸ್ಕಾರವನ್ನು ಕಿತ್ತೊಗೆಯುವುದು ಸುಲಭವಲ್ಲ. ಆದರೆ ಅವಳನ್ನು ನಾವು ಒಪ್ಪಿಸಲೇ ಬೇಕು. ಅವಳ ಮನದಲ್ಲಿ ಮನೆಮಾಡಿದ ಸಂಸ್ಕಾರಗಳನ್ನು ಕಿತ್ತೊಗೆಯಲೇಬೇಕು. ನಾನು ವಿಧವೆಯರ ಪುನರ್‍ವಿವಾಹದ ಪರ ಇಲ್ಲ.  ನನ್ನ ವಿಚಾರದಲ್ಲಿ ಪತಿವ್ರತೆಯರ ಈ ಅಲೌಕಿಕ ಆದರ್ಶ ವಿಶ್ವದ ಅಮೂಲ್ಯ ರತ್ನ.  ನಾವು ಬಹಳ ವಿಚಾರಿಸಿ, ಯೋಚಿಸಿ ಇದರ ಮೇಲೆ ಪ್ರಹಾರ ಮಾಡಬೇಕಾಗುತ್ತದೆ.  ಆದರೆ ಮಾನಿಯ ವಿಷಯದಲ್ಲಿ ಈ ಮಾತು ಬರುವುದಿಲ್ಲ. ಪ್ರೇಮ ಮತ್ತು ಭಕ್ತಿ ಹೆಸರಿನಂದಲ್ಲ, ವ್ಯಕ್ತಿಯಿಂದ ಹುಟ್ಟುತ್ತದೆ.  ಯಾವ ಪುರುಷನ ಮುಖವನ್ನು ಸಹ ಆಕೆ ನೋಡಿಲ್ಲವೋ ಅವನ ಮೇಲೆ ಅವಳಿಗೆ ಪ್ರೇಮ ಹುಟ್ಟಲಾರದು. ಇದು ಬರಿಯ ಸಂಪ್ರದಾಯವಷ್ಟೇ. ಈ ಆಡಂಬರ, ಈ ತೋರಿಕೆಯನ್ನು ನಾವು ಗಣನೆಗೆ ತೆಗೆದುಕೊಳ್ಳಬಾರದು. ನೋಡು, ಯಾರೋ ನಿನ್ನ ಕರೆಯುವಂತಿದೆ. ನಾನೂ ಹೋಗುತ್ತೇನೆ. ಎರಡು ಮೂರು ದಿನಗಳಲ್ಲಿ ಮತ್ತೆ ಭೇಟಿಯಾಗುತ್ತೇನೆ. ಆದರೆ ನೀನು ಸಂಕೋಚದಿಂದ, ಆಲೋಚನೆಯಲ್ಲೇ ಮುಳುಗಿ ದಿನಗಳು ಕಳೆದುಹೋಗದಂತಾಗಲಿ ಅಷ್ಟೇ”.
ಗೋಕುಲ ಅವನನ್ನು ಆಲಂಗಿಸಿ ನುಡಿದ – “ನಾನೇ ಸ್ವತಃ ನಾಡಿದ್ದು ಬರುತ್ತೇನೆ”.

(3)
ಬೀಗರು ಹೋಗಿಯಾಗಿತ್ತು.  ಅತಿಥಿಗಳೂ ಹೊರಟುಹೋಗಿದ್ದರು.  ರಾತ್ರಿ 9 ಗಂಟೆ. ರಾತ್ರಿಯ ನಿದ್ದೆ ಪ್ರಸಿದ್ಧಿ ಪಡೆದಿದೆ. ಮನೆ ಮಂದಿಯೆಲ್ಲಾ ನಿಶ್ಚಿಂತೆಯಿಂದ ಮಲಗಿದ್ದರು. ಕೆಲವರು ಚಾಪೆ ಮೇಲೆ, ಕೆಲವರು ನೆಲದ ಮೇಲೆ, ಇನ್ಯಾರೋ ಮಂಚದ ಮೇಲೆ, ಯಾರಿಗೆಲ್ಲಿ ಸ್ಥಳ ಸಿಕ್ಕಿತ್ತೋ, ಅಲ್ಲೇ ಮಲಗಿದ್ದರು. ಮಾನಿ ಮಾತ್ರ ಮನೆ ನೋಡಿಕೊಳ್ಳುತ್ತಾ ಇದ್ದಳು ಮತ್ತು ಗೋಕುಲ ಮೇಲೆ ತನ್ನ ಕೊಠಡಿಯಲ್ಲಿ ಕುಳಿತು ಸಮಾಚಾರ ಪತ್ರಿಕೆ ಓದುತ್ತಾ ಇದ್ದ.
ಇದ್ದಕ್ಕಿದ್ದಂತೆ ಗೋಕುಲ ಕೂಗು ಹಾಕಿದ – “ಮಾನಿ, ಒಂದು ಲೋಟ ತಣ್ಣಗಿನ ನೀರು ತಾ, ತುಂಬಾ ಬಾಯಾರಿಕೆ”.
ಮಾನಿ ನೀರು ತೆಗೆದುಕೊಂಡು ಮೇಲೆ ಹೋದಳು.  ಮೇಜಿನ ಮೇಲೆ ನೀರಿನ ಲೋಟ ಇಟ್ಟು ಹಿಂದಿರುಗುವಷ್ಟರಲ್ಲಿ ಗೋಕುಲ ಹೇಳಿದ – “ಮಾನಿ, ಸ್ವಲ್ಪ ಇರು, ನಿನಗೇನೋ ಹೇಳಬೇಕು”.
ಮಾನಿ ನುಡಿದಳು – “ಅಣ್ಣಾ ಈಗ ಪುರುಸೊತ್ತಿಲ್ಲ, ಇಡೀ ಮನೆ ಮಲಗಿದೆ. ಯಾರಾದರೂ ನುಗ್ಗಿ ಮನೆ ಖಾಲಿ ಮಾಡಿಯಾರು”.
ಗೋಕುಲ ಹೇಳಿದ – “ನುಗ್ಗಲಿ ಬಿಡು. ನಾನೇನಾದರೂ ನೀನಾಗಿದ್ದಿದ್ದರೆ ಕಳ್ಳರ ಜೊತೆ ಸೇರಿ ಕಳ್ಳತನ ಮಾಡಿಸುತ್ತಿದ್ದೆ. ನನಗೆ ಈ ಕೂಡಲೇ ಇಂದ್ರನಾಥನನ್ನು ನೋಡಬೇಕಾಗಿದೆ. ನಾನಿವತ್ತು ಅವನನ್ನು ಭೇಟಿ ಮಾಡುವೆನೆಂದು ಮಾತು ಕೊಟ್ಟಿದ್ದೇನೆ. ನೋಡು, ಸಂಕೋಚಪಡಬೇಡ, ನಾನೇನು ಕೇಳುತ್ತೇನೋ ಅದಕ್ಕೆ ಕೂಡಲೇ ಉತ್ತರಿಸಬೇಕು. ತಡವಾದರೆ ಆತ ದಿಗಿಲು ಬೀಳಬಹುದು. ಇಂದ್ರನಾಥನಿಗೆ ನಿನ್ನಲ್ಲಿ ಪ್ರೇಮವಿದೆ, ಇದು ನಿನಗೆ ಗೊತ್ತಿದೆ ತಾನೆ?”
ಮಾನಿ ಮುಖ ತಿರುಗಿಸಿ ನುಡಿದಳು – “ಇದನ್ನು ಹೇಳಲಿಕ್ಕೆ ಅಂತಲೇ ನನ್ನನ್ನು ಕರೆದದ್ದು?  ನನಗೇನೂ  ಗೊತ್ತಿಲ್ಲ”.
ಗೋಕುಲ - “ಸರಿ ಹಾಗಾದರೆ ಇದು ನಿಮ್ಮಿಬ್ಬರಿಗೆ ಬಿಟ್ಟಿದ್ದು.  ಅವನು ನಿನ್ನೊಡನೆ ವಿವಾಹವಾಗಬಯಸುತ್ತಾನೆ. ವೈದಿಕ ರೀತಿಯಲ್ಲಿ ವಿವಾಹವಾಗುತ್ತದೆ. ನಿನಗೆ ಒಪ್ಪಿಗೆಯೇ?”
ಮಾನಿಯ ತಲೆ ನಾಚಿಕೆಯಿಂದ ಬಾಗಿತು. ಅವಳಿಗೆ ಯಾವ ಉತ್ತರವನ್ನೂ ಕೊಡಲಾಗಲಿಲ್ಲ.
ಗೋಕುಲ ಮತ್ತೆ ಹೇಳಿದ – “ಅಪ್ಪ ಮತ್ತು ಅಮ್ಮನ ಬಳಿ ಈ ವಿಷಯ ಹೇಳಿಲ್ಲ. ಯಾಕೆಂದು ನಿನಗೆ ಗೊತ್ತು. ಅವರು ನಿನ್ನನ್ನು ನಿಂದಿಸಿ, ತೆಗಳಿ ಬೇಕಾದರೆ ಸಾಯಿಸುತ್ತಾರೆ, ಆದರೆ ಮದುವೆಗೆ ಎಂದಿಗೂ ಒಪ್ಪಿಗೆ ನೀಡಲಾರರು.  ಇದರಿಂದ ಅವರ ಮರ್ಯಾದೆ ಹೋಗುತ್ತದೆ.  ಹಾಗಾಗಿ ಈಗ ಇದರ ನಿರ್ಣಯ ನಿನ್ನ ಮೇಲೆಯೇ ಇದೆ.  ನೀನಿದನ್ನು ಒಪ್ಪಬೇಕೆಂದು ನನ್ನ ಅಭಿಪ್ರಾಯ.  ಇಂದ್ರನಾಥ ನಿನ್ನನ್ನು ಪ್ರೇಮಿಸುವುದಂತೂ ಖರೆ.  ಜೊತೆಗೆ ನಿಷ್ಕಳಂಕ ಚಾರಿತ್ರ್ಯದ ವ್ಯಕ್ತಿ ಮತ್ತು ಧೈರ್ಯಶಾಲಿ.  ಭಯ ಅವನಿಂದ ದೂರ.  ನಿನ್ನನ್ನು ನೋಡಿದರೆ ನನಗೆ ಆನಂದವಾಗುತ್ತದೆ”.
ಮಾನಿಯ ಹೃದಯ ತೀವ್ರವಾಗಿ ಹೊಡೆದುಕೊಳ್ಳುತ್ತಿತ್ತು. ಆದರೆ ಬಾಯಿಂದ ಮಾತು ಹೊರಡಲಿಲ್ಲ.
ಗೋಕುಲ ಒತ್ತಾಯಿಸುತ್ತಾ ಹೇಳಿದ – “ನೋಡು ಮಾನಿ, ಇದು ಸುಮ್ಮನಿರುವ ಸಮಯವಲ್ಲ, ಏನು ಯೋಚಿಸುತ್ತಾ ಇದ್ದೀಯೇ?”
 ಮಾನಿ ನಡುಗುತ್ತಾ ಹೇಳಿದಳು – “ಹೂಂ”.
ಗೋಕುಲನ ಎದೆ ಮೇಲಿನ ಭಾರ ಇಳಿಯಿತು.  ನಗಲಾರಂಭಿಸಿದ.  ಮಾನಿ ನಾಚಿಕೆಯಿಂದ ಅಲ್ಲಿಂದ ಓಡಿಹೋದಳು.

(4)
ಸಂಜೆ ಗೋಕುಲ ತಾಯಿಯ ಬಳಿ ಹೇಳಿದ – “ಅಮ್ಮ, ಇಂದ್ರನಾಥನ ಮನೆಯಲ್ಲಿ ಇವತ್ತು ಏನೋ ಉತ್ಸವ.  ಅವರಮ್ಮ ಒಬ್ಬರೇ ಹೇಗೆ ನಿಭಾಯಿಸುವುದೆಂದು ಹೆದರುತ್ತಾ ಇದ್ದಾರೆ. ನಾನು ಮಾನಿಯನ್ನು ಕಳುಹಿಸುತ್ತೇನೆಂದು ಹೇಳಿದ್ದೇನೆ. ನೀನೊಪ್ಪಿದರೆ ಮಾನಿಯನ್ನು ತಲುಪಿಸಲೇ. ನಾಳೆ, ನಾಡಿದ್ದು ವಾಪಸ್ಸು ಬಂದು ಬಿಡುತ್ತಾಳೆ.
ಮಾನಿ ಆಗಲೇ ಅಲ್ಲಿಗೆ ಬಂದಳು.  ಗೋಕುಲ ಅವಳಿಗೆ ಸನ್ನೆ ಮಾಡಿದ.  ಮಾನಿ ಲಜ್ಜಾಭರಿತಳಾದಳು.  ಓಡಿಹೋಗಲೂ ದಾರಿ ಕಾಣಲಿಲ್ಲ.
ತಾಯಿ ನುಡಿದರು – “ನನ್ನನ್ನೇನು ಕೇಳುತ್ತೀಯಾ.  ಅವಳು ಬಂದರೆ ಕರಕೊಂಡು ಹೋಗು”.
ಗೋಕುಲ ಹೇಳಿದ – “ಬಟ್ಟೆ ಧರಿಸಿ ಸಿದ್ಧಳಾಗು.  ಇಂದ್ರನಾಥನ ಮನೆಗೆ ಹೋಗುವುದಿದೆ”.  
ಮಾನಿ ತಕರಾರು ಮಾಡಿದಳು – “ನನಗೆ ಹುಷಾರಿಲ್ಲ. ನಾನು ಬರುವುದಿಲ್ಲ”.  
ಗೋಕುಲನ ತಾಯಿ ಹೇಳಿದರು – “ಯಾಕೆ ಹೋಗಬಾರದು? ಅಲ್ಲೇನು ಬೆಟ್ಟ ಅಗೆಯುವುದಿದೆಯೇನು?”.
ಮಾನಿ ಒಂದು ಬಿಳಿಸೀರೆ ಉಟ್ಟು ಟಾಂಗೆಯಲ್ಲಿ ಕುಳಿತಾಗ ಅವಳ ಎದೆ ನಡುಗುತ್ತಿತ್ತು. ಮತ್ತೆ ಮತ್ತೆ ಕಂಗಳಲ್ಲಿ ನೀರು ತುಂಬುತ್ತಿತ್ತು.  ನದಿಯಲ್ಲಿ ಮುಳುಗಲು ಹೊರಟಿದ್ದಾಳೇನೋ ಅನ್ನುವಷ್ಟು ಹೃದಯ ಭಾರವಾಯಿತು.
ಟಾಂಗ ಸ್ವಲ್ಪ ದೂರ ಹೋದ ಬಳಿಕ ಅವಳು ಗೋಕುಲನಿಗೆ ಹೇಳಿದಳು – “ಅಣ್ಣಾ ನನಗೆ ಹೇಗೇಗೋ ಆಗುತ್ತಿದೆ.  ನಿನ್ನ ಕಾಲಿಗೆ ಬೀಳುತ್ತೇನೆ, ಹಿಂದಿರುಗೋಣ”.
ಗೋಕುಲ ಹೇಳಿದ – “ಹುಚ್ಚಿ! ಅಲ್ಲಿ ಎಲ್ಲರೂ ನಿನ್ನ ದಾರಿಯನ್ನೇ ಕಾಯುತ್ತಿದ್ದಾರೆ. ಮತ್ತೆ ನೀನು ಹಿಂದಿರುಗೋಣ ಅನ್ನುತ್ತಿದ್ದೀಯಾ”.
ಮಾನಿ - “ಏನೋ ಅನಿಷ್ಟ ಸಂಭವಿಸಲಿದೆಯೆಂದು ನನ್ನ ಮನಸ್ಸು ಹೇಳುತ್ತಿದೆ”.
ಗೋಕುಲ - “ಮತ್ತೆ ನನ್ನ ಮನಸ್ಸು ಹೇಳುತ್ತಿದೆ ನೀನು ರಾಣಿಯಾಗುವೆಯೆಂದು”.
ಮಾನಿ - “ಹತ್ತು-ಹದಿನೈದು ದಿನ ಏಕೆ ಕಾಯಬಾರದು ನೀನು? ಮಾನಿಗೆ ಹುಷಾರಿಲ್ಲವೆಂದು ಹೇಳು”.
ಗೋಕುಲ - “ಹುಚ್ಚಿಯಂತೆ ಮಾತನಾಡಬೇಡ”.
ಮಾನಿ - “ಜನರು ಎಷ್ಟು ನಗುತ್ತಾರೋ?”.
ಗೋಕುಲ - “ಶುಭಕಾರ್ಯದಲ್ಲಿ ನಾನು ಯಾರನ್ನೂ ಲೆಕ್ಕಿಸುವುದಿಲ್ಲ”.
ಮಾನಿ - “ಅಮ್ಮ ನಿನ್ನನ್ನು ಮನೆಯೊಳಗೆ ಸೇರಿಸಲಾರರು. ನನ್ನಿಂದ ನಿನಗೂ ಬೈಗಳು ಸಿಗುತ್ತವೆ”.
ಗೋಕುಲ - “ಪರವಾಗಿಲ್ಲ.  ಅವರದಂತೂ ಇದು ಅಭ್ಯಾಸವೇ ಆಗಿದೆ”.
ಟಾಂಗಾ ತಲುಪಿತು.  ಇಂದ್ರನಾಥನ ತಾಯಿ ವಿಚಾರವಂತ ಮಹಿಳೆ.  ಅವರು ಬಂದು ವಧುವನ್ನು ಇಳಿಸಿಕೊಂಡು ಒಳಗೆ ಕರಕೊಂಡು ಹೋದರು.

(5)
ಗೋಕುಲ ಅಲ್ಲಿಂದ ಮನೆಗೆ ಹೋದಾಗ ಗಂಟೆ ಹನ್ನೊಂದು.  ಒಂದೆಡೆ ಶುಭ ಕಾರ್ಯ ಪೂರೈಸಿದ ಆನಂದ, ಇನ್ನೊಂದೆಡೆ ನಾಳೆ ಮಾನಿ ಬರದಿದ್ದಾಗ ಜನರಿಗೆ ಏನು ಉತ್ತರ ಕೊಡುವುದೆಂಬ ಭಯ.  ಹೋಗಿ ಎಲ್ಲವನ್ನೂ ಹೇಳಿ ಬಿಡುವುದೆಂದು ನಿಶ್ಚಯಿಸಿದ.  ಮುಚ್ಚಿಡುವುದು ವ್ಯರ್ಥ.  ಇವತ್ತಲ್ಲ ನಾಳೆ, ನಾಳೆಯಲ್ಲ ನಾಡಿದ್ದು ಅಂತೂ ಎಲ್ಲವನ್ನೂ ಹೇಳಲೇ ಬೇಕಾಗುವುದು.  ಹಾಗಿದ್ದರೆ ಇವತ್ತೇ ಯಾಕೆ ಹೇಳಿ ಬಿಡಬಾರದು.
ಹೀಗೆ ನಿರ್ಧರಿಸಿ ಅವನು ಮನೆಯೊಳಗೆ ಪ್ರವೇಶಿಸಿದ.
ತಾಯಿ ಬಾಗಿಲು ತೆರೆಯುತ್ತಾ ಕೇಳಿದಳು – “ಇಷ್ಟು ರಾತ್ರಿಯವರೆಗೆ ಏನು ಮಾಡುತ್ತಿದ್ದೆ? ಅವಳನ್ನು ಏಕೆ ಕರಕೊಂಡು ಬರಲಿಲ್ಲ. ನಾಳೆ ಮನೆಗೆಲಸ ಮಾಡುವವರಾರು?”
ಗೋಕುಲ ತಲೆ ತಗ್ಗಿಸಿ ನುಡಿದ – “ಅಮ್ಮಾ ಅವಳಿನ್ನು ಎಂದೂ ಹಿಂದಿರುಗಲಾರಳು. ಅವಳು ಅಲ್ಲೇ ಇರುವ ವ್ಯವಸ್ಥೆ ಆಗಿದೆ”.
ತಾಯಿ ಬಿರುಗಣ್ಣು ಬಿಟ್ಟು ಕೇಳಿದಳು – “ಏನು ಬೊಗಳ್ತಾ ಇದೀಯಾ, ಅವಳೇಕೆ ಅಲ್ಲಿರಬೇಕು?”.
ಗೋಕುಲ - “ಇಂದ್ರನಾಥನೊಂದಿಗೆ ಅವಳ ವಿವಾಹವಾಗಿದೆ”.
ತಾಯಿಗೆ ಆಕಾಶದಿಂದ ಕೆಳಗೆ ಬಿದ್ದಂತಾಯಿತು.  ತನ್ನ ಬಾಯಿಂದ ಏನು ಹೊರಬರುತ್ತಿದೆಯೆಂಬ ಜ್ಞಾನ ಸಹ ಆಕೆಗಿರಲಿಲ್ಲ.  ಕುಲನಾಶಿನಿ, ಕುಲಟೆ, ಮತ್ತಿನ್ನೇನೋ ಬಾಯಿಂದ ಬಂದವು.  ಅವರು ಎಷ್ಟು ಬೈದರೆಂದರೆ ಗೋಕುಲನ ಧೈರ್ಯ ಚರಮಸೀಮೆಯನ್ನು ಉಲ್ಲಂಘಿಸಿತು.  ಅವನ ಮುಖ ಕೆಂಪಾಯಿತು, ಕ್ರೋಧ ಉಮ್ಮಳಿಸಿತು.  ಹೇಳಿದ – “ಅಮ್ಮಾ, ಸಾಕು ನಿಲ್ಲಿಸು.  ಇನ್ನು ನನ್ನಲ್ಲಿ ಇದಕ್ಕಿಂತ ಹೆಚ್ಚು ಹೇಳುವ ಸಾಮರ್ಥ್ಯವಿಲ್ಲ.  ನಾನೇನಾದರೂ ಅನುಚಿತ ಕಾರ್ಯ ಎಸಗಿದ್ದಲ್ಲಿ ನಿಮ್ಮ ಬೈಗಳು ತಿಂದರೂ ತಲೆ ಮೇಲೆತ್ತುತ್ತಿರಲಿಲ್ಲ.  ಆದರೆ ನಾನು ಯಾವುದೂ ಅನುಚಿತ ಕಾರ್ಯ ಎಸಗಿಲ್ಲ.  ಈ ಪರಿಸ್ಥಿತಿಯಲ್ಲಿ ಏನು ಕರ್ತವ್ಯವಿತ್ತೋ, ಯಾವುದನ್ನು ಯಾವುದೇ ಒಳ್ಳೇ ವ್ಯಕ್ತಿ ಮಾಡಬೇಕಿತ್ತೋ ನಾನದನ್ನು ಮಾಡಿದ್ದೇನೆ. ನೀನೊಬ್ಬ ಮೂರ್ಖಳು.  ಕಾಲ ಬದಲಾಗಿರುವುದು ನಿನಗೆ ಸ್ವಲ್ಪವೂ ಗೊತ್ತಿಲ್ಲ. ಹಾಗಾಗಿ ನಾನು ಧೈರ್ಯದಿಂದ ನಿನ್ನ ಬೈಗಳನ್ನು ಕೇಳಿಸಿಕೊಂಡೆ.  ನೀನು ಮತ್ತು ಅಪ್ಪ ಸಹ, ಇದನ್ನು ನಾನು ದುಃಖದಿಂದ ಹೇಳಬೇಕಾಗಿದೆ, ಮಾನಿಯ ಜೀವನವನ್ನು ನರಕಮಾಡಿದ್ದಿರಿ.  ಏಕೆಂದರೆ ಅವಳು ನಿಮ್ಮ ಆಶ್ರಿತಳಾಗಿದ್ದಳು, ಅದಕ್ಕೇ ಅಲ್ಲವೇ? ಅವಳು ಅನಾಥೆ, ಅದಕ್ಕಾಗಿಯೇ ಅಲ್ಲವೇ?  ಅವಳೀಗ ನಿಮ್ಮ ಬೈಗಳನ್ನು ತಿನ್ನಲು ಬರುವುದಿಲ್ಲ.  ನಿನ್ನ ಮನೆಯಲ್ಲಿ ವಿವಾಹದ ಉತ್ಸವ ನಡೆಯುತ್ತಿರುವಾಗ ನಿನ್ನದೇ ಕಠಿಣ ಮಾತಿನಿಂದ ನೊಂದು ಅವಳು ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿದ್ದಳು. ಇಂದ್ರನಾಥ ಮೇಲೆ ಹೋಗಿ ತಲುಪಿರದಿದ್ದರೆ ಈ ದಿನ ನಾವು, ನೀವು ಇಡೀ ಮನೆಯವರು ಜೈಲಿನಲ್ಲಿರುತ್ತಿದ್ದೆವು”.
ತಾಯಿ ಕಣ್ಣರಳಿಸಿ ಹೇಳಿದಳು – “ಆಹಾ! ಎಂತಹ ಸುಪುತ್ರ ನೀನಪ್ಪಾ, ಇಡೀ ಮನೆಯನ್ನು ಸಂಕಟದಿಂದ ಉಳಿಸಿದ್ದೀಯಾ.  ಯಾಕಾಗಬಾರದು.  ಈಗ ತಂಗಿಯ ಸರದಿ.  ಕೆಲದಿನಗಳಲ್ಲಿ ನನ್ನನ್ನೂ ಕರಕೊಂಡು ಯಾರ ಕೊರಳಿಗಾದರೂ ಕಟ್ಟಿಬಿಡು. ಇದರಿಂದ ಹಣ ಮಾಡಬಹುದು. ಈ ಉದ್ಯೋಗ ಎಲ್ಲಕ್ಕಿಂತ ಒಳ್ಳೆಯದು.  ಓದಿ ಬರೆದು ಏನು ಮಾಡುತ್ತೀಯೆ?”
ಗೋಕುಲ ಮರ್ಮವೇದನೆಯಿಮದ ತತ್ತರಿಸಿದ. ವ್ಯಥೆ ತುಂಬಿದ ಸ್ವರದಿಂದ ಹೇಳಿದ – “ನಿನ್ನಂಥ ತಾಯಿಯ ಗರ್ಭದಿಂದ ಯಾವ ಮಗನೂ ಹುಟ್ಟುವಂತೆ ಭಗವಂತ ಮಾಡದಿರಲಿ.  ನಿನ್ನ ಮುಖ ನೋಡುವುದೂ ಪಾಪ!”.
 ಹೀಗೆ ಹೇಳುತ್ತಾ ಅವನು ಮನೆಯಿಂದ ಹೊರ ನಡೆದ ಮತ್ತು ಉನ್ಮತ್ತನಂತೆ ಒಂದೆಡೆ ನಿಂತ.  ಗಾಳಿ ಜೋರಾಗಿ ಬೀಸುತ್ತಿತ್ತು.  ಆದರೆ ಅವನಿಗೆ ಉಸಿರಾಡಲು ಗಾಳಿ ಇಲ್ಲದ ಹಾಗೆ ಅನಿಸುತ್ತಿತ್ತು.
(6)
ಒಂದು ವಾರ ಕಳೆಯಿತು.  ಎಲ್ಲೂ ಗೋಕುಲನ ಪತ್ತೆ ಇಲ್ಲ.  ಇಂದ್ರನಾಥನಿಗೆ ಮುಂಬೈಯಲ್ಲಿ ಒಂದು ಕೆಲಸ ಸಿಕ್ಕಿತು.  ಅವನಲ್ಲಿಗೆ ಹೊರಟುಹೋದ.  ಅಲ್ಲಿ ಉಳಕೊಳ್ಳುವ ವ್ಯವಸ್ಥೆ ಮಾಡಿ ತನ್ನ ತಾಯಿಗೆ ಅವನು ತಂತಿ ಕಳುಹಿಸುವ, ಮತ್ತೆ ಅತ್ತೆ, ಸೊಸೆ ಅಲ್ಲಿಗೆ ಹೋಗುವರು.  
ವಂಶೀಧರರಿಗೆ ಮೊದಲು ಗೋಕುಲ ಇಂದ್ರನಾಥನ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದಾನೆಂಬ ಸಂದೇಹವಿತ್ತು.  ಆದರೆ ಅಲ್ಲಿ ಸಿಗದೆ ಹೋಗಲು ಅವರು ಇಡೀ ನಗರದಲ್ಲಿ ಹುಡುಕಾಟ ಪ್ರಾರಂಭಿಸಿದರು.  ಪರಿಚಯವರು, ಸ್ನೇಹಿತರು, ಸಂಬಂಧಿಕರು, ಎಲ್ಲರ ಮನೆಗೂ ಹೋದರು.  ಎಲ್ಲೆಡೆ ನಕಾರವೇ ಸಿಕ್ಕಿತು. ದಿನವಿಡೀ ಬಿಸಿಲಿನಲ್ಲಿ ಓಡಾಡಿ ಸಂಜೆ ಮನೆಗೆ ಬಂದು ಪತ್ನಿಯನ್ನು ನಿಂದಿಸಲಾರಂಭಿಸಿದರು – “ಮಗನಿಗೆ ಇನ್ನು ಬಯ್ಯು. ಬಯ್ಯುತ್ತಾ ಹಾಲು ಕುಡಿ. ನಿನಗೆ ಎಂದಾದರೂ ಬುದ್ಧಿ ಬರುವುದೋ ಇಲ್ಲವೋ ನಾಕಾಣೆ.  ರಂಡೆ ಹೋದಳು, ಹೋಗಲಿ. ತಲೆ ಮೇಲಿನ ಭಾರ ಇಳಿಯಿತು.  ಕೆಲಸಕ್ಕೆ ಆಳನ್ನು ಇಟ್ಟುಕೋ.  ಅವಳಿಲ್ಲದಾಗ ನಾವೇನು ಉಪವಾಸ ಸಾಯುತ್ತಿದ್ದೆವೇನು? ಎಲ್ಲೆಡೆ ವಿಧವೆಯರ ಪುನರ್‍ವಿವಾಹ ನಡೆಯುತ್ತಲೇ ಇದೆ.  ಇದೇನು ಅಸಂಭವದ ಮಾತಲ್ಲ.  ಇದೇನಾದರೂ ನಮ್ಮ ಕೈಯಲ್ಲಿ ಇದ್ದಿದ್ದರೆ ವಿಧವಾ ವಿವಾಹದ ಪಕ್ಷಪಾತಿಗಳನ್ನು ದೇಶದಿಂದಲೇ ಓಡಿಸಿ ಬಿಡುತ್ತಿದ್ದೆವು, ಶಾಪ ಹಾಕಿ ಸುಟ್ಟು ಬಿಡುತ್ತಿದ್ದೆವು.  ಆದರೆ ಇದು ನಮ್ಮ ಕೈಯಲ್ಲಿ ಇಲ್ಲ.  ಮತ್ತೆ ನನ್ನನ್ನು ಕೇಳುವಷ್ಟು ನಿನ್ನ ಕೈಲಿ ಆಗಲಿಲ್ಲವೇ.  ನನಗೇನು ಸರಿ ಎಂದು ಕಂಡಿತೋ ಮಾಡುತ್ತಿದ್ದೆ.  ನಾನೇನು ಕಛೇರಿಯಿಂದ ಮನೆಗೇ ಬರುವುದಿಲ್ಲ, ನನ್ನ ಅಂತ್ಯಕ್ರಿಯೆಯೇ ಆಗಿಹೋಯಿತು ಎಂದು ನೀನು ತಿಳಿದಿದ್ದೆಯೇನು?  ಸುಮ್ಮನೆ ಹುಡುಗನ ಮೇಲೆ ಹರಿಹಾಯ್ದೆ.  ಈಗ ಅಳು, ಎದೆ ತುಂಬಿ ಅಳು!”
  ಸಂಜೆಯಾಗಿತ್ತು.  ವಂಶೀಧರರು ಪತ್ನಿಯ ಮೇಲೆ ಬೈಗಳ ಸುರಿಮಳೆ ಸುರಿಸಿ ಉದ್ವಿಗ್ನತೆಯಿಂದ ಬಾಗಿಲ ಬಳಿ ನಿಂತಿದ್ದರು.  ಮಾನಿಯ ಮೇಲೆ ಕ್ರೋಧ ಉಕ್ಕುಕ್ಕಿ ಬರುತ್ತಿತ್ತು.  ಈ ರಾಕ್ಷಸಿಯ ಕಾರಣದಿಂದ ನನ್ನ ಮನೆಯ ಸರ್ವನಾಶವಾಗಿ ಹೋಯಿತು.  ಎಂಥಾ ಕೆಟ್ಟ ಘಳಿಗೆಯಲ್ಲಿ ಬಂದಳೋ ಮನೆಯನ್ನು ಹಾಳುಗೆಡವಿದಳು! ಅವಳು ಬರದೆ ಹೋಗಿದ್ದಲ್ಲಿ ಇಂದು ಈ ಕೆಟ್ಟ ದಿನಗಳನ್ನು ಕಾಣಬೇಕಾಗಿರಲಿಲ್ಲ.  ಎಂತಹ ಬುದ್ಧಿವಂತ, ಎಂತಹ ಪ್ರತಿಭಾಶಾಲಿ ಮಗ. ಎಲ್ಲಿ ಹೋದನೋ!
ಇದ್ದಕ್ಕಿದ್ದಂತೆ ಓರ್ವ ವೃದ್ಧೆ ಅವರ ಬಳಿ ಬಂದು ಹೇಳಿದಳು – “ಬಾಬು ಸಾಹೇಬರೇ ಈ ಕಾಗದ ತಂದಿದ್ದೇನೆ, ತೆಗೆದುಕೊಳ್ಳಿ”
ವಂಶೀಧರರು ತಕ್ಷಣ ವೃದ್ಧೆಯಿಂದ ಕಾಗದ ಕಿತ್ತುಕೊಂಡರು. ಅವರೆದೆಯಲ್ಲಿ ಆಶೆ ಮಿನುಗಹತ್ತಿತು.  ಬಹುಶಃ ಗೋಕುಲ ಕಾಗದ ಬರೆದಿರಬೇಕು. ಕತ್ತಲಲ್ಲಿ ಏನೂ ತಿಳಿಯಲಿಲ್ಲ. ಕೇಳಿದರು – “ಎಲ್ಲಿಂದ ತಂದಿದ್ದೀಯೆ?”
ವೃದ್ಧೆ ಹೇಳಿದಳು – “ಅದೇ ಹುಸೇನ್‍ಗಂಜ್‍ನಲ್ಲಿರುವ ಬಾಬು, ಮುಂಬೈನಲ್ಲಿ ನೌಕರಿ ಮಾಡುತ್ತಾರೆ, ಅವರ ಪತ್ನಿ ಕಳಿಸಿದ್ದಾರೆ”.
ವಂಶೀಧರರು ಕೋಣೆಗೆ ಹೋಗಿ ದೀಪ ಹಚ್ಚಿ ಕಾಗದ ಓದಲಾರಂಭಿಸಿದರು. ಮಾನಿಯ ಕಾಗದ. ಬರೆದಿದ್ದಳು – “ಪೂಜ್ಯ ಚಿಕ್ಕಪ್ಪ, ಅಭಾಗಿನಿ ಮಾನಿಯ ಪ್ರಣಾಮ ಸ್ವೀಕರಿಸಿರಿ.  ಗೋಕುಲಣ್ಣ ಎಲ್ಲೋ ಹೋಗಿ ಬಿಟ್ಟಿದ್ದಾರೆ ಮತ್ತು ಇದುವರೆವಿಗೂ ಅವರ ಪತ್ತೆ ಇಲ್ಲ ಎಂಬುದನ್ನು ಕೇಳಿ ನನಗೆ ಅತ್ಯಂತ ದುಃಖವಾಯಿತು.  ನಾನೇ ಇದಕ್ಕೆ ಕಾರಣ.  ಈ ಕಳಂಕ ನನ್ನ ಮೋರೆಯ ಮೇಲೆಯೇ ತಗಲಬೇಕಿತ್ತು.  ಅದು ತಗಲಿತು.  ನನ್ನಿಂದ ನಿಮಗೆ ಇಷ್ಟೊಂದು ಶೋಕವಾಗಿದೆ, ಈ ಬಗ್ಗೆ ನನಗೆ ತುಂಬಾ ದುಃಖವಿದೆ. ಆದರೆ ಅಣ್ಣ ಖಂಡಿತ ಹಿಂದಿರುಗಿ ಬರುತ್ತಾರೆ, ನನಗೆ ಈ ನಂಬಿಕೆಯಿದೆ.  ನಾನು ಇವತ್ತೇ ಒಂಭತ್ತು ಗಂಟೆಯ ಗಾಡಿಯಿಂದ ಮುಂಬೈಗೆ ಹೋಗುತ್ತಿದ್ದೇನೆ. ನನ್ನಿಂದಾದ ಅಪರಾಧಗಳಿಗೆ ನನಗೆ ಕ್ಷಮೆ ನೀಡಿರಿ.  ಹಾಗು ಚಿಕ್ಕಮ್ಮನಿಗೆ ನನ್ನ ಪ್ರಣಾಮ ತಿಳಿಸಿರಿ.  ಗೋಕುಲಣ್ಣ ಕ್ಷೇಮವಾಗಿ ಮನೆಗೆ ಹಿಂದಿರುಗಲೆಂದೇ ನಾನು ದೇವರನ್ನು ಪ್ರಾರ್ಥಿಸುತ್ತೇನೆ.  ದೇವರ ಇಚ್ಛೆಯಿದ್ದರೆ ಅಣ್ಣನ ವಿವಾಹದ ಸಮಯದಲ್ಲಿ ತಮ್ಮ ಪಾದದರ್ಶನ ಮಾಡುತ್ತೇನೆ”.
ವಂಶೀಧರರು ಪತ್ರ ಹರಿದು ಚಿಂದಿಚಿಂದಿ ಮಾಡಿದರು.  ಗಡಿಯಾರ ನೋಡಿದರೆ ಎಂಟು ಗಂಟೆಯಾಗಿತ್ತು.  ಕೂಡಲೇ ಬಟ್ಟೆ ಧರಿಸಿ ರಸ್ತೆಗೆ ಬಂದು ಗಾಡಿ ಹಿಡಿದು ರೇಲ್ವೇ ನಿಲ್ದಾಣಕ್ಕೆ ಹೋದರು.

