Sunday 20 August 2017

Poem - Beyond a piece of cloth

May I be in burkha
Or may I be in shorts
Can any ensure me,
A lone walk in a safe night?

May I be an old
Or may I be an infant
Can any assure me
An escape from rapes?

And what do you blame?
The Deeper necks or smaller tops?
Longer slits or shorter skirts?
High heels or torn jeans?
Lipstick shades or tattooed arms?

Dear educated and uneducated conservatists,
Do realise
I am beyond a piece of cloth
In fact much beyond!

      - Nileena Thomas

Saturday 19 August 2017

ಅನುವಾದಿತ ಕಥೆ - ಸಮಾಗಮ


[ತೆಲುಗಿನ ಪ್ರಖ್ಯಾತ ಲೇಖಕಿಯಾದ ಓಲ್ಗಾರವರ "ವಿಮುಕ್ತಕಥಾಸಂಕಲನದಿಂದ "ಸಮಾಗಮಎಂಬ  ಕಥೆಯನ್ನು ಆರಿಸಲಾಗಿದೆ ಸಂಕಲನದಲ್ಲಿರುವ ಎಲ್ಲ ಕಥೆಗಳು ಸೀತೆಗೆ ಸಂಬಂಧಿಸಿದಂತೆ ಹೊಸ ದೃಷ್ಟಿಕೋನದಿಂದ ಬರೆಯಲಾಗಿದೆ.]
ಓಲ್ಗಾ 

ಸೂರ್ಯಾಸ್ತಮಾನದ ಸಮಯ. ಅರಣ್ಯ ಒಂದು ಕಡೆ ಕೆಂಪಾದ ಕಾಂತಿಯಿಂದ, ಇನ್ನೊಂದೆಡೆ ಆವರಿಸುತ್ತಿದ್ದ ಕತ್ತಲಿನ ಕಪ್ಪ ಹೊಗೆಯಿಂದ ಉರಿಯುತ್ತಿರುವ ಕೆಂಡದಂತಿತ್ತು. ಪಕ್ಷಿಗಳು ಗುಂಪು ಗುಂಪಾಗಿ ಗೂಡು ಸೇರುತ್ತಿದ್ದವು. ಅವುಗಳ ಕಲರವದಿಂದ ಕಾಡೆಲ್ಲ ಶಬ್ದದಿಂದ ತುಂಬಿತ್ತು. ಆ ದಟ್ಟವಾದ ಅರಣ್ಯದಲ್ಲಿ ಪ್ರತಿಭಾವಂತ ಚಿತ್ರಕಾರನ ಅತಿ ಪ್ರಶಾಂತವಾದ, ಸುಂದರವಾದ  ಸೃಷ್ಟಿಯಂತಿತ್ತು ಆ ಮುನಿ ಆಶ್ರಮ.
ಆಶ್ರಮದಲ್ಲಿ ಸಾಯಂಕಾಲದ ಸಂಧ್ಯಾ ಕಾರ್ಯಕ್ರಮಗಳು ಆರಂಭವಾದವು. ದೀಪಗಳು ಬೆಳಗುತ್ತಿದ್ದವು. ಗಂಭೀರ ಮಂತ್ರಗಳು ಮಧುರವಾಗಿ ಕೇಳುತ್ತಿದ್ದವು. ಮುನಿಕನ್ಯೆಯರು ಫಲಪುಷ್ಪ ಗಿಡಗಳಿಗೆ ನೀರನ್ನು ಹಾಕುತ್ತಿದ್ದರು. ಕೆಲವರು ದೇವರ ಪೂಜೆಗಾಗಿ ಹಾರಗಳನ್ನು ಮಾಡುತ್ತಿದ್ದರು. ಮಕ್ಕಳು ಅರಣ್ಯ ಸಂಚಾರದಿಂದ ತಿರುಗಿ ಬಂದು ತಮ್ಮ ತಾಯಂದಿರ ಅಪ್ಪುಗೆಯಲ್ಲಿದ್ದರು. ಕೆಲವರು ತಾಯಂದಿರು ತಮ್ಮ ಮಕ್ಕಳನ್ನು ಸಂಜೆಯ ಕೆಲಸಕ್ಕೆ ಸಿದ್ಧವಾಗುವಂತೆ ಅವಸರಿಸುತ್ತಿದ್ದರು. ಒಂದು ಸಣ್ಣ ಕುಟೀರದಲ್ಲಿ ಒಬ್ಬ ತಾಯಿ ಅರಣ್ಯ ಸಂಚಾರದಿಂದ ಇನ್ನೂ ತಿರುಗಿ ಬಾರದಿದ್ದ ತನ್ನ ಮಕ್ಕಳಿಗಾಗಿ ಎದುರುನೋಡುತ್ತಿದ್ದಳು. ಆ ಮಕ್ಕಳಿಗಾಗಿಯೇ ಅವಳು ಬದುಕುತ್ತಿದ್ದಾಳೆ ಎನ್ನುವುದು ಅವಳ ಕಂಗಳನ್ನು ನೋಡಿದರೆ ತಿಳಿಯುತ್ತಿತ್ತು. ಆ ಕಂಗಳಲ್ಲಿ ಆತುರ, ದಯೆ ಲಯ ಜೊತೆಗೆ ಭಯ ಮನೆ ಮಾಡಿತ್ತು.

ಆ ತಾಯಿ ಹೆಸರು ಸೀತಾ.

ತನ್ನ ಇಬ್ಬರು ಮಕ್ಕಳಿಗಾಗಿ ಎದುರು ನೋಡುತ್ತಿದ್ದಳು.

ದಿನವೂ ಆ ಸಮಯಕ್ಕೆ ಇಬ್ಬರೂ ಅರಣ್ಯದಿಂದ ಬಂದುಬಿಡುತ್ತಿದ್ದರು. ಬರುತ್ತಾ ಯಾವ್ಯಾವುದೋ ಕಾಡಿನ ಹೂಗಳನ್ನು ತರುತ್ತಿದ್ದರು. ಅವುಗಳನ್ನು  ದೇವತಾರ್ಚನೆಗೆ ಬಳಸಿ ಎಂದು ತಾಯಿಯನ್ನು ಬೇಡಿಕೊಳ್ಳುತ್ತಿದ್ದರು. ಹೆಸರು  ಗೊತ್ತಿರದ ಹೂಗಳಿಂದ ಪೂಜೆ ಮಾಡುವುದಿಲ್ಲವೆಂದು ಸೀತಾ ಹೇಳುತ್ತಿದ್ದಳು. ಅವರಿಬ್ಬರೂ  ಸೇರಿ ಆ ಹೂಗಳಿಗೆ ಚಿತ್ರವಿಚಿತ್ರವಾದ ಹೆಸರುಗಳನ್ನಿಡುತ್ತಿದ್ದರು. ಸೀತಾ ನಕ್ಕರೆ ಅವರು ಮುನಿಸಿಕೊಳ್ಳುತ್ತಿದ್ದರು. ಸೀತಾ ಅವರಿಬ್ಬರನ್ನು ಸಮಾಧಾನಗೊಳಿಸಿ ಆ ಹೂಗಳಿಂದ ಪೂಜೆ ಮಾಡಿ ಅವರುಗಳನ್ನು ಸಂತೋಷ ಪಡಿಸುತ್ತಿದ್ದಳು. ಕತ್ತಲಾಗುವ ವೇಳೆಗೆ ಬಾಲಕರಿಬ್ಬರೂ ಕಂಠವೆತ್ತಿ ಹಾಡುತ್ತಿದ್ದರೆ ವನವೆಲ್ಲಾ ಪರವಶವಾಗುತ್ತಿತ್ತು.
ಆ ಲವಕುಶರು ಇನ್ನೂ ಹಿಂದಿರುಗಲಿಲ್ಲ. ಸೀತೆಯ ಮನಸ್ಸು ಅಪಾಯವನ್ನೇನೂ ಶಂಕಿಸಲಿಲ್ಲ. ಏಕೆಂದರೆ ಲವಕುಶರಿಗೆ ಅಡವಿ ಚೆನ್ನಾಗಿ ತಿಳಿದಿತ್ತು. ಅವರು ಅಲ್ಲಿಯೇ ಹುಟ್ಟಿ ಬೆಳೆದವರು ಅವರು ಅರಣ್ಯ ಪುತ್ರರು. ಆದರೆ ತಡವಾಗಲು ಕಾರಣವೇನು?ಅದು ಗೊತ್ತಾಗದೆ ಭಯ,ಸಂದೇಹಗಳು ಲವಕುಶರು ಅಯೋಧ್ಯೆಗೆ  ಹೋಗಿ ಬಂದಂದಿನಿಂದಲೂ ಸೀತೆಯ ಮನಸ್ಸಿನಲ್ಲಿ ಮಕ್ಕಳ ಬಗ್ಗೆ  ಇಷ್ಟಕ್ಕೂ ಮುಂಚೆ ಇರದಿದ್ದ ಭಯ ಮನೆ ಮಾಡಿತು. ಏನೋ ಗೊತ್ತಿಲ್ಲದ ಭಯ. ಅರಣ್ಯದ ಬಗ್ಗೆಯಲ್ಲ, ನಗರದ ಬಗ್ಗೆ. ಕ್ರಮೇಣ ಕತ್ತಲು ದಟ್ಟವಾಯಿತು ಸೀತೆಯ ಕಣ್ಣುಗಳೇ ದೀಪಗಳಂತೆ ಬೆಳಗುತ್ತಿದ್ದವು.
 ಅಷ್ಟರಲ್ಲಿಯೇ ಆ ಬಾಲಕರಿಬ್ಬರು ಹಿಂತಿರುಗಿದರು. ಸೀತೆ ಒಮ್ಮೆ  ನಿಟ್ಟುಸಿರಿಟ್ಟು ಏಕೆ ತಡವಾಯಿತು?" ಎಂದು ಪ್ರಶ್ನಿಸಿದಳು. ಲವ "ಅಮ್ಮಾ ಅಲ್ಲಿ ನೋಡು"  ಎಂದು ತಾನು ತಂದಿದ್ದ ಹೂಗಳನ್ನು ಬುಟ್ಟಿಯಲ್ಲಿ ಸುರಿದನು ಕ್ಷಣದಲ್ಲಿ ಆ ಆಶ್ರಮ ಹಿಂದೆಂದೂ ಗೊತ್ತಿರದ ಸುವಾಸನೆಯಿಂದ ತುಂಬಿ ಹೋಯಿತು.
ಬುಟ್ಟಿಯ ತುಂಬಾ ಕೆಂಪು, ಬಿಳಿ,ಹಳದಿ ಹೂಗಳು ನಗುತ್ತಿದ್ದವು. ಅದು ಹಿಂದೆಂದೂ ನೋಡದ ಹೂಗಳು. ಸುವಾಸನೆ ಕೂಡ ಹಿಂದೆಂದೂ ಅರಿಯದ್ದು. ಲವಕುಶರಿಬ್ಬರೂ ತಾವು ಸಾಧಿಸಿದ ಪುಷ್ಪ ವಿಜಯದಿಂದ ಗರ್ವದಿಂದ ತಾಯಿಯೆಡೆಗೆ ನೋಡಿದರು.
"ಎಲ್ಲಿಯದು ಈ ಹೂಗಳು, ಎಷ್ಟು  ಚೆನ್ನಾಗಿವೆ" ಕೇಳಿದಳು ಸೀತೆ ಅವುಗಳನ್ನು ಮೃದುವಾಗಿ ಸ್ಪರ್ಶಿಸುತ್ತ.
"ಅಮ್ಮಾ ಇಂದು ಕಾಡಿನಲ್ಲಿ ಒಂದು ಹೊಸ ಉದ್ಯಾನವನ್ನು ನೋಡಿದೆವು.ಅಂತಹ ಉದ್ಯಾನವನದಲ್ಲಿ ಎಲ್ಲಿಯೂ ನೋಡಿರಲಿಲ್ಲ. ವಾಲ್ಮೀಕಿ ಅಜ್ಜ ವರ್ಣಿಸುವ ನಂದನವನವೂ ಇದರ ಮುಂದೆ ಸಪ್ಪೆಯೇ" ಎಂದನು ಕುಶ.
ಕುಶನ ಮಾತನ್ನ ಲವ ಕಣ್ಣಿನ ಮೂಲಕವೇ ಅಂಗೀಕರಿಸಿದನು.
"ಯಾರ ಉದ್ಯಾನವನ ಕುಶ" ಕೇಳಿದಳು ಸೀತೆ.
"ಅಮ್ಮಾ ಆ ಉದ್ಯಾನವನದಲ್ಲಿ ಎಷ್ಟು  ಸುಂದರವೋ, ಅದರ ಯಜಮಾನಿಯಿಂದ ರೂಪ ಅಷ್ಟು ವಿಕಾರವಾಗಿತ್ತು. ನಾವು ಹೂಗಳನ್ನು ಕೊಯ್ದುಕೊಳ್ಳುವಾಗ ಅವಳು ಅಲ್ಲಿಗೆ ಬಂದಳು. ನಮಗೆ ಭಯವಾಯಿತು. ಅಣ್ಣ ಹೇಗೋ ಧೈರ್ಯ ತಂದುಕೊಂಡು ನಾವು ಮುನಿಬಾಲಕರು ಪೂಜೆಗಾಗಿ ಹೂಗಳನ್ನು ಕುಯ್ದುಕೊಳ್ಳುತ್ತಿದ್ದೇವೆ ಎಂದನು. ನಾವು ಬೇಗ ಬೇಗ ಬಂದು ಬಿಟ್ಟೆವು.ಅಬ್ಬಾ ಆ ರೂಪ ಪರಮ ವಿಕಾರವಾಗಿತ್ತು ಆಕೆ ಕುರೂಪಿ" ವ್ಯಂಗವಾಗಿ ಹೇಳಿದನು ಲವ.
ತಪ್ಪು ಕಂದ ಮನುಷ್ಯರ ರೂಪವನ್ನು ನೋಡಿ ಅವರನ್ನು  ಅಸಹ್ಯಿಸಿಕೊಳ್ಳಬಾರದು. ಆಕೆ ಕುರೂಪಿಯಾದರೂ ಎಷ್ಟು ಚೆನ್ನಾಗಿರುವ ಹೂದೋಟವನ್ನು ಬೆಳೆಸಿದ್ದಾಳಲ್ಲ ಹೇಳಿದಳು ಸೀತೆ.
"ಅಮ್ಮಾ ಆಕೆ ಚೆನ್ನಾಗಿಯೇ ಇದ್ದಾಳೆ ಆದರೆ ಕಿವಿ ಮೂಗುಗಳು ಮಾತ್ರ ಇಲ್ಲ. ಯಾರೋ ಕೊಯ್ದಿರುವಂತೆ ಅಲ್ಲೆಲ್ಲಾ ಹಳ್ಳವಿದೆ." ಕುದುರೆ ಮುಖವನ್ನು ವಿಕಾರ ಮಾಡಿಕೊಂಡನು.
ಸೀತೆಗೆ ಇದ್ದಕ್ಕಿದಂತೆ ತನ್ನ ಮೇಲೆ ಯಾರೋ ಚಾವಟಿಯಿಂದ ಝಳಪಿಸಿದಂತಾಯಿತು.
"ಕಿವಿ ಮೂಗುಗಳಿಲ್ಲವಾ?"
"ಇಲ್ಲವೆಂದರೆ. . .  ಹಿಂದೊಮ್ಮೆ ಇತ್ತೇನೋ ಯಾರೋ ಕೊಯ್ದಿರುವಂತಿದೆ, ಹಾಗೆ  ಅನಿಸಿತು ಅಲ್ವೇನಣ್ಣ" ಕುಶಾನ ಸಾಕ್ಷ್ಯವನ್ನು ಕೇಳಿದ ಲವ. 
 ಸೀತೆಗೀಗ ಖಚಿತವಾಯಿತು.
 ಅವಳು ಶೂರ್ಪನಖ ಎನ್ನುವುದರಲ್ಲಿ ಯಾವುದೇ  ಸಂದೇಹವಿಲ್ಲ.

ಹದಿನೆಂಟು ವರ್ಷಗಳ ಹಿಂದಿನ ಮಾತು. ರಾಮನನ್ನು ಮೋಹಿಸಿ ಬಂದಳು ಎಷ್ಟು  ಅಂದವಾಗಿದ್ದಳು ಆಕೆ ರಾಮ ಲಕ್ಷ್ಮಣರ ಕ್ರೂರವಾದ ಪರಿಹಾಸ್ಯಕ್ಕೆ ಪಾಪ ಕುರೂಪಿಯಾದಳು  ಈಗ ಶೂರ್ಪನಖ ಈ ಅರಣ್ಯದಲ್ಲಿಯೇ ಇದ್ದಾಳೆಯೇ ಎಷ್ಟು ಕಾಲ ಕಳದುಹೋಗಿದೆ !

ಶೂರ್ಪನಖಳನ್ನು ರಾಮ ಅವಮಾನಿಸಿದರೆ ರಾವಣ ತನ್ನನ್ನು ಅಪಹರಿಸಿ ರಾಮನ ಮೇಲೆ ಪ್ರತೀಕಾರವನ್ನು ತೀರಿಸಿ ಕೊಳ್ಳಬೇಕೆಂದು ಕೊಂಡನು. 