(7)
ಮುಂಬೈ ಮೇಲ್ ಪ್ಲಾಟ್‍ಫಾರಂನಲ್ಲಿ ನಿಂತಿತ್ತು.  ಪಯಣಿಗರು ಓಡಾಡುತ್ತಿದ್ದರು. ಮಾರಾಟಗಾರರ ಕಿರುಚಾಟದಿಂದ ಯಾರ ಮಾತೂ ಕೇಳುತ್ತಿರಲಿಲ್ಲ.  ಗಾಡಿ ಬಿಡಲು ಸ್ವಲ್ಪವೇ ಸಮಯವಿತ್ತು.  ಮಾನಿ ಮತ್ತು ಅವಳ ಅತ್ತೆ ಒಂದು ಸ್ತ್ರೀಯರ ಡಬ್ಬಿಯಲ್ಲಿ ಕುಳಿತಿದ್ದರು.  ಮಾನಿ ಸಜಲ ಕಂಗಳಿಂದ ಎದುರಿಗೆ ನೋಡುತ್ತಿದ್ದಳು.  ಅತೀತ ದುಃಖದಾಯಕವಾಗಿದ್ದರೂ ಅದರ ಸ್ಮೃತಿ ಮಧುರವೇ.  ಮಾನಿ ಇಂದು ಆ ಕೆಟ್ಟ ದಿನಗಳನ್ನು ನೆನೆದು ಸುಖ ಪಡುತ್ತಿದ್ದಳು. ಗೋಕುಲ ಇನ್ನೆಂದು ಸಿಗುವನೋ ಯಾರಿಗೆ ಗೊತ್ತು. ಚಿಕ್ಕಪ್ಪ ಬಂದರೆ ಅವರನ್ನು ನೋಡಬಹುದಿತ್ತು.  ಆಗಾಗ ಕೋಪಿಸಿಕೊಂಡರೂ ಏನೀಗ, ತನ್ನ ಒಳ್ಳೆಯದಕ್ಕಾಗೇ ಅಲ್ಲವೇ ಅವರು ಬೈಯುತ್ತಿದುದು.  ಅವರು ಬರುವುದಿಲ್ಲ.  ಈಗ ಗಾಡಿ ಬಿಡಲು ಕೊಂಚ ಸಮಯವೇ ಇರುವುದು.  ಹೇಗೆ ಬಂದಾರು?  ಸಮಾಜದಲ್ಲಿ ಕೋಲಾಹಲ ಉಂಟಾಗದೇ? ದೇವರಿಚ್ಛೆ ಇದ್ದರೆ ಮುಂದೆ ಇಲ್ಲಿ ಬಂದಾಗ ಖಂಡಿತ ಅವರನ್ನು ಭೇಟಿಯಾಗುವೆ.
ಇದ್ದಕ್ಕಿದ್ದಂತೆ ಅವಳಿಗೆ ಲಾಲಾ ವಂಶೀಧರರು ಬರುತ್ತಿರುವುದು ಕಾಣಿಸಿತು.  ಅವಳು ಗಾಡಿಯಿಂದ ಇಳಿದು ಹೊರಗೆ ನಿಂತಳು, ಮತ್ತೆ ಚಿಕ್ಕಪ್ಪನೆಡೆಗೆ ನಡೆದಳು.  ಅವರ ಕಾಲಿಗೆ ಬೀಳುವಷ್ಟರಲ್ಲಿ ಅವರು ಹಿಂದೆ ಸರಿದರು ಹಾಗೂ ಬಿರುಗಣ್ಣು ಬಿಟ್ಟು ನುಡಿದರು – “ನನ್ನನ್ನು ಮುಟ್ಟಬೇಡ, ದೂರ ಇರು, ಅಭಾಗಿನಿಯೇ ನಾಚಿಕೆಯಿಲ್ಲದೆ ನನಗೆ ಪತ್ರ ಬರೆಯುತ್ತಾಳೆ.  ನಿನಗೆ ಸಾವು ಸಹ ಬರದು.  ನೀನು ನನ್ನ ಕುಲದ ಸರ್ವನಾಶ ಮಾಡಿರುವೆ.  ಇದುವರೆಗೆ ಗೋಕುಲನ ಪತ್ತೆ ಇಲ್ಲ.  ನಿನ್ನಿಂದಾನೇ ಅವನು ಮನೆ ಬಿಟ್ಟದ್ದು ಮತ್ತು ನೀನೀಗ ನನ್ನೆದೆಯ ಮೇಲೆ ಮೆಣಸು ಅರೆಯುತ್ತಿದ್ದೀಯಾ.  ನಿನಗಾಗಿ ಗಂಗೆಯಲ್ಲಿ ನೀರಿಲ್ಲವೇನು?  ನೀನು ಇಂತಹ ಕುಲಟೆ, ಇಂತಹ ಮಾರಿ ಎಂದು ಮೊದಲೇ ತಿಳಿದಿದ್ದರೆ ನಾನು ಅಂದೇ ನಿನ್ನ ಕತ್ತು ಹಿಸುಕಿ ಬಿಡುತ್ತಿದ್ದೆ.  ಈಗ ನನಗೆ ತನ್ನ ಭಕ್ತಿ ತೋರಿಸಲು ಬಂದಿದ್ದಾಳೆ.  ನಿನ್ನಂಥ ಪಾಪಿಷ್ಟರು ಸತ್ತರೇ ಒಳ್ಳೆಯದು, ಭೂಮಿಯ ಭಾರ ಕಡಿಮೆಯಾಗುತ್ತದೆ”.
ಪ್ಲಾಟ್‍ಫಾರಂನ ಮೇಲೆ ನೂರಾರು ಜನರ ಸಂತೆಯೇ ನೆರೆದಿತ್ತು, ಮತ್ತೆ ವಂಶೀಧರರು ನಿರ್ಲಜ್ಜೆಯಿಂದ ಬೈಗಳನ್ನು ಸುರಿಸುತ್ತಿದ್ದರು.  ಏನು ವಿಷಯವೆಂದು ಯಾರಿಗೂ ಅರ್ಥವಾಗಲಿಲ್ಲ.  ಆದರೆ ಮನಸ್ಸಿನಲ್ಲಿ ಎಲ್ಲರಿಗೂ ಲಾಲಾರ ಬಗ್ಗೆ ತಿರಸ್ಕಾರ ಉಂಟಾಯಿತು.
ಮಾನಿ ಕಲ್ಲಿನ ಮೂರ್ತಿಯಂತೆ ನಿಂತಿದ್ದಳು. ಅಲ್ಲೇ ಪ್ರತಿಷ್ಠಾಪಿತಳಾದಂತೆ ಇದ್ದಳು. ಅವಳ ಅಭಿಮಾನವೆಲ್ಲಾ ಚೂರುಚೂರಾಯಿತು. ಭೂಮಿ ಬಾಯ್ಬಿಟ್ಟು ತನ್ನನ್ನು ನುಂಗಬಾರದೇ, ವಜ್ರಪಾತವಾಗಿ ಅವಳ ಜೀವನ – ಅಧಮ ಜೀವನ – ಅಂತ್ಯವಾಗಬಾರದೇ ಎಂದು ಅನ್ನಿಸಿತು.  ಇಷ್ಟೊಂದು ಜನರ ಮುಂದೆ ಅವಳ ಅಪಮಾನವಾಗಿ ಹೋಯಿತು.  ಅವಳ ಕಣ್ಣಿಂದ ಒಂದು ಹನಿ ನೀರೂ ಜಿನುಗಲಿಲ್ಲ, ಎದೆಯಲ್ಲಿ ಕಣ್ಣೀರೇ ಇರಲಿಲ್ಲ.  ಅದರ ಬದಲಿಗೆ ಒಂದು ದಾವಾನಲ ಉರಿಯುತ್ತಿತ್ತು. ಅದು ವೇಗದಿಂದ ಮಸ್ತಿಷ್ಕದೆಡೆಗೆ ಸಾಗುತ್ತಿತ್ತು.  ಜಗತ್ತಿನಲ್ಲಿ ಇದಕ್ಕಿಂತ ಅಧಮ ಜೀವನ ಇನ್ಯಾರದಿದೆ!
ಅತ್ತೆ ಕರೆದರು – “ಮಾನಿ, ಒಳಗೆ ಬಾ.

(8)
 ಗಾಡಿ ಹೊರಟಾಗ ಅತ್ತೆ ಹೇಳಿದರು – “ಇಂತಹ ನಿರ್ಲಜ್ಜ ವ್ಯಕ್ತಿಯನ್ನು ನಾನು ಇದುವರೆಗೆ ಕಂಡಿಲ್ಲ.  ಅವನ ಮುಖ ಪರಚುವಷ್ಟು ಕ್ರೋಧ ನನಗೆ ಬಂದಿತ್ತು”. 
ಮಾನಿ ತಲೆ ಎತ್ತಲಿಲ್ಲ.
ಅತ್ತೆ ಮತ್ತೆ ಹೇಳಿದರು – “ಈ ಸಂಪ್ರದಾಯವಾದಿಗಳಿಗೆ ಯಾವಾಗ ಬುದ್ಧಿ ಬರುತ್ತದೋ ನಾಕಾಣೆ.  ಈಗಂತೂ ಸಾವಿನ ದಿನಗಳೂ ಹತ್ತಿರವೇ ಇವೆ.  ನಿನ್ನ ಮಗ ಓಡಿಹೋದರೆ ನಾವೇನು ಮಾಡೋಣ ಎಂದು ಕೇಳು.  ಈತ ಇಂತಹ ಪಾಪಿಯಾಗಿರದಿದ್ದರೆ ಇಂತಹ ವಜ್ರಾಘಾತವಾದರೂ ಏಕಾಗುತ್ತಿತ್ತು?”.
ಮಾನಿ ಈಗಲೂ ಬಾಯಿ ತೆರೆಯಲಿಲ್ಲ. ಬಹುಶಃ ಅವಳ ಕಿವಿಯ ಮೇಲೆ ಏನೂ ಬೀಳುತ್ತಿರಲಿಲ್ಲ.  ಬಹುಶಃ ಅವಳಿಗೆ ತನ್ನ ಅಸ್ತಿತ್ವದ ಜ್ಞಾನವೂ ಇರಲಿಲ್ಲ.  ಅವಳು ಕಿಟಕಿಯಿಂದಾಚೆ ನೋಡುತ್ತಾ ಕುಳಿತಿದ್ದಳು.  ಆ ಅಂಧಃಕಾರದಲ್ಲಿ ಅವಳಿಗೇನು ತೋಚುತ್ತಿತ್ತೋ.  ಕಾನಪುರ ಬಂತು.  ಅತ್ತೆ ಕೇಳಿದರು – “ಮಗಳೇ ಏನಾದರೂ ತಿನ್ನುವೆಯೇನು? ಸ್ವಲ್ಪ ಮಿಠಾಯಿ ತಿನ್ನು.  ಹತ್ತು ಗಂಟೆ ಹೊಡೆದು ಎಷ್ಟೋ ಹೊತ್ತಾಯಿತು”.  ಮಾನಿ ಹೇಳಿದಳು – “ಇನ್ನೂ ಹಸಿವಿಲ್ಲ ಅಮ್ಮ, ಆಮೇಲೆ ತಿನ್ನುತ್ತೇನೆ”.  
 ಅತ್ತೆ ಮಲಗಿದರು.  ಮಾನಿಯೂ ಮಲಗಿದಳು.  ಆದರೆ ಚಿಕ್ಕಪ್ಪನ ಆ ಮುಖ ಎದುರೇ ನಿಂತಿತ್ತು ಮತ್ತು ಅವರ ಮಾತು ಕಿವಿಗಳಲ್ಲಿ ಪ್ರತಿಧ್ವನಿಸುತ್ತಿತ್ತು.  ಓಹ್! ನಾನೆಂಥ ನೀಚಳು, ಎಂಥಾ ಪತಿತೆ, ನನ್ನ ಸಾವಿನಿಂದ ಭೂಭಾರ ಕಡಿಮೆಯಾಗುತ್ತದೆ! ಏನಂದರು, ನೀನು ನಿನ್ನ ಅಪ್ಪ ಅಮ್ಮಂದಿರ ಮಗಳಾಗಿದ್ದರೆ ಎಂದೂ ನನಗೆ ನಿನ್ನ ಮುಖ ತೋರಿಸಬೇಡ.  ಇಲ್ಲ, ತೋರಿಸುವುದಿಲ್ಲ. ಯಾವ ಮುಖದ ಮೇಲೆ ಮಸಿ ಹಚ್ಚಿದೆಯೋ ಅದನ್ನು ಯಾರಿಗೂ ತೋರಿಸುವ ಇಚ್ಛೆಯೂ ಇಲ್ಲ.
ಗಾಡಿ ಅಂಧಃಕಾರವನ್ನು ಸೀಳಿ ಮುನ್ನುಗ್ಗುತ್ತಿತ್ತು.  ಮಾನಿ ತನ್ನ ಪೆಟ್ಟಿಗೆ ತೆಗೆದು ತನ್ನ ಆಭರಣ ತೆಗೆದು ಅದರಲ್ಲಿಟ್ಟಳು.  ಬಳಿಕ ಇಂದ್ರನಾಥನ ಛಾಯಚಿತ್ರವನ್ನು ತೆಗೆದು ಬಹಳ ಹೊತ್ತು ಅದನ್ನೇ ನೋಡುತ್ತಿದ್ದಳು.  ಅವಳ ಕಣ್ಣಲ್ಲಿ ಆತ್ಮಾಭಿಮಾನದ ಒಂದು ಮಿಂಚು ಮಿಂಚಿತು.  ಅವಳು ಛಾಯಾಚಿತ್ರವನ್ನು ಒಳಗಿಟ್ಟು ತನಗೆ ತಾನೇ ಹೇಳಿದಳು – 'ಇಲ್ಲ, ಇಲ್ಲ, ನಾನು ನಿಮ್ಮ ಜೀವನವನ್ನು ಕಳಂಕಿತಗೊಳಿಸಲಾರೆ. ನೀವು ದೇವರ ಸಮಾನ, ನೀವು ನನ್ನ ಮೇಲೆ ದಯೆ ತೋರಿಸಿದ್ದೀರಿ.  ನಾನು ನನ್ನ ಪೂರ್ವಜನ್ಮದ ಪಾಪಗಳಿಗೆ ಪ್ರಾಯಶ್ಚಿತ್ತ ಮಾಡುತ್ತಿದ್ದೆ. ನೀವು ನನ್ನನ್ನು ಎತ್ತಿ ನಿಮ್ಮೆದೆಗೆ ಒತ್ತಿಕೊಂಡಿರಿ.  ಆದರೆ ನಾನು ನಿಮ್ಮನ್ನು ಕಳಂಕಿತಗೊಳಿಸಲಾರೆ. ನಿಮಗೆ ನಾನೆಂದರೆ ಪ್ರೀತಿ ಇದೆ.  ನೀವು ನನಗಾಗಿ ಅನಾದರ, ಅಪಮಾನ, ನಿಂದೆ ಎಲ್ಲಾ ಸಹಿಸುವಿರಿ.  ಆದರೆ ನಾನು ನಿಮ್ಮ ಜೀವನದ ಮೇಲೆ ಹೊರೆಯಾಗಿ ಇರಲಾರೆ.'
  ಗಾಡಿ ಅಂಧಃಕಾರವನ್ನು ಸೀಳಿ ಓಡುತ್ತಿತ್ತು.  ಮಾನಿ ಆಕಾಶದೆಡೆಗೆ ಎಷ್ಟೊಂದು ಹೊತ್ತು ನೋಡುತ್ತಿದ್ದಳೆಂದರೆ ಅವಳಿಗೆ ಎಲ್ಲಾ ತಾರೆಗಳು ಅದೃಶ್ಯವಾಗಿ ಅಂಧಃಕಾರದಲ್ಲಿ ತನ್ನ ತಾಯಿಯ ಸ್ವರೂಪ ಕಾಣಿಸಿತು – ಎಷ್ಟು ಉಜ್ವಲ, ಎಷ್ಟು ಪ್ರತ್ಯಕ್ಷವಾಗಿ ಎಂದರೆ ಅವಳು ಬೆಚ್ಚಿಬಿದ್ದು ಕಣ್ಣು ಮುಚ್ಚಿಕೊಂಡಳು.  ಮತ್ತೆ ಒಳಗೆ ನೋಡಿದರೆ ಅತ್ತೆ ನಿದ್ರೆ ಮಾಡುತ್ತಿದ್ದರು.

(9)
ರಾತ್ರಿ ಎಷ್ಟು ಕಳೆದಿತ್ತೋ ಗೊತ್ತಿಲ್ಲ. ಬಾಗಿಲು ತೆರೆಯುವ ಶಬ್ದದಿಂದ ಅತ್ತೆ ಕಣ್ಣು ತೆರೆದರು.  ಗಾಡಿ ವೇಗದಿಂದ ಧಾವಿಸುತ್ತಿತ್ತು.  ಆದರೆ ಸೊಸೆ ಎಲ್ಲೂ ಕಂಡು ಬರಲಿಲ್ಲ. ಅವರು ಕಣ್ಣು ಒರೆಸುತ್ತಾ ಎದ್ದು ಕುಳಿತು ಕರೆದಳು – “ಸೊಸೆಯೇ, ಸೊಸೆಯೇ.” ಯಾವ ಉತ್ತರವೂ ಬರಲಿಲ್ಲ. ಅವರ ಹೃದಯ ಢವಗುಟ್ಟಲಾರಂಭಿಸಿತು.  ಮೇಲಿನ ಬರ್ತ್ ನೋಡಿದರು, ಪಾಯಖಾನೆ ನೋಡಿದರು, ಬೆಂಚಿನ ಕೆಳಗೆ ನೋಡಿದರು, ಸೊಸೆ ಎಲ್ಲೂ ಇಲ್ಲ.   ಆಗವರು ಬಾಗಿಲ ಬಳಿ ಬಂದು ನಿಂತರು.  ಈ ಬಾಗಿಲನ್ನು ತೆರೆದಿದ್ದು ಯಾರು ಎಂಬ ಸಂದೇಹ ಬಂತು. ಗಾಡಿಯೊಳಗಂತೂ ಯಾರೂ ಬಂದಿಲ್ಲ! ಅವರಿಗೆ ಭಯವಾಗತೊಡಗಿತು.  ಅವರು ಕಿಟಕಿ ಮುಚ್ಚಿ ಜೋರು ಜೋರಾಗಿ ಅಳಲಾರಂಭಿಸಿದರು.  ಯಾರನ್ನು ಕೇಳುವುದು? ಈ ಅಂಚೆಗಾಡಿ ಎಷ್ಟು ಹೊತ್ತಿನ ನಂತರ ನಿಲ್ಲುವುದೋ. ಸೊಸೆಗೆ ಪುರುಷರ ಗಾಡಿಯಲ್ಲೇ ಹೋಗೋಣ ಎಂದಿದ್ದೆ.  ಆದರೆ ನನ್ನ ಮಾತನ್ನು ಕೇಳಲಿಲ್ಲ. ಅಮ್ಮಾ ನಿಮಗೆ ಮಲಗಲು ತೊಂದರೆ ಎಂದಿದ್ದಳು.  ಅವಳು ಕೊಟ್ಟಿದ್ದು ಈ ಆರಾಮವನ್ನೇ!
ಇದ್ದಕ್ಕಿದ್ದಂತೆ ಅವರಿಗೆ ಅಪಾಯದ ಸರಪಳಿ ನೆನಪಿಗೆ ಬಂತು.  ಅವರು ಜೋರಾಗಿ ಸರಪಳಿಯನ್ನು ಬಹಳ ಸಾರಿ ಎಳೆದರು.  ಎಷ್ಟೋ ನಿಮಿಷಗಳಾದ ನಂತರ ಗಾಡಿ ನಿಂತಿತು.  ಗಾರ್ಡ್ ಬಂದ.  ಅಕ್ಕಪಕ್ಕದ ಡಬ್ಬಿಗಳಿಂದ ನಾಲ್ಕಾರು ಜನರೂ ಬಂದರು. ಮತ್ತೆ ಜನರು ಇಡೀ ಡಬ್ಬಿಯಲ್ಲಿ ಹುಡುಕಿದರು.  ಕೆಳಗಿನ ಬೆಂಚನ್ನು ಗಮನವಹಿಸಿ ನೋಡಿದರು.  ಎಲ್ಲೂ ರಕ್ತದ ಚಿಹ್ನೆಯಿಲ್ಲ. ಸಾಮಾನಿನ ತಲಾಶಿ ನಡೆಸಿದರು. ಹಾಸಿಗೆ, ಸಂದೂಕ, ಪಾತ್ರೆ ಪಗಡಿ ಎಲ್ಲವೂ ಇದ್ದವು.  ಎಲ್ಲದರ ಬೀಗಗಳೂ ಸರಿಯಾಗಿದ್ದವು. ಯಾವ ಸಾಮಾನೂ ಮಾಯವಾಗಿರಲಿಲ್ಲ.  ಹೊರಗಿನಿಂದ ಯಾರಾದರೂ ವ್ಯಕ್ತಿ ಒಳಗೆ ಬಂದರೂ ಓಡುವ ಗಾಡಿ ಬಿಟ್ಟು ಎಲ್ಲಿಗೆ ಹೋದಾನು?  ಓರ್ವ ಸ್ತ್ರೀಯನ್ನು ಎತ್ತಿಕೊಂಡು ಗಾಡಿಯಿಂದ ಧುಮುಕುವುದು ಅಸಂಭವ.  ಇವೆಲ್ಲಾ ಪರೀಕ್ಷೆಯ ಬಳಿಕ ಎಲ್ಲರೂ ಈ ತೀರ್ಮಾನಕ್ಕೆ ಬಂದರು – ಮಾನಿ ಬಾಗಿಲು ತೆರೆದು ಬಗ್ಗಿ ನೋಡುವಾಗ ಬಾಗಿಲ ಹಿಡಿಯ ಮೇಲಿಂದ ಕೈ ಜಾರಿ ಕೆಳಗೆ ಬಿದ್ದಿರಬೇಕು.  ಗಾರ್ಡ್ ಒಳ್ಳೆಯ ವ್ಯಕ್ತಿ. ಅವನು ಕೆಳಗಿಳಿದು ಒಂದು ಮೈಲಿಯವರೆಗೆ ರಸ್ತೆಯ ಎರಡೂ ಕಡೆ ಹುಡುಕಿದ. ಮಾನಿಯ ಯಾವ ಚಿಹ್ನೆಯೂ ಸಿಗಲಿಲ್ಲ.  ರಾತ್ರಿ ಹೊತ್ತು ಇದಕ್ಕಿಂತ ಜಾಸ್ತಿ ಇನ್ನೇನು ತಾನೇ ಮಾಡಬಹುದಿತ್ತು.  ಕೆಲಜನರು ಅತ್ತೆಯನ್ನು ಆಗ್ರಹಪೂರ್ವಕವಾಗಿ ಪುರುಷರ ಡಬ್ಬಿಗೆ ಕರೆದೊಯ್ದರು.  ಅತ್ತೆ ಮುಂದಿನ ನಿಲ್ದಾಣದಲ್ಲಿ ಇಳಿಯುವುದು ಮತ್ತು ಬೆಳಿಗ್ಗೆ ಇನ್ನೂ ಸ್ವಲ್ಪ ದೂರ ಅಲ್ಲಿ ಇಲ್ಲಿ ಹುಡುಕುವುದು ಎಂದು ತೀರ್ಮಾನವಾಯಿತು. ವಿಪತ್ತಿನಲ್ಲಿ ನಾವು ಇತರರ ಮುಖವನ್ನೇ ದೃಷ್ಟಿಸುವ ಹಾಗಾಗುತ್ತದೆ.  ಅತ್ತೆ ಒಮ್ಮೆ ಒಬ್ಬರ ಮುಖ ನೋಡಿದರೆ ಮತ್ತೊಮ್ಮೆ ಇನ್ನೊಬ್ಬರದು.  ಯಾಚನೆ ತುಂಬಿದ ಅವರ ಕಂಗಳು ಎಲ್ಲರಲ್ಲೂ ಹೀಗೆ ಕೇಳುವಂತಿತ್ತು – “ಯಾರಾದರೂ ನನ್ನ ಮಗುವನ್ನು ಯಾಕೆ ಹುಡುಕಿ ತರುವುದಿಲ್ಲ?  ಅಯ್ಯೋ, ಈಗಿನ್ನೂ ಪ್ರಸ್ತವೂ ಆಗಿಲ್ಲ.  ಎಂಥೆಂಥ ಆಕಾಂಕ್ಷೆ - ಭರವಸೆಗಳನ್ನಿಟ್ಟುಕೊಂಡು ಪತಿಯ ಬಳಿ ಹೋಗುತ್ತಿದ್ದಳು. ಯಾರಾದರೂ ಆ ದುಷ್ಟ ವಂಶೀಧರನ ಹತ್ತಿರ ಹೋಗಿ ಯಾಕೆ ಹೇಳಬಾರದು - ನೋಡು, ನಿನ್ನ ಮನೋಭಿಲಾಷೆ ಪೂರೈಸಿತು. ನೀನು ಇಚ್ಛಿಸಿದ್ದು ಪೂರ್ತಿಯಾಯಿತು. ಈಗಲೂ ನಿನ್ನ ಎದೆ ತುಂಬಿ ಬರದೇನು?”  ವೃದ್ಧೆ ಕುಳಿತು ಅಳುತ್ತಿದ್ದಳು ಹಾಗೂ ಗಾಡಿ ಅಂಧಃಕಾರವನ್ನು ಸೀಳುತ್ತಾ ಓಡಿತು.

(10)
ಅಂದು ಭಾನುವಾರ. ಸಂಜೆ ಇಂದ್ರನಾಥ ತನ್ನ ಇಬ್ಬರು-ಮೂವರು ಮಿತ್ರರೊಡನೆ ತನ್ನ ಮನೆಯ ಬಿಸಿಲು ಮಚ್ಚಿನಲ್ಲಿ ಕುಳಿತಿದ್ದ.  ಪರಸ್ಪರ ಹಾಸ್ಯ-ಪರಿಹಾಸ್ಯ ನಡೆದಿತ್ತು. ಮಾನಿಯ ಆಗಮನ ಪರಿಹಾಸದ ವಿಷಯ.
ಒಬ್ಬ ಮಿತ್ರ ಹೇಳಿದ – “ಏನಪ್ಪಾ ಇಂದ್ರ, ನಿನಗಂತೂ ವೈವಾಹಿಕ ಜೀವನದ ಸ್ವಲ್ಪ ಅನುಭವವಿದೆ.  ನಮಗೇಕೆ ಸಲಹೆ ನೀಡಬಾರದು?  ಏನಾದರೂ ಗೂಡು ಮಾಡುವುದೋ ಅಥವಾ ಹೀಗೆ ಮರದ ರೆಂಬೆಗಳ ಮೇಲೆಯೇ ದಿನ ದೂಡುವುದೋ? ಪತ್ರಿಕೆಗಳನ್ನು ನೋಡಿದರಂತೂ ವೈವಾಹಿಕ ಜೀವನ ಮತ್ತು ನರಕಗಳ ನಡುವೆ ಬಹಳ ಕಡಿಮೆ ಅಂತರವಿದೆ ಎಂದು ಅನಿಸುತ್ತದೆ”.
ಇಂದ್ರನಾಥ ನಕ್ಕು ಹೇಳಿದ – “ತಮ್ಮಾ, ಇದು ವಿಧಿಯಾಟ, ಹದಿನಾರಾಣೆ ವಿಧಿಯದ್ದು.  ಒಂದೆಡೆ ವೈವಾಹಿಕ ಜೀವನ ನರಕ ಸದೃಶವಾದಲ್ಲಿ ಇನ್ನೊಂದೆಡೆ ಸ್ವರ್ಗಕ್ಕಿಂತ ಕಡಿಮೆ ಇಲ್ಲ”.
ಇನ್ನೊಬ್ಬ ಮಿತ್ರ ಕೇಳಿದ – “ಇಷ್ಟೊಂದು ಸ್ವಾತಂತ್ರ್ಯ ಉಳಿಯುವುದೇನು?”
ಇಂದ್ರನಾಥ – “ಇಷ್ಟೊಂದಾ, ಇದರ ಶೇಖಡಾ ಒಂದರಷ್ಟೂ ಇಲ್ಲ.  ನೀನು ದಿನಾಲು ಸಿನೆಮಾ ನೋಡಿ ರಾತ್ರಿ ಹನ್ನೆರಡು ಘಂಟೆಗೆ ಮನೆಗೆ ಮರಳಬಯಸಿದರೆ, ಬೆಳಿಗ್ಗೆ 9 ಘಂಟೆಗೆ ಏಳಬಯಸಿದರೆ, ಆಫೀಸಿನಿಂದ ನಾಲ್ಕು ಘಂಟೆಗೆ ಬಂದು ಇಸ್ಪೀಟು ಆಡಬಯಸಿದರೆ, ಆಗ ನಿನಗೆ ವಿವಾಹ ಮಾಡಿಕೊಂಡರೆ ಯಾವುದೇ ಸುಖ ದೊರಕದು.  ಮತ್ತು ಪ್ರತಿ ತಿಂಗಳು ಏನು ಸೂಟು ಹೊಲಿಸಿಕೊಳ್ಳುತ್ತಿದ್ದೆಯೋ ಬಹುಶಃ ವರ್ಷದಲ್ಲಿ ಒಂದೂ ಹೊಲಿಸಿಕೊಳ್ಳಲಾರೆ”.
“ಶ್ರೀಮತಿಯವರು ಇಂದು ರಾತ್ರಿಯ ಗಾಡಿಯಿಂದ ಬರುತ್ತಿದ್ದಾರಲ್ಲವೇ?”
“ಹೌದು ಮೇಲ್‍ನಲ್ಲಿ.  ನನ್ನೊಂದಿಗೆ ಅವರನ್ನು ರಿಸೀವ್ ಮಾಡಲು ಬರುತ್ತೀರಿ ತಾನೆ?”
“ಇದೇನು ಕೇಳುವ ಮಾತೇ.  ಈಗ ಮನೆಗ್ಯಾರು ಹೋಗುತ್ತಾರೆ.  ಆದರೆ ನಾಳೆ ಔತಣದ ಊಟವನ್ನಂತೂ ನೀಡಲೇಬೇಕು”.
 ಆಗ ತಂತಿಯವ ಬಂದು ಇಂದ್ರನಾಥನ ಕೈಗೆ ತಂತಿ ನೀಡಿ ಹೋದ.  
 ಇಂದ್ರನಾಥನ ಮುಖವರಳಿತು.  ಕೂಡಲೇ ತಂತಿ ಬಿಡಿಸಿ ಓದಲಾರಂಭಿಸಿದ.ಒಂದು ಸಲ ಓದಿದೊಡನೆ ಎದೆ ಧಸಕ್ಕೆಂದಿತು, ಉಸಿರುಗಟ್ಟಿತು, ತಲೆ ಚಕ್ಕರ್ ಬಂದಿತು, ಕಣ್ಣಿನ ಬೆಳಕು ನಂದಿತು, ಜಗತ್ತಿನ ಮೇಲೆ ಕಪ್ಪು ಪರದೆ ಬಿದ್ದಂತಾಯಿತು. ತಂತಿಯನ್ನು ಗೆಳೆಯರ ಮುಂದೆ ಎಸೆದು ಎರಡೂ ಕೈಗಳಿಂದ ಮುಖ ಮುಚ್ಚಿ ಬಿಕ್ಕಿಬಿಕ್ಕಿ ಅಳಲಾರಂಭಿಸಿದ.  ಇಬ್ಬರೂ ಸ್ನೇಹಿತರು ಗಾಬರಿಯಿಂದ ತಂತಿ ಓದಿದರು, ಓದುತ್ತಲೇ ಹತಬುದ್ಧಿಯವರಾಗಿ ಗೋಡೆಯ ಆಸರೆ ಹಿಡಿದು ನಿಂತರು.  ಅವರು ಎಣಿಸಿದ್ದಾದರೂ ಏನು, ಆಗಿದ್ದಾದರೂ ಏನು!
ತಂತಿಯಲ್ಲಿ ಬರೆದಿತ್ತು – 'ಮಾನಿ ಗಾಡಿಯಿಂದ ಹೊರಕ್ಕೆ ಹಾರಿದಳು. ಅವಳ ಶವ ಲಾಲಪುರದಿಂದ ಮೂರು ಮೈಲಿ ದೂರದಲ್ಲಿ ಸಿಕ್ಕಿದೆ. ನಾನು ಲಾಲಪುರದಲ್ಲಿ ಇದ್ದೇನೆ. ಕೂಡಲೇ ಬಾ!'
ಒಬ್ಬ ಮಿತ್ರ ಹೇಳಿದ – “ಯಾರೋ ವೈರಿ ಸುಳ್ಳು ಸುಳ್ಳೇ ಸುದ್ದಿ ಕಳುಹಿಸಿರಬೇಕು”.
ಇನ್ನೊಬ್ಬ ಮಿತ್ರ ಹೇಳಿದ – “ಹಾಂ, ಕೆಲವೊಮ್ಮೆ ಜನರು ಈ ರೀತಿಯ ವಿನೋದ ಮಾಡುವುದುಂಟು”.
ಇಂದ್ರನಾಥ ಶೂನ್ಯ ತಂಬಿದ ಕಂಗಳಿಂದ ಅವರೆಡೆ ನೋಡಿದ, ಆದರೆ ಏನನ್ನೂ ಹೇಳಲಿಲ್ಲ.
 ಕೆಲ ನಿಮಿಷ ಎಲ್ಲರೂ ಮೂಕರಾಗಿ, ನಿಷ್ಕ್ರಿಯರಾಗಿ ಕುಳಿತೇ ಇದ್ದರು.
ಇದ್ದಕ್ಕಿದ್ದಂತೆ ಇಂದ್ರನಾಥ ಎದ್ದು ನಿಂತು ಹೇಳಿದ – “ನಾನೀಗ ರೈಲಿನಲ್ಲಿ ಅಲ್ಲಿ ಹೋಗುತ್ತೇನೆ”.
 ರಾತ್ರಿ 9 ಗಂಟೆಗೆ ಮುಂಬೈನಿಂದ ರೈಲು ಹೊರಡುತ್ತಿತ್ತು.  ಇಬ್ಬರೂ ಸ್ನೇಹಿತರು ಬೇಗ ಬೇಗನೆ ಹಾಸಿಗೆ ಮುಂತಾದವುಗಳನ್ನು ಕಟ್ಟಿ ಸಿದ್ಧ ಮಾಡಿದರು.  ಒಬ್ಬ ಹಾಸಿಗೆ ಹಿಡಿದುಕೊಂಡರೆ, ಇನ್ನೊಬ್ಬ ಪೆಟ್ಟಿಗೆ.  ಇಂದ್ರನಾಥ ಬೇಗನೆ ಬಟ್ಟೆ ಬದಲಿಸಿ ರೈಲ್ವೇ ನಿಲ್ಧಾಣಕ್ಕೆ ತೆರಳಿದ.  ನಿರಾಸೆ ಮುಂದೆ, ಆಶೆ ಅಳುತ್ತಾ ಅದರ ಹಿಂದೆ.

(11)
ಒಂದು ವಾರ ಕಳೆಯಿತು.  ಲಾಲಾ ವಂಶೀಧರರು ಕಛೇರಿಯಿಂದ ಬಂದು ಬಾಗಿಲ ಬಳಿ ಕುಳಿತ್ತಿದ್ದಾಗ ಇಂದ್ರನಾಥ ಬಂದು ನಮಸ್ಕಾರ ಮಾಡಿದ. ವಂಶೀಧರರು ಅವನನ್ನು ನೋಡಿ ಬೆಚ್ಚಿ ಬಿದ್ದರು.  ಅವನ ಅನಪೇಕ್ಷಿತ ಆಗಮನದಿಂದಲ್ಲ, ಅವನ ವಿಕೃತ ಪರಿಸ್ಥಿತಿ ನೋಡಿ. ಆತ ಶೋಕವೇ ಮೂರ್ತಿವೆತ್ತಂತಿದ್ದ, ಎದೆಯಿಂದ ಹೊರಟ ನಿಟ್ಟುಸಿರೇ ಮೂರ್ತಿರೂಪ ತಾಳಿದಂತಿದ್ದ.  
ವಂಶೀಧರರು ಕೇಳಿದರು – “ನೀನು ಮುಂಬೈಗೆ ಹೊರಟುಹೋಗಿದ್ದೆಯಲ್ಲಾ?”
ಇಂದ್ರನಾಥ ಉತ್ತರಿಸಿದ – “ಹೌದು, ಇವತ್ತೇ ಬಂದಿದ್ದೇನೆ”.
ವಂಶೀಧರರು ಕಟುವಾಗಿ ಹೇಳಿದರು – “ಗೋಕುಲನನ್ನಂತೂ ನೀನೇ ಕರೆದುಕೊಂಡುಹೋದೆ”.
ಇಂದ್ರನಾಥ ಕೈಬೆರಳು ನೋಡುತ್ತಾ ಹೇಳಿದ – “ಅವನು ನನ್ನ ಮನೆಯಲ್ಲಿದ್ದಾನೆ”.
ವಂಶೀಧರರ ಉದಾಸ ಮುಖದ ಮೇಲೆ ಹರ್ಷದ ಪ್ರಕಾಶ ಬೆಳಗಿತು.  ಹೇಳಿದರು – “ಹಾಗಾದರೆ ಇಲ್ಲಿಗೆ ಯಾಕೆ ಬರಲಿಲ್ಲ?  ನೀನವನನ್ನು ಎಲ್ಲಿ ಭೇಟಿ ಮಾಡಿದೆ?  ಮುಂಬೈಗೆ ಬಂದಿದ್ದನೇನು?”
“ಇಲ್ಲ, ನಿನ್ನೆ ಗಾಡಿಯಿಂದ ಇಳಿಯುವಾಗ ನಿಲ್ದಾಣದಲ್ಲಿ ಸಿಕ್ಕಿದ”.
“ಹಾಗಾದರೆ ಇಲ್ಲಿಗೆ ಕರಕೊಂಡು ಬಾರಲ್ಲ.  ಆಗಿದ್ದೆಲ್ಲಾ ಒಳಿತೇ ಆಯಿತು” 
ಹೇಳುತ್ತಾ ಅವರು ಒಳಕ್ಕೆ ಓಡಿದರು.  ಮರುಕ್ಷಣ ಗೋಕುಲನ ತಾಯಿ ಅವನನ್ನು ಒಳಕ್ಕೆ ಕರೆದರು.
ಅವನು ಒಳಗೆ ಬಂದಾಗ ತಾಯಿ ಅವನನ್ನು ಅಪಾದಮಸ್ತಕ ವೀಕ್ಷಿಸಿದರು – “ಏನಪ್ಪಾ ಕಾಯಿಲೆ ಬಿದ್ದಿದ್ದೆಯೇನು?  ಮುಖ ನೋಡು ಹೇಗಾಗಿದೆ”
 ಇಂದ್ರನಾಥ ಉತ್ತರ ಕೊಡಲಿಲ್ಲ.
ಗೋಕುಲನ ತಾಯಿ ನೀರಿನ ಗ್ಲಾಸು ಇಡುತ್ತಾ ಹೇಳಿದಳು – “ಕೈ ಕಾಲು ತೊಳೆದುಕೊ ಮಗ, ಗೊಕುಲ ಚೆನ್ನಾಗಿದ್ದಾನೆ ತಾನೇ.  ಇಷ್ಟು ದಿನ ಎಲ್ಲಿದ್ದನಂತೆ?  ಆವತ್ತಿನಿಂದ ನೂರಾರು ಹರಕೆ ಹೊತ್ತಿದ್ದೇನೆ.  ಇಲ್ಲಿಗೆ ಯಾಕೆ ಬರಲಿಲ್ಲ?”
ಇಂದ್ರನಾಥ ಕೈಕಾಲು ತೊಳೆಯುತ್ತಾ ಹೇಳಿದ – “ನಾನಂತೂ ಬಾ ಎಂದು ಕರೆದಿದ್ದೆ.  ಆದರೆ ಹೆದರಿಕೆಯಿಂದ ಬರುತ್ತಿಲ್ಲ”.
“ಇಷ್ಟು ದಿನ ಎಲ್ಲಿದ್ದ?”
“ಹಳ್ಳಿಗಳಲ್ಲಿ ಸುತ್ತುತ್ತಿದ್ದ ಎಂದು ಹೇಳುತ್ತಿದ್ದ”
“ಹಾಗಾದರೆ ಮುಂಬೈನಿಂದ ನೀನೊಬ್ಬನೇ ಬಂದಿಯೇನು?”
“ಇಲ್ಲ ಅಮ್ಮಾ ಸಹ ಬಂದಿದ್ದಾಳೆ”
ಗೋಕುಲನ ತಾಯಿ ಸಂಕೋಚದಿಂದ ಕೇಳಿದಳು – “ಮಾನಿ ಚೆನ್ನಾಗಿದ್ದಾಳೆ ತಾನೇ?”
ಇಂದ್ರನಾಥ ನಕ್ಕು ನುಡಿದ – “ಹೂಂ.  ಈಗಂತೂ ಅವಳು ತುಂಬಾ ಸುಖಿ. ಸಂಸಾರದ ಬಂಧನದಿಂದ ಮುಕ್ತಳಾದಳಲ್ಲ!”
ತಾಯಿ ಅವಿಶ್ವಾಸದಿಂದ ಹೇಳಿದಳು – “ತಲೆಹರಟೆ ಸುಮ್ಮನಿರು! ಪಾಪ, ಅವಳನ್ನು ಬೈಯುತ್ತಿದ್ದಾನೆ.  ಆದರೆ ಅಷ್ಟು ಬೇಗ ಮುಂಬೈಯಿಂದ ಮರಳಿದ್ದಾದರೂ ಏಕೆ?  
ಇಂದ್ರನಾಥ ನಗುತ್ತಾ ಹೇಳಿದ – “ಇನ್ನೇನು ಮಾಡಲಿ?  ಮಾನಿ ರೈಲಿನಿಂದ ಹಾರಿ ಪ್ರಾಣಬಿಟ್ಟಳು ಎಂದು ಅಮ್ಮನ ತಂತಿ ಮುಂಬೈಯಲ್ಲಿ ಸಿಕ್ಕಿತು.  ಅಲ್ಲಿ ಲಾಲಪುರದಲ್ಲಿ ಬಿದ್ದಿದ್ದಳು.  ಓಡಿಬಂದೆ.  ಅಲ್ಲೇ ದಹನಕ್ರಿಯೆ ನಡೆಸಿದೆ.  ಇವತ್ತು ಮನೆಗೆ ಬಂದೆ. ಈಗ ನನ್ನ ಅಪರಾಧ ಕ್ಷಮಿಸಿರಿ!”
ಅವನಿಗೆ ಇನ್ನೇನನ್ನೂ ಹೇಳಲಾಗಲಿಲ್ಲ.  ಕಣ್ಣೀರಿನ ಆವೇಗದಿಂದ ಗಂಟಲು ಕಟ್ಟಿತು. ಜೇಬಿನಿಂದ ಒಂದು ಕಾಗದ ತೆಗೆದು ತಾಯಿಯ ಮುಂದಿಟ್ಟು ಹೇಳಿದ – ಅವಳ ಸಂದೂಕದಿಂದ ಸಿಕ್ಕಿದ ಪತ್ರ ಇದು.  ಗೋಕುಲನ ತಾಯಿ ಎಷ್ಟೋ ಹೊತ್ತು ಸ್ತಂಭಿತಳಾಗಿ, ನೆಲವನ್ನೇ ನೋಡುತ್ತಾ ಕುಳಿತುಬಿಟ್ಟಳು.  ಶೋಕ, ಅದಕ್ಕಿಂತ ಹೆಚ್ಚಿನ ಪಶ್ಚಾತ್ತಾಪದಿಂದ ತಲೆಬಾಗಿ ಹೋಗಿತ್ತು.  ನಂತರ ಕಾಗದ ತೆರೆದು ಓದಿದಳು.
“ಸ್ವಾಮಿ!
  ಈ ಕಾಗದ ನಿಮ್ಮ ಕೈ ಸೇರುವ ಹೊತ್ತಿಗೆ ನಾನು ಈ ಜಗತ್ತಿನಿಂದ ಬಿಡುಗಡೆ ಹೊಂದಿರುತ್ತೇನೆ.  ನಾನು ತುಂಬಾ ಅಭಾಗಿನಿ.  ಈ ಪ್ರಪಂಚದಲ್ಲಿ ನನಗೆ ಸ್ಥಳವಿಲ್ಲ.  ನಿಮಗೂ ನನ್ನಿಂದ ಕ್ಲೇಶ ಮತ್ತು ಬರಿಯ ನಿಂದೆಯೇ ಸಿಗುವುದು.  ನಾನು ಆಲೋಚನೆ ಮಾಡಿ ನನ್ನ ಪಾಲಿಗೆ ಮೃತ್ಯುವೇ ಒಳ್ಳೆಯದು ಎಂಬ ನಿರ್ಧಾರಕ್ಕೆ ಬಂದಿದ್ದೇನೆ.  ನನ್ನ ಮೇಲೆ ನೀವು ತೋರಿಸಿದ ದಯೆಗೆ ನಾನು ಪ್ರತಿಯಾಗಿ ಏನು ಕೊಡಲಿ?  ಜೀವನದಲ್ಲಿ ನಾನು ಎಂದಿಗೂ ಯಾವ ವಸ್ತುವನ್ನೂ ಬಯಸಿದವಳಲ್ಲ; ಆದರೆ ನಿಮ್ಮ ಚರಣಗಳ ಮೇಲೆ ತಲೆಯಿಟ್ಟು ಸಾಯಲಿಲ್ಲ ಎಂಬುದರ ಬಗ್ಗೆ ನನಗೆ ದುಃಖವಿದೆ.  ನನ್ನ ಅಂತಿಮ ಕೋರಿಕೆಯೆಂದರೆ ನನಗಾಗಿ ನೀವು ದುಃಖಿಸದಿರಿ. ಭಗವಂತ ನಿಮ್ಮನ್ನು ಯಾವಾಗಲೂ ಸಂತೋಷದಿಂದಿಡಲಿ”.
ತಾಯಿ ಪತ್ರ ತೆಗೆದಿಟ್ಟರು.  ಆಕೆಯ ಕಂಗಳಿಂದ ನೀರು ಹರಿಯಲಾರಂಭಿಸಿತು. ವಂಶೀಧರರು ಪಡಸಾಲೆಯಲ್ಲಿ ನಿಶ್ಚೇತರಾಗಿ ನಿಂತಿದ್ದರು.  ಮತ್ತೆ ಮಾನಿ ಲಜ್ಜೆಯಿಂದ ಅವರ ಮುಂದೆ ನಿಂತಿರುವಂತೆ ಅವರಿಗೆ ಭಾಸವಾಯಿತು.
ಅನುವಾದ  - ಡಾ. ಸುಧಾ ಕಾಮತ್          

ಚಳವಳಿಗಳು - ಟ್ರಯಾಂಗಲ್ ಕಾರ್ಖಾನೆ ಬೆಂಕಿ ದುರಂತ ಮತ್ತು ಹೋರಾಟ





ನ್ಯೂಯಾರ್ಕ್‍ನ ಟ್ರಯಾಂಗಲ್ ಜವಳಿ ಕಾರ್ಖಾನೆ ಬೆಂಕಿ ದುರಂತ ಮತ್ತು ಹೋರಾಟ

ಮಹಿಳಾ ಕಾರ್ಮಿಕರ ಜೀವಂತ ದಹನ


ಒಂದು ಶತಮಾನದ ಹಿಂದೆ 1911ರ ಮಾರ್ಚ್ 25ರಂದು ನ್ಯೂಯಾರ್ಕ್‍ನ ಟ್ರಯಾಂಗಲ್ ಶರ್ಟ್‍ವೇಸ್ಟ್ (ರವಿಕೆ) ಕಾರ್ಖಾನೆಯಲ್ಲಿ ಕಾಣಿಸಿಕೊಂಡ ಬೆಂಕಿ 146 ಯುವ ಜೀವಗಳನ್ನು ಬಲಿತೆಗೆದುಕೊಂಡು ವಿಶ್ವದಲ್ಲೇ ಅತ್ಯಂತ ಘೋರ ದುರಂತವೆಂದು ದಾಖಲಾಗಿದೆ. ಲಾಭ ಪಿಪಾಸುಗಳಾದ ಕೈಗಾರಿಕೋದ್ಯಮಿಗಳ ನಿರ್ಲಕ್ಷ್ಯದಿಂದಾದ ಈ ಅನಾಹುತ, ಕಾರ್ಖಾನೆಗಳಲ್ಲಿ ದುಡಿಯುವ ಕಾರ್ಮಿಕರ ದುಸ್ಥಿತಿಗೆ ಹಿಡಿದ ಕನ್ನಡಿಯಾಗಿದೆ. ಭಾರತದಲ್ಲಿನ ಇಂದಿನ ಪರಿಸ್ಥಿತಿ ಅಕ್ಷರಶಃ ಅದನ್ನೇ ಹೋಲುತ್ತದೆ. ಕೈಗಾರಿಕೀಕರಣ ಆಧುನಿಕ ಸಮಾಜಕ್ಕೆ ಮುನ್ನುಡಿ ಬರೆದದ್ದು ಸತ್ಯವಾದರೂ, ಈ ಸಮಾಜದ ಸಂಪತ್ತನ್ನು ಸೃಜಿಸುತ್ತಿರುವ ಕಾರ್ಮಿಕರ ಅತ್ಯಂತ ದಯನೀಯ ಪರಿಸ್ಥಿತಿಗೂ ಕಾರಣವಾದದ್ದು ಒಂದು ವಿಡಂಬನೆಯೇ ಸರಿ. 
ಯಾವುದೇ ಕನಿಷ್ಠ ಭದ್ರತಾ ಕ್ರಮಗಳಿಲ್ಲದೆ ಕಾರ್ಮಿಕರನ್ನು ಶೋಷಿಸುವ ಈ ಜವಳಿ ಕಾರ್ಖಾನೆಗಳನ್ನು ಸ್ವೆಟ್ ಶಾಪ್ಸ್ ಅಥವಾ ಬೆವರು ಅಂಗಡಿಗಳು ಎನ್ನುತ್ತಾರೆ. ನ್ಯೂಯಾರ್ಕ್‍ನ ಜವಳಿ ಕಾರ್ಖಾನೆಗಳಲ್ಲಿ ದುಡಿಯುವ ಸಾವಿರಾರು ಮಹಿಳಾ ಕಾರ್ಮಿಕರು ಅಲ್ಲಿ ತಮ್ಮ ಜೀವ ತೇದು ತೇದು ತಮ್ಮಕಾಲಕ್ಕೆ ಮುನ್ನವೇ ಸಾವಿಗೆ ಶರಣಾಗುವ ಪರಿಸ್ಥಿತಿ ಸ್ವಲ್ಪ ಬದಲಾದದ್ದು ಈ ಬೆಂಕಿ ಅನಾಹುತ ಎಡೆಮಾಡಿಕೊಟ್ಟ ಜನತೆಯ ಆಕ್ರೋಶ, ಪ್ರತಿಭಟನೆ, ಕಾರ್ಮಿಕ ಸಂಘಟನೆಗಳ ಒತ್ತಡ ಮುಂತಾದವುಗಳಿಂದಾಗಿ. ಅಂದಿನ ಆ ಭೀಕರ ಘಟನೆಯ ಸಂಕ್ಷಿಪ್ತ ಚಿತ್ರಣ ಇಲ್ಲಿದೆ.