ಸ್ತ್ರೀಯರಿರುವುದೇ ಪುರುಷರ ದ್ವೇಷಪ್ರತೀಕಾರಗಳನ್ನು ತೀರಿಸಿಕೊಳ್ಳಲೋಸ್ಕರವೇ?

ರಾವಣನ ತಂಗಿ ಎಂದು ತಿಳಿಯದಿದ್ದರೆ ರಾಮಲಕ್ಮಣರು ಆ ರೀತಿ ನಡೆದು ಕೊಳ್ಳುತ್ತಿರಲಿಲ್ಲ. ರಾವಣನನ್ನು ಬಡಿದೆಬ್ಬಿಸಲೆಂದೆ ರಾಮನ ಆ ಕೃತ್ಯ. ಅವನ ಜೊತೆ ಜಗಳಕ್ಕೆ ಕಾರಣವನ್ನು ಹುಡುಕುತ್ತಿದ್ದ ರಾಮನಿಗೆ ಶೂರ್ಪನಖಿಯ ಮೂಲಕ ಅದು ಈಡೇರಿತು.
ಅದೆಲ್ಲಾ ರಾಜಕೀಯ. 
ಪಾಪ ಶೂರ್ಪನಖ ಪ್ರೇಮ ಪ್ರೇಮ ಎಂದು ಕನವರಿಸುತ್ತಲೆ ಬಂದಳು. ಕಿವಿ ಮೂಗುಗಳಿಲ್ಲದ ಆ ಕುರೂಪಿಯನ್ನು ಇನ್ನಾರು ಪ್ರೇಮಿಸುವರು.
ಜೀವನವೆಲ್ಲವೂ ಪ್ರೇಮವಿಲ್ಲದೇ ಕಳೆದಳಾ?
ತನ್ನಲ್ಲಿದ್ದ ಪ್ರೇಮವನ್ನೆಲ್ಲಾ ಧಾರೆಯೆರೆದು ಆ ಹೂದೋಟವನ್ನು ಬೆಳೆಸಿದಳಾ?  ತನ್ನ ಸೌಂದರ್ಯ ಆಕಾಂಕ್ಷೆ ಪ್ರತಿಫಲವಾಗಿ ಉದ್ಯಾನವನವನ್ನು ರೂಪಿಸಿದಳಾ?
ಅವಳ ಹೃದಯದ ಸುಕುಮಾರತೆಯ ಪ್ರತಿಫಲಗಳಾ ಈ ಹೂಗಳು?
 ಪಾಪ ಶೂರ್ಪನಖ.
 ಸೀತೆಯ ಕಣ್ಣೀರು ಕಂಡು ಲವಕುಶರು ಆಶ್ಚರ್ಯ ಪಟ್ಟರು.
"ಏನಮ್ಮ ಇದು ಯಾರದೋ ಬಗ್ಗೆ ಕೇಳಿದ ಮಾತ್ರಕ್ಕೆ ಇಷ್ಟು ನೋವನ್ನು ಅನುಭವಿಸುತ್ತಿದ್ದೆಯಲ್ಲಾ."
ಸೀತೆ ಕಣ್ಣೊರಿಸಿಕೊಂಡು ಸಣ್ಣದಾಗಿ ನಕ್ಕು--
" ನಾಳೆ ನನ್ನನ್ನು ಆ ಉದ್ಯಾನವನಕ್ಕೆ ಕರೆದೊಯ್ಯುವಿರಾ ಕೇಳಿದಳು?"
ಲವಕುಶರು ನಂಬಿಕೆ ಇಲ್ಲದಂತೆ ಒಬ್ಬರ ಮುಖವನ್ನು ಒಬ್ಬರು ನೋಡಿಕೊಂಡರು.
"ನಿಜವಾಗಲೂ ನಾನು ನಿಮ್ಮ ಜೊತೆ ಬರುತ್ತೇನೆ. ಕರೆದುಕೊಂಡು ಹೋಗುವಿರಾ? ಆ ದಾರಿ ನೆನಪಿದೆಯೇ?"
ಸೀತೆಯ ಮಾತುಗಳಿಗೆ ಅಣ್ಣ ತಮ್ಮಂದಿರ ಸಂಭ್ರಮ ಹೆಚ್ಚಾಯಿತು. 
ಅಮ್ಮ ತಮ್ಮ ಜೊತೆ ಅರಣ್ಯ ವಿಹಾರಕ್ಕೆ ಬರುತ್ತಾಳೆ ಎಂದು ತಿಳಿದ ಅವರ ಮನಸ್ಸುಗಳು ಉಲ್ಲಾಸಭರಿತವಾಯಿತು. ತಮಗೆ ಸುಪರಿಚಿತವಾದ ಅರಣ್ಯ ಪ್ರಾಂತ್ಯವನ್ನು ತಾಯಿಗೆ ತೋರಿಸಲು ಇಬ್ಬರಿಗೂ ಉತ್ಸಾಹ ಆದರೆ ಸೀತೆ ಯಾವಾಗಲೂ ಬಾರಳು.ಯಾವಾಗಲಾದರೂ ಹೋದರೂ ಇತರೆ ಮುನಿ ಸ್ತ್ರೀಯರ  ಜೊತೆ ಹೋಗುವಳು. ಅಮ್ಮನ ಕೈ ಹಿಡಿದು ಆ ದುರ್ಗಮ ಅರಣ್ಯದಲ್ಲಿ ಸಂಚರಿಸುತ್ತೇವೆ, ಅಮ್ಮಾ ಭಯಪಡದಿರುವಂತೆ ಧೈರ್ಯವನ್ನು ಹೇಳುತ್ತೇವೆ, ವಿಚಿತ್ರಗಳನ್ನೆಲ್ಲ ತೋರಿಸುತ್ತೇವೆ ಎಂದುಕೊಂಡರೇನೆ ಆ ಚಿಣ್ಣರಿಗೆ ಉತ್ಸಾಹ ಹೆಚ್ಚಾಯಿತು. 
ಆ ರಾತ್ರಿ  ಯಾವಾಗ ಬೆಳಗಾಗುತ್ತದೆಯೋ ಎಂದುಕೊಂಡರು.
ಆ ರಾತ್ರಿ  ಸೀತೆಗೂ ಸಹ ಮನಸ್ಸು ಭಾರವಾಗಿಯೇ ಇತ್ತು ಹಿಂದಿನ ನೆನಪುಗಳನ್ನು  ಎಷ್ಟೇ ಪಕ್ಕಕ್ಕೆ ಸರಿಸಿದರೂ ಮುಂದೆ ಬಂದು ನಿಲ್ಲುತ್ತಿದ್ದವು
ರಾಮನ ಜೊತೆ ಆನಂದವಾಗಿ ಕಳೆದ ಆ ವನವಾಸದ ದಿನಗಳು.
ಶೂರ್ಪನಖಿ ಬಂದಾಗ ಎಷ್ಟು  ಮನೋಹರವಾಗಿ ನಡೆದು ಬಂದಳು ತಲೆಯಲ್ಲಿ ಬಿಳಿಯ ಮಲ್ಲಿಗೆ, ಹೂಗಳ ಆಭರಣಗಳು. 
ತನ್ನ ಆಭರಣಗಳನ್ನು ವಿಚಿತ್ರವಾಗಿ ನೋಡಿದಳು.
ಪರಿಮಳವಿಲ್ಲದ, ಸುಕುಮಾರತೆಯಿಲ್ಲದ ಆ ಭಾರ ಏಕೆ ಹೊರುತ್ತಿದ್ದೀಯಾ ಎಂದು ನೋಡಿದಳು. ತನ್ನನ್ನು ನೋಡಿದಳೇ ಹೊರತು ಮಾತನಾಡಲಿಲ್ಲ. ನೇರವಾಗಿ ರಾಮನ ಬಳಿಗೆ ಹೋದಳು. ತಾನು ಅವರುಗಳ ಮಾತುಗಳ ಬಗ್ಗೆ  ಗಮನವಿರಿಸಿಯೇ ಏನೋ ಕೆಲಸ ಮಾಡಿಕೊಳ್ಳುತ್ತಿದ್ದಳು. ಕೆಲಕಾಲ ಕಳೆಯುವಷ್ಟರಲ್ಲಿ ಆಶ್ರಮದಲ್ಲಿ ರಕ್ತಪಾತ.  
ಓರ್ವ ಸ್ತ್ರೀಯ ಹೃದಯ ವಿದ್ರಾವಕ ರೋಧನೆ.
ಆ ಚರ್ಯೆಯಿಂದ ಎಷ್ಟು  ಶಪಿಸಿದಳು.
ಆ ಶಾಪ ಇನ್ನೂ ತನ್ನನ್ನು ಬಿಟ್ಟಿಲ್ಲವೇನೋ.
ಆಕೆಯನ್ನು ಯಾವ ಪುರುಷನು ಪ್ರೇಮಿಸುವುದಿಲ್ಲ. ತನ್ನನ್ನು  ಪ್ರೇಮಿಸುವ ಪುರುಷ ದೂರಮಾಡಿದ್ದಾನೆ.
ಕೊನೆಗೆ ಕಥೆಗಳು ಒಂದೇನಾ?
ತನ್ನನ್ನು  ನೋಡಿ ಶೂರ್ಪನಖ ಏನನ್ನುತ್ತಾಳೆ? ತನ್ನ ಮೇಲೆ ಕೋಪದಿಂದ ಮಾತನಾಡುವುದಿಲ್ಲವೇನೋ ಆದರೂ ಶೂರ್ಪನಖಿಯನ್ನು ನೋಡಬೇಕು.
     ****
ಮರುದಿನ ಬೆಳಿಗ್ಗೆ  ಕೆಲಸವೆಲ್ಲಾ ಮುಗಿದ ಮೇಲೆ ಸೀತೆಯನ್ನು ಹಿಂದಿಟ್ಟುಕೊಂಡಿ ಲವಕುಶರಿಬ್ಬರೂ ಹೊರಟರು.
"ಅಮ್ಮಾ ಇಂದು ನಿನಗೆ ನನ್ನ ರಾಜನನ್ನು ತೋರಿಸುತ್ತೇನೆ" ಎಂದನು ಲವ.
ಅರಣ್ಯದಲ್ಲಿ ಸ್ವೇಚ್ಛೆಯಾಗಿ ತಿರುಗುವ ಮದಗಜವು ಲವನಿಗೆ ವಶವಾಗಿತ್ತು. ಅಣ್ಣ-ತಮ್ಮಂದಿರಿಬ್ಬರೂ ಅದರ ಮೇಲೆ ಹತ್ತಿ ವಿಹರಿಸುತ್ತಿದ್ದರು.
"ಅಮ್ಮಾ ನೀನು ರಾಜನ ಮೇಲೆ ಹತ್ತುವುದಿಲ್ಲವಾ" ಕೇಳಿದನು ಲವ. 
"ಬೇಡ, ನನಗೆ ನಡೆಯುವುದೇ ಇಷ್ಟ" ಎಂದಳು ಸೀತೆ.
ಪಟ್ಟದಾನೆಯ ಮೇಲೆ ಸವಾರಿ ಹೋದ ದಿನಗಳನ್ನು ನೆನೆಸಿಕೊಂಡು.
ಸೀತೆಗೆ ಆನೆಯೆಂದರೆ ಭಯವೆಂದುಕೊಂಡರು ಅಣ್ಣ-ತಮ್ಮಂದಿರಿಬ್ಬರು. ಪಾಪ ಅಮ್ಮನಿಗೆ ಆನೆಯನ್ನು ಹತ್ತಲು ಹೇಗೆ ಬರುತ್ತದೆ, ಭಯ ಕೂಡ. ಲವನ ಮೇಲೆ ಕೋಪಗೊಂಡ ಕುಶ.
ತಮಗೆ ಕಾಡಿನಲ್ಲಿ ಗೊತ್ತಿದ್ದ ಎಲ್ಲಾ ಪ್ರಾಣಿಗಳನ್ನು ಪರಿಚಯಿಸುತ್ತಾ ನಡೆದರು.
ಮಕ್ಕಳ ಮಾತಿನಿಂದ ಸೀತೆಗೆ ಮಾರ್ಗಾಯಾಸವಾಗಲಿಲ್ಲ.
"ಇದೇನಮ್ಮ, ಆ ಉದ್ಯಾನವನ."
ಸೀತಾ ಹಾಗೆಯೇ ನಿಂತುಬಿಟ್ಟಳು. ಪ್ರಕೃತಿಯ ಮಂದಹಾಸದಂತ್ತಿದ್ದ ಆ ತೋಟವನ್ನು ನೋಡಿ ಸೀತೆಗೆ ಮಾತೇ ಹೊರಡಲಿಲ್ಲ. ಅಶೋಕವನ ಇದರ ಮುಂದೆ ಏನೇನು ಅಲ್ಲ ಎನ್ನುವಂತಿತ್ತು.
" ಧನ್ಯಳಾದೆ ಶೂರ್ಪನಖ ಎಂದುಕೊಂಡಳು "
"ಬಾಮ್ಮ ಒಳಗೆ ಹೋಗೋಣ" ಎನ್ನುತ್ತಿದ್ದ ಮಕ್ಕಳಿಗೆ, 
"ನಾನು ಒಬ್ಬಳೇ ಹೋಗುತ್ತೇನೆ ನೀವು ಸಂಜೆಯವರೆಗೆ ಸುತ್ತಾಡಿ ಬನ್ನಿ ಒಟ್ಟಗೆ ಆಶ್ರಮಕ್ಕೆ ಹೋಗೋಣ" ಎಂದಳು. 
ದೂರದಲ್ಲಿ ಒಬ್ಬ ಸ್ತ್ರೀ  ಕಾಣಿಸಿಕೊಂಡಳು. ಆಕೆಯ ಮುಖ ಆಕಡೆ ತಿರುಗಿದ್ದರೂ ಸಹ ಆಕಾರವನ್ನು ನೋಡಿ ಆಕೆಯೇ ಶೂರ್ಪನಖ ಎಂದುಕೊಂಡಳು.
ಹತ್ತಿರ ಹೋಗಿ  "ಶೂರ್ಪನಖ" ಮೆಲ್ಲಗೆ ಕರೆದಳು.
ಶೂರ್ಪನಖ 
ಹಿಂತಿರುಗಿ ನೋಡಿದಳು. ಆಕೆ ಸೀತೆಯನ್ನು ಗುರುತು ಹಿಡಿಯಲಿಲ್ಲ.
"ಯಾರಮ್ಮಾ ನೀನು ದಾರಿ ತಪ್ಪಿ ಬಂದ್ದಿದೀಯಾ?  ನನ್ನ ಹೆಸರು ನಿನಗೇಗೆ ಗೊತ್ತು?" ಕೇಳಿದಳು.
"ದಾರಿ ತಪ್ಪಲಿಲ್ಲ ಶೂರ್ಪನಖ, ದಾರಿ ಹುಡುಕಿಕೊಂಡು ಬಂದೆ, ನಾನು ಸೀತೆ" ಎಂದಳು.
ಶೂರ್ಪನಖಳಿಗೆ 
ಮಾತೇ ಹೊರಡಲಿಲ್ಲ. 
ಸೀತೆ, ಇವಳು ಸೀತೆ ಎಷ್ಟು ಬದಲಾಗಿ ಹೋಗಿದ್ದಾಳೆ.
ಮೈತುಂಬ ಆಭರಣಗಳ ಭಾರ ಹೊತ್ತ ಸೀತೆ ನನಗೆ ಗೊತ್ತು ಅದು ಸಹ ಹೆಚ್ಚು ಕಾಲ ನೋಡಿರಲಿಲ್ಲ.
ರಾವಣನನ್ನು ಸಂಹರಿಸಿ ಆರ್ಯ ಸಾಮ್ರಾಜ್ಯವನ್ನು ದಕ್ಷಿಣ ಭಾಗಕ್ಕೆಲ್ಲಾ ವಿಸ್ತರಿಸಿದ ಚಕ್ರವರ್ತಿ ಶ್ರೀರಾಮಚಂದ್ರನ ಪಟ್ಟಮಹಿಷಿ ಸೀತೆ ಈಕೆಯೇ?

ಶೂರ್ಪನಖಳಿ

ಗೆ ನಂಬಲು ಸಾಧ್ಯವಾಗಲಿಲ್ಲ. 
ಈ ನಾರುಮಡಿ ಏನು? ಈ ಹೂವಿನ ಹಾರಗಳೇನು? 
ಬಿಸಿಲಿಗೆ ಕಪ್ಪಾಗಿರುವ ಈಕೆ ಎಲ್ಲಿ?
ಈಕೆ ಸೀತೆ!! ಶ್ರೀರಾಮನ ಹೆಂಡತಿ ಸೀತೆಯೇ?
"ಸೀತೆ , ಶ್ರೀರಾಮಚಂದ್ರನ. . . " 
ಶೂರ್ಪನಖಳನ್ನು ಮಧ್ಯೆದಲ್ಲೇ ನಿಲ್ಲಿಸಿ
"ನಾನು ಸೀತೆ ಜನಕನ ಮಗಳು ಭೂಮಾತೆಯ ಕುವರಿ" ಎಂದಳು ಅಭಿಮಾನದಿಂದ.
"ಮತ್ತೆ ಶ್ರೀರಾಮ" ಶೂರ್ಪನಖಳಿಗೆ ಎಲ್ಲವೂ ಅಯೋಮಯವಾಗಿದೆ.
"ಶ್ರೀರಾಮ ನನ್ನನ್ನು ಪರಿತ್ಯಜಿಸಿದ. 
ಸದ್ಯಕ್ಕೆ ವಾಲ್ಮೀಕಿ ಆಶ್ರಮದಲ್ಲಿದ್ದೇನೆ."
ಶೂರ್ಪನಖಳಿಗೆ ಮಾತೇ ಹೊರ ಬರಲಿಲ್ಲ.
ಶ್ರೀರಾಮ ಸೀತೆಯನ್ನು ಪರಿತ್ಯಜಿಸುವುದಾ?
ಸೀತರಾಮರ ಪ್ರೇಮದ ಬಗ್ಗೆ ಅವಳಿಗೆ ಗೊತ್ತಿರುವಷ್ಟು ಬೇರೆ ಯಾರಿಗೂ ತಿಳಿದಿರುವುದು ಸಾಧ್ಯವಿರಲಿಲ್ಲ. ಅದಕ್ಕಾಗಿ ಅವಳು ತೆತ್ತ ಬೆಲೆಯೂ ಕಡಿಮೆಯೇನಿಲ್ಲ.
ಶ್ರೀರಾಮನನ್ನು ಪ್ರೇಮಿಸಿದ್ದಳು ಸ್ತ್ರೀಯರಿಗೆ ವೇದನೆ ತಪ್ಪುವುದಿಲ್ಲವಾ?
ಸೀತೆಯ ಮುಖದಲ್ಲಿ ಶೂರ್ಪನಖಳಿಗೆ ಶಾಂತ ಗಂಭೀರತೆಗಳನ್ನು ಬಿಟ್ಟು ವೇದನೆಯ ಛಾಯೆಗಳು ಕಾಣಿಸಲಿಲ್ಲ.
ಸೀತೆ ಎಷ್ಟು ಬೆಳೆದು ಬಿಟ್ಟಿದ್ದಾಳೆ ಎಂದುಕೊಂಡಳು ಶೂರ್ಪನಖ.
"ನೆನ್ನೆ ನಮ್ಮ ಮಕ್ಕಳು ನಿನ್ನ ಉದ್ಯಾನವನವನ್ನು ನೋಡಿದರು. ನಿನ್ನನ್ನು ನೋಡಿದರು. ಅವರೇ ನನ್ನನ್ನು ಕರೆದುಕೊಂಡು  ಬಂದರು. ನಿನ್ನ ತೋಟ ಎಷ್ಟು  ಸುಂದರವಾಗಿ, ಹಾಯಾಗಿದೆ" ಎಂದಳು ಮುಗುಳ್ನಗುತ್ತಾ.
"ಓ ಆ ಚಿನ್ನಾರಿಗಳು ನಿನ್ನ ಮಕ್ಕಳಾ, ಎಷ್ಟು ಮುದ್ದಾಗಿದ್ದಾರೆ" ಅಂದಳು ಶೂರ್ಪನಖ.
ಸೀತೆಯ ಮುಖದಲ್ಲಿ ಒಂದು ಕ್ಷಣ ಸಣ್ಣ ಗರ್ವ ಬಿಂದು ಕಾಣಿಸಿ ಮಾಯವಾಯಿತು. ಅದು ಶೂರ್ಪನಖಳ ದೃಷ್ಟಿ ಯನ್ನು ದಾಟಿ ಹೋಗಲಿಲ್ಲ.
"ಈ ತೋಟದಲ್ಲಿರುವ ಸಸಿಗಳು, ಬಳ್ಳಿಗಳು, ಗಿಡಗಳು ಎಲ್ಲವೂ ನನ್ನ ಮಕ್ಕಳೆ" ಎಂದಳು ಶೂರ್ಪನಖ.
"ಹೌದು ಅದಕ್ಕೆ ಎಷ್ಟು ಮನೋಹರವಾಗಿದೆ" ಒಪ್ಪಿಕೊಂಡಳು ಸೀತೆ ಶೂರ್ಪನಖಳ  ಕಣ್ಣಲ್ಲಿ ಗರ್ವವು ಗರ್ವವಾಗಿ ಬಂದು ನಿಂತುಕೊಂಡಿತು.
" ಹೇಳು ಶೂರ್ಪನಖ ನಿನ್ನ ಜೀವನ ಹೇಗಿದೆ? "
" ಈ ವನದಷ್ಟೇ ಸುಂದರವಾಗಿ ಆನಂದವಾಗಿದೆ."
"ನನಗೆ ಬಹಳಷ್ಟು ಸಂತೋಷವಾಗಿದೆ. ನಿನಗೆ ನಡೆದ ಅವಮಾನಕ್ಕೆ ನೀನು ಏನಾಗಿ ಹೋಗುತ್ತೀಯೆ ಎಂದುಕೊಂಡೆ. ನಿನ್ನ ಸೌಂದರ್ಯಾಕಾಕ್ಷೆ ನನಗೆ ಗೊತ್ತು. ನಿನ್ನ ಕುರೂಪಿತನವನ್ನು ನೀನು ಸಹಿಸಬಲ್ಲೆಯಾ? ಅದನ್ನು ಸಹಿಸಲಾಗದೆ ಏನು ಆಘಾತವನ್ನು ಮಾಡಿಕೊಂಡೆಯೋ ಎಂದು ನಿನ್ನ ನೆನಪು ಬಂದಾಗಲೆಲ್ಲಾ ನೊಂದುಕೊಂಡೆ"
ತನ್ನ ಕಡೆ ನೋಡಿದ ಸೀತೆಯ ಕಣ್ಣುಗಳಲ್ಲಿದ್ದ ದಯೆ ಮತ್ತು ಪ್ರೇಮಕ್ಕೆ ಶೂರ್ಪನಖ ಕರಗಿಹೋದಳು.
ಅವರಿಬ್ಬರ ಹೃದಯಗಳಲ್ಲೂ ಸ್ನೇಹ ಭಾವ ಅಂಕುರಿಸಿತು ಅವರ ಶರೀರವು ಪುಳಕಿತವಾಯಿತು.
" ನೀನು ಧೈರ್ಯಶಾಲಿ" ಎಂದಳು ಸೀತೆ.
ಮನಃಸ್ಫೂರ್ತಿಯಾಗಿ ಸೀತೆ ಹೇಳಿದ ಆ ಮಾತು ಶೂರ್ಪನಖಳ ಮನಸ್ಸಿನಲ್ಲಿ  ಉದ್ವೇಗವನ್ನು ತಂದಿತು. ತನ್ನ ಜೀವನದ ಉದ್ದೇಶವನ್ನು ಸೀತೆಗೆ ಹೇಳಬೇಕೆಂಬ ಸ್ನೇಹ ಭಾವ ಅವಳ ಹೃದಯದಲ್ಲಿ ತುಂಬಿ ಬಂದಿತು.
"ನನ್ನನ್ನು ಈ ರೀತಿ ನೋಡಿ ಇದೆಲ್ಲಾ ಬಹಳ ಸುಲಭಬಲವಾಗಿ ನಡೆಯಿತು ಎಂದುಕೊಳ್ಳಬೇಡ. ಅಂದದ ಅರ್ಥವನ್ನು ತಿಳಿದುಕೊಳ್ಳುವುದರಲ್ಲಿಯೇ 
ಆನಂದವನ್ನು ಪಡೆದುಕೊಂಡೆನು. 

ಕುರೂಪಿಯಾದ ಆರಂಭದ ದಿನಗಳಲ್ಲಿ ಬದುಕು ದುರ್ಭರವಾಗಿಯೆ ಇದ್ದಿತು. 
ನನ್ನ ರೂಪ ನನಗೆ ಅಸಹ್ಯವೆನಿಸುತ್ತಿತ್ತು. ನನ್ನನ್ನು ನಾನೇ ದ್ವೇಷಿಸಿಕೊಳ್ಳುತ್ತಿದ್ದೆ.  ಆತ್ಮಹತ್ಯೆ ಮಾಡಿಕೊಳ್ಳಲು ಪ್ರಯತ್ನಿಸಿದ ದಿನಗಳೂ ಇವೆ. 
ನನಗೆ ಸೌಂದರ್ಯ ಬೇಕಿತ್ತು, ಪ್ರೇಮವೂ ಬೇಕಿತ್ತು ಅವೆರಡೂ ಇಲ್ಲದೆ ನಾನು ಬದುಕಿರಲು ಸಾಧ್ಯವಿರಲಿಲ್ಲ. ಅಂತಹ ನಾನು ಕುರೂಪಿಯಾದೆನು."
"ನನ್ನ ರೂಪವನ್ನು ನೋಡಿ ಪುರುಷರು, ನಾನು ಮೋಹಿಸಿದ ಅಂದವಾದ ಪುರುಷರು ನನ್ನನ್ನು ನೋಡಿ ಅಸಹ್ಯಿಸಿಕೊಳ್ಳುತ್ತಿದ್ದರು."
"ಇನ್ಯಾಕೆ ಈ ಬದುಕು ಎಂದುಕೊಂಡೆನು. ಆ ದಿನಗಳು ನರಕವಾಗಿದ್ದವು. ನನ್ನ ಮನಸ್ಸು ದಿನವೂ ನೋವಿನಿಂದ, ಕೋಪದಿಂದ ಅಗ್ನಿಪರ್ವತವಾಗುತ್ತಿತ್ತು. ಶ್ರೀರಾಮನನ್ನು, ಅವನ ತಮ್ಮನನ್ನು, ನಿನ್ನನ್ನು ಎಷ್ಟೊಂದು ಶಪಿಸುತ್ತಿದ್ದೆನು. ನಿಮ್ಮ ಮೇಲೆ ವಿಷವನ್ನೇ ಸುರಿಸುತ್ತಿದ್ದೆ. ನನ್ನ ಮನಸ್ಸಿನಲ್ಲಿ ಪ್ರೇಮ ಲವಲೇಶವೂ ಇಲ್ಲದೇ ದ್ವೇ಼ಷವೇ ತುಂಬಿಹೋಗಿತ್ತು. ಸೌಂದರ್ಯವನ್ನು ಪ್ರೇಮಿಸುವ ನಾನು ಸುಂದರವಾದ ಪ್ರತಿಯೊಂದನ್ನು ದ್ವೇಷಿಸಲಾರಂಭಿಸಿದೆ. ನನ್ನ ಸೌಂದರ್ಯಾಕಾಂಕ್ಷೆ ಸುಂದರಿಯರ ಬಗ್ಗೆ ಅಸೂಯೆಯಾಗಿ ಮಾರ್ಪಟ್ಟಿತ್ತು. 

ನಾನು ನಡೆಯುವ ಅಗ್ನಿ ಪರ್ವತವಾದೆ, ದುಃಖ ಸಮುದ್ರವಾದೆ."
ವೇದನಾಮಯವಾದ ಶೂರ್ಪನಖಿಯ ನೆನಪಿನಿಂದ ಇಬ್ಬರ ಮನಸ್ಸುಗಳು ಭಾರವಾದವು.
"ಅಷ್ಟು ನೋವಿನಿಂದ ಹೇಗೆ ಹೊರ ಬಂದೆ ಶೂರ್ಪನಖಿ."
"ತುಂಬಾ ಕಷ್ಟವೇ ಆಯಿತು. ಸೌಂದರ್ಯದ ನಿಜವಾದ ಅರ್ಥವನ್ನು ಕಂಡುಕೊಳ್ಳುವುದು ನಿಜಕ್ಕೂ ಕಷ್ಟವಾಯಿತು. ಅತಿ ಸೌಂದರ್ಯ ಗರ್ವವಿತ್ತು. ನನ್ನ ಮೂಗನ್ನು ನೋಡಿಕೊಳ್ಳುತ್ತಾ ನಾನೆಷ್ಟು ಸಂಭ್ರಮಿಸುತ್ತಿದ್ದೆನೋ ನಿನಗೆ ತಿಳಿಯದು. ನೀವು ಆರ್ಯರ ಮೂಗುಗಳು ನನಗೆಷ್ಟು ವಿಚಿತ್ರವಾಗಿ ಕಾಣಿಸುತ್ತಿದ್ದವು. ವಿಚಿತ್ರದಲ್ಲಿಯೂ ಒಂದು ಸೌಂದರ್ಯ ಇಲ್ಲದಿರುವುದಿಲ್ಲ. ನನ್ನ ಮೂಗು ಉದ್ದವೂ ಅಲ್ಲ ಹಾಗಂತ ಮೊಂಡೂ ಅಲ್ಲ."
"ಮೂಗು ಹೇಗಿರಬೇಕೆಂದು ಆ ಶಿವ ಸೃಷ್ಟಿ ಆರಂಭದಲ್ಲಿ ಅಂದುಕೊಂಡನೋ ಅಂತಹ ಮೂಗು ನನ್ನದೆಂದು ನನಗೆಷ್ಟು ಗರ್ವವಿತ್ತು. ನನ್ನ ಪ್ರೀತಿ ಪಾತ್ರರು ಆ ಮೂಗನ್ನು ಚುಂಬಿಸಿದರೆ ನನಗೆಷ್ಟೋ ಖುಷಿಯಾಗುತ್ತಿತ್ತು."
"ಆ ಮೂಗನ್ನು ಕಳೆದುಕೊಳ್ಳುವುದೆಂದರೆ ಏನೆಂದು ನನ್ನನ್ನು ಬಿಟ್ಟರೆ ಬೇರೆಯವರಿಗೆ ಅರ್ಥವಾಗದು. ಅದನ್ನೆಲ್ಲಾ ಸಹಿಸಿದೆ. ಕುರೂಪದಿಂದ ಬಂದ ವಿಕೃತವಾದ ಆಲೋಚನೆಗಳ ಭಾರವನ್ನು ಹೊತ್ತೆ. ಒಮ್ಮೊಮ್ಮೆ ಎಲ್ಲವನ್ನೂ ಎಲ್ಲರನ್ನೂ ರೂಪಹೀನಗೊಳಿಸಬೇಕೆನಿಸುತ್ತಿತ್ತು."
"ಆ ದ್ವೇಷದಿಂದ ಹೊರಬರಲು, ಮತ್ತೆ ಸೌಂದರ್ಯವನ್ನು ಪ್ರೇಮಿಸಲು ರೂಪ, ಅರೂಪಗಳ ನಿಜವಾದ ಸಾರಾಂಶವನ್ನು ಕಂಡುಕೊಳ್ಳಲು ನನ್ನ ಜೊತೆ ನಾನೇ ಯುದ್ಧ ಮಾಡಬೇಕಾಗಿ ಬಂತು. 