ವಲಸೆಗಾರ, ಬಡ ಹೆಣ್ಣುಮಕ್ಕಳ ಅಸಹಾಯಕತೆಯ ದುರ್ಬಳಕೆ
ನ್ಯೂಯಾರ್ಕ್‍ನ ಟ್ರಯಾಂಗಲ್ ಕಾರ್ಖಾನೆಯ ಬಹುತೇಕ ಕಾರ್ಮಿಕರು ಮಹಿಳೆಯರೇ. ಕೆಲವರ ವಯಸ್ಸು 15 ಅಷ್ಟೇ. ಹೆಚ್ಚಿನವರು ಯುರೋಪಿನ ಯಹೂದಿ ಹಾಗೂ ಇಟಲಿಯ ಅಕ್ರಮ ವಲಸೆಗಾರರು. ಜೀವನೋಪಾಯಕ್ಕೆ ತಮ್ಮ ಕುಟುಂಬದವರೊಂದಿಗೆ ಅಮೆರಿಕಾಗೆ ಬಂದಂಥ ಅವರಿಗೆ ಇಲ್ಲಿನ ಭಾಷೆ ಗೊತ್ತಿಲ್ಲ, ಈ ಸಂಸ್ಕೃತಿ ಹೊಸದು. ಇವರಂಥವರೇ ಅಲ್ಲವೆ ಶೋಷಣೆಯ ಸುಲಭ ಬಲಿಪಶುಗಳಾಗುವುದು; ಏಕೆಂದರೆ ಧ್ವನಿ ಎತ್ತಿದರೆ ಇರುವ ಕೆಲಸವನ್ನು ಕಳಕೊಳ್ಳುವಂಥ ಪರಿಸ್ಥಿತಿ. ಹಾಗಾಗಿಯೇ ಹೆಣ್ಣು ಮಕ್ಕಳು ತಮ್ಮ ಘನತೆ-ಗೌರವಗಳನ್ನು ಬಲಿಕೊಟ್ಟು, ಮಾಲೀಕರ ದೌರ್ಜನ್ಯ ಸಹಿಸಿಕೊಂಡು, ಎಷ್ಟೋ ಸಲ ಕಾರ್ಖಾನೆಗಳಲ್ಲಿ ಲೈಂಗಿಕ ದೌರ್ಜನ್ಯಗಳಿಗೂ ಬಲಿಯಾಗಿ ಮೌನವಾಗಿ, ತಲೆಬಗ್ಗಿಸಿ ಕೆಲಸಮಾಡಿಕೊಂಡು ಹೋಗುತ್ತಿದ್ದುದು. ಕಾರ್ಖಾನೆಗಳಲ್ಲಿ ದಿನಕ್ಕೆ 9 ಗಂಟೆಗಳ, ಶನಿವಾರ 7 ಗಂಟೆಗಳ ದುಡಿತ. ಸರಿಯಾಗಿ ಗಾಳಿ ಬೆಳಕುಗಳಿಲ್ಲದ ಕೊಠಡಿಗಳು, ಹೊಲಿಗೆ ಯಂತ್ರಗಳ ನಡುವೆ ಇಕ್ಕಟ್ಟಿನಲ್ಲಿಯೇ ಕುರಿಮಂದೆಯಂತೆ ತುಂಬಿಕೊಂಡೇ ಇವರ ಕೆಲಸ. ಅವರಿಗೆ ಬೆಂಕಿ ದುರಂತ ಘಟಿಸಿದಾಗ ಏನು ಮಾಡಬೇಕು ಎಂದು ನೀಡಬೇಕಾದ ತರಬೇತಿಯನ್ನು ಕೊಟ್ಟಿರಲಿಲ್ಲ. ಕನಿಷ್ಠ ವೇತನವನ್ನೂ ನೀಡದೆ ಇವರಿಂದ ಗರಿಷ್ಠ ಕೆಲಸ ತೆಗೆಯುತ್ತಿದ್ದ ಮಾಲೀಕರು ಅವರ ಭದ್ರತೆಯ ಕುರಿತು ಎಳ್ಳಷ್ಟೂ ಕಾಳಜಿ ವಹಿಸದ ಕಾರಣ ಈ ಭೀಕರ ದುರಂತ ಘಟಿಸಿದ್ದು.

“ಬಂಡವಾಳಿಗರಿಗೆ  ಮಹಿಳಾ ಕಾರ್ಮಿಕಳ ಶ್ರಮದ ಬಗ್ಗೆ ಆಸ್ಥೆ ಇರುವುದು ಅದು ಅಗ್ಗ ಎಂಬುದಕ್ಕೆ ಮಾತ್ರವಲ್ಲ, ಜೊತೆಗೆ ಮಹಿಳೆಯರು ಹೆಚ್ಚು ವಿಧೇಯರು ಎಂಬುದಕ್ಕಾಗಿ” ಎಂದು ಕ್ಲಾರಾ ಜೆಟ್‍ಕಿನ್ ಬರೆಯುತ್ತಾರೆ. 

25, ಮಾರ್ಚ್ 1911
ಕಾರ್ಖಾನೆ ಇದ್ದದ್ದು ನ್ಯೂಯಾರ್ಕ್‍ನ ಆಶ್ ಕಟ್ಟಡದ 8, 9, 10 ನೇ ಮಹಡಿಗಳಲ್ಲಿ. ಅಲ್ಲಿದ್ದುದು ಸುಮಾರು 500 ಕೆಲಸಗಾರರು, ಹೆಚ್ಚಿನವರು 15 ರಿಂದ 23 ವಯಸ್ಸಿನ ಮಹಿಳೆಯರು. ಕಾರ್ಖಾನೆಯ ಒಡೆಯರು ಮ್ಯಾಕ್ಸ್ ಬ್ಲಾಂಕ್ ಮತ್ತು ಐಸಾಕ್ ಹ್ಯಾರಿಸ್. ಇಲ್ಲಿ ಕಾರ್ಮಿಕ ಸಂಘಟನೆ ಇರಲಿಲ್ಲ.
ಅಂದು ಶನಿವಾರ, ಸಂಜೆ ಕೆಲಸದ ಅವಧಿ ಮುಗಿದು ಕಾರ್ಮಿಕರು ಮನೆಗೆ ಹೊರಡಲು ಸಿದ್ಧರಾಗುತ್ತಿದ್ದಂತೆ, 8ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ಅಲ್ಲಿಂದ ಇಡೀ ಕಾರ್ಖಾನೆಯನ್ನು ವ್ಯಾಪಿಸಿತು. ಕಾರ್ಖಾನೆಯಿಂದ ಹೊರಹೋಗಲು 2 ದ್ವಾರಗಳಿದ್ದವು. ಅದರಲ್ಲಿ ಒಂದನ್ನು ಬೆಂಕಿ ಆವರಿಸಿತು. ಇನ್ನೊಂದನ್ನು ತೆಗೆಯಲು ಆಗದಂತೆ ಹೊರಗಿನಿಂದ ಬೀಗ ಹಾಕಲಾಗಿತ್ತು. ಕಾರ್ಮಿಕರು ಬಟ್ಟೆಯನ್ನು ಕದ್ದು ಹೊರಗೆ ಕಳಿಸದಂತೆ ತೆಗೆದುಕೊಂಡ ಮುನ್ನೆಚ್ಚರಿಕೆ ಅದು ! ಕದಿಯಬಹುದಾದ ಬಟ್ಟೆಯ ಬೆಲೆ ಎಷ್ಟು ಗೊತ್ತೇ - 10 ಸೆಂಟ್‍ಗಳು ! ಒಂದು ಲಿಫ್ಟ್ ಇತ್ತು. ಅದು ಕೆಲವರು ಪಾರಾಗಲು ನೆರವಾಯಿತಾದರೂ ಗಾಭರಿಯಿಂದ ಜಾಸ್ತಿ ಜನ ತುಂಬಿದ್ದರಿಂದ ಅದು ಕುಸಿದು ಹೋಯಿತು. ಅಲ್ಲಿನ ಖಾಲಿ ಸ್ಥಳದಲ್ಲಿ ಹಾರಿದವರು ಪ್ರಾಣ ಕಳೆದುಕೊಂಡರು. ಇದ್ದ ಒಂದು ಫೈರ್ ಎಸ್ಕೇಪ್ ಸರಿ ಇಲ್ಲದ ಕಾರಣ ಕುಸಿದುಹೋಯಿತು. 10ನೇ ಮಹಡಿಯಿಂದ ಕೆಲವರು ಟೆರೇಸ್‍ಗೆ ಹೋಗಿ ಪಾರಾಗುವುದು ಸಾಧ್ಯವಾಯಿತು. ಆದರೆ ಉಳಿದವರು ಬೆಂಕಿಯಲ್ಲಿ ಸಿಕ್ಕಿಹಾಕಿಕೊಂಡರು. ಅವರೆಲ್ಲ 9ನೇ ಮಹಡಿಯವರು. ಅವರು ಹತಾಶೆಯಿಂದ ಮುಚ್ಚಿದ ಬಾಗಿಲನ್ನು ಮತ್ತೆ ಮತ್ತೆ ಬಡಿದದ್ದು, ತೆರೆಯಲು ಪ್ರಯತ್ನಿಸುತ್ತಾ ಸೋತಿದ್ದು, ಬೆಂಕಿಯ ಜ್ವಾಲೆಗಳಿಗೆ ಆಹುತಿಯಾಗಿದ್ದು, ಇವೆಲ್ಲವನ್ನು ಪ್ರತ್ಯಕ್ಷದರ್ಶಿಗಳ ವರದಿ ವಿವರಿಸುತ್ತದೆ.
ಈ ದುರಂತದಲ್ಲಿ ಸತ್ತವರು 146. ಅದರಲ್ಲಿ 62 ಜನ ಬೆಂಕಿಯಿಂದ ತಪ್ಪಿಕೊಳ್ಳಲು 9ನೇ ಮಹಡಿಯಿಂದ ಕೆಳಗೆ ಹಾರಿ ಪ್ರಾಣ ಕಳಕೊಂಡರು. ಹೊರಗೆ ಸಹಾಯಕ್ಕೆ ಬಂದಿದ್ದ ಅಗ್ನಿಶಾಮಕ ದಳದವರ ಏಣಿಗಳು ಆ ಮಹಡಿಗಳನ್ನು ತಲುಪುವಷ್ಟು ಎತ್ತರವಿರಲಿಲ್ಲ. ಹಾರುವವರ ರಕ್ಷಣೆಗೆ ಅವರು ಹಿಡಿದು ನಿಂತಿದ್ದ ನೆಟ್‍ಗಳು ಗಟ್ಟಿ ಇಲ್ಲದೆ ಅದನ್ನು ಒಡೆದು ಕೆಳಗೆ ಫುಟ್‍ಪಾತ್ ಮೇಲೆ ಬಿದ್ದವರು ತಲೆ ಒಡೆದುಕೊಂಡರು, ಅಪ್ಪಚ್ಚಿಯಾದರು. ಕೆಳಗೆ ನಿಂತ ಜನ ಅಸಹಾಯಕರಾಗಿ ನೋಡುತ್ತಿದ್ದಂತೆ ಬೆಂಕಿಯ ಜ್ವಾಲೆಗಿಂತ ಈ ಸಾವೇ ಮೇಲು ಎಂದು ಯುವಕನೊಬ್ಬ ಹಲವಾರು ಯುವತಿಯರನ್ನು ಹೊರಗೆ ಜಿಗಿಯಲು ನೆರವಾದ, ಕೊನೆಗೆ ತಾನೂ ಜಿಗಿದ. ಟಪ್ ಟಪ್ ಎಂದು ಈ ದೇಹಗಳು ಕೆಳಗೆ ಬೀಳುತ್ತಿದ್ದದು ಹೃದಯವಿದ್ರಾವಕವಾಗಿತ್ತು ಎಂದು ನೋಡಿದವರು ವೇದನೆಯಿಂದ ದಾಖಲಿಸಿದ್ದಾರೆ. ಸುಟ್ಟು ಹೋದ ಕಾರ್ಖಾನೆಯಲ್ಲಿ ಸುಟ್ಟು ಕರಕಲಾದ ಮೂಳೆ ಚಕ್ಕಳದ ದೇಹಗಳು ಹೊಲಿಗೆ ಯಂತ್ರವನ್ನು ಬಳಸಿ ಬಿದ್ದಿದ್ದವು. ಅಗ್ನಿಶಾಮಕ ದಳದವರು ಸುರಿಸಿದ ನೀರು ಕೆಳಗೆ ಹರಿದಾಗ ಅದು ರಕ್ತಭರಿತ ಕಾಲುವೆಯಾಗಿತ್ತು.

ಸುಟ್ಟು ಕರಕಲಾದವರು
ಸತ್ತವರ ಸಮೂಹ ಸಮಾಧಿ ಮಾಡಲಾಯಿತು, ಅಲ್ಲಿ ಒಂದು ಸ್ಮಾರಕವೂ ಬಂತು. ಬದುಕುಳಿದು ಗಾಯಗೊಂಡ 70 ಕಾರ್ಮಿಕರು  ಚೇತರಿಸಿಕೊಳ್ಳಲು ಬಹಳ ಕಾಲವೇ ಹಿಡಿಯಿತು. ಮಾನಸಿಕವಾಗಿ-ದೈಹಿಕವಾಗಿ ಅವರನ್ನು ಕಾಡಿಸಿದ ಗಾಯಗಳವು. ಸಾವನ್ನು ಅಷ್ಟು ಹತ್ತಿರದಿಂದ ನೋಡಿದ್ದು, ಆಗಿನ ಆತಂಕ, ಹತಾಶೆ, ಹತ್ತಿರದವರನ್ನು ಕಳೆದುಕೊಂಡಿದ್ದು, ಇವೆಲ್ಲಾ ಮಾಯುವ ಗಾಯಗಳೇ? 
ಯಾರು ಬದುಕಿದರೇನು? ಯಾರು ಸತ್ತರೇನು ? ಮಾಲೀಕರಿಗೆ ಅದರಿಂದೇನು !
ಸತ್ತವರಂತೂ ಹೋದರು, ಎಲ್ಲ ಕಷ್ಟಗಳಿಂದ ಪಾರಾಗಿ ! ಆದರೆ ಬದುಕುಳಿದು ಗಾಯಗೊಂಡವರ ಗತಿ ? ಮಾಲೀಕರೂ, ಸರ್ಕಾರವೂ ಅವರ ನೋವಿಗೆ ಸ್ಪಂದಿಸಲಿಲ್ಲ. ಕೊನೆಗೆ ವಿವಿಧ ಕಾರ್ಮಿಕ ಸಂಘಟನೆಗಳು, ಇತರ ಸಂಘಟನೆಗಳು 30000 ಡಾಲರ್ ಹಣ ಸಂಗ್ರಹಿಸಿ ಅವರ ನೆರವಿಗೆ ಧಾವಿಸಿದವು. ಅಕಸ್ಮಿಕದ ಬಳಿಕ ತಮ್ಮ ದೇಶಗಳಾದ ರಷ್ಯಾ, ಇಟಲಿಗೆ ತೆರಳಿದವರಿಗೂ ಧನ ಸಹಾಯ ನೀಡಲಾಯಿತು;  ವಾರ ವಾರ ನಿವೃತ್ತಿ ವೇತನ ನೀಡಲಾಯಿತು; ವಿವಿಧ ಆಶ್ರಯಧಾಮಗಳಲ್ಲಿ ಆಶ್ರಯ ಪಡೆದ ಮಹಿಳಾ ಕಾರ್ಮಿಕರ, ಮಕ್ಕಳ ಜವಾಬ್ದಾರಿ ನಿರ್ವಹಿಸಲಾಯಿತು. ಗಾಯಗಳಿಂದ ಗುಣಮುಖರಾದ ಕಾರ್ಮಿಕರಿಗೆ ಕೆಲಸ ಮತ್ತು ವಾಸಸ್ಥಳ ಹುಡುಕುವ ಕೆಲಸ ಮಾಡಲಾಯಿತು. ಸರ್ಕಾರ ಮಾಡಬೇಕಾದ್ದನ್ನು ಸ್ವಯಂಸೇವಕ ಸಂಸ್ಥೆಗಳು, ಕಾರ್ಮಿಕ ಸಂಘಟನೆಗಳು ಮಾಡಬೇಕಾದ್ದು ಎಂಥ ದುರಂತ ! 
ಪ್ರತಿಭಟನೆಯ ಮಹಾಪೂರ
ಈ ದುರಂತ ನಗರದಲ್ಲಿ ಒಂದು ಶೋಕದ ವಾತಾವರಣವನ್ನು ಸೃಷ್ಟಿಸಿತು. ಅಂತರರಾಷ್ಟ್ರೀಯ ಮಹಿಳಾ ಜವಳಿ ಕಾರ್ಮಿಕರ ಸಂಘಟನೆ ( ಐಎಲ್ ಜಿ ಡಬ್ಲ್ಯು ಯು)ಯ ಆದೇಶದ ಮೇರೆಗೆ ಮಾರ್ಚ್ 29ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಸಂಘಟಿತವಾಯಿತು. ಪ್ರಾರ್ಥನಾ ಸ್ಥಳಗಳಾದ ಚರ್ಚ್, ಸಿನಗಾಗ್ (ಯಹೂದಿಗಳ ದೇಗುಲ) ಗಳಿಂದ ಸಹಸ್ರ ಸಹಸ್ರ ಜನರು ಬೀದಿಗಿಳಿದು ಸುರಿವ ಮಳೆಯಲ್ಲಿ ಮುನ್ನಡೆದರು. ತಮ್ಮ ಬೆವರು - ರಕ್ತ ಸುರಿಸಿ ದುಡಿಯುವ ಜನರ ಕುರಿತು, ಅವರನ್ನು ಬಳಸಿ ಕೋಟ್ಯಾಧೀಶರಾಗಿರುವ ಮಾಲೀಕರ ಪಾತಕೀ ನಿರ್ಲಕ್ಷ್ಯ, ಅವರ ದುರಾಶೆ ಬಗ್ಗೆ ಅಲ್ಲಿ ಆಕ್ರೋಶ ಮಡುಗಟ್ಟಿತ್ತು; ನ್ಯಾಯಕ್ಕಾಗಿ ಆಗ್ರಹವಿತ್ತು; ಕಾರ್ಮಿಕರ ಭದ್ರತೆಗಾಗಿ ಒತ್ತಾಯವಿತ್ತು. ಪಾತಕಿ ಮಾಲೀಕರಿಗೆ ಶಿಕ್ಷೆಯಾಗಬೇಕು ಎಂದು ಎಲ್ಲರೂ ಒಕ್ಕೊರಲಿನಿಂದ ಚೀರಿ ಚೀರಿ ಹೇಳಿದರು. ಪ್ರತ್ಯಕ್ಷದರ್ಶಿಗಳ ವರದಿ ಪತ್ರಿಕೆಗಳಲ್ಲಿ ಬಂದು ಜನರನ್ನು ಭಾವಾವೇಶಗೊಳಿಸಿತು. ಸಂಘಟನೆಗಳ ನಾಯಕರ ಭಾಷಣ ಜನರನ್ನು ಬಡಿದೆಬ್ಬಿಸಿತು.

ಪ್ರತಿಭಟನೆಯ ಮಹಾಪೂರ
ಕಾರ್ಮಿಕರ ಆಕ್ರಂದನಕ್ಕೆ ಕಿವುಡಾದ ನ್ಯಾಯದೇಗುಲ
ನ್ಯಾಯದೇವತೆ ನಿಷ್ಪಕ್ಷಪಾತಿ ಎನ್ನುವುದುಂಟು. ಆದರೆ ಆಕೆ ಉಳ್ಳವರ, ಮಾಲೀಕರ ಪರ ಎನ್ನುವುದು ಬಹಳಷ್ಟು ಸಾರಿ ಸಾಬೀತಾಗಿದೆ. ಬಂಡವಾಳಶಾಹಿ ವ್ಯವಸ್ಥೆಯ ಭದ್ರಕೋಟೆಯಾದ ಅಮೆರಿಕಾದಲ್ಲಿ ನ್ಯಾಯ ಮಾಲೀಕರ ವಿರುದ್ಧ ಹೋಗಲು ಸಾಧ್ಯವೇ ? ಈ ಪ್ರಕರಣ ಇದರ ಜ್ವಲಂತ ಸಾಕ್ಷಿ.
ಕಾರ್ಖಾನೆಗಳಲ್ಲಿ ಬೆಂಕಿ ಆಕಸ್ಮಿಕ ನಿರ್ವಹಿಸಲು ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ, ಕಾರ್ಮಿಕರಿಗೆ ಈ ಕುರಿತು ಯಾವುದೇ ತರಬೇತಿ ನೀಡಿರಲಿಲ್ಲ, ಫೈರ್ ಎಸ್ಕೇಪ್ ಸುಸ್ಥಿತಿಯಲ್ಲಿರಲಿಲ್ಲ, ಅವರು ಪಾರಾಗುವ ಒಂದೇ ದ್ವಾರಕ್ಕೂ ಬೀಗ ಜಡಿದಿತ್ತು ಎಂಬುದೆಲ್ಲವೂ ಹಗಲು ಬೆಳಕಿನಷ್ಟೇ ಸತ್ಯವಾಗಿದ್ದರೂ ನ್ಯಾಯಾಲಯಕ್ಕೆ ಎಲ್ಲಕ್ಕೂ ಸಾಕ್ಷಿ ಬೇಕು ತಾನೆ ! ಸಾಕ್ಷಿಗಳೂ ಇದ್ದರು, ಕೋರ್ಟಿಗೆ ಬಂದು ಎಲ್ಲ ವಿವರಗಳನ್ನು ಕೊಟ್ಟರು. ಆದರೆ ಅವರನ್ನು ಮಾಲೀಕರ ಪರ ವಕೀಲರು ಯದ್ವಾತದ್ವಾ ಪಾಟಿ ಸವಾಲಿಗೆ ಒಳಪಡಿಸಿ ಸುಳ್ಳುಗಾರರೆಂದು ನಿರೂಪಿಸಿಬಿಟ್ಟರು. ಪಾಪ, ಓದು ಬರಹವಿಲ್ಲದ ಅಮಾಯಕ ಹುಡುಗಿಯರು ಆ ತಜ್ಞ ವಕೀಲರ ಮುಂದೆ ಯಾವ ಲೆಕ್ಕ ? ಕೊನೆಗೆ ಮಾಲೀಕರು ಬಿಡುಗಡೆಯಾದರು ! ನೂರಾರು ಜನರ ಮಾರಣಹೋಮ, ಚಿತ್ರಹಿಂಸೆಗೆ ಕಾರಣಿಭೂತರಾದವರು ಯಾವುದೇ ಶಿಕ್ಷೆ ಇಲ್ಲದೆ ಬಚಾವಾದರು. ನ್ಯಾಯಕ್ಕಾಗಿ ಹಂಬಲಿಸುತ್ತಿದ್ದ ನೊಂದ ಕುಟುಂಬದವರು, ಸಾರ್ವಜನಿಕರು “ನ್ಯಾಯ ! ಎಲ್ಲಿದೆ ನ್ಯಾಯ ?” ಎಂದು ಆಕ್ರೋಶ ವ್ಯಕ್ತಪಡಿಸಿದರು. 23 ವೈಯಕ್ತಿಕ ಪ್ರಕರಣಗಳಲ್ಲಿ, ನೊಂದವರು ಮತ್ತೆ ಮಾಲೀಕರ ವಿರುದ್ಧ ಸಿವಿಲ್ ಕಟ್ಲೆ ನಡೆಸಿದಾಗ, 3 ವರ್ಷಗಳ ಬಳಿಕ ಅವು ಇತ್ಯರ್ಥವಾಗಿ ಅವರಿಗೆಲ್ಲ ಪರಿಹಾರ ದೊರಕಿತು. ಎಷ್ಟು ಗೊತ್ತೇ ? ಸತ್ತ ಪ್ರತಿ ಒಬ್ಬರಿಗೂ 75 ಡಾಲರ್ ! ಜೀವದ ಬೆಲೆ 
ಅಷ್ಟು!! ಇದು ಅವರ ಒಂದು ವಾರದ ಸಂಬಳವಾಗಿದ್ದು ಅವರಿಗೆ ಒಂದು ವಾರದ ಸಂಬಳ ಸಹಿತ ರಜೆ ಕೊಡುವಂತಿತ್ತು ಎಂದು ಒಬ್ಬರು ಉದ್ಗಾರವೆಸಗಿದ್ದಾರೆ. ಆದರೆ ಮಾಲೀಕರಿಗೆ ವಿಮಾ ಕಂಪೆನಿಯವರು, ಅವರು ವರದಿ ಮಾಡಿದ ನಷ್ಟಕ್ಕಿಂತ 60000 ಡಾಲರ್ ಹೆಚ್ಚಿಗೆ ಹಣ ಕೊಟ್ಟರು ಎನ್ನಲಾಗಿದೆ !

ಪ್ರತಿಭಟನೆಯ ಫಲಶ್ರುತಿ - ಬಿಗಿಗೊಂಡ ಕಾನೂನು
ಈ ಬೃಹತ್ ದುರಂತ ಪೂರ್ತಿ ವ್ಯರ್ಥವಾಗಲಿಲ್ಲ ಎಂಬುದು ಅಲ್ಲಿಯವರಿಗೆ ನೆಮ್ಮದಿ ತಂದ ಸಂಗತಿ. ವಿವಿಧ ಸಂಘಟನೆಗಳ ಪ್ರತಿಭಟನೆ ಕಾರ್ಮಿಕರ ಭದ್ರತೆಯ ಕುರಿತು ಈಗಾಗಲೇ ಇರುವ ಕಾನೂನುಗಳ ಕಟ್ಟುನಿಟ್ಟಿನ ಜಾರಿ ಮತ್ತು ಹೊಸ ಕಾನೂನುಗಳನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿತು. ಕಾರ್ಮಿಕರ ಪರಿಸ್ಥಿತಿ ಕೆಲ ಮಟ್ಟಿಗೆ ಸುಧಾರಿಸಿತು. ನಿಯಮಿತವಾಗಿ ಕಾರ್ಖಾನೆಗಳ ಭದ್ರತಾ ಕ್ರಮಗಳ ತಪಾಸಣೆ ನಡೆದು ಕೆಲವೆಡೆಯಂತೂ ಅವು ಜಾರಿಯಾದವು.

1909ರಲ್ಲಿ ಇದೇ ಕಾರ್ಖಾನೆಯಲ್ಲಿ ಉತ್ತಮ ಕೆಲಸದ ಪರಿಸ್ಥಿತಿಗಾಗಿ ಆಗ್ರಹಿಸಿ ಕಾರ್ಮಿಕರು ಮುಷ್ಕರ ನಡೆಸಿದಾಗ ಗೂಂಡಾಗಳನ್ನು ಕರೆಸಿ ಅವರನ್ನು ಹೊಡೆಸಲಾಗಿತ್ತು, ಅವರನ್ನು ಜೈಲಿಗೆ ಅಟ್ಟಲಾಗಿತ್ತು. ಈ ವಲಸೆಗಾರ ಅಸಹಾಯ ಯುವತಿಯರು ದಿಕ್ಕೆಟ್ಟಾಗ ಅವರಿಗೆ ನೆರವಾಗಿದ್ದು ಮಹಿಳಾ ಜವಳಿ ಕಾರ್ಮಿಕರ ಸಂಘಟನೆ ಐ ಎಲ್ ಜಿ ಡಬ್ಲು ಯು. ಈಗ ಮತ್ತೆ 1911 ರಲ್ಲಿ ಈ ಮಹಿಳೆಯರು ಒಗ್ಗೂಡಿದರು, ಸಂಘಟನೆ ಬಲಪಡಿಸಿದರು. ತಮ್ಮ ಬೇಡಿಕೆಗಳನ್ನು ಸಂಘಟನೆ ಮೂಲಕ ಮಾತ್ರ ಈಡೇರಿಸಿಕೊಳ್ಳುವುದು ಸಾಧ್ಯ ಎಂದು ಅವರು ಮನಗಂಡರು.
ಜೊತೆಗೆ ಈ ಪ್ರಕರಣ ಇಡೀ ನ್ಯೂಯಾರ್ಕ್ ನಗರದ ಮನಸಾಕ್ಷಿಯನ್ನು ಕದಡಿತು. ಇದು ಒಂದು ಪ್ರತ್ಯೇಕ, ಅಪರೂಪದ ಪ್ರಕರಣವಾಗಿರಲಿಲ್ಲ. ಪ್ರತಿವಾರ ಹಲವಾರು ಅಕಸ್ಮಿಕಗಳಲ್ಲಿ ಈ ಹೆಣ್ಣು ಮಕ್ಕಳು ಪ್ರಾಣ ಕಳೆದುಕೊಳ್ಳುವುದು ಸರ್ವೇಸಾಮಾನ್ಯವಾಗಿತ್ತು. ಪ್ರತಿವರ್ಷ ಸಾವಿರಾರು ಜನ ಅಂಗಾಂಗ ಕಳೆದುಕೊಂಡು ಊನವಾಗುವುದು ಸಾಮಾನ್ಯವೇ! ಮಾಲೀಕರಿಗೆ ಅವರ ಹಣ,ಆಸ್ತಿಯ ಶೇಖರಣೆ ಕಾರ್ಮಿಕರ ಪ್ರಾಣಕ್ಕಿಂತ ಮಿಗಿಲು, ಪವಿತ್ರ. ಕಾರ್ಮಿಕ ಸಂಘಟನೆಗಳು ಇವನ್ನೆಲ್ಲಾ ಬಯಲಿಗಳೆದು ಜನರ ಅಂತರಾತ್ಮಕ್ಕೆ ಕರೆ ನೀಡಿದವು. ನೊಂದವರಿಗೆ ದೇಣಿಗೆ ನೀಡುವುದಷ್ಟೇ ಸಾಲದು. ಕಾರ್ಮಿಕರ ಭದ್ರತೆಗಾಗಿ, ಶೋಷಣೆ ವಿರುದ್ಧ ಆಂದೋಳನ ಅವಶ್ಯ ಎಂದು ಸಾರಿ ಹೇಳಿದವು, ಕಾರ್ಮಿಕ ಸಂಘಟನೆಗಳು ಬಲಿಷ್ಥವಾದವು.
ಈ ಬೆಂಕಿ ಆಕಸ್ಮಿಕದ ನಂತರ 1911ರ ಅಕ್ಟೋಬರ್ 14ರಂದು ನ್ಯೂಯಾರ್ಕ್‍ನಲ್ಲಿ ಭದ್ರತಾ ಎಂಜಿನಿಯರ್‍ಗಳ ಅಮೆರಿಕನ್ ಸೊಸೈಟಿ ಸಂಸ್ಥೆ ಜನ್ಮ ತಳೆಯಿತು. ಶ್ರಮಿಕರ ಹಕ್ಕುಗಳಿಗಾಗಿ ಹೋರಾಟಗಳು ಮುಂದುವರೆದವು. 

    - ಡಾ. ಸುಧಾ  ಕಾಮತ್






Monday 8 May 2017

ಮಹಿಳಾ ಸಾಧಕಿ - ಡಾ. ರುಕ್ಮಾಬಾಯಿ

ಡಾ. ರುಕ್ಮಾಬಾಯಿ(1864-1955)

            ಸಂಪ್ರದಾಯಗಳನ್ನು ಧಿಕ್ಕರಿಸಿ ಮುನ್ನಡೆದ ಮಹಿಳೆ


  19ನೇ ಶತಮಾನದ ಉತ್ತರಾರ್ಧದಲ್ಲಿ ಬ್ರಿಟಿಷ್ ಆಕ್ರಮಿತ ಭಾರತ ಹಾಗೂ ಬ್ರಿಟನ್‍ನಲ್ಲಿ ಶಾಕ್ ತರಂಗಗಳನ್ನೆಬ್ಬಿಸಿದ್ದು ರುಕ್ಮಾಬಾಯಿ ಪ್ರಕರಣ. ಹಿರಿಯರು ತನಗೆ ಬಾಲ್ಯದಲ್ಲೇ ಮದುವೆ ಮಾಡಿಸಿದ ಒಲ್ಲದ ಗಂಡನೊಡನೆ ಬಾಳಲು ಇಚ್ಛಿಸದೆ ಸಿಡಿದೆದ್ದ ಧೀರ ವನಿತೆಯೊಬ್ಬಳ ಹೋರಾಟದ ಕಥೆ ಇದು.
  “ನಮ್ಮನ್ನು (ಹಿಂದೂ ಸ್ತ್ರೀಯರನ್ನು) ಪ್ರಾಣಿಗಳಿಗಿಂತ ಕಡೆಯಾಗಿ ನಡೆಸಿಕೊಳ್ಳುತ್ತಾರೆ. ನಮ್ಮನ್ನು ಆಟಿಕೆಯಂತೆ, ಭೋಗದ ವಸ್ತುವಿನಂತೆ, ತಾತ್ಕಾಲಿಕ ಬಳಕೆಯ ಬಳಿಕ ಎಗ್ಗುಸಿಗ್ಗಿಲ್ಲದೆ ಬಿಸಾಡುವ ಸಾಮಾನಿನಂತೆ ಕಾಣುತ್ತಾರೆ. ನಮ್ಮ ಕಾನೂನುದಾತರು(ಶಾಸ್ತ್ರ ರಚಿಸಿದವರು) ತಾವೇ ಸ್ವತ: ಪುರುಷರಾದ್ದರಿಂದ ತಮ್ಮನ್ನೇ ಉದಾತ್ತ ಮತ್ತು ಪವಿತ್ರ ಎಂಬುದಾಗಿ ಚಿತ್ರಿಸಿಕೊಂಡಿದ್ದಾರೆ ಹಾಗೂ ಊಹಿಸಲು ಸಾಧ್ಯವಾದ ಎಲ್ಲಾ ಪಾಪ-ಅಪವಿತ್ರತೆಗಳನ್ನು ನಮ್ಮ ಮಡಿಲಿಗೆ ಹಾಕಿದ್ದಾರೆ. ಈ ಯೋಗ್ಯರನ್ನು ನಂಬುವುದಾದರೆ ನಾವು ಕೊಳಕು ಪ್ರಾಣಿಗಳ ಒಂದು ಮಂದೆಯಾಗಿದ್ದು ದೇವರು ನಮ್ಮನ್ನು ಸೃಷ್ಟಿಸಿರುವುದೇ ಪುರುಷನ ವಿಶೇಷ ಸೇವೆ ಮತ್ತು ತೃಪ್ತಿಗಾಗಿ; ದೈವ ಕೃಪೆಯುಳ್ಳ ಪುರುಷ ತನಗಿಷ್ಟ ಬಂದಹಾಗೆ ನಮ್ಮೊಂದಿಗೆ ವರ್ತಿಸಬಹುದು, ನಮ್ಮನ್ನು ಕೆಟ್ಟದಾಗಿ ನಡೆಸಿಕೊಳ್ಳಬಹುದು. ಶಾಸ್ತ್ರಗಳ ಆಣತಿಯಂತೆ ನಾವು ಇಂತಹ ಪತನಕ್ಕೆ ಒಳಗಾಗಿದ್ದೇವೆ; ಶತಮಾನಗಳಿಂದ ಪುರುಷರು ನಮ್ಮನ್ನು ಕೀಳಾಗಿ ಕಾಣುತ್ತಿದ್ದಾರೆ; ಈ ಕಾರಣದಿಂದ ಸಹಜವಾಗಿಯೇ ನಾವು ನಮ್ಮ ಕುರಿತಾಗಿಯೇ ಕೀಳರಿಮೆ ಬೆಳೆಸಿಕೊಂಡಿದ್ದೇವೆ. ಹಾಗಾಗಿ ಬಾಲ್ಯ ವಿವಾಹದ ಪದ್ಧತಿಯನ್ನು ನಿರ್ನಾಮಗೊಳಿಸದೆ ಹಾಗೂ ಸ್ತ್ರೀ ಶಿಕ್ಷಣವನ್ನು ಹೆಚ್ಚುಹೆಚ್ಚಾಗಿ ಪಸರಿಸದೆ ನಮ್ಮ ಪರಿಸ್ಥಿತಿ ಸುಧಾರಿಸದು.” 
    1885ರ ‘ದ ಟೈಮ್ಸ್ ಆಫ್ ಇಂಡಿಯಾ’ ಪತ್ರಿಕೆಯಲ್ಲಿ ‘ಓರ್ವ ಹಿಂದೂ ಸ್ತ್ರೀ’ ಎಂಬ ಗುಪ್ತ ನಾಮದಲ್ಲಿ ಓರ್ವ ಮಹಿಳೆ ಬರೆದ ಪತ್ರದ ಭಾಗ ಇದು. ಗಂಡನ ಮನೆಯಲ್ಲಿ ತರುಣ ಸೊಸೆ ಅನುಭವಿಸುವ ಕ್ರೂರ, ಅಮಾನವೀಯ ಕಿರುಕುಳದ ಕುರಿತು ಮಹಿಳೆಯೊಬ್ಬಳು ನೊಂದು ಬರೆದ ಪತ್ರ ಅದು. ಸೊಸೆಯ ಮಾನಸಿಕ, ದೈಹಿಕ ಸ್ವಾತಂತ್ರ್ಯಹರಣ, ದಮನ ಹಾಗೂ ಕೆಲಸದಾಳಿನೊಂದಿಗೆ (“ಕೆಲಸದಾಳಿನಂತೆ ಎಂದು ಹೇಳಲಾರೆ, ಏಕೆಂದರೆ ಕೆಲಸದಾಳಿಗೆ ಕೆಲಸ ನಿರಾಕರಿಸುವ ಆಯ್ಕೆ ಇದೆ, ಸೊಸೆಗೆ ಇಲ್ಲ.”) ಮಾಡಬೇಕಾದ ಕಠಿಣ ಕೆಲಸಗಳ ಕುರಿತು ಆಕೆ ಬರೆದಿದ್ದರು.
    ಈ ಪತ್ರ ಅಂದಿನ ಸಮಾಜದಲ್ಲಿ ತಳಮಳ ಸೃಷ್ಟಿಸಿತು. ಮುಂದೆ ಅದನ್ನು ಬರೆದದ್ದು ರುಕ್ಮಾಬಾಯಿ ಎಂಬುದು ಬಯಲಾದಾಗ ಸನಾತನಿಗಳು ಆಕೆಯ ಮೇಲೆ ಕತ್ತಿ ಮಸೆದರು. ನ್ಯಾಯಾಲಯದಲ್ಲಿ ರುಕ್ಮಾಬಾಯಿ ಕೇಸು ನಡೆಯುತ್ತಿದ್ದ ಕಾಲದಲ್ಲಿ ಅದು ಅವಳ ವಿರುದ್ಧ ಜನಾಭಿಪ್ರಾಯ ರೂಪಿಸಿತು.
  ರುಕ್ಮಾಬಾಯಿಯದು ಬಾಲ್ಯವಿವಾಹ, ನಂತರ ಅವಳು ತಿರಸ್ಕರಿಸಿದ ವಿವಾಹ.

ಸಾಂಪ್ರದಾಯಿಕ ಸಮಾಜದ ಬಲಿ
  ರುಕ್ಮಾಬಾಯಿ ಜನಿಸಿದ್ದು 1864ರಲ್ಲಿ ಮುಂಬೈನಲ್ಲಿ. ಆಕೆಯ ತಾಯಿಯ ವಿವಾಹ ನಡೆದಾಗ ಅವಳಿಗೆ 14 ವರ್ಷ, ರುಕ್ಮಾಬಾಯಿ ಜನಿಸಿದಾಗ 15ವರ್ಷ. ಮಗುವಿಗೆ 2ವರ್ಷವಿದ್ದಾಗಲೇ ಆಕೆ ವಿಧವೆಯಾದಳು. ವಿಧವಾವಿವಾಹ ನಿಷಿದ್ಧವಿರದ ಜಾತಿಗೆ ಸೇರಿದ ಕಾರಣ ಡಾ. ಸಕ್ರಾಮ್ ಅರ್ಜುನ್ ಎಂಬ ವೈದ್ಯರನ್ನು ವಿವಾಹವಾದಳು. ಆತ ಮುಂಬೈನ ಗ್ರಾಂಟ್ ಮೆಡಿಕಲ್ ಕಾಲೇಜಿನಲ್ಲಿ ಬಾಟನಿ ಪ್ರಾಧ್ಯಾಪಕರು. ಅವರು ಪ್ರಗತಿಪರ ಮನೋಧರ್ಮದವರು, ಸ್ತ್ರೀ ಶಿಕ್ಷಣಪರರು. ಹಾಗಾಗಿ ರುಕ್ಮಾಬಾಯಿ ತನ್ನ ವಿದ್ಯಾಭ್ಯಾಸವನ್ನು ಮುಂದುವರೆಸಲು ಪ್ರೋತ್ಸಾಹಿಸಿದರು. 
 ತನ್ನ ತಂದೆಯ ಒತ್ತಡಕ್ಕೆ ಮಣಿದ ತಾಯಿ, ರುಕ್ಮಾಬಾಯಿಯ ವಿವಾಹವನ್ನು ಅವಳ 11ನೇ ವಯಸ್ಸಿನಲ್ಲೇ ದಾದಾಜಿ ಭಿಕಾಜಿಯೊಂದಿಗೆ ಮಾಡಿದರು. ನಂತರ ಸಂಪ್ರದಾಯದಂತೆ ತಾಯಿಮನೆಯಲ್ಲಿ ಉಳಿದ ರುಕ್ಮಾಬಾಯಿ ತನ್ನ ಶಿಕ್ಷಣ ಮುಂದುವರೆಸಿದಳು. ಆದರೆ ಅವಳ ಗಂಡನ ಶಿಕ್ಷಣ ಎಳವೆಯಲ್ಲೇ ಮೊಟಕಾಯಿತು. ಕೆಲ ವರ್ಷಗಳ ಬಳಿಕ ಅವನು ಪತ್ನಿ ತನ್ನೊಂದಿಗೆ ಸಂಸಾರ ಹೂಡಬೇಕೆಂದು ಬಯಸಿದ. ಅಶಿಕ್ಷಿತ, ಕುಸಂಸ್ಕೃತ, ರೋಗಿಷ್ಟ ಗಂಡನೊಡನೆ ಬಾಳಲು ರುಕ್ಮಾಬಾಯಿ ನಿರಾಕರಿಸಿದಳು. ಅಲ್ಲದೆ ತನ್ನ ತಂದೆ ತನ್ನ ಪಾಲಿಗೆ ಬಿಟ್ಟುಹೋದ ಆಸ್ತಿಯೇ ಗಂಡ ತನ್ನನ್ನು ಕರೆದೊಯ್ಯಲು ಒತ್ತಾಯಿಸುತ್ತಿರುವ ಮುಖ್ಯ ಕಾರಣ ಎಂಬ ಅರಿವೂ ಅವಳಿಗಿತ್ತು. 
  ಸಿಟ್ಟಿಗೆದ್ದ ಗಂಡ ಅವಳು ತನ್ನೊಂದಿಗೆ ಬರಲೇಬೇಕು ಎಂದು 1884ರಲ್ಲಿ ಅವಳ ವಿರುದ್ಧ ದಾವೆ ಹೂಡಿದ. ಅಲ್ಲಿಂದ ಶುರುವಾಯಿತು ಗಂಡನೊಂದಿಗೆ ರುಕ್ಮಾಬಾಯಿಯ ಕಾನೂನು ಸಮರ, ಒಂದು ಹೊಸ ಇತಿಹಾಸದ ಪ್ರಾರಂಭ.

   ಕಾನೂನಿನ ದಮನಕ್ಕೆ ಬಗ್ಗದ ಚೇತನ
     1885ರಲ್ಲಿ  ನ್ಯಾಯಾಲಯ ಕೊಟ್ಟ ಮೊದಲ ತೀರ್ಪು ರುಕ್ಮಾಬಾಯಿಯ ಪರವಾಗಿತ್ತು. ಗಂಡನೊಂದಿಗೆ ಎಂದೂ ಬಾಳುವೆ ನಡೆಸಿಯೇ ಇಲ್ಲದ ಕಾರಣ ಅವಳೊಂದಿಗೆ ಬಾಳು ನಡೆಸುವ ಹಕ್ಕಿನ ಮರುಸ್ಥಾಪನೆ (Restitution of conjugal rights)ಯ ಪ್ರಶ್ನೆಯೇ ಇಲ್ಲ; ಅಲ್ಲದೆ ಈ ಮದುವೆ ಅವಳ ಸಮ್ಮತಿ ಇಲ್ಲದೆ ಬಾಲ್ಯದಲ್ಲೇ ನಡೆದಿರುವುದರಿಂದ ವಯಸ್ಸಿಗೆ ಬಂದ ಮೇಲೆ ಅವನೊಡನೆ ಬಾಳುವಂತೆ ಅವಳಿಗೆ ಒತ್ತಾಯ ಮಾಡುವುದು ಕೌರ್ಯ ಹಾಗೂ ಅನಾಗರಿಕ ವ್ಯವಹಾರವಾಗುತ್ತದೆ; ಹಾಗಾಗಿ ಹಾಗೆ ಮಾಡುವಂತಿಲ್ಲ ಎಂದಿತು ನ್ಯಾಯಾಲಯ.
  ನ್ಯಾಯಾಲಯದ ತೀರ್ಪು ಇಡೀ ಸಮಾಜದಲ್ಲಿ ಅಲ್ಲೋಲಕಲ್ಲೋಲವನ್ನು ಉಂಟುಮಾಡಿತು. ಅಂದಿನ ಸಾ0ಪ್ರದಾಯಿಕ ಸಮಾಜದಲ್ಲಿ ಹೆಣ್ಣುಮಗಳೊಬ್ಬಳು ಗಂಡನೊಂದಿಗೆ ಹೋಗುವುದಿಲ್ಲ ಎಂದರೇನು! ಇದಕ್ಕಾಗಿ ಕೋರ್ಟಿನಲ್ಲಿ ವ್ಯಾಜ್ಯ ನಡೆಯುವುದೆಂದರೇನು!! ಸ್ವಾತಂತ್ರ್ಯ ಹೋರಾಟಗಾರರಾದ ಬಾಲ ಗಂಗಾಧರ ತಿಲಕ್ ನಡೆಸುತ್ತಿದ್ದ ‘ಕೇಸರಿ’ ಪತ್ರಿಕೆಯಲ್ಲಿ ರುಕ್ಮಾಬಾಯಿಯ ವಿರುದ್ಧ ಲೇಖನ ಬಂತು. ವಿದ್ಯಾವಂತ ಸ್ತ್ರೀಯರು ಹೀಗೆ ಗಂಡನೊಡನೆ ಬಾಳಲು ನಿರಾಕರಿಸಿದರೆ ಅದರಿಂದ ಸ್ತ್ರೀ ಶಿಕ್ಷಣ ಚಳುವಳಿಗೆ ಹಿನ್ನಡೆಯಾಗುತ್ತದೆ ಎಂಬುದು ತಿಲಕ್ ಅಭಿಪ್ರಾಯ. ಅಲ್ಲದೆ ಬ್ರಿಟಿಷ್ ಸರ್ಕಾರ ಹಿಂದೂ ಧಾರ್ಮಿಕ ಸಂಪ್ರದಾಯ -ಕಟ್ಟಳೆಗಳಲ್ಲಿ ಮೂಗು ತೂರಿಸಬಾರದು ಎಂಬುದೂ ಅವರ ಆಗ್ರಹ. ಇದನ್ನು ಸಹಜವಾಗಿಯೇ ಸನಾತನವಾದಿಗಳು ಬೆಂಬಲಿಸಿದರು. ಹಾಗಾಗಿ ಕೊನೆಗೂ ಬ್ರಿಟಿಷ್ ಸರ್ಕಾರ ಈ ಒತ್ತಡಕ್ಕೆ  ಮಣಿಯಿತು. ತನ್ನ ಆಡಳಿತ ಸುಗಮವಾಗಿ ನಡೆಯಬೇಕು ಎನ್ನುವುದೇ ಸರ್ಕಾರದ ಆಶಯವಾಗಿದ್ದರಿಂದ ಇಲ್ಲಸಲ್ಲದ ತೊಡಕುಗಳಲ್ಲಿ ಸಿಲುಕಿಕೊಳ್ಳುವುದು ಅದಕ್ಕೆ ಬೇಕಿರಲಿಲ್ಲ. ದಾದಾಜಿ ಮತ್ತೆ ಕೋರ್ಟಿನ ಮೊರೆಹೋದಾಗ ತೀರ್ಪು ಅವನ ಪರವಾಗಿಯೇ ಬಂತು! ರುಕ್ಮಾಬಾಯಿ ಒಂದು ತಿಂಗಳಲ್ಲಿ ಅವನ ಬಳಿ ಹೋಗಬೇಕು, ಇಲ್ಲವೇ 6 ತಿಂಗಳ ಸೆರೆಮನೆವಾಸ ಎಂದಿತು ನ್ಯಾಯಾಲಯ!! ಎಂಥ ನ್ಯಾಯ!!!
   ಆದರೂ ರುಕ್ಮಾಬಾಯಿ ಬಗ್ಗಲಿಲ್ಲ. ಸೆರೆಮನೆವಾಸಕ್ಕೆ ಸಿದ್ಧ ಎಂದು ಸೆಟೆದು ನಿಂತಳು. ದಾದಾಜಿ, ರುಕ್ಮಾಬಾಯಿ ಮತ್ತವಳ ಮನೆಯವರ ಮೇಲೆ ಚಾರಿತ್ರ್ಯವಧೆಯ ದಾವೆಯನ್ನೂ ಹೂಡಿದ, ಆದರೆ ಅದರಲ್ಲಿ ಸೋಲನ್ನುಂಡ. ಕೊನೆಗೆ 1888ರ ಹೊತ್ತಿಗೆ, ಇನ್ನು ರುಕ್ಮಾಬಾಯಿಯನ್ನು ಮಣಿಸುವುದು ಸಾಧ್ಯವಿಲ್ಲ ಎಂದು ಅವನು ಮನಗಂಡ. ರುಕ್ಮಾಬಾಯಿ ಜೈಲಿಗೆ ಹೋಗುವುದರಿಂದ ಅವನಿಗೇನೂ ಲಾಭ ಇರಲಿಲ್ಲ. ಹಾಗಾಗಿ ರಾಜಿ ಮಾಡಿಕೊಂಡ. ದಾವೆಯ ಹಣವನ್ನು ಅವಳಿಂದ ಪಡೆದು ಅವಳ ಮೇಲಿನ ಅಧಿಕಾರ ಬಿಟ್ಟುಕೊಟ್ಟ, ಮರುಮದುವೆ ಮಾಡಿಕೊಂಡ.

 ಅಸಹಾಯ ಮಹಿಳೆಯ ದಮನಕ್ಕೆ ನಿಂತ ಸಮಾಜ
   ಅಂದಿನ ನಿಷ್ಠುರ, ಕಠೋರ ಸಮಾಜ ರುಕ್ಮಾಬಾಯಿಯನ್ನು ದಮನಕ್ಕೆ ಒಳಪಡಿಸಿದ ರೀತಿ ದಿಗ್ಭ್ರಮೆಗೊಳಿಸುವಂಥಾದ್ದು. ಸಂಪ್ರದಾಯವಾದಿಗಳ ಪಾಲಿಗೆ ಅದು ಒಂದು ಕೇಸು ಮಾತ್ರವಾಗಿರಲಿಲ್ಲ. ಅದು ಅವರ ಅಳಿವು-ಉಳಿವಿನ ಪ್ರಶ್ನೆಯಾಗಿತ್ತು. ತಮ್ಮ ಪವಿತ್ರ ಶಾಸ್ತ್ರ-ಸಂಹಿತೆಗಳನ್ನು ಬ್ರಿಟಿಷ್ ನ್ಯಾಯಾದೀಶರು ಉಲ್ಲಂಘಿಸುತ್ತಿದ್ದಾರೆ ಎಂಬುದೇ ಅವರ ಆಕ್ರೋಶ. ಹೆಣ್ಣುಮಗಳೊಬ್ಬಳು ವಿವಾಹಕ್ಕೆ ತನಗೆ ತಕ್ಕ ವರನನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಪಡೆದರೆ, ಅದು ಸಮಾಜದ ಸ್ವಾಸ್ಥ್ಯಕ್ಕೆ ಹಾನಿಕರ ಎಂದು ‘ಕೇಸರಿ’ ಸಂಪಾದಕೀಯ ಬರೆಯಿತು. “.....ಎಲ್ಲೆಲ್ಲೋ ಅಡ್ಡಾಡುತ್ತಿರುವ ತನ್ನ ಹಸುವಿನ ಕೊರಳಿಗೆ ಹಗ್ಗಹಾಕಿ ಓರ್ವ ಪುರುಷ ಅದನ್ನು ಮನೆಗೆ ತಂದರೆ ಇಂಗ್ಲಿಷ್  ಕಾನೂನು ಅದು ದಾವೆಗೆ ಯೋಗ್ಯ ಎನ್ನುವುದಿಲ್ಲ. ಹಿಂದೂ ಧರ್ಮ ಮಹಿಳೆಯನ್ನು ಒಂದು ಆಸ್ತಿಯನ್ನಾಗಿ ಮತ್ತು ಪಶುವಿಗೆ ಸಮಾನ ಎಂದು ಪರಿಗಣಿಸುತ್ತದೆ. ಒಂದೇ ವ್ಯತ್ಯಾಸವೆಂದರೆ ಮಾನವಳಾದ ಕಾರಣ ಅವಳಿಗೆ ಆಹಾರದ-ಬಟ್ಟೆಬರೆಯ ಹಕ್ಕಿದೆ. ಆದರೆ ಇಂಗ್ಲಿಷ್ ಕಾನೂನು ಇದನ್ನು ತಪ್ಪೆಂದು ಪರಿಗಣಿಸಿದೆ, ಇದು ಧರ್ಮ ಮತ್ತು ಸಂಪ್ರದಾಯದಲ್ಲಿ ವಿದೇಶಿ ಮಧ್ಯಪ್ರವೇಶದ ಪ್ರಾರಂಭ....” (ಕೇಸರಿ-ಸಂಪಾದಕೀಯ-ಏಪ್ರಿಲ್ 13,1886)
  ದಾದಾಜಿಗೆ ನ್ಯಾಯಾಲಯದಲ್ಲಿ  ದಾವೆ ಹೂಡಲು ಸನಾತನಿಗಳು ಹಣ ಒಗ್ಗೂಡಿಸಿ ನೀಡಿದರು, ಅವನಿಗೆ ಬೆಂಗಾವಲಾಗಿ ನಿಂತರು. ರುಕ್ಮಾಬಾಯಿಯ ಪರ ಇದ್ದವರು ಕೆಲವೇ ಮಂದಿ ಪ್ರಗತಿಪರರು - ಅವಳ ಸಾಕು ತಂದೆ ಹಾಗೂ ಸಮಾಜ ಸುಧಾರಕರಾದ ಗಣೇಶ್ ಗೋಪಾಲ್ ಅಗರ್‍ಕರ್. ‘ಕೇಸರಿ’ಯ ಇನ್ನೊಬ್ಬ ಸಂಪಾದಕರಾದ ಅಗರ್‍ಕರ್ ಈ ಪ್ರಕರಣದಲ್ಲಿ ತಿಲಕ್‍ರೊಂದಿಗೆ ಭಿನ್ನಮತ ಹೊಂದಿದ ಕಾರಣ ಅವರಿಂದ ಬೇರೆಯಾದರು, ಮಹಿಳೆಯರ ವಿಮೋಚನೆಗೆ ಟೊಂಕಕಟ್ಟಿ ನಿಂತರು.
  ಸಮಾಜದ ಖಂಡನೆಯಿಂದ ನೊಂದ ರುಕ್ಮಾಬಾಯಿ ತನ್ನ ಬೆಂಬಲಕ್ಕೆ ನಿಂತ ಸಮಾಜಸುಧಾರಕಿ ಪಂಡಿತ ರಮಾಬಾಯಿಗೆ ಪತ್ರ ಬರೆದಳು. 1887ರ ಮಾರ್ಚ್ 8ರಂದು ನ್ಯಾಯಾಲಯದಲ್ಲಿ ಕೇಸು ನಡೆಯುತ್ತಿದ್ದಾಗ ಅವಳು ಬರೆದ ಪತ್ರ ಅವಳಲ್ಲಿನ ನೋವು-ಹತಾಶೆಯನ್ನು ವ್ಯಕ್ತ ಪಡಿಸುತ್ತದೆ.
  “ನಾವಿರುವುದು ಎಲ್ಲರಿಗೂ ಸಮಾನ ನ್ಯಾಯ ಎಂದು ಕೊಚ್ಚಿಕೊಳ್ಳುವ, ಭೇದಭಾವರಹಿತ ಬ್ರಿಟಿಷ್ ಆಳ್ವಿಕೆಯಲ್ಲಿ ಅಲ್ಲವೇ? ನಾವಿರುವುದು ಸ್ವತ: ಮಹಿಳೆಯೇ ಆಗಿರುವ ರಾಣಿ - ಸಾಮ್ರಾಜ್ಞಿ ವಿಕ್ಟೋರಿಯಾರ ರಾಜ್ಯಭಾರದಲ್ಲಿ ಅಲ್ಲವೇ? ಹಿಂದೂ ಆಳ್ವಿಕೆಯೇ ಇರಲಿ, ಬ್ರಿಟಿಷ್ ಆಳ್ವಿಕೆಯೇ ಇರಲಿ, ಭಾರತದಲ್ಲಿ ಮಹಿಳೆಯರಿಗೆ ಯಾವ ಆಶಾಭಾವನೆಯೂ ಇಲ್ಲ. ನನ್ನ ಕೇಸಿನ ತೀರ್ಮಾನ ಇಷ್ಟು ಕ್ರೂರವಾಗಿ ಆಗಿರುವ ಕಾರಣ ಇದು ಸಾರ್ವಜನಿಕ ಅಭಿಪ್ರಾಯವನ್ನು ಮಹಿಳೆಯ ಪರವಾಗಿ ರೂಪಿಸಿ ಅವಳ ಪರಿಸ್ಥಿತಿಯನ್ನು ಉತ್ತಮಗೊಳಿಸಲು ಕಾರಣವಾಗಬಹುದು ಎಂಬುದು ಕೆಲವರ ಅಭಿಪ್ರಾಯ. ಆದರೆ ಅದು ತದ್ವಿರುದ್ಧವಾಗಿರುತ್ತದೆ ಎಂಬುದು ನನ್ನ ಭೀತಿ. ಕಠೋರ ಅತ್ತೆಯರು ಇನ್ನಷ್ಟು ಬಲ ಪಡೆಯುತ್ತಾರೆ ಹಾಗೂ ಬ್ರಿಟಿಷ್ ಸರ್ಕಾರ ಯಾವ ಪರಿಸ್ಥಿತಿಯಲ್ಲೂ ಹಿಂದೂ ಕಾನೂನಿನ ವಿರುದ್ಧ ಹೋಗಲಾರದು ಎಂಬ ದೃಢ ನಂಬಿಕೆಯಿಂದ, ಇದುವರೆವಿಗೂ ತಮ್ಮ ಪತ್ನಿಯರೊಂದಿಗೆ ಬಾಳುವ ಹಕ್ಕಿನ ಮರುಸ್ಥಾಪನೆಗಾಗಿ ದಾವೆ ಹೂಡಲು ಹಿಂಜರಿಯುತ್ತಿರುವ ತಮ್ಮ ಗಂಡುಮಕ್ಕಳನ್ನು ಬ್ರಿಟಿಷ್ ನ್ಯಾಯಾಲಯಕ್ಕೆ ಹೋಗಲು ಅವರು ಪ್ರೇರೇಪಿಸಬಹುದು!”
   ಇದಕ್ಕೆ ಪಂಡಿತ ರಮಾಬಾಯಿ ತೀಕ್ಷ್ಣವಾಗಿ ಪ್ರತಿಕ್ರಿಯಿಸುತ್ತಾ ಬ್ರಿಟಿಷ್ ಸರ್ಕಾರವನ್ನು ಖಂಡಿಸಿದ್ದಾರೆ - “ಅಸಹಾಯ ಹೆಣ್ಣುಮಗಳೊಬ್ಬಳ ಪರ ಇರದುದಕ್ಕಾಗಿ ನಾವು ಬ್ರಿಟಿಷ್ ಸರ್ಕಾರವನ್ನು ದೂಷಿಸಲಾಗದು. ಅದು ಭಾರತದ ಪುರುಷ ಜನಾಂಗದೊಂದಿಗೆ ಮಾಡಿಕೊಂಡ ಒಪ್ಪಂದವನ್ನು ಪಾಲಿಸುತಿದೆಯಷ್ಟೇ...... ಇಂಗ್ಲೆಂಡ್ ಏನಾದರೂ ಪ್ರಾಚೀನ ಸಂಸ್ಥೆಗಳ ತತ್ವ ಹಾಗೂ ಶಕ್ತಿಗಳ ವಿರುದ್ಧ ಓರ್ವ ಅಸಹಾಯಕ ಸ್ತ್ರೀಯನ್ನು ರಕ್ಷಿಸಿ ದೇವರ ಸೇವೆ ಮಾಡಿದರೆ ಜನತೆಗೆ ಅದರಿಂದ ಅಸಂತುಷ್ಟಿ ಉಂಟಾಗುತ್ತದೆ, ಅದರಿಂದ ಭಾರತದಲ್ಲಿ ಬ್ರಿಟಿಷರ ಆಳ್ವಿಕೆ ಮತ್ತು ಲಾಭಕ್ಕೆ ಅಪಾಯ ಒದಗಬಹುದು. ಈ ಸರ್ಕಾರಕ್ಕೆ ಯಶಸ್ಸನ್ನು ಹಾರೈಸೋಣ. ಈ ಯಶಸ್ಸು 100 ಮಿಲಿಯ ಹೆಣ್ಣುಮಕ್ಕಳ ಹಕ್ಕು ಮತ್ತು ನೆಮ್ಮದಿಯ ತ್ಯಾಗದಿಂದ ಗಳಿಸಿರುವುದಾದರೂ ಸರಿಯೇ!!”
  ಅದೇ ಸಮಯದಲ್ಲೇ ‘ದ ಟೈಮ್ಸ್’ ಗೆ ಪತ್ರರೂಪದಲ್ಲಿ ಲೇಖನ ಬರೆದು ಹಿಂದೂ ಸಂಪ್ರದಾಯಗಳನ್ನು ಕಟುವಾದ ಟೀಕೆಗೆ ಗುರಿಮಾಡಿದ್ದು ರುಕ್ಮಾಬಾಯಿಯೇ ಎಂಬುದು ಬೆಳಕಿಗೆ ಬಂದಿದ್ದು. ವೃತ್ತ ಪತ್ರಿಕೆಗಳು, ಖಾಸಗಿ ಕಾಗದಗಳ ಮೂಲಕ ಅವಳ ಮೇಲೆ ನಿಂದನೆಯ ಮಳೆ ಸುರಿಯಿತು, ಕೆಲವೊಮ್ಮೆ ಕಲ್ಲುಗಳ ಸುರಿಮಳೆಯಂಥ ದೌರ್ಜನ್ಯಗಳಿಗೂ ಅವಳು ಒಳಗಾಗಬೇಕಾಯಿತು.