ಆ ಯುದ್ಧದಲ್ಲಿ ನನಗೆ ಸಹಕರಿಸಿದ್ದು ಈ ಅನಂತ ಪ್ರಕೃತಿ. 
ಪ್ರಕೃತಿಗೆ ರೂಪ, ಕುರೂಪಗಳೆಂಬ ಭೇದವಿಲ್ಲ ಎಂಬುದನ್ನು ಗ್ರಹಿಸಲು ಬಹಳ ಕಷ್ಟಪಟ್ಟೆ. ಅನೇಕ ಜೀವಗಳನ್ನು ಗಮನಿಸಿದೆ. ಸ್ತಬ್ಧತೆ ಚಲನದಲ್ಲಿನ ಏಕರೂಪತೆಯನ್ನು ಗಮನಿಸಿದೆ. ಬಣ್ಣಗಳ ರಹಸ್ಯವನ್ನು ಅರಿತೆನು. ಈ ವಿಷಯದಲ್ಲಿ ನನಗೆ ಯಾರೂ ಗುರು ಇಲ್ಲ. ನನಗೆ ನಾನೇ ಶೋಧಿಸಿದೆ. ಪ್ರಕೃತಿಯ ಪ್ರತಿ ಅಣುವನ್ನು ಶೋಧಿಸಿದೆ. ಆ ಶೋಧನೆಯಲ್ಲಿ ನನ್ನ ದೃಷ್ಟಿ ಬದಲಾಗಿಹೋಯಿತು. ನನ್ನ ಕಣ್ಣಿಗೆ ಪ್ರತಿಯೊಂದು ಅಂದವಾಗಿ ಕಾಣತೊಡಗಿತು. ನನ್ನ ಜೊತೆಗೆ ಪ್ರತಿಯೊಂದನ್ನೂ ಅಸಹ್ಯಿಸಿಕೊಳ್ಳುತ್ತಿದ್ದ ನಾನು ನನ್ನನ್ನೂ ಸೇರಿದಂತೆ ಪ್ರತಿಯೊಂದನ್ನೂ ಪ್ರೀತಿಸತೊಡಗಿದೆ."
"ಪಕ್ಷಿಗಳು ಏನೋ ಕಾರಣದಿಂದ ಚುಚ್ಚಿ ಚುಚ್ಚಿ ಎಲೆಗಳನ್ನು ಕಿತ್ತರೂ,  ಆ ಚಿಕ್ಕ ಪಕ್ಷಿ ನನ್ನಲ್ಲಿ ಉಂಟುಮಾಡುವ ಸ್ಪಂದನ ಎಷ್ಟು ಪ್ರೇಮಭರಿತವೋ ಅಷ್ಟೇ ಸೌಂದರ್ಯಭರಿತ ಎಂದು ತಿಳಿದುಕೊಳ್ಳಲು, ಆ ಸ್ಪಂದನೆಯನ್ನು ಅರ್ಥಮಾಡಿಕೊಳ್ಳಲು ನಾನು ಮಾಡಿದ ಸಾಧನೆ ಅಸಾಮಾನ್ಯವಾದದ್ದು." 
"ಕ್ರಮವಾಗಿ ನನ್ನ ಕೈಗಳನ್ನು ಪ್ರೀತಿಸುವುದನ್ನು ಕಲಿತೆ, ಆ ಕೈಗಳಿಂದ ಸೃಷ್ಟಸುವುದನ್ನು ಕಲಿತೆ, ಶ್ರಮಿಸುವುದನ್ನು, ಸೇವೆ ಮಾಡುವುದನ್ನು ಕಲಿತುಕೊಂಡೆ. ಇದೆಲ್ಲಾ ಸಾಧ್ಯವಾಗಲು ಹತ್ತು ವರ್ಷಗಳಿಗಿಂತ ಹೆಚ್ಚೇ ಬೇಕಾಯಿತು. ಹತ್ತು ವರ್ಷಗಳ ಕಠೋರ ದೀಕ್ಷೆ ಫಲಿಸಿದ ನಂತರ ಈ ತೋಟವನ್ನು ಬೆಳೆಸಲಾರಂಭಿಸಿದೆ."
ತನ್ನ ಜೀವನಯಾನದ ಸತ್ಯ ಸೌಂದರ್ಯವನ್ನು ಸೀತೆಯ ಮುಂದಿಟ್ಟಳು.
"ನೀನೆಷ್ಟು ಸುಂದರವಾಗಿದ್ದೀಯೆ ಶೂರ್ಪನಖ. ನಿಮ್ಮ ಅಂದವನ್ನು ಯಾವ ಪುರುಷನು ಗ್ರಹಿಸದಿರಬಹುದು."
ಸೀತೆಯ ಕಂಠ ಗದ್ಗದವಾಯಿತು. ತನ್ನ ಅಗ್ನಿಪರೀಕ್ಷೆಗಿಂತ ಶೂರ್ಪನಖ ಗುರಿಯಾದ ಪರೀಕ್ಷೆ ಕಡಿಮೆಯದಲ್ಲ ಎಂದುಕೊಳ್ಳುತ್ತಲೇ ಸೀತೆಯ ಕಣ್ತುಂಬಿತ್ತು ಬಂದಿತು.
ಶೂರ್ಪಾನಖ ಹಾಯಾಗಿ ಅಂದವಾಗಿ, ಆನಂದವಾಗಿ ನಕ್ಕಳು.
" ಪುರುಷರಿಗೆ ಮಾತ್ರ ಕಣ್ಣಿರುವುದಲ್ಲವೆ, ಮನಸ್ಸಿರುವುದಲ್ಲವೇ? 
"ಕುರೂಪಿಗಳನ್ನು ಮಾಡುವ, ಅವರನ್ನು ಅಸ್ಯಹಿಸಿಕೊಳ್ಳುವುದನ್ನು ಮಾತ್ರವೇ ಗೊತ್ತಿರುವ ಪುರುಷರ ಬಗ್ಗೆ  ಅಲ್ಲ"
"ಅಂದರೆ. . . "  ಸೀತೆ ಮಾತು ನಿಲ್ಲಿಸಿದರೂ ಅವಳಿಗೆ ವಿಷಯ ಅರ್ಥವಾಯಿತು.
"ನಿನ್ನ ಊಹೆ ನಿಜವೆ ಸೀತಾ ನನಗೊಬ್ಬ ಪುರುಷನ ಸಹಚರ್ಯ ದೊರಕಿದೆ. ನನ್ನ ಕೈಗಳಿಂದ ಪ್ರಕೃತಿಗೆ ಹರಿಯುವ ಸೌಂದರ್ಯವನ್ನು ಸ್ವಲ್ಪ ಸಮಯ ತನ್ನದಾಗಿಸಿಕೊಂಡು, ತನ್ನನ್ನು ನನಗರ್ಪಿಸಿಕೊಳ್ಳುವ ಅದೃಷ್ಟವಂತ ಇದ್ದಾನೆ." ಎನ್ನುತ್ತಾ ಶೂರ್ಪನಖ ಜೋರಾಗಿ ಸುಧೀರ್ ಎಂದು ಕರೆದಳು. ಹೆಸರಿಗೆ ತಕ್ಕ ಒಬ್ಬ ದೃಢಕಾಯನಾದ ವ್ಯಕ್ತಿ  ಅಲ್ಲಿಗೆ ಬಂದನು. 
"ಈಕೆ ಸೀತಾ."
ಸುಧೀರ್ ಗೌರವದಿಂದ ನಮಸ್ಕರಿಸಿದ.
"ಸೀತೆಗೆ ನಿನ್ನನ್ನು ತೋರಿಸಲೆಂದೆ ಕರೆದನು."
ಈ ಮಾತಿನಿಂದ ಸುಧೀರ್ ಅಲ್ಲಿಂದ ಹೊರಟು ಹೋದ.  ಈ ಚಿಕ್ಕ ವರ್ತನೆಯಿಂದ ಇಲ್ಲಿಯವರೆಗೂ ಯಾವ ಸ್ತ್ರೀ ಪುರುಷರ ಮಧ್ಯೆಯೂ  ತಾನು ಕಾಣದ ಬಂಧವೇನೂ ಇವರ ಮಧ್ಯೆ ಇದೆಯೆನಿಸಿತು ಸೀತೆಗೆ.
"ನಿನ್ನ ಜೀವನವನ್ನು ಸಫಲಗೊಳಿಸಿಕೊಂಡಿರುವೆ."
"ಸಫಲತೆಯ ಅರ್ಥ ಪುರುಷನ ಸಹಚರ್ಯದಿಂದ ಬರುವುದಿಲ್ಲವೆಂದು ಗ್ರಹಿಸಿದೆನು. ಅದು ತಿಳಿದ ಮೇಲೆಯೇ ಈ ಪುರುಷನ ಸಹಚರ್ಯೆ ದೊರಕಿದ್ದು."
ಸೀತಾ ಶೂರ್ಪನಖಳ ಮಾತನ್ನು ಜಾಗೃತೆಯಿಂದ ಕೇಳುತ್ತಿದ್ದಳು. ಅವಳ ಮಾತುಗಳಲ್ಲಿ ಏನೋ ವಿವೇಕ, ಏನೋ ಗಾಂಭೀರ್ಯ.  ಮತ್ತೆ ಮತ್ತೆ ಕೇಳಬೇಕೆನಿಸುತ್ತಿತ್ತು.
" ಸೀತಾ. . .  ನೀನು?"
" ಮಕ್ಕಳ ಪಾಲನೆಯಲ್ಲಿ ನನ್ನ ಜೀವನ ಸಾರ್ಥಕವಾಗುತ್ತದೆ."
"ಅದೇ ನಿನ್ನ ಜೀವನದ ಆದರ್ಶವೇ?"
"ಹೌದು,  ನಾನು ರಾಮನ ಪತ್ನಿ  ಪಟ್ಟದ ರಾಣಿಯಾಗಿ ನನ್ನ ಕರ್ತವ್ಯಗಳನ್ನು ನೆರವೇರಿಸಲಾಗಲಿಲ್ಲ. ಕನಿಷ್ಠ ರಾಮರಾಜ್ಯಕ್ಜೆ ವಾರಸುದಾರನ್ನಾದರೂ ಕೊಡಬೇಕಲ್ಲವೇ."
"ರಾಜ್ಯದಲ್ಲಿ ನೀನೆಂದೂ ಇಲ್ಲದೇ ಹೋದರೂ ನಿನ್ನ ಜೀವನ ಹೇಗೆ ರಾಜ್ಯದ ಜೊತೆ ಬೆಸೆದು ಕೊಂಡಿದೆಯಲ್ಲ ಸೀತಾ?"
" ರಾಜಪತ್ನಿಯಾದ ನಂತರ ಇದು ತಪ್ಪುವುದಿಲ್ಲ ಅಲ್ಲವೇ?"
"ಯಾಕೋ ನನಗೆ ಮೊದಲಿನಿಂದಲೂ ರಾಜ್ಯವೆಂದರೆ ಭಯ. ನನ್ನ ಅಣ್ಣ ಎಷ್ಟು ಹೇಳಿದರೂ ನಾನು ರಾಜ್ಯದಲ್ಲಿ ಇರುತ್ತಿರಲಿಲ್ಲ. ಅರಣ್ಯ ವಿಹಾರದಲ್ಲಿ ಇರುವಷ್ಟು ಸಂತೋಷ ಇನ್ನಾವುದರಲ್ಲೂ ಸಿಗುವುದಿಲ್ಲ."
"ನನಗೂ ಅರಣ್ಯವಾಸವೇ ಇಷ್ಟ ರಾಮ ಪರಿತ್ಯಜಿಸಿದ ಮೇಲೆ ಈ ವನವಾಸ ನನ್ನ ಕ್ಲೇಶವನ್ನು ತಗ್ಗಿಸಿದೆ."
ಮಾತುಗಳಲ್ಲಿ ಸಮಯ ಸೇರಿದ್ದರು ತಿಳಿಯಲಿಲ್ಲ.
"ನನ್ನ ಮಕ್ಕಳಿಗೆ ಅವರು ಶ್ರೀರಾಮನ ಮಕ್ಕಳೆಂದು ತಿಳಿಯದು. ನಾನು ಹೇಳಲಿಲ್ಲ ಸಮಯ ಬಂದಾಗ ತಿಳಿಯುತ್ತದೆ."
"ತಿಳಿದ ಮೇಲೆ ಅವರು ಕ್ಷಣವಾದರೂ ಇರುತ್ತಾರಾ?"
ಶೂರ್ಪನಖ ಸೀತೆಯ ಕಡೆ ಕರುಣೆಯಿಂದ ನೋಡಿದಳು.
"ಅವರಿಗೆ ಅರಣ್ಯವಾಸ ಇಷ್ಟವೇ" ಅಂದಳು ಸೀತೆ.
"ಅವರಿಗೆ ಇಷ್ಟವಾಗಬಹುದು. ಆದರೆ ರಾಜ್ಯಕ್ಕೆ ಅರಣ್ಯವೆಂದರೆ ಏನು ಪ್ರೇಮ? ನಗರಗಳ ಅಭಿವೃದ್ಧಿ, ನಾಗರಿಕರ ರಕ್ಷಣೆಗೋಸ್ಕರ ಅರಣ್ಯ ಪುತ್ರರು ಹೋಗಲೇ ಬೇಕೇನೋ." 
ತಪ್ಪುವುದಿಲ್ಲ ಎಂದು ಸೀತೆಗೆ ಗೊತ್ತಿತ್ತು.
"ಆಗ ಏನು ಮಾಡುತ್ತೀಯಾ. ಒಬ್ಬಳೇ ವಾಲ್ಮೀಕಿ ಆಶ್ರಮದಲ್ಲಿ ಇದ್ದುಬಿಡುತ್ತೀಯ?"
"ಇಲ್ಲ ಶೂರ್ಪನಖ. ನನ್ನ ತಾಯಿ ಭೂದೇವಿಯ ಆಶ್ರಯ ಪಡೆಯುತ್ತೇನೆ."
"ನಿನ್ನ ತಾಯಿ ಎಲ್ಲಿಲ್ಲ ಸೀತಾ? ಆದರೆ ನಿನ್ನ ತಾಯಿಗೆ ಇದಕ್ಕಿಂತ ಸುಂದರ ರೂಪ ಇನ್ನೆಲ್ಲಿಯೂ ಇಲ್ಲ ಎಂದು ನನ್ನ ಅಭಿಪ್ರಾಯ."
ಗರ್ವದಿಂದ ತನ್ನ ತೋಟವನ್ನು ನೋಡಿದಳು ಶೂರ್ಪನಖ.
ಶೂರ್ಪನಖಳ ಉದ್ದೇಶ ಅರ್ಥವಾಯಿತೆಂಬಂತೆ ನಕ್ಕಳು ಸೀತೆ. ಅಂದುಕೊಳ್ಳದ ಆದರಣೆಯಿಂದ ಸೀತೆಯ ಮನಸ್ಸು ತುಂಬಿಬಂತು.
"ತಪ್ಪದೆ ಬರುತ್ತೇನೆ ಶೂರ್ಪನಖ. ನನ್ನ ಮಕ್ಕಳು ನನ್ನನ್ನು ಬಿಟ್ಟು ನಗರಕ್ಕೆ ಹೋದ ಮೇಲೆ ನಾನು ಭೂಪುತ್ರಿಯಾಗುತ್ತೇನೆ. ಈ ತಣ್ಣನೆ ಗಿಡಗಳ ನೆರಳನ್ನು ಅನುಭವಿಸಿತ್ತಾ ಜೀವನಕ್ಕೊಂದು ಹೊಸ ಅರ್ಥವನ್ನು ಕಲ್ಪಿಸಿಕೊಳ್ಳುತ್ತೇನೆ."
ಮಕ್ಕಳ ಬರುವಿಕೆಯಿಂದ ಅವರ ಮಾತುಕತೆ ನಿಂತುಹೋಯಿತು.
ಶೂರ್ಪನಖ ಅವರಿಗೆ ಹಣ್ಣುಗಳನ್ನು ಕೊಟ್ಟಳು. ಅವರು ಆಪ್ಯಾಯತೆಯಿಂದ ಅದನ್ನು ತೆಗೆದುಕೊಂಡರು.
"ಯಾರಮ್ಮ ಆಕೆ" ದಾರಿಯಲ್ಲಿ ಕೇಳಿದರು ತಾಯಿಯನ್ನು.
"ನನಗೆ ತುಂಬಾ ಬೇಕಾದ ವ್ಯಕ್ತಿ.  ತುಂಬಾ ಆಪ್ತೆ."
"ಮತ್ತೆ ನಮಗೆ ಯಾವಾಗಲೂ ಹೇಳಲೇ ಇಲ್ಲ."
"ಕಾಲ ಬಂದಾಗ ಎಲ್ಲಾ ತಿಳಿಯುತ್ತದೆ. ಆದರೆ ಈ ಅರಣ್ಯದಲ್ಲಿರುವ ಈ ಉದ್ಯಾನವನದ ಹಾದಿಯನ್ನು ಎಂದಿಗೂ ಮರೆಯಬೇಡಿ. ನೀವು ಎಲ್ಲಿಗೇ ಹೋದರೂ, ಏನು ಮಾಡಿದರೂ ಈ ಹಾದಿಯನ್ನು ಎಂದಿಗೂ ಮರೆಯಬೇಡಿ. ಮರೆಯುವುದಿಲ್ಲ ಅಲ್ಲವೇ."
"ಮರೆಯುವುದಿಲ್ಲಮ್ಮ" ತಾಯಿಗೆ ವಚನವಿತ್ತರು ಲವಕುಶರು.
****

- ಸುಧಾ ಜಿ 

ಮಹಿಳಾ ಸಾಧಕಿ - ಡಾ. ಮರಿಯಾ ಮಾಂಟೆಸ್ಸೊರಿ





ಡಾ. ಮರಿಯಾ ಮಾಂಟೆಸ್ಸೊರಿ

ಚಿತ್ರ 1 - ಅದೊಂದು ಬಡ ಕಾರ್ಮಿಕರ ಮಕ್ಕಳ ಶಾಲೆ. ಕಾರ್ಮಿಕರು ದುಡಿತಕ್ಕೆ ಹೋಗುವ ಮುನ್ನ ತಮ್ಮ ಮಕ್ಕಳನ್ನು ಇಲ್ಲಿ ಬಿಟ್ಟು ಹೋಗುತ್ತಾರೆ. ಆ ಮಕ್ಕಳೊ – ಅಳುತ್ತಾ, ಜಗಳವಾಡುತ್ತಾ, ಇನ್ನೊಬ್ಬರನ್ನು ತಳ್ಳುತ್ತಾ, ಒಬ್ಬರ ಮೇಲೊಬ್ಬರು ಬೀಳುತ್ತಾ ಒಳಗೆ ಬರುತ್ತಾರೆ. ಆ 50 ಮಕ್ಕಳಿಗೆ ಒಬ್ಬ ಕಾಳಜಿರಹಿತ ಕೇರ್‍ಟೇಕರ್. ಆಕೆ ಅವರಿಗೆ ಸ್ನಾನ ಮಾಡಿಸಿ, ಎರಡು ಹೊತ್ತು ಊಟ ಹಾಕಬೇಕು. ಆದರೆ ಅಲ್ಲಿ ಕೇವಲ ಅವ್ಯವಸ್ಥೆ. ಆ ಮಕ್ಕಳ್ಯಾರೂ ಅವರ ಮಾತನ್ನು ಕೇಳುವುದಿಲ್ಲ. ಹಾಗಾಗಿ ಅಲ್ಯಾವುದೂ ಸಕ್ರಮವಾಗಿ ನಡೆಯುವುದಿಲ್ಲ. 
ಚಿತ್ರ 2 - ಅದೇ ಶಾಲೆ. ಕೆಲವು ತಿಂಗಳುಗಳ ನಂತರ. ಮಕ್ಕಳು ನಗುನಗುತ್ತಾ, ಶಾಲಾ ಆವರಣದೊಳಗೆ ಬಹಳ ಶಿಸ್ತಿನಿಂದ ಬರುತ್ತಿದ್ದಾರೆ. ಜಗಳವಾಡದೆ, ಪರಸ್ಪರ ಮಾತನಾಡಿಕೊಳ್ಳುತ್ತಾ, ಒಬ್ಬರ ಹೆಗಲಮೇಲೊಬ್ಬರು ಕೈಹಾಕುತ್ತಾ. ಒಳಗೆ ಬಂದ ಕೂಡಲೆ ಸ್ವಲ್ಪ ದೊಡ್ಡ ಮಕ್ಕಳು ಚಿಕ್ಕವರ ಬಗ್ಗೆ ಕಾಳಜಿ ವಹಿಸುತ್ತಾರೆ. ನಂತರ ಎಲ್ಲರೂ ಅಲ್ಲಿರುವ ಆಟಿಕೆಗಳೊಂದಿಗೆ ಆಡುತ್ತಾರೆ, ಕಲಿಯುತ್ತಾರೆ. ನಂತರ ಅಡಿಗೆ ಮಾಡುವುದರಲ್ಲಿ, ಬಡಿಸುವುದರಲ್ಲಿ ನೆರವಾಗುತ್ತಾರೆ. ಕೆಲಸ ಕಲಿತ ಮಕ್ಕಳ ಮುಖದ ಮೇಲೆ ತಾವೇನೋ ಸಾಧಿಸಿದ್ದೇವೆ ಎನ್ನುವ ಹೆಮ್ಮೆ ಕಾಣುತ್ತದೆ.. ಎಲ್ಲರ ಮುಖದಲ್ಲೂ ನಗು-ಸಂತೋಷ. ಅವರ ಕೇರ್‍ಟೇಕರ್ ಕಾಳಜಿಯಿರುವ ಸುಮನಸ್ಸಿನ ವ್ಯಕ್ತಿ.
ಎರಡನೇ ಚಿತ್ರದಲ್ಲಿರುವ ಶಾಲೆಯ ಕೇರ್ ಟೇಕರ್ ವಿಶ್ವದ ಪ್ರಖ್ಯಾತ ಶಿಕ್ಷಣತಜ್ಞೆ, ಇಡೀ ಶಿಕ್ಷಣದ ರೀತಿಯನ್ನು ಬದಲಾಯಿಸುವಲ್ಲಿ ಮಹತ್ತರ ಪಾತ್ರ ವಹಿಸಿದಾಕೆ – ಡಾ. ಮರಿಯಾ ಮಾಂಟೆಸ್ಸೊರಿ; ವಿಶ್ವವಿಖ್ಯಾತ ಮಾಂಟೆಸ್ಸೊರಿ ಶಿಕ್ಷಣ ವಿಧಾನದ ಜನ್ಮದಾತೆ. 
1870ರ ಆಗಸ್ಟ್ 31ರಂದು ಇಟಲಿಯಲ್ಲಿ ಜನಿಸಿದ ಇವರು ತಮ್ಮ ತಾಯಿಯ ಬೆಂಬಲದೊಂದಿಗೆ ಓದುವುದರಲ್ಲಿ ಸದಾ ಮುಂದಿದ್ದರು. ಅವರು 12  ವರ್ಷದವರಿದ್ದಾಗ ಉತ್ತಮ ಶಿಕ್ಷಣ ಸವಲತ್ತಿಗಾಗಿ ಕುಟುಂಬ ರೋಮ್‍ಗೆ ತೆರಳಿತು. ಅಂದಿನ ಸಾಂಪ್ರದಾಯಿಕ ಸಮಾಜದ ಆಚರಣೆಯನ್ನು ವಿರೋಧಿಸಿ, ಅವರು ಇಂಜಿನಿಯರಿಂಗ್ ಮತ್ತು ಗಣಿತದ ಬಗೆಗಿನ ತಮ್ಮ ಆಸಕ್ತಿಯಿಂದಾಗಿ 14 ವರ್ಷದವರೆಗೆ, ತಾಂತ್ರಿಕ ಸಂಸ್ಥೆಯಲ್ಲಿ ಸೇರಿದರು. ಸಂಪ್ರದಾಯಸ್ಥರಾದ, ಮಿಲಿಟರಿ ಅಧಿಕಾರಿಯಾದ ಅವರ ತಂದೆ ಅವರ ವೃತ್ತಿಗೆ ಪ್ರೋತ್ಸಾಹ ನೀಡದಿದ್ದರೂ, ಅವರ ಜೀವಶಾಸ್ತ್ರದಲ್ಲಿನ ಆಸಕ್ತಿ ಅವರನ್ನು ವೈದ್ಯಕೀಯ ಶಿಕ್ಷಣ ಪಡೆಯುವಂತೆ ಮಾಡಿತು. ತಂದೆ, ಶಿಕ್ಷಕರು, ಪುರುಷ ಸಹಪಾಠಿಗಳ ವಿರೋಧದ ನಡುವೆಯೂ ಅತ್ಯಂತ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿ ಪದವಿ ಪಡೆದರು. 1894ರಲ್ಲಿ ಇಟಲಿಯ ಪ್ರಥಮ ಮಹಿಳಾ ವೈದ್ಯೆಯಾದರು. 
ಅಂದಿನ ದಿನಗಳಲ್ಲಿ ಈ ನಿರ್ಧಾರ ಕೈಗೊಳ್ಳಲು ಸಾಕಷ್ಟು ಧೈರ್ಯ ಬೇಕಿತ್ತು. ಏಕೆಂದರೆ ಸಮಾಜದ ರೂಢಿಗಳು ಮಹಿಳೆಯರನ್ನು ಇಂತಹುದರಲ್ಲಿ ಪ್ರೋತ್ಸಾಹಿಸುತ್ತಿರಲಿಲ್ಲ. ವಿಪರ್ಯಾಸವೆಂದರೆ, ಆಗ ಪ್ರಚಲಿತವಿದ್ದ ಮಹಿಳೆಯರಿಗಾಗಿನ ವೃತ್ತಿಗಳಾದ - ಶಿಕ್ಷಣ, ಗೃಹ ನಿರ್ವಹಣೆ ಅಥವಾ ಸನ್ಯಾಸಿನಿಯಾಗುವುದನ್ನು ವಿರೋಧಿಸುತ್ತಿದ್ದ ಮಾಂಟೆಸ್ಸೊರಿಯವರು ಶಿಕ್ಷಣ ಕ್ಷೇತ್ರದಲ್ಲಿನ ತಮ್ಮ ಕೊಡುಗೆಗಳಿಗಾಗಿ ವಿಶ್ವವಿಖ್ಯಾತರಾದದ್ದು.
ರೋಮ್ ವಿಶ್ವವಿದ್ಯಾನಿಲಯದಲ್ಲಿನ ಮಾನಸಿಕ ಕ್ಲಿನಿಕ್‍ನಲ್ಲಿ ಸಹಾಯಕ ವೈದ್ಯೆಯಾಗಿ ಸೇರಿಕೊಂಡರು. ಆಗ ಅವರು ಮಾನಸಿಕ ವಿಕಲಚೇತನರ ಸಂಪರ್ಕದಲ್ಲಿ ಬಂದರು. ಅವರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವೈದ್ಯಕೀಯ ಚಿಕಿತ್ಸೆ ಜೊತೆಗೆ ಕಲಿಕೆಯ ವಿಧಾನವೂ ಮುಖ್ಯ ಎಂದು ನಿರ್ಧರಿಸಿದರು. ತನ್ನ ಯುವ ರೋಗಿಗಳಿಗೆ ಬೇಕಾದ ಪ್ರೇರೇಪಣೆ, ಉಪಯುಕ್ತ ಚಟುವಟಿಕೆ, ಆತ್ಮಗೌರವ – ಮಾಂಟೆಸ್ಸೊರಿ ಅಲ್ಲಿದ್ದವರನ್ನು ತಿರಸ್ಕಾರದಿಂದ ಕಾಣುತ್ತಿದ್ದ ಕೇರ್ ಟೇಕರ್ಸ್‍ಅನ್ನು ತೆಗೆದುಹಾಕಿದರು. ಸಿಬ್ಬಂದಿ ವರ್ಗದ ಕೊರತೆಯಿಂದಾಗಿ, ಕಡಿಮೆ ಸಮಸ್ಯೆ ಇರುವ ಮಕ್ಕಳಿಗೆ ತಮ್ಮ ಬಗ್ಗೆ ಮತ್ತು ತಮ್ಮ ಇತರ ಸಹಚರರ ಬಗ್ಗೆ ಕಾಳಜಿ ವಹಿಸಲು ಹೇಳಿಕೊಟ್ಟರು. 
ಆ ಬುದ್ಧಿಮಾಂದ್ಯ ಮಕ್ಕಳನ್ನು ನೋಡಿಕೊಳ್ಳಲಾರಂಭಿಸಿದ ಅವರು, ಆ ಮಕ್ಕಳಿಗೆ ಕಲಿಸಿಕೊಡುವಲ್ಲಿ ತಮ್ಮೆಲ್ಲ ಕ್ರಿಯಾಶೀಲ ವಿಧಾನಗಳನ್ನು ಬಳಸಿದರು; ಇತರ ಶಿಕ್ಷಕರಿಗೆ ತರಬೇತಿಯನ್ನು ನೀಡಿದರು ಮತ್ತು ಯಶಸ್ವಿಯಾದರು. ಅವರ ವಿಧಾನ ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ಆ ಮಕ್ಕಳಲ್ಲಿ ಬಹುತೇಕ ಮಂದಿ ಬೋರ್ಡನಲ್ಲಿ ಎಲ್ಲಾ ಮಕ್ಕಳಂತೆ ಪರೀಕ್ಷೆ ಬರೆದು ಉತ್ತಮ ಶ್ರೇಣಿಯಲ್ಲಿ ಪಾಸಾದರು. ಈ ಸುದ್ದಿ ಬಹಳಷ್ಟು ಕಡೆಗಳಲ್ಲಿ ಹರಡಿತು.
1900ರಿಂದಲೇ ಅವರು ಗ್ರಂಥಾಲಯಗಳಲ್ಲಿ ವಿಕಲಚೇತನ ಮಕ್ಕಳ ಬಗೆಗಿನ ಶಿಕ್ಷಣದ ಮಾಹಿತಿಗಾಗಿ ಹುಡುಕಾಡಿದರು. ಆಗ ಅವರಿಗೆ ದೊರೆತದ್ದು ಇಟಾರ್ಡ್ ಮತ್ತು ಸೆಗುಯಿನ್ ಎಂಬ ಫ್ರೆಂಚ್ ವೈದ್ಯರ ಕೃತಿಗಳು. ಆದರೆ ಅವರ ಇಡೀ ವಿಧಾನ ಅವರ ಸ್ವಂತ ಪ್ರಯತ್ನಗಳ ಮೂಲಕ ಬೆಳೆದು ಬಂದದ್ದು. ಆ ಬಗ್ಗೆ ಮಾಂಟೆಸ್ಸೊರಿಯವರು, “ನಾನು ಮಕ್ಕಳನ್ನು ಗಮನಿಸುತ್ತಾ, ಅವರಿಗೆ ಏನು ಬೇಕೆಂಬುದನ್ನು ಕಲಿತುಕೊಂಡೆ, ಅವರಿಗೆ ಹೇಗೆ ಕಲಿಸಲು ಸಹಾಯ ಮಾಡಬೇಕೆಂಬುದನ್ನು ಅರಿತೆ” ಎಂದಿದ್ದಾರೆ. 
ನಂತರ ಆಕೆ ಸ್ಯಾಂಟೊ ಸ್ಪಿರಿಟೊದಲ್ಲಿ ಸರ್ಜಿಕಲ್ ಅಸಿಸ್ಟೆಂಟ್ ಆಗಿ ಬಡ್ತಿ ಹೊಂದಿದರು. 1901 ರಲ್ಲಿ ಮಾಂಟೆಸ್ಸೊರಿ ತಮ್ಮ ಹೆಚ್ಚಿನ ಓದಿಗಾಗಿ ಮತ್ತು ಸಂಶೋಧನೆಗಾಗಿ ಶಾಲೆಯನ್ನು ಬಿಟ್ಟರು. ಅಷ್ಟರಲ್ಲಿ ಅವರು ರೋಮ್‍ನಲ್ಲಿದ್ದ ಶಾಲೆಯಲ್ಲಿ ಆರೋಗ್ಯದ ಅಧ್ಯಕ್ಷರಾಗಿದ್ದರು ಜೊತೆಗೆ ಶಿಕ್ಷಣ ವಿಭಾಗದ ಶಾಶ್ವತ ಬಾಹ್ಯ ಪರೀಕ್ಷಕರಾಗಿದ್ದರು. 1904ರಲ್ಲಿ ರೋಮ್ ವಿವಿಯಲ್ಲಿ ಪೂರ್ಣಕಾಲಿಕ ಪ್ರೊಫೆಸರ್ ಆಗಿ ಕೆಲಸ ನಿರ್ವಹಿಸಿದರು. ಶಾಲೆಗಳ ಸರ್ಕಾರಿ ಇನ್‍ಸ್ಪೆಕ್ಟರ್, ಉಪನ್ಯಾಸಕಿ ಮತ್ತು ವೈದ್ಯೆಯಾಗಿದ್ದರು.
1906ರಲ್ಲಿ ರೋಮ್ ವಿವಿಯಲ್ಲಿ ತಮಗಿದ್ದ ಆಂಥ್ರೊಪಾಲಜಿ ಪ್ರೊಫೆಸರ್ ಹುದ್ದೆಯನ್ನು ತ್ಯಜಿಸಿ, ತಮ್ಮ ಜೀವನದ ಮಹದಾಶೆಯ ಕೆಲಸದಲ್ಲಿ, ಅಂದರೆ ಮಕ್ಕಳ ಶಿಕ್ಷಣವನ್ನು ಪುನರ್ ರಚಿಸುವ ಕೆಲಸದಲ್ಲಿ ತೊಡಗಿಸಿಕೊಂಡರು. ಅವರ ಆರಂಭಿಕ ಗಮನ ಸಮಾಜದಿಂದ ತ್ಯಜಿಸಲ್ಪಟ್ಟಿದ್ದ ಮಾನಸಿಕ ವಿಕಲಚೇತನರನ್ನು ಸಮಾಜದ ಮುಖ್ಯ ಪ್ರವಾಹಕ್ಕೆ ತರುವುದಾಗಿತ್ತು. ಅವರ ಪ್ರಯತ್ನಗಳು ಎಷ್ಟರ ಮಟ್ಟಿಗೆ ಯಶಸ್ವಿಯಾಯಿತೆಂದರೆ, ಪೋಷಕರು ಮತ್ತು ಅವರಿಂದ ಕಲಿಯಲು ಇಚ್ಛಿಸಿದ ಶಿಕ್ಷಕರ ಒಂದು ಬಹು ದೊಡ್ಡ ಸಮುದಾಯವೇ ಅವರ ಬೆಂಬಲಿಗರಾದರು.