ಬೆಂಬಲಕ್ಕೆ ನಿಂತ ಪ್ರಗತಿಪರರು
   ಇಷ್ಟೆಲ್ಲಾ ಕಷ್ಟಗಳ ನಡುವೆ ರುಕ್ಮಾಬಾಯಿಯ ನೆರವಿಗೆ ನಿಂತವರು ಹಲವರಿದ್ದರು. ರುಕ್ಮಾಬಾಯಿಯ ವಿಶಿಷ್ಟ ಪ್ರಕರಣ ಭಾರತದಲ್ಲಿ ಮಾತ್ರವಲ್ಲ ಬ್ರಿಟನ್ನಿನಲ್ಲೂ ಹೆಸರುವಾಸಿಯಾದಾಗ ಲಂಡನ್ನಿನ ಸ್ತ್ರೀವಾದಿಗಳು ಅವಳ ಬೆಂಬಲಕ್ಕೆ ಬಂದರು. ಮುಂಬೈಯ ‘ಕಾಮಾ ಮಹಿಳಾ ಆಸ್ಪತ್ರೆ’ಯ ಹಿರಿಯ ವೈದ್ಯೆ ಡಾ.ಎಡಿತ್ ಪೀಛೇಯವರ ನೆರವಿನಿಂದ ಈ ಮಹಿಳೆಯರು ಧನ ಸಂಗ್ರಹಿಸಿ ರುಕ್ಮಾಬಾಯಿಯನ್ನು ಲಂಡನ್ನಿಗೆ ಕರೆಸಿಕೊಂಡರು.
   ಅಲ್ಲಿ ಆಕೆ ವೈದ್ಯಕೀಯ ಕಾಲೇಜು ಸೇರಿ 1894ರಲ್ಲಿ ವೈದ್ಯೆಯಾಗಿ ಪದವಿ ಪಡೆದರು. ನಂತರ ಸ್ವದೇಶಕ್ಕೆ ಮರಳಿ ಮುಂಬೈ, ಸೂರತ್, ರಾಜಕೋಟ್ ಮುಂತಾದೆಡೆಗಳಲ್ಲಿನ ಆಸ್ಪತ್ರೆಗಳಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದರು, ‘ಮಹಾರಾಷ್ಟ್ರದ ದ್ವಿತೀಯ ಮಹಿಳಾ ವೈದ್ಯೆ’ಯ ಉಪಾಧಿ ಪಡೆದರು. ( ಪ್ರಥಮ ಮಹಿಳಾ ವೈದ್ಯೆ: ಆನಂದಿಬಾಯಿ ಜೋಶಿ) ಜೊತೆಜೊತೆಗೆ ಮಹಿಳೆಯರ ಸಮಸ್ಯೆಗಳ ಕುರಿತು ಲೇಖನ ಬರೆಯುವುದನ್ನೂ ಮುಂದುವರೆಸಿದರು. ಅವರು ಮಹಿಳೆಯರ ಮೇಲೆ ಹೇರಲಾದ ‘ಪರದೆ’ಯ ದುಷ್ಪರಿಣಾಮಗಳು ಹಾಗೂ ‘ಜನಾನಾ’(ಮುಸ್ಲಿಂ ಮಹಿಳೆಯರು ಪುರುಷರ ಕಣ್ಣಿಗೆ ಬೀಳದಂತೆ ಮನೆ ಒಳಗೇ ಇರಬೇಕಾದ ಸ್ಥಳ)ದಲ್ಲಿನ ಜೀವನದ ಕುರಿತು ಲೇಖನ ಬರೆದಿದ್ದಾರೆ.
   ರುಕ್ಮಾಬಾಯಿ ಮತ್ತೆ ಮದುವೆ ಆಗಲಿಲ್ಲ. ಅವರ ಗಂಡ ಅವರ ಮೇಲಿನ ಕೇಸನ್ನು ಕೈಬಿಟ್ಟರೂ ಹಿಂದೂ ಕಾನೂನಿನ ಪ್ರಕಾರ ಆಕೆ ‘ವಿವಾಹಿತೆ’ಯೋ, ‘ಅವಿವಾಹಿತೆ’ಯೋ ಎಂಬುದು ಕೊನೆಯವರೆಗೂ ಸ್ಪಷ್ಟವಾಗಲೇ ಇಲ್ಲ!
     ಹೆಣ್ಣುಮಕ್ಕಳು ಮನೆಯಿಂದಾಚೆಗೆ ಬರುವುದೇ ಅಪರೂಪವಾಗಿದ್ದಂಥ ಕಾಲದಲ್ಲಿ, ‘ಪತಿಯೇ ಪರದೈವ’ ಎಂದು ತಿಳಿದಿದ್ದ ಸಮಾಜದಲ್ಲಿ ತನಗಾದ ಅನ್ಯಾಯದ ವಿರುದ್ಧ ರುಕ್ಮಾಬಾಯಿ ದನಿಯೆತ್ತಿದ್ದು, ಮುಂದೆ ಬಾಲ್ಯ ವಿವಾಹದ ವಿರುದ್ಧದ ಕಾನೂನು ರೂಪುಗೊಳ್ಳುವಲ್ಲಿ ನೆರವಾಯಿತು. ಸಮಾಜ ಸುಧಾರಕರೂ, ಪತ್ರಕರ್ತರೂ ಆದ ಬೆಹ್ರಾಂಜಿ ಮಲಬಾರಿ ಎಂಬುವರು ಈ ಪ್ರಕರಣದ ವಿರುದ್ಧ ದನಿಯೆತ್ತಿ 1891ರಲ್ಲಿ ‘ವೈವಾಹಿಕ ಸಂಬಂಧಕ್ಕೆ ಒಪ್ಪಿಗೆಯ ವಯಸ್ಸು ಕಾಯ್ದೆ’ (Age of Consent Actತರುವಲ್ಲಿ ಯಶಸ್ವಿಯಾದರು. ತನ್ಮೂಲಕ ಹೆಣ್ಣುಮಕ್ಕಳ ಮದುವೆ ವಯಸ್ಸನ್ನು 10ರಿಂದ 12ಕ್ಕೆ ಏರಿಸಲಾಯಿತು. ಮುಂದೆ 1929ರಲ್ಲಿ ‘ಶಾರದಾ ಕಾಯ್ದೆ’ ಅದನ್ನು 14ಕ್ಕೆ ಏರಿಸಿತು. ಸ್ವತಂತ್ರ ಭಾರತದಲ್ಲಿ ಈಗ ಅದು ಹೆಣ್ಣುಮಕ್ಕಳು ದೈಹಿಕವಾಗಿ, ಮಾನಸಿಕವಾಗಿ ಪ್ರಬುದ್ಧರಾಗುವ ವಯಸ್ಸು ಅಂದರೆ 18 ಆಗಿದೆ. ಭಾರತದ ಮಹಿಳಾ ಸಮುದಾಯದ ಕೃತಜ್ಞತೆ ಈ ಕಾರಣಕ್ಕೆ ರುಕ್ಮಾಬಾಯಿಗೆ ಸಲ್ಲಲೇಬೇಕು.
ಡಾ. ಸುಧಾ ಕಾಮತ್
    

ಲೇಖನ - ತಾರತಮ್ಯದ ವಿರುದ್ಧ ಹೋರಾಡಲು ಸಜ್ಜಾಗಿ


ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ 2017

ಪರಿಚಯ 
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಅಸಮಾನತೆಯಿಂದ ಬಳಲುತ್ತಿರುವ ಜಗತ್ತಿನಲ್ಲಿ ತಮ್ಮ  ನಾಗರಿಕ ಹಕ್ಕುಗಳಿಗಾಗಿ ನಿರಂತರ ಹೋರಾಟ ನಡೆಸುತ್ತಿರುವ ಮಹಿಳಾ ಕಾರ್ಮಿಕರ ಐಕಮತ್ಯವನ್ನು ಪ್ರತಿನಿಧಿಸುವ ಒಂದು ದಿನ. ಜಗತ್ತಿನಾದ್ಯಂತ ಮಹಿಳೆಯರು ಆಯಾ ದೇಶಗಳ ಸಂವಿಧಾನದಲ್ಲಿ ಅಳವಡಿಸಲಾಗಿರುವ ಮೂಲಭೂತ ಹಕ್ಕುಗಳನ್ನು ಪ್ರತಿಪಾದಿಸುತ್ತಲೇ ಇದ್ದಾರೆ. ವಿಶ್ವ ಸಂಸ್ಥೆ 1975ರಿಂದ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದೆ.

ಮಹಿಳಾ ದಿನಾಚರಣೆಯ ಇತಿಹಾಸ
ಸಮಾಜವಾದಿ ಕಾರ್ಮಿಕರ ಸಂಘರ್ಷ : ಅಂತಾರಾಷ್ಟ್ರೀಯ ಮಹಿಳಾ ದಿನದ ಮೂಲವನ್ನು ಉತ್ತರ ಅಮೆರಿಕ ಮತ್ತು ಯೂರೋಪ್ ಖಂಡದಲ್ಲಿ ದುಡಿಯುವ ವರ್ಗಗಳು ನೌಕರಿ ಅರಸಿ ಅಲೆಯುತ್ತಿದ್ದ ಸಂದರ್ಭದಲ್ಲಿ ಕಾಣಬಹುದು.  1908ರಲ್ಲಿ  15 ಸಾವಿರ ಜವಳಿ ಕಾರ್ಮಿಕರು ನ್ಯೂಯಾರ್ಕ್ ನಗರದಲ್ಲಿ ಮೆರವಣಿಗೆಯೊಂದನ್ನು ನಡೆಸಿ ತಮ್ಮ ಜೀವನ ಮಟ್ಟ ಸುಧಾರಿಸಲು ಹಾಗೂ ಆರ್ಥಿಕ ಪರಿಸ್ಥಿತಿ ಸುಧಾರಿಸಲು 'ಬ್ರೆಡ್ ಅಂಡ್ ರೋಸಸ್' ಘೋಷಣೆಯೊಂದಿಗೆ ಯೂನಿಯನ್ ಚೌಕದಲ್ಲಿ ಪ್ರತಿಭಟನೆ ನಡೆಸಿದ್ದರು.  1857ರಲ್ಲಿ ನಡೆದ ಇದೇ ರೀತಿಯ ಪ್ರತಿಭಟನಾ ಅಂದೋಲನದ ಫಲವಾಗಿ ನ್ಯೂಯಾರ್ಕ್ ನಗರದಲ್ಲಿ ಪ್ರಪ್ರಥಮ ಬಾರಿಗೆ ಕಾರ್ಮಿಕ ಸಂಘಟನೆ ಉಗಮಿಸಿತ್ತು. ಮುಷ್ಕರ ನಿರತ ಮಹಿಳೆಯರ ಮೇಲೆ ಪೊಲೀಸರು ತೀವ್ರ ದಬ್ಬಾಳಿಕೆ ನಡೆಸಿದ್ದರು. ನ್ಯೂಯಾರ್ಕ್ ನಗರದ ಬೀದಿಗಳೆಲ್ಲವೂ ರಕ್ತಸಿಕ್ತವಾದವು. ಇದರಿಂದ ಪ್ರಚೋದಿತಗೊಂಡ ಅಮೆರಿಕದ ಸಮಾಜವಾದಿಗಳು ಈ ಕಾರ್ಮಿಕರನ್ನು ಸನ್ಮಾನಿಸುವುದೇ ಅಲ್ಲದೆ 1909ರಲ್ಲಿ ರಾಷ್ಟ್ರೀಯ ಕಾರ್ಮಿಕರ ದಿನವನ್ನೂ ಆಯೋಜಿಸಿದ್ದರು.  1908ರ ಮುಷ್ಕರದಿಂದ ಪ್ರೇರಣೆ ಪಡೆದ ವಲಸೆ ಕಾರ್ಮಿಕರು ಮೂರು ತಿಂಗಳ ಮುಷ್ಕರ ಹೂಡಿದ್ದರು.  ನವಂಬರ್ 1909- ಫೆಬ್ರವರಿ 2010ರ ಅವಧಿಯಲ್ಲಿ ನಡೆದ 20000 ಕಾರ್ಮಿಕರ ದಂಗೆ ಟ್ರಯಾಂಗಲ್ ಶರ್ಟ್‍ವೇಸ್ಟ್ ಮತ್ತಿತರ ಕಾರ್ಖಾನೆಗಳ ವಿರುದ್ಧ ಸೆಟೆದು  ನಿಂತಿತ್ತು. 16 ವರ್ಷದ ಬಾಲಕಿಯರೂ ಪೊಲೀಸ್ ದೌರ್ಜನ್ಯ ಎದುರಿಸಬೇಕಾಯಿತು. ಆದರೆ ಒಂದು ವರ್ಷದ ನಂತರ 146 ವಲಸೆ ಕಾರ್ಮಿಕರು, ಮಹಿಳೆಯರು ಮತ್ತು ಬಾಲಕಿಯರನ್ನೂ ಸೇರಿದಂತೆ, ಟ್ರಯಾಂಗಲ್ ಶರ್ಟ್‍ವೇಸ್ಟ್ ಕಾರ್ಖಾನೆಯ ಅಗ್ನಿ ದುರಂತವೊಂದರಲ್ಲಿ ಆಹುತಿಯಾದರು. ಈ ಕಾರ್ಮಿಕರನ್ನು ಕಾರ್ಖಾನೆಯಲ್ಲಿ ಕೂಡಿ ಹಾಕಿದ್ದುದೇ ದುರಂತಕ್ಕೆ ಕಾರಣವಾಗಿತ್ತು. ಕಾರ್ಮಿಕರಿಗೆ ಬೆಂಕಿಯಿಂದ ತಪ್ಪಿಸಿಕೊಳ್ಳಲಾಗದೆ ಜೀವ ತ್ಯಾಗ ಮಾಡಿದ್ದರು.

ಮಹಿಳಾ ಚಳುವಳಿಯ ಅಂತಾರಾಷ್ಟ್ರೀಯ ಲಕ್ಷಣಗಳು
ಕೋಪನ್ ಹೇಗನ್‍ನಲ್ಲಿ ನಡೆದ ಅಂತಾರಾಷ್ಟ್ರೀಯ ಸಮಾಜವಾದಿ ಸಭೆಯಲ್ಲಿ ಆಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲು ನಿರ್ಧರಿಸಲಾಯಿತು.  ಜವಳಿ ಕಾರ್ಖಾನೆಯ ಮಹಿಳಾ ಕಾರ್ಮಿಕರು ಉತ್ತಮ ವೇತನಕ್ಕಾಗಿ, ಸುರಕ್ಷತಾ ನಿಯಮಗಳಿಗಾಗಿ,  ನೌಕರಿಯ ನಿಯಮಗಳಿಗಾಗಿ, ಕಡಿಮೆ ಕೆಲಸದ ಅವಧಿಗಾಗಿ, ಕನಿಷ್ಠ ವೇತನಕ್ಕಾಗಿ ಮತ್ತು ಮತದಾನದ ಹಕ್ಕಿಗಾಗಿ ಆಗ್ರಹಿಸುತ್ತಿದ್ದುದನ್ನು ಈ ಸಭೆಯಲ್ಲಿ ಸಮ್ಮಾನಿಸಲಾಯಿತು. ಜರ್ಮನಿಯ ಸಮಾಜವಾದಿ ನಾಯಕಿ ಕ್ಲಾರಾ ಜೆಟ್ಕಿನ್ ಈ ಹೋರಾಟದಲ್ಲಿ ಮುಂಚೂಣಿ ಪಾತ್ರ ವಹಿಸಿದ್ದರು.  ದುಡಿಯುವ ವರ್ಗಗಳ ಜಾಗತಿಕ ಐಕಮತ್ಯಕ್ಕಾಗಿ ಹೋರಾಡುತ್ತಿದ್ದ ಜೆಟ್ಕಿನ್ ಈ ಹೋರಾಟದ ಪ್ರಮುಖ ರೂವಾರಿಯಾಗಿದ್ದರು. ಮಹಿಳಾ ಕಾರ್ಮಿಕರ ಈ ಬೇಡಿಕೆಗಳನ್ನು 17 ದೇಶಗಳ ನೂರಕ್ಕೂ ಹೆಚ್ಚು ಮಹಿಳೆಯರು ಅನುಮೋದಿಸಿದ್ದರು. 1911ರ ಮಾರ್ಚ್ 19ರಂದು ಆಸ್ಟ್ರಿಯಾ, ಜರ್ಮನಿ, ಸ್ವಿಜರ್‍ಲೆಂಡ್ ದೇಶಗಳಲ್ಲಿ ಹತ್ತು ಲಕ್ಷಕ್ಕೂ ಹೆಚ್ಚು ಮಹಿಳೆಯರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಮಹಿಳೆಯರ ದುಡಿಯುವ ಹಕ್ಕು, ವೃತ್ತಿಪರ ತರಬೇತಿ, ತಾರತಮ್ಯವನ್ನು ಹೋಗಲಾಡಿಸುವುದು ಮತ್ತು ಮತದಾನದ ಹಕ್ಕಿಗಾಗಿ ಬೇಡಿಕೆಗಳನ್ನು ಮಂಡಿಸಲಾಗಿತ್ತು. ಸಮಾಜವಾದಿ ಸಂಘಟನೆ, ದುಡಿಯುವ ವರ್ಗಗಳ ಪ್ರತಿಭಟನೆಗಳಿಗೆ ಇದು ಪ್ರಶಸ್ತ ಕಾಲ ಆಗಿತ್ತು.  ಇದಾದ ಒಂದು ವರ್ಷದ ನಂತರ ಈ ಒಡಂಬಡಿಕೆ ಮತ್ತು ಬೇಡಿಕೆಗಳ ಪರಿಣಾಮ ಯೂರೋಪ್ ಖಂಡದಲ್ಲಿ ಮಹಿಳಾ ದಿನಾಚರಣೆಯಂದು ಲಕ್ಷಾಂತರ ಮಹಿಳೆಯರು ಬೀದಿಗಿಳಿದು ಪ್ರತಿಭಟನೆ ನಡೆಸಿದ್ದರು. 1913 ಮತ್ತು 1914ರಂದು ಯೂರೋಪ್‍ನ ಮಹಿಳೆಯರು ಸಾಮ್ರಾಜ್ಯಶಾಹಿ ಯುದ್ಧ ಪರಂಪರೆಯ ವಿರುದ್ಧ ಪ್ರತಿಭಟಿಸಿ ತಮ್ಮ ಐಕಮತ್ಯ ಪ್ರದರ್ಶಿಸಿದ್ದರು.
ರಷ್ಯಾದ ಜವಳಿ ಕಾರ್ಮಿಕರು ತಮ್ಮ ಪ್ರಪ್ರಥಮ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ ಸಂದರ್ಭದಲ್ಲಿ 1917ರಲ್ಲಿ ಸಂತ ಪೀಟರ್ಸ್‍ಬರ್ಗ್‍ನಲ್ಲಿ ಆಹಾರ ಮತ್ತು ಶಾಂತಿಗಾಗಿ ಹೋರಾಟ ನಡೆಸಿದ್ದರು.  ರಷ್ಯಾದಲ್ಲಿ ತಾಂಡವಾಡುತ್ತಿದ್ದ ಆಹಾರ ಕೊರತೆಯ ವಿರುದ್ಧ ಫೆಬ್ರವರಿಯ ಕ್ರಾಂತಿಗೆ ಈ ದುಡಿಯುವ ಮಹಿಳೆಯರು ನಾಂದಿ ಹಾಡಿದ್ದರು. ತ್ಸಾರ್ ದೊರೆಯ ಅಡಳಿತದ ಅಂತ್ಯ ಮತ್ತು ಮೊದಲನೆ ಮಹಾಯುದ್ಧವನ್ನು ಅಂತ್ಯಗೊಳಿಸಲು ಹೋರಾಟ ನಡೆಸಿದ್ದರು. ಸೋವಿಯತ್ ಸಂಘದಲ್ಲಿ ಅಲೆಕ್ಸಾಂಡ್ರಾ ಕೊಲೊಂತಾಯ್ ಮತ್ತು ಲೆನಿನ್ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ದಿನವನ್ನು ರಜಾ ದಿನವಾಗಿ ಘೋಷಿಸಿದ್ದರು. ಅಂದಿನಿಂದ ಕಮ್ಯುನಿಸ್ಟರು ಪ್ರಧಾನವಾಗಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಲಾರಂಭಿಸಿದ್ದರು. 1922ರಲ್ಲಿ ಚೀನಾ, ಸ್ಪೇನ್‍ನಲ್ಲಿ 1936ರಲ್ಲಿ ಕಮ್ಯುನಿಸ್ಟರು ಮಹಿಳಾ ದಿನಾಚರಣೆ ಆಚರಿಸಿದ್ದರು.  ಪೂರ್ವ ಯೂರೋಪ್‍ನ ಮಹಿಳೆಯರು ದಶಕಗಳ ಕಾಲ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಆಚರಿಸಿದ್ದರು. ಎರಡನೆ ಮಹಾಯುದ್ಧದ ಸಂದರ್ಭದಲ್ಲಿ ಹಲವಾರು ಪಶ್ಚಿಮ ರಾಷ್ಟ್ರಗಳು ಫ್ಯಾಸಿಸಂ ವಿರುದ್ಧ ಹೋರಾಟದಲ್ಲಿ ಮಹಿಳೆಯರ ಕೊಡುಗೆಯನ್ನು ಗುರುತಿಸಿದ್ದರು. ವಿಯಟ್ನಾಂನಲ್ಲಿ ಮಹಿಳೆಯರು ಅಮೆರಿಕದ ಸಾಮ್ರಾಜ್ಯಶಾಹಿ ನೀತಿಯ ವಿರುದ್ಧ 1960ರ ಯುದ್ಧದ ಸಂದರ್ಭದಲ್ಲಿ ನಡೆಸಿದ ಹೋರಾಟಗಳು ಜಗತ್ತಿನಾದ್ಯಂತ ಫ್ಯಾಸಿಸಂ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಹೋರಾಡುತ್ತಿದ್ದ ಮಹಿಳೆಯರಿಗೆ ಸ್ಪೂರ್ತಿ ನೀಡಿತ್ತು. ಮಹಿಳಾ ಕಾರ್ಮಿಕರ ಬೇಡಿಕೆಗಳಿಂದ ಆರಂಭವಾದ ಮಹಿಳೆಯರ ಐಕಮತ್ಯ ಫ್ಯಾಸಿಸಂ ಮತ್ತು ಸಾಮ್ರಾಜ್ಯಶಾಹಿ ವಿರುದ್ಧ ಹೋರಾಟದವರೆಗೂ ವಿಸ್ತರಿಸಿತ್ತು.