1906ರಲ್ಲಿ ಇಟಲಿ ಸರ್ಕಾರ ಅವರನ್ನು ಸ್ಯಾನ್ ಲೊರೆನ್ಜೊ ಪ್ರದೇಶದ ರಾಜ್ಯ ಬೆಂಬಲಿತ ಸ್ಲಮ್ ಶಾಲೆಗೆ ಇನ್‍ಚಾರ್ಜ್ ಮಾಡಿದರು. ಅಲ್ಲಿ 3ರಿಂದ 6 ವರ್ಷದ 60 ಮಕ್ಕಳಿದ್ದರು. ಮಾನಸಿಕವಾಗಿ ವಿಕಲಚೇತನ ಮಕ್ಕಳೊಂದಿಗೆ ಕೆಲಸ ಮಾಡಿ ಅನುಭವವಿದ್ದ ಅವರಿಗೆ ಸಾಮಾನ್ಯ ಮಕ್ಕಳೊಂದಿಗೆ ಕೆಲಸ ಮಾಡಲು ಕಷ್ಟವಾಗಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಹಾಳಾಗಿದ್ದ ಮಕ್ಕಳೊಂದಿಗೆ ಕೆಲಸ ಮಾಡಲು ವಾತಾವರಣ ಸಿದ್ಧತೆ ಅವಶ್ಯಕ ಎನಿಸಿತು. ಅಲ್ಲಿನ ಮಕ್ಕಳನ್ನು ಗಮನಿಸಿದ ಅವರು ಈ ತೀರ್ಮಾನಕ್ಕೆ ಬಂದರು – ‘ಮಕ್ಕಳು ತಾವಿರುವ ಪರಿಸ್ಥಿತಿಯಿಂದಾಗಿ ಕಲಿಕೆಯಲ್ಲಿ ಹಿಂದೆ ಬಿದ್ದಿದ್ದಾರೆಯೇ ಹೊರತು ಬುದ್ಧಿವಂತಿಕೆಯಲ್ಲಲ್ಲ. ಜೊತೆಗೆ ಸಾಮಾನ್ಯ ಪರಿಸರದಲ್ಲಿ ಬೆಳೆಯುವ ಮಕ್ಕಳನ್ನು ಅಳೆಯುವ ಮಾಪನದಿಂದ ಅವರನ್ನು ಅಳೆಯುವುದು ಸರಿಯಲ್ಲ. ಅವರಲ್ಲಿ ಬುದ್ಧಿವಂತಿಕೆಯಿದೆ, ಅದನ್ನು ಹೊರತೆಗೆಯುವ ವಿಧಾನ ಹುಡುಕಬೇಕಷ್ಟೇ.’ ಅಂತೆಯೇ ಆ ಮಕ್ಕಳಿಗೆ ಸೂಕ್ತ ವಾತಾವರಣವನ್ನು ಯಶಸ್ವಿಯಾಗಿ ನಿರ್ಮಿಸಿದರು. 
ಅವರ ವಿಧಾನದ ಮೂಲ ಲಕ್ಷಣಗಳೆಂದರೆ - ಮಕ್ಕಳಲ್ಲಿ ಮುನ್ನುಗ್ಗುವ ಧೋರಣೆಯನ್ನು ಬೆಳೆಸುವುದು, ಜವಾಬ್ದಾರಿಯುತ ವೈಯಕ್ತಿಕ ಸ್ವಾತಂತ್ರ್ಯದ ವರ್ತನೆಯನ್ನು ಕಲಿಸುವುದಾಗಿತ್ತು. ಸ್ವ -ಪ್ರೇರೇಪಣೆ, ಸ್ವ – ಕಲಿಕೆ. ಸರಿಯಾದ ಸಾಮಗ್ರಿಗಳನ್ನು ಒದಗಿಸಿದರೆ ಮಗು ಸಹಜವಾಗಿಯೇ ಕಲಿಯುತ್ತದೆ. ಆ ಸಾಮಾಗ್ರಿಗಳೆಂದರೆ – ಕಲಿಕೆಯ ಆಟಗಳು – ಮಕ್ಕಳ ಸಾಮರ್ಥ್ಯ ಮತ್ತು ಕಲಿಕೆಗೆ ಸೂಕ್ತವಾಗಿರುವಂತಹುದು. ಮಾಂಟೆಸ್ಸೊರಿ ವಿಧಾನದ ಶಿಕ್ಷಕರು - ಕ್ರಿಯಾಶೀಲ ಶಿಕ್ಷಕರು. ಅವರು ಕ್ರಿಯಾರಹಿತ ತರಗತಿಗೆ ಗಂಟೆಗಟ್ಟಲೆ ಬೋಧಿಸುವ ಸಾಂಪ್ರದಾಯಿಕ ವ್ಯವಸ್ಥೆಯನ್ನು ವಿರೋಧಿಸುತ್ತಾರೆ. 
ಕಲಿಸುವ, ಗಮನ ಸೆಳೆವ, ಏಕಾಗ್ರತೆ ಬೆಳೆಸುವ, ದೇಹದ ವಿವಿಧ ಅಂಗಗಳ ನಡುವೆ ಹೊಂದಾಣಿಕೆ ಮೂಡುವ, ಕಣ್ಣು-ಕೈ ನಡುವೆ ಸಂಬಂಧ ಬೆಳೆಸುವ ಆಟಗಳನ್ನು ಮಾಂಟೆಸ್ಸೊರಿಯವರು ಸಿದ್ಧಪಡಿಸಿದರು.  ಅದನ್ನು ಶಿಕ್ಶಕರು ಮಕ್ಕಳಿಗೆ ಒದಗಿಸುತ್ತಿದ್ದರು, ಮಕ್ಕಳಿಗೆ ನೆರವು ಅಗತ್ಯವಿದ್ದಾಗ ಮಾತ್ರ ಮಧ್ಯ ಪ್ರವೇಶಿಸುತ್ತಿದ್ದರು. ಶಾಲೆಯಲ್ಲಿ ಸಿಧ್ದವಿರುವ ಆಟಗಳು, ಗೊಂಬೆಗಳು, ಪಾತ್ರೆಗಳು, ಪ್ರಾಣಿಗಳು, ಗಿಡಗಳು – ಮಕ್ಕಳು ಅವುಗಳ ಬಗ್ಗೆ ಕಾಳಜಿ ವಹಿಸುತ್ತಿದ್ದರು. ಮಕ್ಕಳು ಕಲಿಯಲು ಸಹಾಯ ಮಾಡುತ್ತಾ, ಶಿಕ್ಷಕರು ಮಕ್ಕಳಿಗೆ ಸಲಹಾಗಾರರಾಗಿ, ಮಾರ್ಗದರ್ಶಕರಾಗಿ ಇರುತ್ತಿದ್ದರು. ಮಕ್ಕಳು ತ್ವರಿತ ಗತಿಯಲ್ಲಿ ಕಲಿಯಲಾರಂಭಿಸಿದರು. ಕೇವಲ ಓದಿನಲ್ಲಿ ಅಷ್ಟೇ ಅಲ್ಲದೆ ಸುಸಂಸ್ಕೃತ ನಾಗರಿಕರಾಗುವ ಲಕ್ಷಣಗಳನ್ನು ಬೆಳೆಸಿಕೊಂಡರು.
ಅವರ ಈ ಯಶಸ್ವಿ ಪ್ರಯೋಗಗಳ ಬಗ್ಗೆ ಪತ್ರಿಕೆಗಳು ಬರೆಯಲಾರಂಭಿಸಿದವು. ಮಾಂಟೆಸ್ರ್ಸೆರಿಯವರ ಶಿಕ್ಷಣ ಪದ್ಧತಿಯನ್ನು ಅಮೇರಿಕಾದ ಪ್ರಮುಖ ವ್ಯಕ್ತಿಗಳಾದ ವುಡ್ರೊ ವಿಲ್ಸನ್, ಅಲೆಕ್ಸಾಂಡರ್ ಗ್ರಹಾಂ ಬೆಲ್, ಥಾಮಸ್ ಎಡಿಸನ್, ಹೆನ್ರಿ ಫೋರ್ಡ್ ಮುಂತಾದವರು ಬೆಂಬಲಿಸಿದರು. ಅವರ ಬಗ್ಗೆ ಅಸಂಖ್ಯಾತ ಲೇಖನಗಳು ಪ್ರಕಟವಾದವು. ಡಾ. ಮರಿಯಾ ಮಾಂಟೆಸ್ಸೊರಿಯವರನ್ನು ಆರಂಭಿಕ ಬಾಲ್ಯ ಶಿಕ್ಷಣದ ಆರಂಭಕರ್ತರಲ್ಲಿ ಒಬ್ಬರೆಂದೇ ಗುರುತಿಸಲಾಯಿತು. ಅವರ ಪ್ರಮುಖ ಬರಹಗಳೆಂದರೆ  – ಮಾಂಟೆಸ್ಸೊರಿ ವಿಧಾನ (1912), ಪೆಡಗಾಗಿಕಲ್ ಆಂಥ್ರೊಪಾಲಜಿ (1913), ಮುಂದುವರೆದ ಮಾಂಟೆಸ್ಸೊರಿ ವಿಧಾನ (1917); ಬಾಲ್ಯದ ರಹಸ್ಯ (1936)
1910ರಿಂದ ಯೂರೋಪ್, ಅಮೇರಿಕಾ, ಭಾರತದಲ್ಲಿ ಪ್ರವಾಸ ಮಾಡುತ್ತಾ, ಭಾಷಣಗಳನ್ನು ಮಾಡುತ್ತಾ, ಮಾಂಟೆಸ್ಸೊರಿ ಶಾಲೆಗಳನ್ನು ಸ್ಥಾಪಿಸುತ್ತಾ, ಶಿಕ್ಷಕರಿಗೆ ತರಬೇತಿ ನೀಡುತ್ತಾ, ಶಿಕ್ಷಣದ ಬಗ್ಗೆ ಪುಸ್ತಕಗಳನ್ನು ಬರೆಯುತ್ತಾ 40 ವರ್ಷಗಳನ್ನು ಕಳೆದರು. 
ಮಾಂಟೆಸ್ಸೊರಿಯವರು 1929ರಲ್ಲಿ ಮಾಂಟೆಸ್ಸೊರಿ ಅಂತರರಾಷ್ಟ್ರೀಯ ಸಂಘವನ್ನು ಸ್ಥಾಪಿಸಿದರು. ಅಷ್ಟರಲ್ಲಿ ರಾಜಕೀಯ ಜಗತ್ತು ಬದಲಾಗುತ್ತಿತ್ತು. ಇಟಲಿಯಲ್ಲಿ ಮುಸ್ಸೊಲಿನಿ ನಾಯಕತ್ವದ ನಿರಂಕುಶ ಪ್ರಭುತ್ವ ಅಸ್ತಿತ್ವಕ್ಕೆ ಬಂದಿತ್ತು. ಆ ಸರ್ಕಾರ ಮಕ್ಕಳ ಬಗೆಗಿನ, ಶಿಕ್ಷಣದ ಬಗೆಗಿನ ಅವರ ವಿಚಾರಗಳನ್ನು ಅಂಗೀಕರಿಸಲಿಲ್ಲ. ಮಾಂಟೆಸ್ಸೊರಿಯವರ ಶಾಲೆಗಳನ್ನು, ಯುದ್ಧಕ್ಕಾಗಿ ಸೈನಿಕರನ್ನು ಸಜ್ಜುಗೊಳಿಸುವ ತರಬೇತಿ ಕೇಂದ್ರವನ್ನಾಗಿ ಮಾಡಬೇಕೆನ್ನುವ ಒತ್ತಡ ಹೆಚ್ಚಾಯಿತು. ತಮ್ಮ ತತ್ವಗಳೊಂದಿಗೆ ಯಾವುದೇ ಸಂಧಾನ ಮಾಡಿಕೊಳ್ಳಲಿಚ್ಛಿಸದ ಅವರು ಸಹಜವಾಗಿ ಅದನ್ನು ತಿರಸ್ಕರಿಸಿದರು. ಅವರನ್ನು ಮತ್ತು ಅವರ ಮಗನನ್ನು ಗೃಹಬಂಧನದಲ್ಲಿರಿಸಲಾಯಿತು, ನಂತರ ಗಡಿಪಾರು ಮಾಡಲಾಯಿತು. ಅವರು ಅಲ್ಲಿಂದ ಸ್ಪೇನ್‍ಗೆ ತೆರಳಿದರು. 1936ರವರೆಗೆ ಅಲ್ಲಿದ್ದು ನಂತರ ಅಲ್ಲಿಂದ ನೆದರ್‍ಲ್ಯಾಂಡ್ ಗೆ ತೆರಳಿ ಅಲ್ಲಿ ಆಶ್ರಯ ಪಡೆದರು. 
2ನೇ ಜಾಗತಿಕ ಯುದ್ಧದ ಸಮಯದಲ್ಲಿ ಭಾರತದಲ್ಲಿ ಶಿಕ್ಷಕರ ಸಮ್ಮೇಳನಕ್ಕೆ ಬಂದ ಅವರು ಯುದ್ಧ ಕಾಲಾವಧಿಯಲ್ಲಿ ಇಲ್ಲಿಯೇ ಉಳಿದರು. ನಂತರ 1952ರವರೆಗೆ, ಅಂದರೆ, ತಮ್ಮ ಮರಣಕಾಲದವರೆಗೆ ನೆದರ್‍ಲ್ಯಾಂಡ್ಸ್‍ನಲ್ಲಿ ಉಳಿದರು. ಅಲ್ಲಿ ಅಸೋಸಿಯೇಷನ್ ಮಾಂಟೆಸ್ಸೊರಿ ಇಂಟರ್‍ನ್ಯಾಷನೇಲ್‍ನ ಕೇಂದ್ರ ಸ್ಥಾನವಿದೆ.
ಅವರ ಮಾನವೀಯತಾವಾದಿ ಮೌಲ್ಯಗಳನ್ನು ಪ್ರತಿಪಾದಿಸಿದರು. ಅವರು ಸಕ್ರಿಯವಾಗಿ ಹಲವಾರು ಸಾಮಾಜಿಕ ಸುಧಾರಣಾ ಚಳುವಳಿಗಳಲ್ಲಿ ಭಾಗಿಯಾದರು. ಯೂರೋಪಿನಾದ್ಯಂತ ಮಕ್ಕಳ ಹಕ್ಕುಗಳು, ಮಹಿಳಾ ಚಳುವಳಿ, ಶಾಂತಿ ಶಿಕ್ಷಣ ಮತ್ತು ಲೀಗ್ ಆಫ್ ನೇಷನ್ಸ್ ನ ಪ್ರಾಮುಖ್ಯತೆ ಬಗ್ಗೆ ಭಾಷಣಕಾರರಾಗಿ ಗುರುತಿಸಲ್ಪಟ್ಟರು.  ಮಕ್ಕಳನ್ನು ವ್ಯಕ್ತಿಗಳನ್ನಾಗಿ ಗುರುತಿಸುವ ಹಕ್ಕು ನೀಡಬೇಕು ಎಂದು ಸಾರಿದರು. ಇದು ವಿಶ್ವದಾದ್ಯಂತ, ಸಮಾಜಗಳು ಮಕ್ಕಳ ಹಕ್ಕುಗಳ ಬಗ್ಗೆ ಮತ್ತು ಅವರ ಪಾತ್ರಗಳ ಬಗ್ಗೆ ಪುನರ್ ವ್ಯಾಖ್ಯಾನಿಸಲಾರಂಭಿಸುವಂತೆ ಮಾಡಿತು. ಮಹಿಳೆಯರ ಹಕ್ಕುಗಳ ಬಗ್ಗೆ ಕಾಳಜಿ ಇದ್ದ ಅವರು ಬಹಳಷ್ಟು ಮಹಿಳಾ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ, ಅವರ ಹಕ್ಕುಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಕ್ಕಳ ಹಕ್ಕುಗಳು ಮತ್ತು ಶಿಕ್ಷಣಕ್ಕಾಗಿ, ಮಹಿಳೆಯರ ಹಕ್ಕುಗಳಿಗಾಗಿ, ಸಮಾಜ ಸುಧಾರಣೆಗಾಗಿ ಹೋರಾಡಿದ ಅವರ ಹೆಸರನ್ನು ಮೂರು ಬಾರಿ ನೊಬೆಲ್ ಪ್ರಶಸ್ತಿಗೆ ಸೂಚಿಸಲಾಯಿತು.
  - ಸುಧಾ ಜಿ 