ವಿಶ್ವಸಂಸ್ಥೆಯ ಪ್ರೇರಣೆ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ
ಪಶ್ಚಿಮದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಪ್ರಪ್ರಥಮ ಬಾರಿಗೆ 1977ರ ನಂತರ ಜನಪ್ರಿಯ ಹೋರಾಟದಂತೆ ಆಚರಿಸಲಾಗಿತ್ತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಎಲ್ಲ ಸದಸ್ಯ ರಾಷ್ಟ್ರಗಳಿಗೂ ಮಾರ್ಚ್ 8ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನಾಗಿ ಆಚರಿಸುವಂತೆ ಆದೇಶ ನೀಡಿತ್ತು. ಮಹಿಳೆಯರ ಹಕ್ಕು ಮತ್ತು ಶಾಂತಿ ಸ್ಥಾಪನೆಗಾಗಿ ವಿಶ್ವಸಂಸ್ಥೆ ಪಣ ತೊಟ್ಟಿತ್ತು. ಏತನ್ಮಧ್ಯೆ 1975-85ರ ಅವಧಿಯನ್ನು ವಿಶ್ವಸಂಸ್ಥೆ ಮಹಿಳೆಯರ ದಶಕ ಎಂದು ಗುರುತಿಸಿತ್ತು. ಈ ಅವಧಿಯಲ್ಲಿ ಮಹಿಳೆಯರ ವಿರುದ್ಧ ತಾರತಮ್ಯವನ್ನು ಹೋಗಲಾಡಿಸಿ ಸಬಲೀಕರಣದತ್ತ ಮುನ್ನಡೆಯಲು ಶ್ರಮಿಸಲಾಗಿತ್ತು. ಅಂದಿನಿಂದಲೂ ಜಾಗತಿಕ ಮಟ್ಟದಲ್ಲಿ ನಾಲ್ಕು ಮಹಿಳಾ ಸಮಾವೇಶಗಳನ್ನು ನಡೆಸಲಾಗಿದೆ. 1975ರಲ್ಲಿ ಮೆಕ್ಸಿಕೋ, 1980ರಲ್ಲಿ ಕೋಪನ್‍ಹೇಗನ್, 1985ರಲ್ಲಿ ನೈರೋಬಿ ಮತ್ತು 1995ರಲ್ಲಿ ಬೀಜಿಂಗ್‍ನಲ್ಲಿ ಈ ಸಮಾವೇಶಗಳು ನಡೆದಿವೆ. ಬೀಜಿಂಗ್ ಘೋಷಣೆ ಮತ್ತು ಕಾರ್ಯಾಚರಣೆಯ ಭೂಮಿಕೆಯನ್ನು 189 ರಾಷ್ಟ್ರಗಳು ಮಾನ್ಯ ಮಾಡಿದ್ದು ಮಹಿಳಾ ಸಬಲೀಕರಣದತ್ತ ಕ್ರಮ ಕೈಗೊಳ್ಳಲು ನಿರ್ಧರಿಸಿವೆ. 12 ಕ್ಷೇತ್ರಗಳಲ್ಲಿ ಮಹಿಳಾ ಸಮಾನತೆ ಸಾಧಿಸಲು ತೀರ್ಮಾನಿಸಲಾಗಿದೆ. ಮಹಿಳೆ ಮತ್ತು ಬಡತನ, ಶಿಕ್ಷಣ ಮತ್ತು ತರಬೇತಿ, ಮಹಿಳೆ ಮತ್ತು ಆರೋಗ್ಯ, ಮಹಿಳೆಯರ ವಿರುದ್ಧ ದೌರ್ಜನ್ಯ, ಮಹಿಳೆ ಮತ್ತು ಸಶಸ್ತ್ರ ಹೋರಾಟ, ಮಹಿಳೆ ಮತ್ತು ಆರ್ಥಿಕತೆ, ಮಹಿಳೆಯರ ಅಧಿಕಾರ, ಮಹಿಳೆಯ ನಿರ್ಣಯದ ಹಕ್ಕು , ಮಹಿಳಾ ಸಬಲೀಕರಣಕ್ಕೆ ಸಾಂಸ್ಥಿಕ ಸ್ವರೂಪ, ಮಾನವ ಹಕ್ಕುಗಳು, ಮಹಿಳೆ ಮತ್ತು ಮಾಧ್ಯಮ, ಮಹಿಳೆ ಪರಿಸರ ಮತ್ತು ಬಾಲಕಿಯರ ಅಭ್ಯುದಯದ ಕ್ಷೇತ್ರದಲ್ಲಿ ವಿಶ್ವಸಂಸ್ಥೆಯ ಸಮಾವೇಶ ಅಭಿಯಾನ ಕೈಗೊಂಡಿದೆ.
ಮಹಿಳಾ ಚಳುವಳಿಯ ಗುರಿ ಮತ್ತು ಧ್ಯೇಯ :
ಮಹಿಳಾ ಚಳುವಳಿ : 1975ರಿಂದಲೂ ಭಾರತದ ಮಹಿಳಾ ಚಳುವಳಿಯ ಮುಂದಿರುವ ಸವಾಲುಗಳು ಉಲ್ಬಣಿಸುತ್ತಲೇ ಇದೆ. ವರದಕ್ಷಿಣೆ, ಹೆಣ್ಣು ಭ್ರೂಣ ಹತ್ಯೆ, ಅತ್ಯಾಚಾರ, ಅಕ್ರಮಸಾಗಾಣಿಕೆ, ಆರೋಗ್ಯ ಸಮಸ್ಯೆಗಳು ಮತ್ತು ವೇಶ್ಯಾವಾಟಿಕೆ ಪ್ರಮುಖ ಸಮಸ್ಯೆಗಳಾಗಿವೆ. 1980ರಿಂದ  ಮಹಿಳೆಯರ ವಿರುದ್ಧ ದೌರ್ಜನ್ಯವನ್ನು ತಡೆಗಟ್ಟಲು ಪ್ರಗತಿಪರ ಶಾಸನಗಳನ್ನು ಜಾರಿಗೊಳಿಸಲಾಗಿದೆ. ಆದರೆ ರಾಜಕೀಯ ಇಚ್ಚಾಶಕ್ತಿಯ ಕೊರತೆಯಿಂದ ಈ ಶಾಸನಗಳನ್ನು ಅನುಷ್ಟಾನ ಮಾಡಲಾಗುತ್ತಿಲ್ಲ. ಮಹಿಳೆಯರ ವಿರುದ್ಧ ದೌರ್ಜನ್ಯಗಳು ಹೊಸ ಸ್ವರೂಪ ಪಡೆದುಕೊಳ್ಳುತ್ತಿವೆ.  ಹಾಗಾಗಿ ಇತರ ಜನಾಂದೋಲನಗಳೊಡನೆ ಐಕಮತ್ಯ ಸ್ಥಾಪಿಸುವತ್ತ ಮಹಿಳಾ ಚಳುವಳಿ ಮುನ್ನಡೆದಿದೆ. 
ಅಂತಾರಾಷ್ಟ್ರೀಯ ಘೋಷಣೆ :  1995ರ ಬೀಜಿಂಗ್ ಘೋಷಣೆಯ ಅನುಸಾರ ಮಹಿಳೆಯರ ವಿರುದ್ಧ ದೌರ್ಜನ್ಯವನ್ನು ಪ್ರತ್ಯೇಕ ಘಟನೆಗಳಂತೆ ನೋಡಲಾಗಿದೆ. ಆದರೆ ಸಾಂಸ್ಥಿಕ ದೌರ್ಜನ್ಯ ಮತ್ತು ಅಭಿವೃದ್ಧಿ ಕುರಿತ ವಿಚಾರಗಳು ಸಮಸ್ಯೆ ಎದುರಿಸುತ್ತಿವೆ. ಸಮಾಜವಾದಿ ಮಹಿಳೆಯರ ಮುಂದೆ ವೇತನ, ನೌಕರಿ, ಉತ್ತಮ ಕಾರ್ಯಕ್ಷೇತ್ರದ ನಿಯಮಗಳು ಮತ್ತು ಜೀವನ ಮಟ್ಟದ ಸುಧಾರಣೆ ಮುಖ್ಯ ಸಮಸ್ಯೆಗಳಾಗಿವೆ. ಇಂದು ಭಾರತದಲ್ಲಿ ಕಾರ್ಯಕ್ಷೇತ್ರದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯ, ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯಗಳು ಪ್ರಮುಖ ಸವಾಲುಗಳಾಗಿವೆ. 
ಹೆಚ್ಚುತ್ತಿರುವ ಹಿಂಸಾತ್ಮಕ ಧೋರಣೆ : ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳು 1990ರ ನಂತರ ಭಾರತವನ್ನೂ ಆವರಿಸಿದ್ದು ಇದರ ಪರಿಣಾಮವಾಗಿ ಕೋಮುವಾದ, ಅಸಹಿಷ್ಣುತೆ, ಜಾತೀಯತೆ, ಪುರುಷ ಪ್ರಧಾನ ಹಿಂಸೆ ಇವೆಲ್ಲವೂ ಕೆಳಸ್ತರದ ಮಹಿಳೆಯರನ್ನು ಗಾಢವಾಗಿ ಕಾಡುತ್ತಿದೆ.  ಕರ್ನಾಟಕದ ಕರಾವಳಿ ಪ್ರದೇಶ ಸಹಿಷ್ಣುತೆ ಮತ್ತು ಶಾಂತಿಯುತ ವಾತಾವರಣಕ್ಕೆ ಪ್ರಸಿದ್ಧಿಯಾಗಿದ್ದರೂ ಇಂದು ಕೇಸರಿ ಪಡೆಗಳ ಉಗ್ರಗಾಮಿ ಧೋರಣೆಯ ಪರಿಣಾಮ ವಿಭಿನ್ನ ಜಾತಿ ಮತ್ತು ಸಮುದಾಯಗಳ ನಡುವೆ ದ್ವೇಷ ಅಸೂಯೆ ತಾಂಡವಾಡುತ್ತಿದೆ. ಜನರ ಆಹಾರ ಪದ್ಧತಿಗಳೂ ಆಕ್ರಮಣಕ್ಕೊಳಗಾಗಿದೆ. ಗೋಮಾಂಸದ ವರ್ತಕರು ಮತ್ತು ಗೋ ಸಾಗಾಣಿಕೆಯ ಸುತ್ತಲೂ ಭಯೋತ್ಪಾದನೆಯ ವಾತಾವರಣ ಸೃಷ್ಟಿಯಾಗಿದ್ದು ಗೋರಕ್ಷಕರು ವರ್ತಕರನ್ನು ಹಿಂಸಿಸುತ್ತಿರುವುದು ಹೆಚ್ಚಾಗುತ್ತಿದೆ. ಯುವಕರು ತಮ್ಮ ಸ್ನೇಹಿತರನ್ನು ಆಯ್ಕೆ ಮಾಡುವಾಗ ಜಾತಿ ಸಮುದಾಯದ ದೃಷ್ಟಿಯಿಂದಲೇ ನೋಡುವ ಅನಿವಾರ್ಯತೆ ಸೃಷ್ಟಿಯಾಗಿದೆ.  ಲವ್ ಜಿಹಾದ್, ಅಂತರ್ಜಾತಿ ವಿವಾಹ, ಅಂತರ್ಧರ್ಮೀಯ ವಿವಾಹಗಳ ವಿರುದ್ಧ ಆಕ್ರಮಣ ಹೆಚ್ಚಾಗಿದೆ. ಪಬ್ ದಾಳಿ ಮತ್ತು ಹೋಂ ಸ್ಟೇಗಳ ಮೇಲಿನ ದಾಳಿಯ ನಂತರ ಮಹಿಳೆಯರ ಬಗ್ಗೆ ಅಸಹಿಷ್ಣುತೆ ಹೆಚ್ಚಾಗಿದೆ. ಮಹಿಳೆಯರು ತಮ್ಮ ಜೀವನ ಸಂಗಾತಿಗಳನ್ನು ಆಯ್ಕೆ ಮಾಡುವುದೇ ದುಸ್ತರವಾಗಿದ್ದು, ಪ್ರವಾಸ ನಿರತ ಯವ ಸಮುದಾಯ ಆಕ್ರಮಣಕ್ಕೊಳಗಾಗಿದೆ. ಬಸ್ಸುಗಳಲ್ಲಿ, ಕಾರುಗಳಲ್ಲಿ ಪ್ರಯಾಣ ಮಾಡುವ ವಿವಿಧ ಸಮುದಾಯದ ಯುವಜನತೆ ಕೇಸರಿ ಪಡೆಗಳಿಂದ ಆಕ್ರಮಣ ಹಲ್ಲೆಗೊಳಗಾಗುತ್ತಿದ್ದಾರೆ. ಕಾಲೇಜುಗಳಲ್ಲಿ ಉದ್ಭವಿಸುತ್ತಿರುವ ಸ್ಕಾರ್ಫ್ ವಿವಾದ ಕರಾವಳಿ ಪ್ರದೇಶದಲ್ಲಿ ಮತ್ತು ಶಿವಮೊಗ್ಗೆ ಜಿಲ್ಲೆಯಲ್ಲಿ ಮುಸ್ಲಿಂ ಸಮುದಾಯದ ವಿರುದ್ಧ ಹೆಚ್ಚಾಗುತ್ತಿರುವ ಅಸಹಿಷ್ಣುತೆಗೆ ಸಾಕ್ಷಿಯಾಗಿದೆ. ಸಮಾನ ನಾಗರಿಕ ಸಂಹಿತೆ ಮತ್ತು ತಲಾಖ್ ವಿವಾದವೂ ನಿರ್ದಿಷ್ಟ ಸಮುದಾಯದ ವಿರುದ್ಧವಾಗಿಯೇ ಇದೆ. ವಿಶ್ವವಿದ್ಯಾಲಯಗಳಲ್ಲಿ ಮತ್ತು ಪ್ರಗತಿ ಪರ ಬರಹಗಾರರ ವಿರುದ್ಧ ಆಕ್ರಮಣ ಹೆಚ್ಚಾಗುತ್ತಿದೆ.  ಅಭಿವ್ಯಕ್ತಿ ಸ್ವಾತಂತ್ರ್ಯದ ವಿರುದ್ಧ ಆಕ್ರಮಣ ತೀವ್ರವಾಗುತ್ತಿದೆ. ಗೌರವ ಹತ್ಯೆ (ಖಾಪ್ ಪಂಚಾಯತ್) ಆಸಿಡ್ ದಾಳಿ, ಜಾತಿ ಪ್ರೇರಿತ ಹಲ್ಲೆ, ದಲಿತರ ಮೇಲಿನ ಆಕ್ರಮಣ, ವೈವಾಹಿಕ ಅತ್ಯಾಚಾರ, ದೇವದಾಸಿ ಪದ್ಧತಿ, ಯೋನಿ ಪರೀಕ್ಷೆಗಳು, ಸಲಿಂಗ ಕಾಮಿಗಳು ಸಮಸ್ಯೆ, ಬಾರ್ ನೃತ್ಯಗಾರ್ತಿಯರ ಸಮಸ್ಯೆ, ಕೂಡಿ ಬಾಳುವ ಸಮಸ್ಯೆಗಳು, ಮಹಿಳೆಯರ ಕಳ್ಳಸಾಗಾಣಿಕೆ, ವೇಶ್ಯಾವಾಟಿಕೆ,  ವೇತನ ಪಾವತಿಸುವಲ್ಲಿ ಮಹಿಳೆಯರ ವಿರುದ್ಧ ತಾರತಮ್ಯ ಈ ಎಲ್ಲ ಸವiಸ್ಯೆಗಳೂ ಸಾಂಸ್ಥಿಕ ಸ್ವರೂಪದ್ದಾಗಿದ್ದು ಗಂಭೀರ ಸಮಸ್ಯೆಗಳಾಗಿ ಪರಿಣಮಿಸುತ್ತಿವೆ. ಮೋದಿ ಸರ್ಕಾರದ ನೋಟು ರದ್ದತಿ ಮತ್ತು ಅಮಾನ್ಯೀಕರಣ ನೀತಿಯಿಂದ ಸಮಾಜದ ಅಪಾರ ಸಂಖ್ಯೆಯ ದುಡಿಯುವ ವರ್ಗಗಳು ನಿರ್ಗತಿಕರಾಗಿದ್ದು ಬಾಲಕಿಯರನ್ನು ಶಾಲೆಯಿಂದ ಹೊರತಂದು ಮದುವೆ ಮಾಡಲಾಗುತ್ತಿದೆ. ಬಾಲ್ಯ ವಿವಾಹ ಹೆಚ್ಚಾಗುತ್ತಿದೆ. ಮಹಿಳೆಯರ ವಿರುದ್ಧ ನಡೆಯುತ್ತಿರುವ ದೌರ್ಜನ್ಯವನ್ನು ತಡೆಗಟ್ಟುವಲ್ಲಿ ತಾತ್ಕಾಲಿಕ ಶಮನಕಾರಿ ಚಟುವಟಿಕೆಗಳು ಫಲಕಾರಿಯಾಗುವುದಿಲ್ಲ.
ಮಹಿಳಾ ಕಾರ್ಮಿಕರೊಡನೆ ಐಕಮತ್ಯ : ಭಾರತದ ಪ್ರಜಾತಂತ್ರ ವ್ಯವಸ್ಥೆಯನ್ನು ಕಲುಷಿತಗೊಳಿಸುತ್ತಿರುವ ಕೇಸರೀಕರಣ ಪ್ರಕ್ರಿಯೆಯ ಈ ಯುಗದ ಸವಾಲುಗಳನ್ನು ಎದುರಿಸಲು ಮತ್ತು ದೇಶದ ಸೆಕ್ಯುಲರ್ ತತ್ವಗಳನ್ನು ಸಂರಕ್ಷಿಸಲು ಶೋಷಿತ ಜಾತಿ ಮತ್ತು ವರ್ಗಗಳ ಐಕ್ಯತೆ ಅತ್ಯವಶ್ಯವಾಗಿದೆ. ಬುಷ್ರ್ವಾ ಮಹಿಳೆಯರು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅಚರಣೆಯ ನೆಲೆಯಲ್ಲೇ ನೋಡುತ್ತಾರೆ. ಮಹಿಳಾ ಅಸ್ಮಿತೆಯ ಹೆಸರಿನಲ್ಲಿ ವ್ಯಕ್ತಿಗತ ಸಾಧನೆಗಳನ್ನೇ ಪ್ರಧಾನವಾಗಿ ಬಿಂಬಿಸಲಾಗುತ್ತದೆ. ಆದರೆ ಸಮಾಜದ ಕೆಳಸ್ತರದ ಮಹಿಳೆಯರಿಗೆ ಈ ಸಾಧನೆಗಳು ಮರೀಚಿಕೆಯಾಗಿರುತ್ತದೆ. ಈ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಸಂಘಟಿತರಾಗಿ ಹೋರಾಡಬೇಕಿದೆ. ಲಿಂಗಾಧಾರಿತ ಸಮಸ್ಯೆಗಳನ್ನು ಪುರುಷ ಪ್ರಧಾನ ಮೌಲ್ಯಗಳು, ಜಾತಿ, ವರ್ಗ, ಪ್ರದೇಶ,ಧರ್ಮ, ಭಾಷೆ ಮತ್ತು ನವ ಉದಾರವಾದದ ಖಾಸಗೀಕರಣ ಭರಾಟೆಯ ನೆಲೆಯಲ್ಲೆ ಗಮನಿಸಬೇಕಿದೆ. 20ನೆಯ ಶತಮಾನದ ಸಮಾಜವಾದಿ ಮಹಿಳೆಯರು ಕನಸು ಕಂಡಂತೆ ಮಹಿಳೆಯರ ಮೇಲಿನ ದೌರ್ಜನ್ಯವನ್ನು ಅಂತ್ಯಗೊಳಿಸಲು ಹೋರಾಡಬೇಕಿದೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಮಹಿಳಾ ಕಾರ್ಯಕರ್ತರು ಮತ್ತು ಎಲ್ಲ ಆಂದೋಲನಗಳ ಪ್ರಗತಿಪರರು ಮೈತ್ರಿಯನ್ನು ಸ್ಥಾಪಿಸುವ ಮೂಲಕ ಮಹಿಳೆಯರ ವಿರುದ್ಧ ನಡೆಯುತ್ತಿರುವ ಸಾಂಸ್ಥಿಕ ದೌರ್ಜನ್ಯವನ್ನು ತಡೆಗಟ್ಟಬೇಕಿದೆ. ಇದು ಕೇವಲ ಮಾರ್ಚ್ 8ರ ಒಂದು ದಿನದ ಚಟುವಟಿಕೆ ಅಗಬಾರದು. ಮಹಿಳಾ ನ್ಯಾಯ ಮತ್ತು ದುಡಿಯುವ ಮಹಿಳೆಯರ ಘನತೆಯನ್ನು ಸಾಧಿಸುವವರೆಗೂ ನಮ್ಮ ಹೋರಾಟ ಮುನ್ನಡೆಯಬೇಕಿದೆ !
- ಡಾ. ರತಿ ರಾವ್       

ಅನುವಾದಿತ ಕವಿತೆ - ಅನ್ನ ಮತ್ತು ಮಲ್ಲಿಗೆ


೧೯೧೧ರ ಬ್ರೆಡ್ ಅಂಡ್ ರೋಸಸ್ ಹೋರಾಟ 

(ಜೇಮ್ಸ್ ಒಪ್ಪೆನ್‍ಹೆಮ್ ಕವಿಯ ‘ಬ್ರೆಡ್ ಅಂಡ್ ರೋಸಸ್’ ಕವನದ ಅನುವಾದ)

ಸುಂದರ ಬೆಳಗಿನಲಿ ಹೋರಾಟದ ಪಥಗಳಲಿ

ಕರಗಳ ಹಿಡಿದು ಹೊಸಲಿನಾಚೆ ನಡೆಯುತಲಿರೆ
ಸಾಲು ಸಾಲು ಕತ್ತಲ ಅಡುಗೆಯ ಗೂಡುಗಳು,
ಕಾರ್ಖಾನೆಗಳು, ಬೆಳಗಿಹವು ಒಡಲಾಳದ ದನಿಗೆ:
“ನಮಗೆ ಅನ್ನ ಬೇಕು, ಮಲ್ಲಿಗೆಯೂ ಬೇಕು.”

ಕೋಡಿ ನೀರಿನಂತೆ ಹರಿದು ಹೋರಾಟದ ಪಥಗಳಲಿ

ಪುರುಷರಿಗಾಗಿಯೂ ಯುದ್ಧವ ಕಾದೆವು; ನಮ್ಮವರವರು
ಯೋಧ ಬಾಂಧವರು. ಜೊತೆಯಾಗೇ ನಿಲ್ಲುವೆವು, ಗೆಲ್ಲುವೆವು
ಅನ್ನವು ದೇಹದ ಬಯಕೆ, ಮಲ್ಲಿಗೆ ಮನಸಿನ ಬಯಕೆ:
“ನಮಗೆ ಅನ್ನ ಬೇಕು, ಮಲ್ಲಿಗೆಯೂ ಬೇಕು.”

ಜೀವದ ಸೆಲೆಯು ಚಿಮ್ಮಿದಂಥ ಹೋರಾಟದ ಪಥಗಳಲಿ

ಜೀವವ ತೆತ್ತ ಸೋದರಿಯರು ಎಷ್ಟೋ ಲೆಕ್ಕವಿಲ್ಲ, ಲೆಕ್ಕವಿಲ್ಲ.
ಅನಾದಿ ಕಾಲದ ಅನ್ನದ ಕೂಗನು ಹಾಡುತಲಿರಲು
ಕಾಲು ಸೋತರೂ ಮನಸು ಸೋಲದು; ಹೃದಯಕ್ಕೆ ಅರಿವಿತ್ತು:
“ನಮಗೆ ಅನ್ನ ಬೇಕು, ಮಲ್ಲಿಗೆಯೂ ಬೇಕು.”

ತಲೆಯನೆತ್ತಿ ಎದೆಯನ್ನುಬ್ಬಿಸಿ ಹೋರಾಟದ ಪಥಗಳಲಿ

ನಡೆಯುತಿರಲು ಎತ್ತರದಲ್ಲಿ ನಿಲ್ಲುವೆವು, ಹಾರುವೆವು
ಹೆಣ್ಣು ಕಣ್ಣನು ತೆರೆದರೆ, ಎಲ್ಲರ ನಿದ್ದೆಯು ಸರಿದಂತೆ
ಕಾಲುಗಳು ಸೋಲುವುದಿಲ್ಲ, ದೇಹಗಳಿಗೆ ಆಲಸ್ಯವಿಲ್ಲ,
ಹತ್ತು ಜನರ ದುಡಿತ ಒಬ್ಬನ ಬಾಯಿಗಲ್ಲ, ಇಲ್ಲ, ಇಲ್ಲ.

ಜೀವನದ ಸವಿ, ಸಂಪತ್ತು ಎಲ್ಲರಿಗೂ

ಅನ್ನ ಎಲ್ಲರಿಗೂ, ಮಲ್ಲಿಗೆ ಎಲ್ಲರಿಗೂ.



- ಅನುವಾದ: ಎಸ್.ಎನ್.ಸ್ವಾಮಿ


ಸರಣಿ ಲೇಖನ - ಮಹಿಳೆ ಮತ್ತು ಮಕ್ಕಳು





[ಮಾರ್ಗರೇಟ್ ಐ. ಕೋಲ್ ಬರೆದ 
‘ಮಹಿಳೆ ಮತ್ತು ಮಕ್ಕಳು’ ಲೇಖನದ ಅನುವಾದ]

1932ರಲ್ಲಿ ಇಂಗ್ಲೆಂಡಿನ ‘ನ್ಯೂ ಫೇಬಿಯನ್ ರಿಸರ್ಚ್ ಬ್ಯೂರೊ’ ಸಂಘಟನೆಯಿಂದ ಒಂದು ತಂಡವು ಸೋವಿಯತ್ ದೇಶದ ವಿವಿಧ ಕ್ಷೇತ್ರಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಅಲ್ಲಿಗೆ ಅಲ್ಪಾವಧಿಯ ಭೇಟಿ ನೀಡಿತು. ಪುಸ್ತಕಗಳಿಂದ ಉತ್ತರ ಸಿಗದ ಅಥವಾ ಸಿಕ್ಕಿದ ಉತ್ತರದಿಂದ ತೃಪ್ತಿಯಾಗದ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಹುಡುಕುವುದೇ ಅವರ ಉದ್ದೇಶವಾಗಿತ್ತು. ಅವರು ಸ್ವಲ್ಪ ಸಮಯ ಸೋವಿಯತ್ ದೇಶದಲ್ಲಿದ್ದು ಸ್ವಂತ ಕಣ್ಣಿಂದ ನೋಡಿದ್ದನ್ನು, ತಮ್ಮ ನೇರ ಅನುಭವಕ್ಕೆ ಬಂದಿದ್ದನ್ನು ಬರೆದರು. ಅದು ‘ಸೋವಿಯತ್ ರಷ್ಯಾದ ಕುರಿತು ಹನ್ನೆರಡು ಅಧ್ಯಯನಗಳು’ ಎಂಬ ಹೆಸರಿನಲ್ಲಿ 1933ರಲ್ಲಿ ಪುಸ್ತಕ ರೂಪದಲ್ಲಿ ಪ್ರಕಟಣೆಯಾಯಿತು. ಆರ್ಥಿಕತೆ, ಹಣಕಾಸು, ಕಾರ್ಮಿಕರು, ಕೃಷಿ, ರಾಜಕೀಯ ವ್ಯವಸ್ಥೆ, ಮಹಿಳೆ ಮತ್ತು ಮಕ್ಕಳು, ವಾಸ್ತುಶಿಲ್ಪ ಮತ್ತು ನಗರ ಯೋಜನೆ, ರೇಡಿಯೊ, ಪತ್ರಿಕೆ ಹಾಗೂ ಪ್ರಕಾಶನ, ಪ್ರಾಚೀನ ಶೋಧನಶಾಸ್ತ್ರ ಮತ್ತು ಬೌದ್ಧಿಕ ಶ್ರಮಜೀವಿಗಳು, ಸಿನಿಮಾ - ಹೀಗೆ ಹನ್ನೆರೆಡು ವಿಷಯಗಳ ಬಗ್ಗೆ ಹನ್ನೆರೆಡು ಲೇಖಕರು ಬರೆದಿದ್ದರು. ಅದರಲ್ಲಿ ಮಾರ್ಗರೇಟ್ ಐ. ಕೋಲ್ ಎನ್ನುವವರು ಬರೆದ ‘ಮಹಿಳೆ ಮತ್ತು ಮಕ್ಕಳು’ ಲೇಖನದ ಅನುವಾದ ಇದು. 
ಇಂದು ಮಹಿಳೆಯರು ಎಲ್ಲಾ ರೀತಿಯ ದೌರ್ಜನ್ಯಗಳಿಗೆ ಒಳಗಾಗುತ್ತಿದ್ದಾರೆ. ಅತ್ಯಾಚಾರ, ವೇಶ್ಯಾವಾಟಿಕೆಗಳಿಗೆ ಬಲಿಯಾಗುತ್ತಿರುವವರನ್ನು ಕಾಪಾಡುವ ಬದಲು ವೇಶ್ಯಾವಾಟಿಕೆಯನ್ನು ಕಾನೂನುಬದ್ಧಗೊಳಿದುವುದು ಪರಿಹಾರವೆನ್ನುವಂತೆ ಚಿತ್ರಿಸಲಾಗುತ್ತಿದೆ. ಇನ್ನೊಂದೆಡೆ ಗೃಹಕೃತ್ಯಗಳಿಗೆ ಬಂಧಿಯಾದ ಮಹಿಳೆಯೂ ಇನ್ನೊಂದು ರೀತಿಯ ದೌರ್ಜನ್ಯಕ್ಕೆ ಒಳಗಾಗಿದ್ದಾಳೆ. ಇದೇ ಸಂದರ್ಭದಲ್ಲಿ ಮಹಿಳಾ ವಿಮುಕ್ತಿಯ ಧ್ವನಿಯೂ ಸಹ ಎಂದಿಗಿಂತಲೂ ಇಂದು ಹೆಚ್ಚು ಗಟ್ಟಿಯಾಗಿ ಕೇಳಿಬರುತ್ತಿದೆ. 
ಈ ಹಿನ್ನೆಲೆಯಲ್ಲಿ ಮಹಿಳಾ ವಿಮುಕ್ತಿಯ ಹೋರಾಟ ಏನನ್ನು ಸಾಧಿಸಬೇಕು ಮತ್ತು ನಿಜಕ್ಕೂ ಒಂದು ಸರ್ಕಾರ ಮಹಿಳೆಯರ ಪರವಾಗಿದ್ದರೆ ಯಾವ ರೀತಿಯ ಜೀವನವನ್ನು ಮಹಿಳೆಯರಿಗೆ ನೀಡಬಹುದು ಮತ್ತು ಆಕೆ ಸಮಾಜದ ಅಭಿವೃದ್ಧಿಯಲ್ಲಿ ಹೇಗೆ ಸಕ್ರಿಯವಾಗಿ, ಉಪಯುಕ್ತವಾಗಿ ಭಾಗವಹಿಸಲು ಸಾಧ್ಯ ಎನ್ನುವುದಕ್ಕೆ ಈ ಲೇಖನ ಉದಾಹರಣೆಯಾಗಬಲ್ಲದು.

ಪ್ರಾಸ್ತಾವಿಕ ನುಡಿ

ನಾನು ಸೋವಿಯತ್ ರಷ್ಯಾಗೆ ಆಗಸ್ಟ್ 1932ರಲ್ಲಿ ವಿಶೇಷ ಕಾರಣಕ್ಕಾಗಿ ಭೇಟಿ ನೀಡಿದ್ದೆ; 
1) ಮಹಿಳೆಯರು ಮತ್ತು ಮಕ್ಕಳ ಕುರಿತು ಸೋವಿಯತ್ ಯೂನಿಯನ್‍ಗೆ ಇರುವ ಧೋರಣೆಯ ಬಗ್ಗೆ ನಾನು ಇದುವರೆಗೂ ಪುಸ್ತಕಗಳಿಂದ, ಅಲ್ಲಿಗೆ ಭೇಟಿ ನೀಡಿದ ಇತರರಿಂದ ತಿಳಿದುಕೊಂಡಿದ್ದಕ್ಕೆ ಸ್ವಂತ ಅನುಭವದಿಂದ ಮತ್ತಷ್ಟು ಸೇರಿಸುವುದು; 2) ಈ ಧೋರಣೆಯನ್ನು ಯಾವ ಮಟ್ಟಕ್ಕೆ ಮತ್ತು ಯಾವ ಹಂತಕ್ಕೆ ಆಚರಣೆಯಲ್ಲಿ ತಂದಿದೆ ಎನ್ನುವುದನ್ನು ಎಷ್ಟು ಸಾಧ್ಯವೋ ಅಷ್ಟೂ ಗಮನಿಸುವುದು. 
ಸಹಜವಾಗಿಯೇ ನಮಗಿದ್ದ ಸಮಯದಲ್ಲಿ ಇಂತಹ ವೈವಿಧ್ಯಮಯವಾದ, ಅಸಂಖ್ಯಾತ ಚಟುವಟಿಕೆಗಳಲ್ಲಿ ಕೇವಲ ಕೆಲವು ಸ್ಯಾಂಪಲ್‍ಗಳನ್ನು ಮಾತ್ರ ನೋಡಬಹುದು. ನಾನು ಲೆನಿನ್‍ಗ್ರಾದ್, ಮಾಸ್ಕೊ ಮತ್ತು ಉಕ್ರೈನ್‍ಗಳಿಗೆ ಮಾತ್ರ ಭೇಟಿ ನೀಡಿದ್ದೆ; ಆ ಸ್ಥಳಗಳಲ್ಲೂ ಸಹ, ಅಷ್ಟು ವಿಸ್ತಾರವಾದ ಪ್ರಯೋಗದಲ್ಲಿ, ವಿಶಾಲವಾದ ಪ್ರದೇಶದಲ್ಲಿ, ಆಡಳಿತದಲ್ಲಿ ಅಜಗಜಾಂತರ ವ್ಯತ್ಯಾಸಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಗುಣಾತ್ಮಕ ವ್ಯತ್ಯಾಸಗಳು ಇರತ್ತವೆಯೆಂದು ನನಗೆ ಮನದಟ್ಟಾಗುವಷ್ಟು (ನಾನು ಅದನ್ನು ಮೊದಲೇ ನಿರೀಕ್ಷಿಸಿರದಿದ್ದರೂ ಸಹ) ನೋಡಿದೆ; ಅದರಲ್ಲೂ ಕೆಲಸಗಾರನ ವ್ಯಕ್ತಿತ್ವವು ತುಂಬಾ ಮುಖ್ಯವಾಗುವ ಮಕ್ಕಳ ನಡುವಿನ ಕೆಲಸದಲ್ಲಿ ಎದ್ದು ಕಾಣಿಸುತ್ತಿತ್ತು. ಆದ್ದರಿಂದ ಸೋವಿಯತ್ ಯೂನಿಯನ್ ಮಹಿಳೆಯರು ಮತ್ತು ಮಕ್ಕಳಿಗೆ ಏನನ್ನು ಮಾಡುತ್ತಿದೆ ಎನ್ನುವುದಕ್ಕೆ ಅಂಕಿಅಂಶಗಳ ಚಿತ್ರಣ ನೀಡಲು ಸಾಧ್ಯವಿಲ್ಲ. 
ಇಲ್ಲಿ ಯಾರಾದರು ಏನು ಮಾಡಲು ಸಾಧ್ಯವೆಂದರೆ ಮತ್ತು ನಾನು ಏನನ್ನು ಮಾಡಲು ಪ್ರಯತ್ನಪಟ್ಟಿರುವೆ ಎಂದರೆ, ಮೊದಲಿಗೆ ಅಲ್ಲಿ ಅಂತರ್ಗಾಮಿಯಾಗಿ ಕೆಲಸ ಮಾಡುವ ವಿಚಾರಗಳು ಮತ್ತು ಉದ್ದೇಶಗಳ (ಅದು ಬಹಳ ಮುಖ್ಯವಾದದ್ದು) ಕುರಿತು ಒಂದು ಚಿತ್ರಣ ನೀಡುವುದು; ಎರಡನೆಯದಾಗಿ, ಆ ವಿಚಾರಗಳನ್ನು ವಾಸ್ತವಗೊಳಿಸಲು ಕೇಂದ್ರದಲ್ಲಿ ಮಾಡಿರುವ ಸಾಮಾನ್ಯ ನಿಯಮಗಳ ಕುರಿತು ಒಂದು ವರದಿ ನೀಡುವುದು; ಮೂರನೆಯದಾಗಿ ಅವರ ಪ್ರಾಯೋಗಿಕ ಕೆಲಸಗಳು ಮತ್ತು ಅದರ ಪ್ರಭಾವಗಳ ಕುರಿತು ನನ್ನ ಅನುಭವಗಳನ್ನು ತಿಳಿಸುವುದು. ಕೊನೆಯ ಅಂಶಕ್ಕೆ ಸಂಬಂಧಪಟ್ಟಂತೆ, ನಾನು ಸ್ವತಃ ಹೋಗಲಾಗದ ಒಂದೆರಡು ಸಂಸ್ಥೆಗಳ ಬಗ್ಗೆ ಟಿಪ್ಪಣಿಗಳನ್ನು ನೀಡಿದ ಶ್ರೀಮತಿ ಪ್ರಿಟ್ ಹಾಗೂ ನನ್ನ ಸಹ ಲೇಖಕರಿಗೆ ನಾನು ಋಣಿಯಾಗಿದ್ದೇನೆ. ಇದನ್ನು ಬಿಟ್ಟರೆ, ನನಗೆ ವೈಯಕ್ತಿಕವಾಗಿ ಹೇಳದೇ ಇದ್ದದ್ದನ್ನು ಮತ್ತು ತೋರಿಸದೇ ಇದ್ದದ್ದನ್ನು ಇಲ್ಲಿ ಸೇರಿಸಿಲ್ಲ; ನನ್ನ ಬಾತ್ಮೀದಾರರಿಗೆ ಭಿನ್ನಾಭಿಪ್ರಾಯ ಬಂದಲ್ಲಿ – ಕೆಲವೊಮ್ಮೆ ಬಾತ್ಮೀದಾರರಿಗೆ ಭಿನ್ನಾಭಿಪ್ರಾಯ ಬರುತ್ತದೆ – ಆ ಭಿನ್ನಾಭಿಪ್ರಾಯಗಳನ್ನು ದಾಖಲಿಸಿದ್ದೇನೆ ಮತ್ತು ಎಲ್ಲೆಲ್ಲಿ ಸಾಧ್ಯವೊ ಅಲ್ಲೆಲ್ಲಾ ಸರಿಯಾದ ಉತ್ತರವನ್ನು ಕಂಡುಕೊಳ್ಳಲು ಪ್ರಯತ್ನಿಸಿದ್ದೇನೆ.