ವ್ಯಕ್ತಿ ಪರಿಚಯ - ರಾಜಾ ರಾಮ್‍ಮೋಹನ ರಾಯ್






ಚಿತಾಗ್ನಿಯು ತನ್ನ ಕೆನ್ನಾಲಗೆಯನ್ನು ಮಾರುದ್ದ ಚಾಚುತಿತ್ತು. ಸಜೀವಿಯನ್ನೇ ದಹಿಸಲು ಕಾತರಗೊಂಡಿತ್ತು. ಅಲೋಕಮಂಜರಿ ತನ್ನ ಪತಿಯ ಮರಣದಿಂದ ಅರ್ಧ ಕುಸಿದಿದ್ದಳು. ಜೀವನವೆ ವ್ಯರ್ಥ ಎಂದು ಪತಿಯ ಹಾದಿ ಹಿಡಿಯ ಹೊರಟಿದ್ದಳು. ಇನ್ನೇನು ಚಿತೆಗೆ ಹಾರಬೇಕೆನ್ನುವಷ್ಟರಲ್ಲಿ ಪತಿಯ ಸೋದರ ಅವಳನ್ನು ತಡೆಯುತ್ತಾನೆ. 
“ಬೇಡ ತಾಯಿ, ಮೂರ್ಖತನದ ಕೆಲಸ ಬೇಡ. ನಿನ್ನ ಬಾಳನ್ನು ಬೆಂಕಿಗೆ ಆಹುತಿ ನೀಡಬೇಡ. ಈ ತ್ಯಾಗದಿಂದ ಅಣ್ಣನ ಆತ್ಮಕ್ಕೆ ಎಳ್ಳಷ್ಟು ಶಾಂತಿ ಸಿಗದು,” ಗೋಗರೆಯುತ್ತಾನೆ. ಅವಳು ವಾಸ್ತವ ಲೋಕಕ್ಕೆ ಬರುತ್ತಾಳೆ. ಆ ಮಾತುಗಳಿಂದ ದ್ವಂದ್ವಕ್ಕೆ ಸಿಲುಕುತ್ತಾಳೆ. ತನ್ನ ಮುಂದಿದ್ದ ಬೆಂಕಿಯ ಭೀಕರ ಘರ್ಜನೆಯಿಂದ ಅಧೀರಗೊಂಡು ಒಂದು ಹೆಜ್ಜೆ ಹಿಂದಿಡುತ್ತಾಳೆ. 
ಅಲ್ಲಿ ನೆರೆದಿದ್ದ ಪುರೋಹಿತರು, ಸಂಪ್ರದಾಯವಾದಿಗಳು ಆತನನ್ನು ವಿರೋಧಿಸಿ ದೂರಕ್ಕೆ ದೂಡುತ್ತಾರೆ. ಅಲೋಕಮಂಜರಿಗೆ ಬೆಂಕಿಗೆ ಬೀಳಲು ಪ್ರೋತ್ಸಾಹಿಸುತ್ತಾರೆ. “ಪತಿ ಇಲ್ಲದೆ ಮೇಲೆ ವಿಧವೆಯ ಬಾಳು ಹೀನಾಯವಾದದ್ದು. ನೀನು ಸಾಯುವುದೇ ಧರ್ಮ. ಪತಿಯ ಜೊತೆ ಹೋಗಿ ಸ್ವರ್ಗವನ್ನು ಸೇರಿ ಅಲ್ಲಿಯೂ ಆತನನ್ನು ಸೇವೆ ಮಾಡುವುದೇ ಅವಳಿಗೆ ಒಳಿತು” ಎಂದು ಆಕೆಯನ್ನು ಬಲವಂತವಾಗಿ ಆಕೆಗೆ ಇನ್ನೇನೂ ಯೋಚಿಸಲು ಸಮಯ ನೀಡದೆ ಬೆಂಕಿಗೆ ತಳ್ಳುತ್ತಾರೆ. ಆಕೆ ಸಹಿಸಲಸಾಧ್ಯ ನೋವಿನಿಂದ ಸಹಾಯಕ್ಕಾಗಿ ಕೂಗುತ್ತಾಳೆ. ‘ಕಾಪಾಡಿ’ ಎಂದು ಚೀತ್ಕರಿಸುತ್ತಾಳೆ. ಅವರೆಲ್ಲಾ ಕಿವಿ ಕೇಳದವರಂತೆ, ಕಣ್ಣು ಕಾಣದವರಂತೆ ನಟಿಸುತ್ತಾರೆ. ತಕ್ಷಣವೇ ಜಯಕಾರ ಘೋಷಗಳು, ತಮಟೆಯ ಸದ್ದು ಆಕೆಯ ಚೀತ್ಕಾರವನ್ನು ಮುಚ್ಚಿಹಾಕುತ್ತವೆ. ಎಲ್ಲರೂ ಆಕೆಯ ತ್ಯಾಗವನ್ನು ಹೊಗಳುತ್ತಾರೆ, ನಾಟಕೀಯ ಕನಿಕರವನ್ನು ತೋರುತ್ತಾರೆ.  ಆಕೆ ತೊಳಲಾಡಿದಷ್ಟೂ ಬೆಂಕಿಯಲ್ಲಿ ಕಾದು ಕೆಂಪಗಾದ ಬಿದಿರು ಬೊಂಬುಗಳು ಆಕೆಯನ್ನು ತಿವಿದು, ತನ್ನೊಳಗೆ ಎಳೆದುಕೊಂಡು ಸಮಾಧಿ ಮಾಡುತ್ತದೆ. ಅಲ್ಲಿ ನೆರೆದವರೆಲ್ಲಾ ಆಕೆಯನ್ನು ಸ್ತುತಿಸುತ್ತಾ ಮನೆಗೆ ತೆರಳುತ್ತಾರೆ.
ಆದರೆ ಕಣ್ಮುಂದೆಯೇ ನಡೆದ ಈ ಘೋರ ಕೃತ್ಯ ಆ ಯುವಕನಲ್ಲಿ ತೀವ್ರ ಪರಿಣಾಮವನ್ನುಂಟು ಮಾಡುತ್ತದೆ. ಮನುಷ್ಯ ಸಮಾಜಕ್ಕೆ ಕಳಂಕಪ್ರಾಯವಾದ ಈ ಕ್ರೂರ ಸತಿ ಪದ್ಧತಿಯನ್ನು ಬುಡಸಮೇತ ಕಿತ್ತೊಗೆಯುವ ನಿರ್ಧಾರವನ್ನು ಅಂದೇ ಕೈಗೊಳ್ಳುತ್ತಾನೆ. ಆತನೇ ಮುಂದೆ ಭಾರತದ ನವೋದಯದ ಧೃವತಾರೆ ಎಂಬ ಬಿರುದನ್ನು ಪಡೆಯುತ್ತಾರೆ. 
ರಾಜಾ ರಾಮ್ ಮೋಹನ್ ರಾಯ್

1774ರ ಮೇ 22 ರಂದು ಬಂಗಾಳದ ರಾಧಾನಗರದಲ್ಲಿ ಜನಿಸಿದ ರಾಜಾ ರಾಮ್ ಮೋಹನ್ ರಾಯ್ ರವರ ತಂದೆ ರಮಾಕಾಂತ್ ರಾಯ್ ಮತ್ತು ತಾಯಿ ತಾರಿಣೀದೇವಿ. ಇವರದ್ದು ಅತ್ಯಂತ ಸಂಪ್ರದಾಯಸ್ಥ ಕುಟುಂಬ. ಸುಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಬೆಳೆದ ಇವರು ತಮ್ಮ ಬಾಲ್ಯ ಶಿಕ್ಷಣವನ್ನು ಹಳ್ಳಿಯಲ್ಲೇ ಪಡೆದು, 9ನೇ ವಯಸ್ಸಿನಲ್ಲಿ ಹೆಚ್ಚಿನ ವ್ಯಾಸಂಗಕ್ಕಾಗಿ ಪಾಟ್ನಾಗೆ ತೆರಳಿದರು. ಅಲ್ಲಿ ಪರ್ಶಿಯನ್ ಮತ್ತು ಅರೆಬಿಕ್ ಭಾಷೆ ಕಲಿತರು. ಮೌಲ್ವಿಗಳ ಪರಿಚಯವಾಗಿ ಇಸ್ಲಾಂ ಧರ್ಮದ ಕೆಲವು ಉತ್ತಮ ಅಂಶಗಳಿಂದ ಆಕರ್ಷಿತರಾದರು. ಏಕದೇವೂಪಾಸನೆ ಮತ್ತು ದೇವರು ನಿರಾಕಾರ ಸ್ವರೂಪಿ ಎಂಬ ವಿಚಾರಗಳು ಅವರಿಗೆ ತುಂಬಾ ಹಿಡಿಸಿತು. 
ವ್ಯಾಸಂಗ ಮುಗಿಸಿ ಮನೆಗೆ ಮರಳಿದ ಮೇಲೆ ಅವರು ಮನೆಯಲ್ಲಿ ನಡೆಯುತ್ತಿದ್ದ ಅರ್ಥರಹಿತ ಆಚರಣೆಗಳನ್ನು ಪ್ರಶ್ನಿಸತೊಡಗಿದರು. ಇದರಿಂದ ತಂದೆ ಮಗನಲ್ಲಿ ವೈಮನಸ್ಯವುಂಟಾಗಿ ಅವರು ಮನೆಯನ್ನು ತ್ಯಜಿಸಬೇಕಾಯಿತು. ಅವರು ಬೌದ್ಧ ಧರ್ಮದ ಬಗ್ಗೆ ತಿಳಿಯಲು ಟಿಬೆಟ್ ಗೆ ತೆರಳಿದರು. ಲಾಮಾಗಳು ಅನುಸರಿಸುತ್ತಿದ್ದ ಮೂಢ ಪದ್ಧತಿಗಳನ್ನು ಕುರುಡು ಸಂಪ್ರದಾಯಗಳನ್ನು, ದೇವಾಲಯಗಳಲ್ಲಿ ನಡೆಯುತ್ತಿದ್ದ ಧರ್ಮದ ಹೆಸರಿನ ದಂಧೆಗಳನ್ನು ಟೀಕಿಸಿದರು. ಇದರಿಂದ ಕೆರಳಿದ ಲಾಮಾಗಳು ಅವರ ಪ್ರಾಣಕ್ಕೆ ಕುತ್ತು ತರಲು ಪ್ರಯತ್ನಿಸಿದಾಗ ಅಲ್ಲಿನ ಕೆಲವು ಸಹೃದಯ ಮಹಿಳೆಯರ ಸಹಾಯದಿಂದ ತಪ್ಪಿಸಿಕೊಂಡು ಬಂದರು. ಇದರಿಂದ ಅವರಿಗೆ ಮಹಿಳೆಯರ ಮೇಲಿನ ಗೌರವ ಭಾವನೆ ಮತ್ತಷ್ಟು ಹೆಚ್ಚಾಯಿತು.
ಹಿಂತಿರುಗಿದ ಮೇಲೆ ಹಿಂದೂ ಧರ್ಮದ ಮೂಲ ಅರಿಯಲು ವೇದ ಉಪನಿಷತ್ ಗಳ ಆಳ ಅಧ್ಯಯನದಲ್ಲಿ ತೊಡಗಿದರು. ಮೂಲಧರ್ಮಕ್ಕೂ ಪ್ರಸ್ತುತ ಆಚರಣೆಗಳಿಗೂ ಇರುವ ಅಜಗಜಾಂತರ ವ್ಯತ್ಯಾಸವನ್ನು ಗ್ರಹಿಸಿದರು. ತಮ್ಮ ಭಾಷಾ ಜ್ಞಾನವನ್ನು ಬಳಸಿಕೊಂಡು ವೇದಗಳನ್ನು ಬಂಗಾಳಿಗೆ ಅನುವಾದಿಸಿದರು, ಜನರಲ್ಲಿ ಆ ಬಗ್ಗೆ ಅರಿವು ಮೂಡಿಸಲು ಯತ್ನಿಸಿದರು. ಚರ್ಚೆ, ಸಂವಾದಗಳ ಮೂಲಕ ಜಾಗೃತಿ ಮೂಡಿಸಲೆತ್ನಿಸಿದರು. ಉತ್ತಮ ಇಂಗ್ಲಿಷ್ ಜ್ಞಾನವನ್ನು ಹೊಂದಿದ್ದ ಇವರು ಪಾಶ್ಚಿಮಾತ್ಯ ವಿಚಾರಧಾರೆ, ಅಲ್ಲಿನ ಶಿಕ್ಷಣ ಪದ್ಧತಿ, ಕ್ರಾಂತಿಕಾರಿ ಹೋರಾಟಗಳು, ವಿಜ್ಞಾನ, ಪತ್ರಿಕಾ ಸ್ವಾತಂತ್ರ್ಯ ಇತ್ಯಾದಿ ಉನ್ನತ ವಿಚಾರಗಳಿಂದ ಪ್ರಭಾವಿತರಾದರು.
ತಮ್ಮ ಕುಟುಂಬದಲ್ಲಾದ ಸತಿ ಪದ್ಧತಿಯ ಅನುಸರಣೆಯಿಂದ ನೊಂದ ಇವರು ಈ ಕೆಟ್ಟ ಪದ್ಧತಿಯ ಜೊತೆಗೆ ಇತರ ಪಿಡುಗುಗಳಾದ ಬಹುಪತ್ನಿತ್ವ, ಬಾಲ್ಯವಿವಾಹ, ಸ್ತ್ರೀ ಭ್ರೂಣ ಹತ್ಯೆ, ಜಾತಿಪದ್ಧತಿ ಇತ್ಯಾದಿಗಳ ವಿರುದ್ಧ ಟೊಂಕ ಕಟ್ಟಿ ನಿಂತರು. ಬ್ರಹ್ಮ ಸಮಾಜವನ್ನು ಸ್ಥಾಪಿಸಿ ಅದನ್ನು ಸಾಮಾಜಿಕ ಸಮಸ್ಯೆಗಳನ್ನು ನಿರ್ಮೂಲನಗೊಳಿಸುವ ಅಸ್ತ್ರವನ್ನಾಗಿ ಬಳಸಿದರು. ಪತ್ರಿಕೆಗಳಲ್ಲಿ ತಮ್ಮ ಶಕ್ತಿಯುತ ಲೇಖನಗಳ ಮೂಲಕ ಸತಿ ಪದ್ಧತಿಯ ವಿರುದ್ಧ ಟೀಕಾಪ್ರಹಾರ ಮಾಡಿದರು.
1928ರಲ್ಲಿ ಕಲ್ಕತ್ತಾದಲ್ಲಿ 309 ವಿಧವೆಯರನ್ನು ಸಜೀವ ದಹಿಸಲಾಗಿತ್ತೆಂಬ ವಿಷಯವನ್ನು ಪ್ರಕಟಿಸಿದರು. ಸರ್ಕಾರಕ್ಕೆ ಅರ್ಜಿಯ ಮೇಲೆ ಅರ್ಜಿಯನ್ನು ಸಲ್ಲಿಸಿ ಸತಿ ಪದ್ಧತಿಯನ್ನು ರದ್ದುಗೊಳಿಸಬೇಕೆಂದು ಆಗ್ರಹ ಪಡಿಸಿದರು. ಇದರಿಂದ ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾದರು. ಜೀವ ಬೆದರಿಕೆಯನ್ನು ಲೆಕ್ಕಿಸಿದೆ ಜನರ ಬಳಿ ಸಹಿ ಸಂಗ್ರಹಿಸಿ ಸರ್ಕಾರದ ಮೇಲೆ ಒತ್ತಡ ತಂದರು. ಹಿಂದೂ ಧರ್ಮದಲ್ಲೆಲ್ಲೂ ಸತಿ ಪದ್ಧತಿಯ ಸಮರ್ಥನೆ ಇಲ್ಲವೆಂದು ಪ್ರತಿಪಾದಿಸಿದರು. ಅದಕ್ಕಾಗಿ ಹಣ, ಆರೋಗ್ಯ ಎಲ್ಲವನ್ನೂ ತ್ಯಾಗ ಮಾಡಿದರು. ಆ ಕೆಲಸಕ್ಕಾಗಿಯೇ ಇಂಗ್ಲೆಂಡ್‍ಗೂ ಹೋದರು. ಕೊನೆಗೂ ಇವರ ಒತ್ತಡಕ್ಕೆ ಮಣಿದ ಬ್ರಿಟಿಷ್ ಸರ್ಕಾರ 1929ರಲ್ಲಿ ಸತಿ ಪದ್ಧತಿಯನ್ನು ನಿಷೇಧಿಸಿ ಕಾನೂನನ್ನು ಜಾರಿಗೊಳಿಸಿತು. ಆ ಕಾನೂನು ಎಷ್ಟು ಕಟುವಾಗಿತ್ತೆಂದರೆ ಸತಿ ಪದ್ಧತಿ ಕೆಲವೇ ತಿಂಗಳುಗಳಲ್ಲಿ ಸಂಪೂರ್ಣವಾಗಿ ಕಣ್ಮರೆಯಾಯಿತು, ಅಲ್ಲೊಂದು ಇಲ್ಲೊಂದು ಘಟನೆಗಳನ್ನು ಹೊರತುಪಡಿಸಿ. 
19ನೇ ಶತಮಾನದ ಭಾರತದ ಸುಧಾರಣಾ ಚಳುವಳಿಯ ಪ್ರವರ್ತಕರೆನಿಸಿಕೊಂಡಿರುವ ರಾಮ್‍ಮೋಹನ್ ರಾಯ್‍ರವರು ಮಹಿಳಾ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದರು. ಹಳೆಯ ಸಾಂಪ್ರದಾಯಿಕ ಶಿಕ್ಷಣವನ್ನು ವಿರೋಧಿಸಿ ಪ್ರಗತಿಪರ ವಿಚಾರಧಾರೆಯುಳ್ಳ ವೈಜ್ಞಾನಿಕ ಶಿಕ್ಷಣ ಎಲ್ಲರಿಗೂ ದೊರೆಯಬೇಕೆಂದು ಪ್ರತಿಪಾದಿಸಿದರು. ಬಹುಪತ್ನಿತ್ವ ಮತ್ತು ಬಾಲ್ಯವಿವಾಹಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದರು. ಒಟ್ಟಾರೆ ಮಹಿಳೆಯರ ಸರ್ವತೋಮುಖ ಏಳಿಗೆಗಾಗಿ ಶ್ರಮಿಸಿದರು. ಏಕೆಂದರೆ ಸಮಾಜದ ಅರ್ಧ ಭಾಗವನ್ನು ಕತ್ತಲೆಯಲ್ಲಿಟ್ಟು, ಸಮಾಜ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲವೆಂಬುದು ಅವರ ದೃಢ ಅಭಿಪ್ರಾಯವಾಗಿತ್ತು.
1833ರಲ್ಲಿ ಲಂಡನ್‍ನ ಬ್ರಿಸ್ಟಲ್‍ನಲ್ಲಿ ತಮ್ಮ ಕೊನೆಯುಸಿರೆಳೆದರು. ಹೆಣ್ಣುಮಕ್ಕಳ ಉದ್ಧಾರಕ್ಕಾಗಿ ಶ್ರಮಿಸಿದ ಮಹನೀಯರ ಸಾಲಿನಲ್ಲಿ ಅಗ್ರಸ್ಥಾನದಲ್ಲಿರುವ ರಾಮ್ ಮೋಹನ್ ರಾಯರವರು ತಮ್ಮ ಸಮಸ್ಯೆಗಳ ವಿರುದ್ಧ ಹೋರಾಡುತ್ತಿರುವ ಮಹಿಳೆಯರಿಗೆ ಎಂದಿಗೂ ದಾರಿದೀಪಕರಾಗಿ ಉಳಿಯುತ್ತಾರೆ.
     