I. ಸಾಮಾನ್ಯ ಪರಿಗಣನೆಗಳು
ಸೋವಿಯತ್ ಯೂನಿಯನ್‍ನಲ್ಲಿ ಮಹಿಳೆಯರು ಮತ್ತು ಮಕ್ಕಳ ಜೀವನಕ್ಕೆ ಅತ್ಯಂತ ಪ್ರಮುಖವಾದ ಎರಡು ಸಾಮಾನ್ಯ ಸಂಗತಿಗಳಿವೆ; ಅದು ಕೇವಲ ಆಳ್ವಿಕರ ಧೋರಣೆಯ ಮೇಲಷ್ಟೇ ಅಲ್ಲ, ದಿನನಿತ್ಯದ ಏರ್ಪಾಡುಗಳ ಮೇಲೂ ಪರಿಣಾಮ ಬೀರುವುದರಿಂದ ಅದನ್ನು ನೋಡುವ ಎಲ್ಲಾ ವಿದೇಶಿ ವೀಕ್ಷಕರಿಗೂ ಒಳ್ಳೆಯ ಅಭಿಪ್ರಾಯ ಮೂಡುತ್ತದೆ. ಮೊದಲನೆಯದಾಗಿ, ರಷ್ಯನ್ ಮಹಿಳೆಯು ಸಾಮಾನ್ಯ ನಿಯಮದಂತೆ ಪುರುಷನಿಗೆ ಸರಿಸಮಾನವಾಗಿ ಮತ್ತು ಸಮಾನತೆಯೊಂದಿಗೆ ಕೆಲಸ ಮಾಡುತ್ತಾಳೆ. ಇದರಿಂದಾಗಿ ಅನೇಕ ಪ್ರಮುಖವಾದ ಪರಿಣಾಮಗಳು ಉಂಟಾಗಿವೆ.
 ಮೊದಲಿಗೆ, ಪಾಶ್ಚಿಮಾತ್ಯ ದೇಶಗಳು ಎದುರಿಸುತ್ತಿರುವ ಕಷ್ಟಗಳ ಸರಮಾಲೆಯನ್ನು ಸಮಾನ ವೇತನವು ಒಂದೇ ಹೊಡೆತಕ್ಕೆ ನಿಮೂರ್ಲನೆ ಮಾಡಿದೆ. ಇದರರ್ಥ ಗಣಿತದ ಲೆಕ್ಕಾಚಾರದಲ್ಲಿ ಸಮಾನವೆಂದಲ್ಲ; ಅಲ್ಲಿ ಹಾಗಿಲ್ಲ ಮತ್ತು ಸೋವಿಯತ್ ಕೆಳಗೆ ಕೆಲಸ ಮಾಡುವ ಯಾವ ಕಾರ್ಮಿಕನಿಗೂ ಗಣಿತದ ಲೆಕ್ಕಾಚಾರದಲ್ಲಿ ಸಮಾನ ವೇತನವಿಲ್ಲ. ಆದರೆ ಅಲ್ಲಿ ಸಮಾನತೆಯ ಭಾವನೆಯಿದೆ; ಇದು ಮಹಿಳೆಯನ್ನು ಅಗ್ಗದ ಕಾರ್ಮಿಕಳೆಂಬ ಭಾವನೆಯನ್ನು ತೊಡೆದು ಹಾಕಿ, ಸ್ತ್ರೀ-ಪುರುಷರ ನಡುವೆ ಉತ್ತಮ ಸಂಬಂಧ ಬೆಳೆಯಲು ಅಡ್ಡಬರುವ ತೊಡಕುಗಳನ್ನು ತೊಡೆದು ಹಾಕುತ್ತದೆ. ನಾನು ಹಲವಾರು ಬಾರಿ ಕೇಳಿದ ಹಾಗೆ, ಅಲ್ಲಿ ಕಡಿಮೆ ಸಂಬಳಕ್ಕೆ ಪುರುಷನನ್ನು ಅರ್ಧಾವಧಿಗೋ ಅಥವಾ ಸೂಕ್ತ ಮಹಿಳೆಯನ್ನು ಪೂರ್ಣಾವಧಿಗೋ ಕೆಲಸಕ್ಕೆ ತೆಗೆದುಕೊಳ್ಳಲು ಸಾಧ್ಯವಿಲ್ಲ.
ಎರಡನೆಯದಾಗಿ, ರಷ್ಯನ್ ಮಹಿಳೆಯು ಕ್ರಾಂತಿಗೆ ಮುನ್ನ ಮತ್ತು ಕ್ರಾಂತಿಯ ಸಮಯದಲ್ಲಿ ಕೆಲಸ ಮಾಡಿದ ಹಾಗೆಯೇ ಈಗಲೂ ಕೆಲಸವನ್ನು ಮಾಡುತ್ತಿದ್ದಾಳೆ; ಹಾಗೆ ಮಾಡಬೇಕೆಂಬ ನಿರೀಕ್ಷೆಯೂ ಇದೆ. ಮತ್ತೆ, ರಷ್ಯಾದಲ್ಲಿ ಪ್ರತಿಯೊಬ್ಬ ಮಹಿಳೆಗೂ ಗೃಹಕೃತ್ಯದಾಚೆಗೆ ಉದ್ಯೋಗವಿದೆ ಎಂದು ನಾನು ಹೇಳುತ್ತಿಲ್ಲ; ಸಂಬಳಕ್ಕೆ ಕೆಲಸ ಮಾಡದ ಕೆಲವು ಮಹಿಳೆಯರೂ ಇದ್ದಾರೆ. ಅವರು ಬೇರೆ ಕೆಲಸಗಳನ್ನು ಮಾಡುತ್ತಾರೆ; ಕೆಲವು ಕಾಲ ಸಂಬಳಕ್ಕೆ ಕೆಲಸ ಮಾಡುವುದನ್ನು ಬಿಟ್ಟುಬಿಡುವ ಕೆಲವು (ಹೆಚ್ಚಾಗುವ ಸಾಧ್ಯತೆಗಳೇ ಹೆಚ್ಚು) ಮಹಿಳೆಯರಿದ್ದಾರೆ.
ಸೋವಿಯತ್ ಯೂನಿಯನ್ನಿನ ಮೂಲಭೂತ ಆದರ್ಶಗಳಲ್ಲಿ ಒಂದು ಎಂದರೆ, (ಅದು ಫ್ಯಾಸಿಸಂನ ಆದರ್ಶಕ್ಕಿಂತ ವಿಭಿನ್ನವಾಗಿದೆ ಎನ್ನುವುದನ್ನು ಗಮನಿಸಬೇಕು) ಸರ್ಕಾರವು ಭವಿಷ್ಯದಲ್ಲಿ ಮಹಿಳೆಯರ ಸಹಕಾರವನ್ನು ತನ್ನ ಸಾರ್ವಜನಿಕ ಆರ್ಥಿಕತೆಯಲ್ಲಿ ಬಯಸುತ್ತದೆಯೇ ಹೊರತು ಕೇವಲ ವ್ಯಕ್ತಿಗತ ಉತ್ಪಾದನೆ ಅಥವಾ ಮುಂದಿನ ಜನಾಂಗದ (ಮಕ್ಕಳ) ಪೋಷಕಳಾಗಿ ಅಲ್ಲ. ಸ್ವಲ್ಪಮಟ್ಟಿಗೆ ಇದರ ಬೆಳಕಿನಲ್ಲಿ ಮಗುವಿನ ಜನನ ಮತ್ತು ಬಾಲ್ಯದ ವರ್ಷಗಳಿಗೆ ರಷ್ಯಾ ನೀಡುವ ಸವಲತ್ತುಗಳನ್ನು ನೋಡಬೇಕು. ಸೋವಿಯತ್ ಯೂನಿಯನ್ ಮಹಿಳೆಯನ್ನು ಪ್ರಜೆಯಾಗಿ ಮತ್ತು ಕಾರ್ಮಿಕಳಾಗಿ ನೋಡುವಂತೆ ತಾಯಿಯಾಗಿಯೂ ನೋಡುತ್ತದೆ; ಮತ್ತೆ ತಾಯ್ತನದ ಕೆಲಸವು ಪ್ರಜೆ ಹಾಗೂ ಕಾರ್ಮಿಕ ಕೆಲಸಗಳಿಗೆ ಅಡ್ಡಿಯಾಗದಂತೆ ನೋಡಿಕೊಳ್ಳಲು ಬಹಳ ಶ್ರಮವಹಿಸುತ್ತದೆ. 
ಈ ಧೋರಣೆಯು, ‘ಕುಟುಂಬ ಜೀವನದ ಆದರ್ಶ’ ಎಂದು ಸಾಮಾನ್ಯವಾಗಿ ಕರೆಯುವ ಕುಟುಂಬದ ಮೇಲೆ ಮತ್ತು ಒಂದೊಂದೆ ಮನೆಗಳ ಜೀವನದ ಮೇಲೆ ಬೀರುವ ಪರಿಣಾಮವನ್ನು ನಂತರದಲ್ಲಿ ನೋಡೋಣ; ಇಲ್ಲಿ ನಾವು ಗಮನಿಸಬೇಕಾದ್ದೇನೆಂದರೆ, ಇಂಗ್ಲೆಂಡಿನಲ್ಲಿ ಮಧ್ಯಮ ಹಾಗೂ ಮೇಲ್ವರ್ಗದಲ್ಲಿ ಕಂಡುಬರುವಂತೆ ನಿಜಕ್ಕೂ ನಿರುದ್ಯೋಗಿಯಾದ ಅಥವಾ ಅಗತ್ಯವಿರುವಷ್ಟು ಉದ್ಯೋಗವಿರದ ಮಹಿಳೆಯರನ್ನು ರಷ್ಯಾದಲ್ಲಿ ಕಾಣಲು ಸಾಧ್ಯವಿಲ್ಲ. ಮಕ್ಕಳೆಲ್ಲ ಬೆಳೆದ ಮೇಲೆ ಆಕೆಯ ಅಗತ್ಯವಿಲ್ಲ ಎನ್ನುವಂತಹ, ಅವಳಿಗೆ ಉದ್ಯೋಗ ಮಾಡಲು ಕಲಿಸದೇ ಹೋದದ್ದರಿಂಲೋ ಅಥವಾ ಅದನ್ನು ಮರೆತುಬಿಡುವಂತೆ ಮಾಡಿದ್ದರಿಂದಲೋ ಅವಳ ಸೇವೆ ಸಮುದಾಯಕ್ಕೆ ದೊರಕದಂತಹ ಮಧ್ಯವಯಸ್ಕ ಮಹಿಳೆಯ ಸಮಸ್ಯೆಯು ಬಹುಶಃ ಅಲ್ಲಿ ಉದ್ಭವಿಸಲಾರದು.
ಎರಡನೇ ನಿರ್ದೇಶನ ಸೂತ್ರವು ಬಹಳ ಸರಳವಾಗಿದೆ ಮತ್ತು ಅದನ್ನು ಪದೇ ಪದೇ ಹೇಳಲಾಗಿದೆ. ಅದೇನೆಂದರೆ, ಒಟ್ಟಾರೆಯಾಗಿ ಸೋವಿಯತ್ ಯೂನಿಯನ್ ಬೆಳೆಯುವ ಜನಾಂಗದ ಬಗ್ಗೆ ಹೆಚ್ಚು ಕಾಳಜಿ ವಹಿಸುತ್ತದೆ ಮತ್ತು ಅದಕ್ಕೇ ಹೆಚ್ಚು ಖರ್ಚು ಮಾಡುತ್ತದೆ. ಈಗ ಸೋವಿಯತ್ ರಷ್ಯಾ ಒಂದು ಬಡರಾಷ್ಟ್ರ; ಅದು ತನ್ನ ಸಾಮೂಹಿಕ ಆದಾಯದ ದೊಡ್ಡ ಭಾಗವನ್ನು ಹೂಡಿಕೆಯಂತಹ ಖರ್ಚುಗಳಿಗೆಂದೇ ಮೀಸಲಿಡುತ್ತಿದೆ. ಆದರೆ ಮಕ್ಕಳ ಖರ್ಚಿನ ವಿಷಯದಲ್ಲಿ ಆದಷ್ಟೂ ಉಳಿತಾಯ ಮಾಡುವುದಿಲ್ಲ; ಬದಲಿಗೆ ಕಾರ್ಮಿಕರಿಗೆ ಅತ್ಯಗತ್ಯವಾದ ಅತ್ಯಂತ ಮೂಲಭೂತವಾದ ಅವಶ್ಯಕತೆಗಳನ್ನು ಪೂರೈಸಿದ ಕೂಡಲೇ ತನ್ನೆಲ್ಲಾ ಸಂಪನ್ಮೂಲಗಳನ್ನು ಭವಿಷ್ಯದ ನಾಗರಿಕರಿಗೆ ಒದಗಿಸಲು ಪ್ರಯತ್ನಿಸುತ್ತದೆ. ಸೋವಿಯತ್ ಯೂನಿಯನ್ನಿನ ಈ ಧೋರಣೆಗೂ, ಹತ್ತೊಂಬತ್ತನೇ ಶತಮಾನದ ಮೊದಲಾರ್ಧದಲ್ಲಿದ್ದ ಇಂಗ್ಲೆಂಡಿನ ಧೋರಣೆಗೂ – ಆಗ ಹೂಡಿಕೆ ಸರಬರಾಜು ಹೆಚ್ಚುಕಡಿಮೆ ಒಂದೇ ರೀತಿಯಿದ್ದಂಥ ಸಮಯ – ಇರುವ ವ್ಯತಾಸವು ಯಾವುದೇ ಚರಿತ್ರಾಕಾರನಿಗೆ ಕೆಲವು ಸೂಚನೆಗಳನ್ನು ಸ್ಪಷ್ಟವಾಗಿ ನೀಡುತ್ತದೆ. ಸಣ್ಣಪ್ರಮಾಣದಲ್ಲಿ ನೋಡಿದರೆ, ಈಗ ನಮ್ಮ ದೇಶದಲ್ಲಿ ಸೆಕೆಂಡರಿ ಶಿಕ್ಷಣವನ್ನು ಮೊಟಕುಗೊಳಿಸುತ್ತಿರುವಾಗ, ಸೋವಿಯತ್ ಯೂನಿಯನ್ ಶಿಶುವಿಹಾರದಿಂದಾಚೆಗೂ ಶಾಲಾ ಜೀವನವನ್ನು 10 ವರ್ಷಗಳಿಗೆ, ಅಂದರೆ, ಏಳರಿಂದ ಹದಿನೇಳನೇ ವಯಸ್ಸಿನವರೆಗೂ ವಿಸ್ತರಿಸುವ ಯೋಜನೆಯೊಂದಕ್ಕೆ ಕೈಹಾಕುತ್ತಿದೆ; ಇದು ವಾಸ್ತವ ಸಂಗತಿ.
ಮುಂದಿನ ಪುಟಗಳಲ್ಲಿ, ಮಹಿಳೆಯರಿಗಿಂತ ಹೆಚ್ಚಾಗಿ ಮಕ್ಕಳನ್ನು ಕುರಿತೇ ಚರ್ಚೆ ನಡೆಯುತ್ತದೆ. ಇದಕ್ಕೆ ಕಾರಣವೆಂದರೆ, ರಷ್ಯಾದಲ್ಲಿ ಮಕ್ಕಳಿಗಾಗಿ ವಿಶೇಷ ಪರಿಣಿತಿ ಹೊಂದಿದ ಸಂಸ್ಥೆಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ನೋಡಬಹುದು; ಅಲ್ಲಿ ಮಹಿಳೆಯರನ್ನು ಕೆಲವೊಂದು ನಿಶ್ಚಿತವಾದ ವಿಷಯಗಳಲ್ಲಿ ಬಿಟ್ಟರೆ ಸಾಮಾನ್ಯವಾಗಿ ಪುರುಷರಿಗಿಂತ ತೀರಾ ವಿಭಿನ್ನವಾಗಿ ನೋಡುವುದಿಲ್ಲ. ನಾನು ಎಲ್ಲಾ ಕಡೆಗಳಲ್ಲೂ ಮಹಿಳೆಯರನ್ನು ಕಂಡೆ; ಎಲ್ಲಾ ರೀತಿಯ ಸಂಸ್ಥೆಗಳ ಕಛೇರಿಗಳಲ್ಲಿ ಅತ್ಯುನ್ನತವಲ್ಲದಿದ್ದರೂ ಉನ್ನತ ಹುದ್ದೆಗಳಲ್ಲಿ ನೋಡಿದೆ; ಅಲ್ಲಿನ ಜನರಿಗೆ ಇಂಗ್ಲಿಷ್ ಜನರಂತೆ ಯಾವ ಕಛೇರಿಯಲ್ಲಿ ಹೆಚ್ಚು ಮಹಿಳೆಯರಿದ್ದಾರೆ, ಹಾಗಿದ್ದರೆ ಎಷ್ಟು ಸಂಖ್ಯೆಯಲ್ಲಿದ್ದಾರೆ ಎನ್ನುವುದರ ಬಗ್ಗೆ ಅಷ್ಟೇನೂ ಆಸಕ್ತಿಯಿಲ್ಲ. 
ಅವರ ದೃಷ್ಟಿಕೋನವೇ ಬೇರೆ. ಎಷ್ಟರಮಟ್ಟಿಗೆ ‘ನೆರೆಹೊರೆ ಸಂಘಟನೆ’ಗಳು, ಶಾಲೆಗಳಲ್ಲಿರುವ ‘ಪೋಷಕ ಸಮಿತಿ’ಗಳಂತಹ ಸಮಿತಿಗಳು ಪುರುಷರಿಗಿಂತ ಮಹಿಳೆಯರನ್ನು ಎಷ್ಟರಮಟ್ಟಿಗೆ ಒಳಗೊಂಡಿರುತ್ತವೆ, ಎಷ್ಟರಮಟ್ಟಿಗೆ ಹಿತಾಸಕ್ತಿಗಳ ಸಹಜ ಭಿನ್ನತೆಗಳು ಬಂದಿವೆ – ಇದೆಲ್ಲವೂ ಸಮಾಜಶಾಸ್ತ್ರಜ್ಞನಿಗೆ ಬಹಳ ಕುತೂಹಲಕಾರಿಯಾದ ಸಂಶೋಧನೆ; ಆದರೆ ಅದಕ್ಕೆ ದೇಶದಲ್ಲಿ ಹೆಚ್ಚು ಕಾಲ ಉಳಿಯಬೇಕು ಮತ್ತು ಅಲ್ಲಿನ ಪರಿಸ್ಥಿತಿಗಳ ಬಗ್ಗೆ ಬಹಳಷ್ಟು ವಿಸ್ತಾರವಾದ ಹಾಗೂ ಆಳವಾದ ಪರಿಚಯ ಮಾಡಿಕೊಳ್ಳಬೇಕು. ಒಬ್ಬ ಲೇಖಕ ತನಗೆ ಸಿಕ್ಕಿದ ಸಮಯದಲ್ಲಿ ತಾನು ಗಮನಿಸಿದಷ್ಟನ್ನು ಮಾತ್ರ ಬರೆಯಬಲ್ಲ.
ಸೋವಿಯತ್ ಯೂನಿಯನ್, ಮಕ್ಕಳ ಒಟ್ಟಾರೆ ಜೀವನದ ಬಗ್ಗೆ – ಪ್ರಸವಪೂರ್ವ ಕಾಲದಿಂದ ಶಾಲಾ ದಿನಗಳು ಮುಗಿಯುವವರೆಗೂ ಸಾಮೂಹಿಕವಾಗಿ ಕಾಳಜಿ ವಹಿಸುತ್ತದೆ. ಆದರೆ ಈ ಕಾಳಜಿಯು ಕೇವಲ ಕೇಂದ್ರೀಕೃತ ಕ್ರಿಯೆಯಲ್ಲೇ ಅಭಿವ್ಯಕ್ತಿಗೊಳ್ಳುವುದಿಲ್ಲ. ನಾರ್ಕೊಮ್ಸ್‍ದ್ರಾವ್‍ನ – ಆರೋಗ್ಯದ ಜನತಾ ನಿರ್ದೇಶನಾಲಯ ಮತ್ತು ನಾರ್ಕೊಮ್‍ಪ್ರೊವ್‍ನ - ಶಿಕ್ಷಣದ ಜನತಾ ನಿರ್ದೇಶನಾಲಯ (Peoples Commission for Education) ಗಳಂತಹ ಕೇಂದ್ರಸಂಸ್ಥೆಗಳೇ ಬಹಳಷ್ಟರಮಟ್ಟಿಗೆ ವಿವಿಧ ರಿಪಬ್ಲಿಕ್*ಗಳಲ್ಲಿ (*ಸೋವಿಯತ್ ಯೂನಿಯನ್ ಉಕ್ರೇನ್, ಬೈಲೊರಷಿಯಾ, ಮುಂತಾದ ದೇಶಗಳನ್ನು ಒಳಗೊಂಡ ಸಮಾಜವಾದಿ ರಾಷ್ಟ್ರಗಳ ಒಕ್ಕೂಟ. ಒಂದೊಂದು ರಾಷ್ಟ್ರವನ್ನೂ ರಿಪಬ್ಲಿಕ್ ಎಂದು ಕರೆಯುತ್ತಾರೆ.) ವಿಕೇಂದ್ರೀಕೃತವಾಗಿವೆ; ಆ ಸಂಸ್ಥೆಗಳು ಕೆಲವು ನಿರ್ದಿಷ್ಟವಾದ ಗುಣಮಟ್ಟಗಳನ್ನು, ಸೂತ್ರಗಳನ್ನು ಮತ್ತು ಸಾಮಾನ್ಯ ನಿಯಮಗಳನ್ನು ರೂಪಿಸುತ್ತವೆ. ಆದರೆ ಮೇಲ್ನೋಟಕ್ಕೆ ಬಹಳ ನಿರ್ದಾಕ್ಷಿಣ್ಯವೆಂದು ಕಾಣುವ ಈ ಸಾಮಾನ್ಯ ಗುಣಮಟ್ಟಗಳನ್ನು ಬಹಳಷ್ಟರ ಮಟ್ಟಿಗೆ ರಷ್ಯನ್ ಜೀವನದ ಬೇರೆ ವಿಭಾಗಗಳಂತೆಯೇ ಇಲ್ಲಿಯೂ ಸಹ ವಿಕೇಂದ್ರೀಕೃತವಾಗಿ ಜಾರಿಗೊಳಿಸುತ್ತಾರೆ: ಈ ವಿಕೇಂದ್ರೀಕರಣವು ನೋಡುವವರ ಅರಿವಿಗೂ ಮೀರಿರುತ್ತದೆ. 
ನಾನು ಪದೇ ಪದೇ ಕೇಳಿದ್ದೇನೆಂದರೆ (ಬೊಲ್‍ಷೆವೊ ಎಂದೇ ಕರೆಯುವ ‘ಮಹಾ ಪರಿವರ್ತನಾ ಪ್ರಯೋಗ’ದಲ್ಲಿ ಕೇಳಿದ ಹಾಗೆ): “ಅಂತಹದೊಂದು ನಿಯಮಾವಳಿಯು ಬಹಳ ಕಷ್ಟಕರವೆನಿಸುವುದಿಲ್ಲವೇ ಅಥವಾ ಅಂತಹದೊಂದು ಪರಿಸ್ಥಿತಿಯಲ್ಲಿ ಅದು ಸರಿಯಾಗಿ ಕೆಲಸ ಮಾಡುವುದಿಲ್ಲ ಎನಿಸಲಿಲ್ಲವೇ? ಅದಕ್ಕೆ ಅವರು ಪ್ರತಿಕ್ರಿಯೆಯಾಗಿ ಆಶ್ಚರ್ಯ (ಅದು ಬಾಷೆಯ ವ್ಯತ್ಯಾಸದಿಂದ ಮರೆಮಾಚಲು ಸಾಧ್ಯವಿಲ್ಲ ಅಥವಾ ತಪ್ಪಾರ್ಥ ಮಾಡಿಕೊಳ್ಳುವ ಸಾಧ್ಯತೆಯೂ ಇಲ್ಲ) ವ್ಯಕ್ತಪಡಿಸಿದರು ಮತ್ತು ಅವರ ಉತ್ತರ: “ಆದರೆ ಅಂತಹ ಪರಿಸ್ಥಿತಿಯಲ್ಲಿ ಅದನ್ನು ಜಾರಿಮಾಡುವುದಿಲ್ಲ. ‘ಸಾಮೂಹಿಕ’ಕ್ಕೆ (ಅಥವಾ ಫ್ಯಾಕ್ಟರಿ ಸಮಿತಿ ಅಥವಾ ಅಂತಹ ಯಾವುದಾದರೂ ಸಮಿತಿಗೆ) ವಿಷಯ ಗೊತ್ತಿರುತ್ತದೆ ಮತ್ತು ಅದು ಸರಿಯಾದ ಕ್ರಮವನ್ನು ತೆಗೆದುಕೊಳ್ಳುತ್ತದೆ.” ಈ ಸಾಮೂಹಿಕವು ಯಾವುದೇ ಸಂಖ್ಯೆಯ ತಂಡವಾಗಿರಬಹುದು; ಅದು ಯಾವ ಪ್ರದೇಶ ಮತ್ತು ಘಟಕದೊಳಗೆ ಕೆಲಸ ಮಾಡುತ್ತದೋ ಅದಕ್ಕೆ ತಕ್ಕಂತಿರುತ್ತದೆ. ಮಕ್ಕಳ ಜೀವನದ ಮೇಲೆ ಯುಎಸ್‍ಎಸ್‍ಆರ್‍ನ ನಿಯಂತ್ರಣವು ದೇಶದೆಲ್ಲೆಡೆ ಇರುವ ಸಣ್ಣ ಸಾಮೂಹಿಕ ತಂಡಗಳ ಮೇಲೆಯೇ ಅವಲಂಬಿತವಾಗಿದೆ; ಏಕೆಂದರೆ ಅವುಗಳಿಗೆ ಪ್ರತಿಯೊಂದು ವಿಷಯಗಳ ನಿಜವಾದ ಪರಿಸ್ಥಿತಿಗಳ ಬಗ್ಗೆ ತಿಳಿದಿರುತ್ತದೆ ಮತ್ತು ಏನು ಮಾಡಬೇಕೆಂಬುದು ಅವುಗಳಿಗೆ ತಿಳಿದಿರಲೇಬೇಕು ಎಂದು ಭಾವಿಸಲಾಗಿದೆ. ನಾವು ಸೋವಿಯತ್ ಯೂನಿಯನ್ ಈ ವಿಭಾಗದಲ್ಲಷ್ಟೇ ಅಲ್ಲದೆ ಬೇರೆ ವಿಭಾಗಗಳಲ್ಲೂ ಮಾಡುವ ಕೆಲಸವನ್ನು ಅರ್ಥಮಾಡಿಕೊಳ್ಳಬೇಕೆಂದರೆ ಮೇಲಿನ ಸಂಗತಿಯನ್ನು ಸರಿಯಾಗಿ ವಿಮರ್ಶಿಸುವುದು ಬಹಳ ಅವಶ್ಯಕ.
ಎಸ್.ಎನ್.ಸ್ವಾಮಿ    
(ಮುಂದಿನ ಸಂಚಿಕೆಯಲ್ಲಿ ಮುಂದುವರೆಯುತ್ತದೆ)