- ಉಷಾಗಂಗೆ  

ಮಹಿಳಾ ಜಾಗೃತಿ ಗೀತೆ - ತೂರಬೇಡಿ ಗಾಳಿಗೆ


ತೂರಬೇಡಿ ಗಾಳಿಗೆ ಹೆಣ್ತನದ ಘನತೆಯ 
ಜೀವ ಕೊಡುವ ಜೀವವಿದು ಕಡಿಮೆ ಯಾರಿಗೆ ? 
ಕಡಿಮೆ ಯಾರಿಗೆ ?      ।।ತೂರಬೇಡಿ ಗಾಳಿಗೆ।।

ನಾಚಬೇಡಿ ಹೆಣ್ತನಕೆ ತಲೆ ಎತ್ತಿ ನಿಲ್ಲಿರಿ 
ನಾಚಬೇಕು ತುಳಿದವರು ಮನುಜಾತಿಗೆ ಸೇರಿದವರು  ।।ತೂರಬೇಡಿ ಗಾಳಿಗೆ।।

ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು 
ಕತ್ತಲ ಏಕಾಂತದಲ್ಲಿ ಕಣ್ಣ ಹನಿ ಸಾಕವ್ವ 
ಬೆಳಕಿಗೊಮ್ಮೆ ಈಚೆ ಬಾ ಕಂಡೀತು ಜೀವನ 
 ಕಂಡೀತು ಜೀವನ    ।।ತೂರಬೇಡಿ ಗಾಳಿಗೆ।।

ನಾನು ನೀನು ಅವಳು ಇವಳು ಹೆಣ್ಣಾಗಿ ನೊಂದವರು 
ಕೈಗೆ ಕೈ ಜೋಡಿಸೋಣ
 ಹೊಸ ಜಗತ್ತು ನಮ್ಮದು  (೩)  ।।ತೂರಬೇಡಿ ಗಾಳಿಗೆ।।

  - ವಿಜಯ ದಬ್ಬೆ 

ಪುಟ್ಕಥೆಗಳು

ಪುಟ್ಕಥೆ - 1
"ನೀನು ಹೇಳುವಂತೆ ಹಕ್ಕುಗಳಿಗಾಗಿ ಹೋರಾಡಿದರೆ ಸಂಸಾರ ಕಿತ್ತುಹೋಗುತ್ತಲ್ಲ" ಅಕ್ಕ ತಮ್ಮನಿಗೆ ಹೇಳಿದಳು.
"ಹಾಗಿದ್ದರೆ ಅದು ಸಂಸಾರವಲ್ಲ ಅಕ್ಕ, ವ್ಯವಹಾರ" ಉತ್ತರಿಸಿದ.

ಪುಟ್ಕಥೆ - 2
"೧೪ ವರ್ಷದ ಹೆಣ್ಣುಮಗಳೊಬ್ಬಳ ಫೋನ್ ಕರೆ ೧೦ ಹೆಣ್ಣುಮಕ್ಕಳನ್ನು ಬಾಲ್ಯ ವಿವಾಹದಿಂದ ರಕ್ಷಿಸಿತು." ಸುದ್ದಿಯನ್ನು ಓದಿದಳು ಆಕೆ.
 "೧೪ ವರ್ಷಕ್ಕೆ ಆ ಅಸಹಾಯಕ ಹುಡುಗಿ ಧೈರ್ಯದಿಂದ ಹೋರಾಡಬಹುದಾದರೆ ೨೪ ವರ್ಷದ ಉದ್ಯೋಗಸ್ಥೆಯಾದ ನಾನು ಎದುರಿಸಲಾರೆನೆ?" ತನ್ನನ್ನೇ ತಾನು ಪ್ರಶ್ನಿಸಿಕೊಂಡಳು ಆಕೆ. ಮಾರನೇ ಬೆಳಿಗ್ಗೆ ಗಂಡನಿಗೆ ಹೇಳಿದಳು, "ನಾನು ಅಬಾರ್ಷನ್ ಮಾಡಿಸಿಕೊಳ್ಳೋಲ್ಲ, ನನಗೆ ನನ್ನ ಮಗಳು ಬೇಕು!!"

ಪುಟ್ಕಥೆ - 3
"ಮೈತುಂಬ ಒಡವೆ ಮಾಡಿಸಿಕೊಟ್ಟಿದ್ದೀನಿ, ಬೀರು ತುಂಬ ರೇಷ್ಮೆ ಸೀರೆಗಳಿವೆ, ಇರಲು ಬಂಗಲೆ, ಓಡಾಡಲು ಕಾರು, ಆಳುಕಾಳುಗಳು ಎಲ್ಲ ಕೊಟ್ಟಿದ್ದೇನೆ, ಇನ್ನೇನು ಬೇಕು ನಿನಗೆ?" ಕೋಪದಿಂದ ಕೇಳಿದ ಗಂಡ.
"ಗೌರವ" ತಣ್ಣಗೆ ನುಡಿದಳು ಹೆಂಡತಿ!!

ಪುಟ್ಕಥೆ - 4
"ಯಾಕೊ ಕಿರುಚಿ ಅಳ್ತಾ ಇದ್ಯಾ, ನೀನೇನು ಹುಡುಗೀನಾ?" ಗದರಿದ ಅಪ್ಪ, ಏನೋ ಚುಚ್ಚಿದೆಯೆನಿಸಿ ಕಿಟಾರ್ ಎಂದು ಕಿರುಚಿದ. "ಗೊತ್ತಾಯ್ತ ಅಪ್ಪ ನಾನೇಕೆ ಅತ್ತೆ ಅಂತ" ಕೈಯಲ್ಲಿ ದೊಡ್ಡ ಪಿನ್ ಹಿಡಿದಿದ್ದ ಮಗ!!

ಪುಟ್ಕಥೆ - 5
"ನನ್ನನ್ನು ಈ ಭೂಮಿಗೆ ತಂದಿದ್ದು ನೀನೆ. ನಿನಗೀಗ ಇಲ್ಲಿ ಸಮಸ್ಯೆಗಳಿವೆ, ಬದುಕಲಾಗುವುದಿಲ್ಲ ಎಂದು ಸಾಯಲು ಹೊರಟಿದ್ದೀಯಲ್ಲ, ಹಾಗಿದ್ದರೆ ನಾನು ಹೇಗೆ ಬದುಕಬೇಕು ಹೇಳು? ನಿನ್ನ ದಾರಿಯನ್ನೇ ಅನುಸರಿಸಬೇಕೆ?" ಪ್ರಶ್ನಿಸಿದಳು ಮಗಳು ಅಮ್ಮನನ್ನು. ತಕ್ಷಣವೇ ಮಗಳನ್ನು ಬಿಗಿದಪ್ಪಿದಳು ತಾಯಿ!!

ಪುಟ್ಕಥೆ - 6
ತನ್ನ ಬಗೆಗಿನ ಕಟ್ಟುಕತೆಗಳನ್ನು ಕೇಳಿ ನೊಂದುಕೊಂಡಿದ್ದ ಆಕೆಗೆ ಅವಳಪ್ಪ ಹೇಳಿದರು, "ಅದರ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಬೇಕೆ ಮಗಳೇ? ನಿಜವಾದ ಸುದ್ದಿಗೆ ಆಮೆ ವೇಗ, ಸುಳ್ಳು ಸುದ್ದಿಗೆ ವಾಯುವೇಗ ಎಂದು ಕೇಳಿಲ್ಲವೇ?"

ಪುಟ್ಕಥೆ - 7
ಆ ಅಣ್ಣತಂಗಿಯರ ಅನುಬಂಧ ಅಪರೂಪವಾಗಿತ್ತು. ಆತನಿಗೆ ಮದುವೆಯಾಯಿತು.  ಅಣ್ಣತಂಗಿಯರ ಸಂಬಂಧ ಏನಾಗುತ್ತದೆಂಬ ಕುತೂಹಲ ಎಲ್ಲರಿಗೂ. ಬಂದವಳು ಇವಳಿಗೆ ಅತ್ತಿಗೆಯಾಗಲಿಲ್ಲತಾಯಾದಳು!!

ಪುಟ್ಕಥೆ - 8
"ಏನ್ಮಹಾ, ಆಯಮ್ಮ ಕಡಿದು ಕಟ್ಟೆ ಹಾಕಿರೋದು?" ಸಭೆಯೊಂದರಲ್ಲಿ  ವಿಶ್ವವಿದ್ಯಾನಿಲಯದ ಮಹಿಳಾ ಉಪಕುಲಪತಿಗಳ ಬಗ್ಗೆ ಮುಖ್ಯಮಂತ್ರಿಯೊಬ್ಬರು ಹಗುರಾಗಿ ಮಾತಾಡಿದರು. ಅಲ್ಲಿದ್ದ  ಹಿರಿಯ ಪ್ರೊಫೆಸರ್ ಒಬ್ಬರು ತಕ್ಷಣವೇ "ಮನಸ್ಸು ಮಾಡಿದರೆ ಆಕೆ ನಿಮ್ಮ ಸ್ಥಾನಕ್ಕೆ ಬರಬಹುದು, ನೀವು ಆಕೆಯ ಸ್ಥಾನ ಗಳಿಸಲು ಸಾಧ್ಯವೇ?" ಪ್ರಶ್ನಿಸಿದರು.
ಮತ್ತೆ ಅವರು ಬಾಯ್ಬಿಟ್ಟಿದ್ದರೆ ಕೇಳಿ!!

ಪುಟ್ಕಥೆ - 9
ಅನಿವಾರ್ಯವಾಗಿ ತಂದೆಯನ್ನು ನೋಡಿಕೊಳ್ಳಬೇಕಾದಂತಹ ಪರಿಸ್ಥಿತಿ ಬಂತು ಆಕೆಗೆ. ಗಂಡನಿಗೆ ಇಷ್ಟವಿರಲಿಲ್ಲ. ಇಬ್ಬರಲ್ಲಿ ಒಬ್ಬರನ್ನು ಆರಿಸಿಕೊಳ್ಳಬೇಕಾಯಿತು. ತನ್ನ ಜೀವನದಲ್ಲಿ ಮೊದಲು ಬಂದವರನ್ನೇ ಆರಿಸಿಕೊಂಡಳು!!

ಪುಟ್ಕಥೆ - 10
"ಹೆಂಗಸರನ್ನು ನಂಬಿಸುವುದು ತುಂಬಾ ಸುಲಭ. ಅವರಿಗೆ ಆಗಾಗ ಸೀರೆ, ಒಡವೆ ಕೊಡಿಸುತ್ತಿದ್ದರೆ, ಹೊಗಳುತ್ತಿದ್ದರೆ, ನಾವು ಏನು ಮಾಡಿದರೂ ಪ್ರಶ್ನಿಸುವುದಿಲ್ಲ" ಜಂಬ ಕೊಚ್ಚಿಕೊಳ್ಳುತ್ತಿದ್ದನೊಬ್ಬ.
ಯಾರದನ್ನು ರೆಕಾರ್ಡ್ ಮಾಡಿದರೋ, ಯಾರು ಹೆಂಡತಿಯ ವಾಟ್ಸಪ್ ಗೆ ಕಳಿಸಿದರೊ, ಈಗ ಅವನು ತನ್ನ ಅಭಿಪ್ರಾಯವನ್ನು ಬದಲಿಸಿಕೊಂಡಿದ್ದಾನೆ!!

ಪುಟ್ಕಥೆ - 11
ದಾರಿಯಲ್ಲಿ ಅಡ್ಡ ಹಾಕಿದ ಕಳ್ಳರು ಆ ವ್ಯಕ್ತಿಯನ್ನು ಚೆನ್ನಾಗಿ ತದುಕಿದರು. ಮನೆಗೆ ಬಂದ ಅವನು ಮಗನನ್ನು ಕೇಳಿದ, "ನೀನ್ಯಾಕೊ ಬಿಡಿಸಲು ಬರಲಿಲ್ಲ?"
"ಅಮ್ಮನನ್ನು ನೀ ಹೊಡೀವಾಗ ಮಧ್ಯ ಬಂದರೆ, ನೀನೇ ಅಲ್ವೇನಪ್ಪ ಹೇಳ್ತಾ ಇದ್ದದ್ದು ಮಧ್ಯ ಬರಬೇಡ ಅಂತ?!!"

ಪುಟ್ಕಥೆ - 12
ಹೆಣ್ಣುಮಕ್ಕಳು ಬಹಳ ಪ್ರೀತಿಯಿಂದ ಕರೆದರೂ ಅವರ ಮನೆಯಲ್ಲಿರಲು ನಿರಾಕರಿಸಿ ಒಂಟಿಯಾಗಿದ್ದರಾಕೆ. ಆದರೆ ತಮ್ಮ ಸ್ನೇಹಿತೆಯ ಮಕ್ಕಳು ತಮ್ಮ ತಾಯನ್ನು ವೃದ್ಧಾಶ್ರಮಕ್ಕೆ ಸೇರಿಸಿದಾಗ ಇವರಿಗೆ ತಮ್ಮ ಮಕ್ಕಳ ಪ್ರೀತಿಯ ಅರಿವಾಯಿತು. ಈಗವರು ಒಂಟಿಯಾಗಿಲ್ಲ! !

ಪುಟ್ಕಥೆ - 13
"ಅಷ್ಟು ಪ್ರೀತಿಸುತ್ತಿದ್ದ ನಿನ್ನ ಮಗಳ ಬಗ್ಗೆ ಯಾಕಮ್ಮ ಇಷ್ಟು ಕಟುವರ್ತನೆ, ಅವಳು ಬೇರೆ ಧರ್ಮದವನನ್ನು ಮದುವೆಯಾದಳೆಂದೇ?" ಕೇಳಿದಳು ದೊಡ್ಡ ಮಗಳು.
"ಇಲ್ಲ, ಅವಳು ಅವನ ಎರಡನೆ ಹೆಂಡತಿಯಾದಳೆಂದು, ಒಂದುವೇಳೆ ನಿಮ್ಮಪ್ಪನೇ ಅವನಂತೆ ಮಾಡಿದ್ದರೆ?!" ಮರುಪ್ರಶ್ನೆ ತಾಯಿಯದು.

ಪುಟ್ಕಥೆ - 14
"ಬದುಕಿನುದ್ದಕ್ಕೂ ಅವರನ್ನು ನೋಡಿ ಅಡಿಗೆ ಮಾಡುವುದು ಕಲಿ, ಇವರನ್ನು ನೋಡಿ ಮನೆ ನೀಟಾಗಿಟ್ಟುಕೊಳ್ಳುವುದನ್ನು ಕಲಿ ಎಂದೆಲ್ಲಾ ಹೇಳಿದಿರಲ್ಲ, ನೀವು ಹೆಂಡತಿಯ ಭಾವನೆಗಳಿಗೆ ಬೆಲೆ ಕೊಡುವ ನನ್ನಣ್ಣನನ್ನು ನೋಡಿ ಅಥವಾ ನಿಮ್ಮ ಸ್ನೇಹಿತರನ್ನು ನೋಡಿ ಏನೂ ಕಲಿಯಲಿಲ್ಲವೇಕೆ?" ಹೆಂಡತಿಯ ಪ್ರಶ್ನೆಗೆ, ಯಾರಿಂದಲೂ ಏನೂ ಕಲಿಯದಿದ್ದ ಅವನು ಏನೆಂದು ಉತ್ತರಿಸಬಲ್ಲ?!

ಪುಟ್ಕಥೆ - 15
ನಡೆದ ಅಹಿತಕರ ಘಟನೆಗೆ ಸ್ನೇಹಿತೆಯನ್ನೇ ದೂರುತ್ತಿದ್ದೆ ಬೆಳಿಗ್ಗೆಯಿಂದಲೂ. ಕೇಳಿ ಕೇಳಿ ಸುಸ್ತಾದ ಅಮ್ಮ ಒಂದೇ ಒಂದು ಪ್ರಶ್ನೆ ಕೇಳಿದರು, "ನಿನ್ನ ಬುದ್ಧಿ ನಿನ್ನ ಕೈಲಿದ್ದಿದ್ದರೆ ಅವಳಾಗಲಿ, ಇನ್ನೊಬ್ಬಳಾಗಲಿ ಏನು ಮಾಡಲು ಸಾಧ್ಯವಿತ್ತು?"

     -  ಸುಧಾ ಜಿ